ಮಲೇಬೆನ್ನೂರು: ಎರಡು ವರ್ಷಗಳ ಬಳಿಕ ಪುರಸಭೆ ಸಾಮಾನ್ಯ ಸಭೆಯು ಪ್ರಭಾರ ಅಧ್ಯಕ್ಷೆ ನಪ್ಸಿಯಾಬಾನು ಅಧ್ಯಕ್ಷತೆಯಲ್ಲಿ ಮಂಗಳವಾರ ನಡೆಯಿತು. ಸಭೆಯಲ್ಲಿ ಹೆಚ್ಚು ಸಮಯ ಇಂದಿರಾ ಕ್ಯಾಂಟೀನ್ ನಿರ್ಮಿಸುವ ಕುರಿತ ಚರ್ಚೆ ನಡೆಯಿತು.
ಸಭೆ ಆರಂಭವಾಗುತ್ತಿದ್ದಂತೆ ಸ್ಥಾಯಿ ಸಮಿತಿಗೆ 8 ಜನ ಸದಸ್ಯರ ಹೆಸರನ್ನು ಸದಸ್ಯ ಷಾ ಅಬ್ರಾರ್ ಸೂಚಿಸಿದರು. ಸಾಬೀರ್ ಅಲಿ ಅನುಮೋದಿಸಿದರು.
ಜೆಡಿಎಸ್- ಬಿಜೆಪಿಯ 7 ಸದಸ್ಯರಿದ್ದರೂ ಕಾಂಗ್ರೆಸ್ಸಿಗರ ಹಸರನ್ನು ಸೂಚಿಸಿ ಅನುಮೋದಿಸಲಾಗಿದೆ. ಒಬ್ಬ ಮಹಿಳೆಗೂ ಅವಕಾಶ ನೀಡಿಲ್ಲ ಎಂದು ಸಿದ್ದೇಶ್ ಬೇಸರ ವ್ಯಕ್ತಪಡಿಸಿದರು.
ಸದಸ್ಯ ಕೆ.ಜಿ. ಲೋಕೇಶ್, ‘ಉಪಾಧ್ಯಕ್ಷರು ಮಹಿಳೆಯೇ ಇದ್ದಾರೆ’ ಎಂದು ಸಮರ್ಥಿಸಿದರು.
ಜಿಬಿಎಂ ಶಾಲೆ ಒಡೆದು ಇಂದಿರಾ ಕ್ಯಾಂಟೀನ್ ನಿರ್ಮಿಸುವ ವಿಚಾರವನ್ನು ಕಾಂಗ್ರೆಸ್‌ನ ನಯಾಜ್, ದಾದಾಪೀರ್, ಮಂಜುನಾಥ್, ನಾಮ ನಿರ್ದೇಶಿತ ಸದಸ್ಯ ವೀರಯ್ಯ ಸ್ವಾಮಿ ಪ್ರತಿಪಾದಿಸಿದರು.
‘ಶತಮಾನ ಕಂಡ ಶಾಲೆಯನ್ನು ಒಡೆಯುವ ಬದಲು ಬೇರೆ ಜಾಗ ಆಯ್ಕೆ ಮಾಡಿ’ ಎಂದು ಬಿಜೆಪಿಯ ಹನುಮಂತಪ್ಪ ಸಲಹೆ ನೀಡಿದರು.
‘ಇಂದಿರಾ ಕ್ಯಾಂಟೀನ್ ನಿರ್ಮಿಸುವ ವಿಚಾರ ನ್ಯಾಯಾಲಯದಲ್ಲಿದ್ದು, ಮಾಹಿತಿ ಬಂದಿಲ್ಲ’ ಎಂದು ಮುಖ್ಯಾಧಿಕಾರಿ ಬಜಕ್ಕನವರ್ ತಿಳಿಸಿದರು.
ಈ ವೇಳೆ ಸಭೆಯಲ್ಲಿ ಭಾಗವಹಿಸಿದ್ದ ಶಾಸಕ ಬಿ.ಪಿ.ಹರೀಶ್ ಅವರೂ ಹೈಕೋರ್ಟ್‌ನಲ್ಲಿ ಸಾರ್ವಜನಿಕ ಹಿತಾಸಕ್ತಿ ಅರ್ಜಿ ದಾಖಲಾಗಿರುವ ಕುರಿತ ದಾಖಲೆಯನ್ನು ಪ್ರದರ್ಶಿಸಿದರು.
ಶಾಸಕ ಹರೀಶ್, ‘ಉಪವಿಭಾಗಾಧಿಕಾರಿ ಅವರು ನೀಡಿರುವ ವರದಿ ಮಂಡಿಸಿ’ ಎಂದು ಮುಖ್ಯಾಧಿಕಾರಿ ಅವರನ್ನು ಕೇಳಿದರು.
‘ಮುಖ್ಯಾಧಿಕಾರಿ ಅವರು ವರದಿ ನೀಡಿದ ಕಾರಣ ಮುಂದಿನ ಸಭೆಗೆ ದಾಖಲೆಯೊಂದಿಗೆ ಬನ್ನಿ’ ಎಂದು ಶಾಸಕರು ಸೂಚಿಸಿ ಸಭೆಯಿಂದ ನಿರ್ಗಮಿಸಿದರು.
ನಂತರದಲ್ಲಿ ಜಿಬಿಎಂ ಶಾಲೆ ಒಡೆದು ಇಂದಿರಾ ಕ್ಯಾಂಟೀನ್ ನಿರ್ಮಾಣ ಮಾಡುವ ಕುರಿತು ಸಭೆಯಲ್ಲಿ ಅನುಮೋದಿಸಿದರು.
‘₹ 10 ಕೋಟಿ ವೆಚ್ಚದ ನಗರೋತ್ಥಾನ ಯೋಜನೆ ಅಡಿ ಕಳಪೆ ಕಾಮಗಾರಿ ನಡೆದಿದೆ ಎಂದು ನಾಗರಿಕರು ದೂರಿದ್ದು, ಮಾಹಿತಿ ನೀಡಿ’ ಎಂದು ಸದಸ್ಯರು ಒತ್ತಾಯಿಸಿದರು.
ಸ್ವಾಗತ ಕಮಾನು ನಿರ್ಮಾಣ, ಗ್ರಂಥಾಲಯ ಕಟ್ಟಡ, ಪಶುವೈದ್ಯ ಆಸ್ಪತ್ರೆ ಜಾಗದಲ್ಲಿ ಸಾರ್ವಜನಿಕ ಶೌಚಾಲಯ, ಬೀದಿ ನಾಯಿ ಸಮಸ್ಯೆ ಕುರಿತು ವಿಜಯಲಕ್ಷ್ಮಿ, ಸುಧಾ ಸಭೆಯಲ್ಲಿ ಚರ್ಚಿಸಿದರು.
ಮುಂದಿನಸಭೆಯಲ್ಲಿ ಎಂಜಿನಿಯರ್ ಹಾಗೂ ಗುತ್ತಿಗೆದಾರರ ಸಮ್ಮುಖದಲ್ಲಿ ಸಮಸ್ಯೆ ಪರಿಸುವುದಾಗಿ ಮುಖ್ಯಾಧಿಕಾರಿ ಹೇಳಿದರು.
ಅಮೃತ್ ಕುಡಿಯುವ ನೀರಿನ ಯೋಜನೆ, ಪುರಸಭಾ ಕಟ್ಟಡಕ್ಕೆ ನೀರಾವರಿ ನಿಗಮದ ಮೈದಾನದ ನಿವೇಶನ ಪಡೆಯುವ ಕುರಿತು ಚರ್ಚೆ ನಡೆಯಿತು.
ಪರಿಸರ ಎಂಜಿನಿಯರ್ ಉಮೇಶ್, ಕಚೇರಿ ವ್ಯವಸ್ಥಾಪಕಿ ಜಯಲಕ್ಷ್ಮಿ, ಆರೋಗ್ಯ ವಿಭಾಗದ ನವೀನ್, ಶಿವರಾಜ್, ಅವಿನಾಶ್, ಕಂದಾಯಾಧಿಕಾರಿ ಧನಂಜಯ, ಇಮ್ರಾನ್, ಜೆಇ ರಾಘವೇಂದ್ರ, ಖೀಜರ್, ಸಮುದಾಯ ಸಂಘಟನಾಧಿಕಾರಿ ನಿಟುವಳ್ಳಿ ದಿನಕರ್, ಪುರಸಭೆ ಸದಸ್ಯರು ಇದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.