ಶನಿವಾರ, 11 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ದಾವಣಗೆರೆ ಜಿಲ್ಲೆಯ ಶಾಸಕರಿಗಿಲ್ಲ ಮಂತ್ರಿಗಿರಿ ಭಾಗ್ಯ!

ರವೀಂದ್ರನಾಥ, ರೇಣುಕಾಚಾರ್ಯರಿಗೂ ಮಣೆ ಹಾಕದ ಬಿಜೆಪಿ ವರಿಷ್ಠರು
Last Updated 21 ಆಗಸ್ಟ್ 2019, 9:57 IST
ಅಕ್ಷರ ಗಾತ್ರ

ದಾವಣಗೆರೆ: ರಾಜ್ಯದಲ್ಲಿ ಬಿಜೆಪಿ ಸರ್ಕಾರ ಅಧಿಕಾರಕ್ಕೆ ಬಂದು 25 ದಿನಗಳ ಬಳಿಕ ಮಂಗಳವಾರ ನಡೆದ ಬಹುನಿರೀಕ್ಷಿತ ಮೊದಲ ಹಂತದ ಸಚಿವ ಸಂಪುಟ ವಿಸ್ತರಣೆಯಲ್ಲಿ ಜಿಲ್ಲೆಯ ಶಾಸಕರಿಗೆ ‘ಮಂತ್ರಿಗಿರಿ ಭಾಗ್ಯ’ ಲಭಿಸಿಲ್ಲ. ಜಿಲ್ಲೆಯಲ್ಲಿ ಒಬ್ಬರಿಗಾದರೂ ಸಚಿವ ಸ್ಥಾನ ಸಿಗಬಹುದು ಎಂಬ ಜನರ ನಿರೀಕ್ಷೆಯೂ ಹುಸಿಯಾಗಿದೆ.

ಹಿರಿಯರಾದ ದಾವಣಗೆರೆ ಉತ್ತರ ಕ್ಷೇತ್ರದ ಶಾಸಕ ಎಸ್‌.ಆರ್‌. ರವೀಂದ್ರನಾಥ, ಯಡಿಯೂರಪ್ಪ ಅವರ ಆಪ್ತ ವಲಯದಲ್ಲಿ ಗುರುತಿಸಿಕೊಂಡಿದ್ದ ಹೊನ್ನಾಳಿ ಶಾಸಕ ಎಂ.ಪಿ. ರೇಣುಕಾಚಾರ್ಯ ಹಾಗೂ ಚನ್ನಗಿರಿ ಶಾಸಕ ಮಾಡಾಳ್‌ ವಿರೂಪಾಕ್ಷಪ್ಪ ಅವರು ಸಚಿವ ಸ್ಥಾನದ ಪ್ರಮುಖ ಆಕಾಂಕ್ಷಿಗಳಾಗಿದ್ದರು. ಪಕ್ಷದ ವರಿಷ್ಠರು ಹಾಕಿದ ಲೆಕ್ಕಾಚಾರದಲ್ಲಿ ಜಿಲ್ಲೆಯ ಶಾಸಕರಿಗೆ ಮಣೆ ಹಾಕದೇ ಇರುವುದು ಸ್ಥಳೀಯ ಮುಖಂಡರು ಹಾಗೂ ಕಾರ್ಯಕರ್ತರಲ್ಲೂ ನಿರಾಸೆ ಮೂಡಿಸಿದೆ.

ಸಮ್ಮಿಶ್ರ ಸರ್ಕಾರ ಪತನಗೊಂಡ ಬಳಿಕ ಬಿ.ಎಸ್‌. ಯಡಿಯೂರಪ್ಪ ಮುಖ್ಯಮಂತ್ರಿಯಾಗುತ್ತಿದ್ದಂತೆ ಜಿಲ್ಲೆಯಲ್ಲಿ ಯಾರಿಗೆ ಸಚಿವ ಸ್ಥಾನ ಸಿಗಬಹುದು ಎಂಬ ಲೆಕ್ಕಾಚಾರ ಶುರುವಾಗಿತ್ತು. ಕಳೆದ ವಿಧಾನಸಭಾ ಚುನಾವಣೆಯಲ್ಲಿ ಹರಪನಹಳ್ಳಿಯೂ ಸೇರಿ ಎಂಟು ಕ್ಷೇತ್ರಗಳ ಪೈಕಿ ಆರು ಕ್ಷೇತ್ರಗಳಲ್ಲಿ ಬಿಜೆಪಿ ಗೆಲುವು ಸಾಧಿಸಿತ್ತು. ಪಕ್ಷವನ್ನು ಜಿಲ್ಲೆಯಲ್ಲಿ ಇನ್ನಷ್ಟು ಬಲಪಡಿಸಲು ಮೊದಲ ಹಂತದಲ್ಲಿ ಒಬ್ಬರಿಗಾದರೂ ಸಚಿವ ಸ್ಥಾನ ಸಿಗಲಿದೆ ಎಂಬ ವಿಶ್ವಾಸ ಕಾರ್ಯಕರ್ತರಲ್ಲಿತ್ತು. ವರಿಷ್ಠರ ನಿರ್ಧಾರದಿಂದ ಜಿಲ್ಲೆಯ ಶಾಸಕರು ಹಾಗೂ ಪಕ್ಷದ ಮುಖಂಡರು ಅಸಮಾಧಾನಗೊಂಡಿದ್ದರೂ ಅದನ್ನು ಬಹಿರಂಗವಾಗಿ ಹೊರ ಹಾಕುತ್ತಿಲ್ಲ.

ಐದು ಬಾರಿ ಶಾಸಕರಾಗಿರುವ ರವೀಂದ್ರನಾಥ ಅವರು ಜಿಲ್ಲೆಯಲ್ಲಿ ‘ಕಮಲ’ದ ಬೇರನ್ನು ಗಟ್ಟಿಗೊಳಿಸಿದವರಲ್ಲಿ ಮೊದಲಿಗರು. ಇವರಿಂದಲೇ ಜಿಲ್ಲೆಯಲ್ಲಿ ಬಿಜೆಪಿ ಖಾತೆ ತೆರೆದಿತ್ತು. ಕ್ಷೇತ್ರ ಪುನರ್‌ವಿಂಗಡಣೆ ಮೊದಲು ಸಾಮಾನ್ಯ ಕ್ಷೇತ್ರವಾಗಿದ್ದ ಮಾಯಕೊಂಡದಲ್ಲಿ ಸತತ ಮೂರು ಬಾರಿ ಅವರು ಶಾಸಕರಾಗಿಯೂ ಆಯ್ಕೆಯಾಗಿದ್ದರು. ನಗರದ ಅಭಿವೃದ್ಧಿಗೆ ಸಾಕಷ್ಟು ಅನುದಾನ ತಂದಿದ್ದ ಮಾಜಿ ಸಚಿವ ಎಸ್‌.ಎಸ್‌. ಮಲ್ಲಿಕಾರ್ಜುನ ಅವರನ್ನು ಕಳೆದ ಚುನಾವಣೆಯಲ್ಲಿ ಪರಾಭವಗೊಳಿಸುವ ಮೂಲಕ ಹುಬ್ಬೇರಿಸುವಂತೆ ಮಾಡಿದ್ದರು.

‘ಸೌಮ್ಯ ಸ್ವಭಾವದವರಾದ ರವೀಂದ್ರನಾಥ ಅವರು ಪಕ್ಷದ ಸಿದ್ಧಾಂತಕ್ಕೆ ಬದ್ಧರಾಗಿರುತ್ತಾರೆ; ರಾಜಕೀಯದ ಸಂದಿಗ್ಧ ಸ್ಥಿತಿಯಲ್ಲಿ ಬಂಡಾಯದ ಕಹಳೆ ಊದುವುದಿಲ್ಲ. ಲಿಂಗಾಯತ ಸಮುದಾಯಕ್ಕೆ ಈಗಾಗಲೇ ಸಾಕಷ್ಟು ಪ್ರಾತಿನಿಧ್ಯ ನೀಡಲಾಗಿದೆ ಎಂಬ ಲೆಕ್ಕಾಚಾರ ಹಾಕಿ ಅವರಿಗೆ ಸಚಿವ ಸ್ಥಾನ ನೀಡಿರಲಿಕ್ಕಿಲ್ಲ’ ಎಂದು ವಿಶ್ಲೇಷಿಸಲಾಗುತ್ತಿದೆ.

‘ಚುನಾವಣೆ ಪೂರ್ವದಲ್ಲಿ ಯಡಿಯೂರಪ್ಪ ಪರ ಬ್ಯಾಟಿಂಗ್‌ ಮಾಡಿದ್ದ ರೇಣುಕಾಚಾರ್ಯ ಅವರು ಬಿಜೆಪಿ ರಾಷ್ಟ್ರೀಯ ಉಪಾಧ್ಯಕ್ಷ ಬಿ.ಎಲ್‌. ಸಂತೋಷ್‌ ವಿರುದ್ಧ ವಾಮಾಗೋಚರವಾಗಿ ನಿಂದಿಸಿದ್ದರು. ಈ ಬಾರಿ ಸಚಿವರ ಪಟ್ಟಿ ತಯಾರಿಸುವಲ್ಲಿ ಪ್ರಮುಖ ಪಾತ್ರ ವಹಿಸಿದ್ದ ಸಂತೋಷ್‌ ಅವರ ಕೆಂಗಣ್ಣಿಗೆ ರೇಣುಕಾಚಾರ್ಯ ಗುರಿಯಾಗಿರಬಹುದು. ಜೊತೆಗೆ ಮನಸ್ಸಿಗೆ ತೋಚಿದಂತೆ ಮಾತನಾಡುತ್ತಿದ್ದ ರೇಣುಕಾಚಾರ್ಯರ ಹೇಳಿಕೆಗಳು ವಿವಾದಕ್ಕೆ ಎಡೆ ಮಾಡಿಕೊಡುತ್ತಿದ್ದವು. ಮೂರು ಬಾರಿ ಶಾಸಕರಾಗಿದ್ದರೂ ಹೀಗಾಗಿಯೇ ಅವರನ್ನು ದೂರ ಇಡಲಾಗಿದೆ’ ಎಂದು ಮಾತುಗಳೂ ಕೇಳಿಬರುತ್ತಿವೆ.

‘ಜಿಲ್ಲೆಯಿಂದ ಐವರು ಬಿಜೆಪಿ ಶಾಸಕರು ಇದ್ದರು. ಜಿಲ್ಲೆಯ ಒಬ್ಬರಿಗಾದರೂ ಸಚಿವ ಸ್ಥಾನ ಸಿಗಬಹುದು ಎಂಬ ನಿರೀಕ್ಷೆ ಇತ್ತು. ಜಿಲ್ಲೆಯಲ್ಲಿ ಯಾರಿಗಾದರೂ ಒಬ್ಬರಿಗೆ ಸಚಿವ ಸ್ಥಾನ ನೀಡುವಂತೆ ಈಚೆಗೆ ನಾವು ಐವರು ಶಾಸಕರು ಮುಖ್ಯಮಂತ್ರಿ ಯಡಿಯೂರಪ್ಪ ಅವರಿಗೆ ಮನವಿ ಮಾಡಿದ್ದೆವು. ಅವರು ಒಪ್ಪಿಗೆಯನ್ನೂ ಸೂಚಿಸಿದ್ದರು. ಆದರೆ, ಕೊನೆ ಕ್ಷಣದಲ್ಲಿ ಹೈಕಮಾಂಡ್‌ ಯಾಕ ಕಾರಣಕ್ಕೆ ಜಿಲ್ಲೆಯ ಶಾಸಕರನ್ನು ಪರಿಗಣನೆಗೆ ತೆಗೆದುಕೊಂಡಿಲ್ಲ ಎಂಬುದು ಗೊತ್ತಾಗಿಲ್ಲ’ ಎಂದು ಮಾಡಾಳ್‌ ವಿರೂಪಾಕ್ಷಪ್ಪ ಬೇಸರ ವ್ಯಕ್ತಪಡಿಸಿದರು.

‘ಪಕ್ಷದ ಹಿತದೃಷ್ಟಿಯಿಂದ ಮುಖ್ಯಮಂತ್ರಿ ಹಾಗೂ ವರಿಷ್ಠರ ತೀರ್ಮಾನವನ್ನು ನಾವು ಒಪ್ಪಿಕೊಳ್ಳುತ್ತೇವೆ. ಮುಂದಾದರೂ ಜಿಲ್ಲೆಯವರಿಗೆ ಆದ್ಯತೆ ನೀಡಬಹುದು’ ಎಂದು ವಿಶ್ವಾಸ ವ್ಯಕ್ತಪಡಿಸಿದರು.

ಮತ್ತೆ ಜಿಲ್ಲೆಯವರಿಗಿಲ್ಲ ಉಸ್ತುವಾರಿ

ಜೆಡಿಎಸ್‌–ಕಾಂಗ್ರೆಸ್‌ ನೇತೃತ್ವದ ಸಮ್ಮಿಶ್ರ ಸರ್ಕಾರದ ಅವಧಿಯಲ್ಲೂ ಜಿಲ್ಲೆಗೆ ಸಚಿವ ಸ್ಥಾನ ಲಭಿಸಿರಲಿಲ್ಲ. ಕಾಂಗ್ರೆಸ್‌ನ ಹಿರಿಯ ಮುಖಂಡ ಶಾಸಕ ಶಾಮನೂರು ಶಿವಶಂಕರಪ್ಪ ಅವರಿಗೆ ಸಚಿವ ಸ್ಥಾನ ನೀಡಬೇಕು ಎಂಬ ಕೂಗಿಗೂ ಸ್ಪಂದನೆ ಸಿಕ್ಕಿರಲಿಲ್ಲ. ಜೆಡಿಎಸ್‌ನ ಎಸ್‌.ಆರ್‌. ಶ್ರೀನಿವಾಸ್‌ ಅವರನ್ನು ಜಿಲ್ಲಾ ಉಸ್ತುವಾರಿ ಸಚಿವರನ್ನಾಗಿ ನೇಮಿಸಲಾಗಿತ್ತು. ಅವರು ಜಿಲ್ಲೆಗೆ ಬಾರದಿರುವ ಬಗ್ಗೆ ಬಿಜೆಪಿ ನಾಯಕರು ವ್ಯಾಪಕವಾಗಿ ಟೀಕಿಸಿದ್ದರು.

ಇದೀಗ ಬಿಜೆಪಿ ಸರ್ಕಾರದಲ್ಲೂ ಜಿಲ್ಲೆಗೆ ಸಚಿವ ಸ್ಥಾನ ಸಿಗದೇ ಇರುವುದರಿಂದ ಬೇರೆ ಜಿಲ್ಲೆಯ ಸಚಿವರೇ ಇಲ್ಲಿಗೂ ಉಸ್ತುವಾರಿಯಾಗಲಿದ್ದಾರೆ. ಆ ಸಚಿವರೂ ಜಿಲ್ಲೆಗೆ ಅಪರೂಪಕ್ಕೆ ದರ್ಶನ ನೀಡಬಹುದು ಎಂಬ ಚರ್ಚೆ ನಡೆಯುತ್ತಿದೆ.

ಜಿಲ್ಲೆಯವರೇ ಸಚಿವರಾದರೆ ತಮ್ಮ ಕೆಲಸಗಳನ್ನು ಮಾಡಿಸಿಕೊಳ್ಳಬಹುದು ಎಂದು ಲೆಕ್ಕಾಚಾರ ಹಾಕುತ್ತಿದ್ದ ಪಕ್ಷದ ಮುಖಂಡರು ಹಾಗೂ ಕಾರ್ಯಕರ್ತರಲ್ಲೀಗ ತಳಮಳ ಉಂಟಾಗಿದೆ.

‘ಅಧಿಕಾರಕ್ಕಿಂತ ಅಭಿವೃದ್ಧಿಗೇ ಒತ್ತು’

‘ನಮ್ಮ ಸರ್ಕಾರಕ್ಕೆ ಪೂರ್ಣ ಪ್ರಮಾಣದ ಬಹುಮತ ಇಲ್ಲದಿರುವುದರಿಂದ ಅಧಿಕಾರಕ್ಕಾಗಿ ಕಚ್ಚಾಡುವುದಕ್ಕಿಂತ ನಮ್ಮ ಪಕ್ಷದ ಶಕ್ತಿ ವೃದ್ಧಿಸಿಕೊಳ್ಳುವುದು ಹಾಗೂ ಜಿಲ್ಲೆಯ ಅಭಿವೃದ್ಧಿಗೆ ಒತ್ತು ನೀಡಲು ನಿರ್ಧರಿಸಿದ್ದೇವೆ. ಮುಂದಾದರೂ ಜಿಲ್ಲೆಗೆ ಸಚಿವ ಸ್ಥಾನ ಸಿಗಲಿದೆ ಎಂಬ ವಿಶ್ವಾಸ ಇದೆ’ ಎಂದು ಬಿಜೆಪಿ ಜಿಲ್ಲಾ ಘಟಕದ ಅಧ್ಯಕ್ಷ ಯಶವಂತರಾವ್‌ ಜಾಧವ್‌ ಪ್ರತಿಕ್ರಿಯಿಸಿದರು.

‘ಹರಪನಹಳ್ಳಿ ಸೇರಿ ಆರು ಶಾಸಕರು ಹಾಗೂ ಇಬ್ಬರು ಮಾಜಿ ಶಾಸಕರು ಮತ್ತು ಸಂಸದರು ಒಟ್ಟಾಗಿ ದಾವಣಗೆರೆ ಜಿಲ್ಲೆಯ ಸಮಗ್ರ ಅಭಿವೃದ್ಧಿಗೆ ಅಗತ್ಯವಿರುವ ಯೋಜನೆಗಳನ್ನು ರಾಜ್ಯ ಹಾಗೂ ಕೇಂದ್ರ ಸರ್ಕಾರದಿಂದ ತರುತ್ತೇವೆ. ಮುಖ್ಯಮಂತ್ರಿಯ ಬೆಂಬಲಕ್ಕೆ ನಿಲ್ಲುತ್ತೇವೆ’ ಎಂದು ಹೇಳಿದರು.

**

ಜಿಲ್ಲೆಯಲ್ಲಿ ಐವರು ಬಿಜೆಪಿ ಶಾಸಕರಿದ್ದರೂ ಯಾರಿಗೂ ಸಚಿವ ಸ್ಥಾನ ನೀಡಿಲ್ಲ. ಇನ್ನೂ ಹಲವು ಸ್ಥಾನಗಳು ಖಾಲಿ ಇವೆ. ನಾವು ಆಶಾವಾದಿಗಳಾಗಿ ಬದುಕುತ್ತೇವೆ. ಮುಂದೆ ಏನಾಗುತ್ತದೆ ನೋಡೋಣ.
– ಎಸ್‌.ಎ. ರವೀಂದ್ರನಾಥ, ದಾವಣಗೆರೆ ಉತ್ತರ ಶಾಸಕ

ಸಚಿವ ಸ್ಥಾನದ ನಿರೀಕ್ಷೆಯನ್ನೂ ಇಟ್ಟುಕೊಂಡಿರಲಿಲ್ಲ; ಆಸಕ್ತಿಯೂ ಇಲ್ಲ. ಸಚಿವ ಸ್ಥಾನಕ್ಕಿಂತ ನನ್ನನ್ನು ಆಯ್ಕೆ ಮಾಡಿ ಕಳುಹಿಸಿದ ಹೊನ್ನಾಳಿ ಹಾಗೂ ನ್ಯಾಮತಿ ತಾಲ್ಲೂಕಿನ ಅಭಿವೃದ್ಧಿಯೇ ನನಗೆ ಮುಖ್ಯ.
– ಎಂ.ಪಿ. ರೇಣುಕಾಚಾರ್ಯ, ಹೊನ್ನಾಳಿ ಶಾಸಕ

ಒಂದೇ ಜಿಲ್ಲೆಯ ಇಬ್ಬರಿಗೆ ಸಚಿವ ಸ್ಥಾನ ನೀಡುವ ಬದಲು, ಪ್ರತಿ ಜಿಲ್ಲೆಗೂ ಒಂದಾದರೂ ಸಚಿವ ಸ್ಥಾನ ನೀಡಬೇಕು. ಈ ಬಗ್ಗೆ ಜಿಲ್ಲೆಯ ಶಾಸಕರು ಮುಖ್ಯಮಂತ್ರಿ ಭೇಟಿ ಮಾಡಿ ಮನವೊಲಿಸಲು ಯತ್ನಿಸುತ್ತೇವೆ.
– ಮಾಡಾಳ್‌ ವಿರೂಪಾಕ್ಷಪ್ಪ, ಚನ್ನಗಿರಿ ಶಾಸಕ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT