ಶುಕ್ರವಾರ, 29 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಬರದ ನಾಡು ಜಗಳೂರಿನಲ್ಲಿ ಜಲ ಕ್ರಾಂತಿ

ಭದ್ರಾ ಮೇಲ್ದಂಡೆಯಿಂದ ಕೆರೆ ತುಂಬಿಸುವ ಕಾಮಗಾರಿಗೆ ಚಾಲನೆ ನೀಡಿದ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ
Last Updated 30 ಏಪ್ರಿಲ್ 2022, 3:53 IST
ಅಕ್ಷರ ಗಾತ್ರ

ಜಗಳೂರು: ‘ಮಧ್ಯ ಕರ್ನಾಟಕದ ಜಗಳೂರಿನಲ್ಲಿ ನೀರಾವರಿ ಕ್ರಾಂತಿ ನಡೆಯುತ್ತಿದೆ. ಬರದ ನಾಡು ಎಂಬ ಬಿರುದು ಕಳಚಿಕೊಂಡು ಜಲದ ನಾಡು ಎಂಬಂತಾಗಿದೆ’ ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಹೇಳಿದರು.

ಭದ್ರಾ ಮೇಲ್ದಂಡೆ ಯೋಜನೆಯಿಂದ ಜಗಳೂರಿನ 9 ಕೆರೆ ತುಂಬಿಸುವ ಹಾಗೂ 18,423 ಹೆಕ್ಟೇರ್‌ ಪ್ರದೇಶಕ್ಕೆ ಹನಿ ನೀರಾವರಿ ಸೌಲಭ್ಯ ಕಲ್ಪಿಸುವ ಮತ್ತು ವಿವಿಧ ಅಭಿವೃದ್ಧಿ ಕಾಮಗಾರಿಗಳಿಗೆ ಶುಕ್ರವಾರ ಶಂಕುಸ್ಥಾಪನೆ ನೆರವೇರಿಸಿ ಅವರು ಮಾತನಾಡಿದರು.

‘ಭೂಮಿ ತಾಯಿಗೆ ನೀರು ಉಣಿಸಿದ್ದೇವೆ. ಅಂತರ್ಜಲ ಹೆಚ್ಚಾಗಲಿದೆ. ಕೊಳವೆಬಾವಿಗಳಲ್ಲಿ ನೀರು ಬರಲಿದೆ. ರೈತನ ಶ್ರಮಕ್ಕೆ ಬೆಲೆ ಬರುತ್ತದೆ’ ಎಂದು ಹೇಳಿದರು.

‘ನೀರಿನ ವ್ಯವಸ್ಥೆ ಇಲ್ಲದಿದ್ದರೂ ದುಡಿಮೆಯ ಆಧಾರದ ಮೇಲೆ ಜಗಳೂರಿನ ರೈತರು ನಿಂತುಕೊಂಡಿದ್ದಾರೆ. ಇಂದು ಭದ್ರಾ ಮೇಲ್ದಂಡೆಯಿಂದ
ಗಂಗೆ ಹರಿದು ಬರುತ್ತಿದೆ. ನಿಮ್ಮ ಬೆವರಿನ ಹನಿ ಹಾಗೂ ಗಂಗಾ ಮಾತೆಯ ಹನಿ ಸೇರಿದರೆ ಭೂಮಿ ತಾಯಿ ಬಂಗಾರದ ಬೆಳೆಯನ್ನು ಕೊಡುವ ಕಾಲ ಬಂದಿದೆ. 57 ಕೆರೆ ನೀರು ತುಂಬಿಸುವ ಯೋಜನೆಯನ್ನೂ ಆರಂಭಿಸಲಾಗಿದ್ದು, ಜುಲೈ ತಿಂಗಳಲ್ಲಿ ಪೂರ್ಣಗೊಳ್ಳಲಿದೆ’ ಎಂದು ತಿಳಿಸಿದರು.

‘10–15 ವರ್ಷಗಳಿಂದ ಭದ್ರಾ ಮೇಲ್ದಂಡೆ ಯೋಜನೆ ಮಾಡಬೇಕು ಎಂದು ರೈತರು ಹೋರಾಟ ನಡೆಸುತ್ತಿದ್ದರೂ ಯಾವುದೇ ಕಾಮಗಾರಿ ಆರಂಭವಾಗಿರಲಿಲ್ಲ. 2008ರಲ್ಲಿ ಮುಖ್ಯಮಂತ್ರಿಯಾದ ಬಿ.ಎಸ್‌. ಯಡಿಯೂರಪ್ಪ ಅವರು ಮೊದಲ ಬಾರಿಗೆ ಯೋಜನೆಗೆ ಮಂಜೂರಾತಿ ನೀಡಿ ಹಣವನ್ನು ಕೊಟ್ಟರು. ಬಳಿಕ ಜಗಳೂರು ತಾಲ್ಲೂಕಿಗೆ 2.4 ಟಿಎಂಸಿ ಅಡಿ ನೀರನ್ನೂ ಕೊಡಬೇಕು ಎಂಬ ತೀರ್ಮಾನವನ್ನು ಕೈಗೊಂಡರು.
ಜಿಲ್ಲೆಯ ಸಂಸದ ಸಿದ್ದೇಶ್ವರ ಹಾಗೂ ಶಾಸಕ ಎಸ್‌.ವಿ. ರಾಮಚಂದ್ರ ಅವರ ಪರಿಶ್ರಮದಿಂದ ಜಗಳೂರು ತಾಲ್ಲೂಕಿನ 40 ಸಾವಿರ ಎಕರೆಗೆ ನೀರಾವರಿ
ಸೌಲಭ್ಯ ಕಲ್ಪಿಸುವ ಹಾಗೂ 9 ಕೆರೆ ತುಂಬಿಸುವ ಯೋಜನೆಗೆ ಇಂದು ಚಾಲನೆ ನೀಡಲಾಗುತ್ತಿದೆ’ ಎಂದು ಹೇಳಿದರು.

‘ಈ ವರ್ಷ 20 ಸಾವಿರ ಕೋಟಿಯಷ್ಟು ಅನುದಾನವನ್ನು ನೀರಾವರಿ ಇಲಾಖೆಗೆ ನೀಡಿದ್ದೇವೆ. ಭದ್ರಾ ಮೇಲ್ದಂಡೆ, ಎತ್ತಿನಹೊಳೆ ಯೋಜನೆಗೆ ಕಾಯಕಲ್ಪ ನೀಡಿದ್ದೇವೆ. ತುಮಕೂರು, ಚಿಕ್ಕಬಳ್ಳಾಪುರ, ಕೋಲಾರ, ಬೆಂಗಳೂರು ಗ್ರಾಮೀಣ ಜಿಲ್ಲೆಗೆ ನೀರು ಹರಿಸುವ ಈ ಯೋಜನೆಗೆ ಪ್ರಸಕ್ತ ವರ್ಷ ₹ 3,000 ಕೋಟಿ ಮೀಸಲಿಟ್ಟಿದ್ದೇವೆ’ ಎಂದು ಮಾಹಿತಿ ನೀಡಿದರು.

‘ಚಿತ್ರದುರ್ಗ ಜಿಲ್ಲೆಗೆ ಸರ್ಕಾರಿ ವೈದ್ಯಕೀಯ ಕಾಲೇಜು ನೀಡಿದ್ದೇವೆ. ದಾವಣಗೆರೆ ಜಿಲ್ಲೆಯಲ್ಲೂ ಖಾಸಗಿ ಸಹಭಾಗಿತ್ವದಲ್ಲಿ ವೈದ್ಯಕೀಯ
ಕಾಲೇಜು ಆರಂಭಿಸಲಾಗುವುದು. ತುಮಕೂರು– ಚಿತ್ರದುರ್ಗ–ದಾವಣಗೆರೆ ನೇರ ರೈಲು ಮಾರ್ಗ ಯೋಜನೆಯನ್ನು ಶೀಘ್ರದಲ್ಲೇ ಪೂರ್ಣಗೊಳಿಸಲಾಗುವುದು’ ಎಂದು ಭರವಸೆ ನೀಡಿದರು.

‘ತಬ್ಬಲಿಯಂತೆ ಅಲೆಯುವ ಕಾಂಗ್ರೆಸ್‌ ನಾಯಕ’

‘ಕಾಂಗ್ರೆಸ್‌ ಮುಳುಗುತ್ತಿರುವ ಹಡಗು. ಕಾಂಗ್ರೆಸ್‌ ನಾಯಕ ತಬ್ಬಲಿಯಂತೆ ಅಲೆಯುತ್ತಿದ್ದಾನೆ. ಸದ್ಯ ಕರ್ನಾಟಕದಲ್ಲಿ ಕಾಂಗ್ರೆಸ್‌ಗೆ ಸ್ವಲ್ಪ ಉಸಿರು ಇದೆ. ಮುಂದಿನ ಚುನಾವಣೆ ಬಳಿಕ ಕಾಂಗ್ರೆಸ್‌ ಸಂಪೂರ್ಣವಾಗಿ ನೆಲಸಮವಾಗಲಿದೆ’ ಎಂದು ಬಿಜೆಪಿ ಮುಖಂಡ ಬಿ.ಎಸ್‌. ಯಡಿಯೂರಪ್ಪ ಹೇಳಿದರು.

‘ಈಚೆಗೆ ನಡೆದ ಐದು ಪಂಚ ರಾಜ್ಯಗಳ ಚುನಾವಣೆಯಲ್ಲಿ ನಾಲ್ಕು ರಾಜ್ಯಗಳಲ್ಲಿ ಬಿಜೆಪಿ ಗೆಲುವು ಸಾಧಿಸಿದೆ. ಉತ್ತರ ಪ್ರದೇಶದಲ್ಲಿ 403 ಕ್ಷೇತ್ರಗಳ ಪೈಕಿ 399 ಕಡೆ ಕಾಂಗ್ರೆಸ್‌ ಠೇವಣಿ ಕಳೆದುಕೊಂಡಿದೆ. ರಾಜ್ಯದ ಎಲ್ಲಾ ಕ್ಷೇತ್ರಗಳಿಗೂ ಸಂಚರಿಸಿ 150 ಕ್ಷೇತ್ರಗಳಲ್ಲಿ ಗೆದ್ದು ಅಧಿಕಾರಕ್ಕೆ ಬರುತ್ತೇವೆ’ ಎಂದು ವಿಶ್ವಾಸ ವ್ಯಕ್ತಪಡಿಸಿದರು.

‘ಜಗಳೂರು ಭಾಗದಲ್ಲಿ ಶೇ 75ರಷ್ಟು ರೈತರು ಮಳೆ ಆಶ್ರಿತ ಕೃಷಿ ಮಾಡುತ್ತಿದ್ದಾರೆ. ಬರಪೀಡಿತ ಈ ಭಾಗಕ್ಕೆ ಭದ್ರಾ ನೀರು ಹರಿಸಲು ಪ್ರಾಮಾಣಿಕ ಪ್ರಯತ್ನ ಮಾಡಿರುವುದಕ್ಕೆ ತೃಪ್ತಿ ಇದೆ’ ಎಂದು ಹೇಳಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT