ಮಂಗಳವಾರ, ಮೇ 24, 2022
30 °C
ರೈಲು ನಿಲ್ದಾಣದ ನೂತನ ಕಟ್ಟಡ ಕಾಮಗಾರಿ ಪರಿಶೀಲಿಸಿದ ಸಂಸದ ಜಿ.ಎಂ. ಸಿದ್ದೇಶ್ವರ

ಏಪ್ರಿಲ್‌ ಮೊದಲ ವಾರ ಕಟ್ಟಡ ಉದ್ಘಾಟನೆ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ದಾವಣಗೆರೆ: ‘ನಗರದ ರೈಲು ನಿಲ್ದಾಣದ ನೂತನ ಕಟ್ಟಡ ನಿರ್ಮಾಣ ಕಾಮಗಾರಿ ಶೇ 80ರಷ್ಟು ಪೂರ್ಣಗೊಂಡಿದ್ದು, ಮಾರ್ಚ್‌ ಕೊನೆಯ ವಾರ ಅಥವಾ ಏಪ್ರಿಲ್‌ ಮೊದಲ ವಾರ ಕಟ್ಟಡವನ್ನು ಉದ್ಘಾಟಿಸಲಾಗುವುದು’ ಎಂದು ಸಂಸದ ಜಿ.ಎಂ. ಸಿದ್ದೇಶ್ವರ ತಿಳಿಸಿದರು.

ರೈಲು ನಿಲ್ದಾಣದ ನೂತನ ಕಟ್ಟಡ ನಿರ್ಮಾಣ ಕಾಮಗಾರಿಯನ್ನು ಶುಕ್ರವಾರ ಪರಿಶೀಲಿಸಿದ ಬಳಿಕ ಅವರು ಸುದ್ದಿಗಾರರೊಂದಿಗೆ ಮಾತನಾಡಿದರು.

‘ಮೊದಲನೇ ಹಂತದಲ್ಲಿ ₹ 15 ಕೋಟಿ ವೆಚ್ಚದಲ್ಲಿ ರೈಲು ನಿಲ್ದಾಣದ ಆಧುನೀಕರಣ, ನೂತನ ಕಟ್ಟಡ ನಿರ್ಮಾಣ ಕಾಮಗಾರಿ ಹಾಗೂ ₹ 5 ಕೋಟಿ ವೆಚ್ಚದಲ್ಲಿ ಎಸ್ಕಲೇಟರ್‌ (ಚಲಿಸುವ ಮೆಟ್ಟಿಲು) ನಿರ್ಮಾಣ ಕಾಮಗಾರಿ ಕೈಗೆತ್ತಿಕೊಳ್ಳಲಾಗಿತ್ತು. 25 ದಿನಗಳ ಒಳಗೆ ಎಲ್ಲಾ ಕಾಮಗಾರಿಗಳು ಪೂರ್ಣಗೊಳ್ಳಲಿವೆ ಎಂದು ರೈಲ್ವೆ ಅಧಿಕಾರಿಗಳು ಭರವಸೆ ನೀಡಿದ್ದಾರೆ. ಹೀಗಾಗಿ ಮಾರ್ಚ್‌ 27, ಇಲ್ಲವೇ ಏಪ್ರಿಲ್‌ 3 ಅಥವಾ 4ರಂದು ರೈಲು ನಿಲ್ದಾಣದ ನೂತನ ಕಟ್ಟಡದ ಉದ್ಘಾಟನಾ ಸಮಾರಂಭವನ್ನು ಹಮ್ಮಿಕೊಳ್ಳಲು ಉದ್ದೇಶಿಸಲಾಗಿದೆ. ಈ ಬಗ್ಗೆ ನೈರುತ್ಯ ರೈಲ್ವೆ ಪ್ರಧಾನ ವ್ಯವಸ್ಥಾಪಕರೊಂದಿಗೆ ಚರ್ಚಿಸಿ ವಾರದೊಳಗೆ ದಿನಾಂಕ ನಿಗದಿಗೊಳಿಸಲಾಗುವುದು. ಡಿಸಿಎಂ ಬಡಾವಣೆ ಬಳಿಯ ನವೀಕೃತ ರೈಲ್ವೆ ಕೆಳ ಸೇತುವೆ (ಆರ್‌.ಯು.ಬಿ) ಅನ್ನೂ ಅಂದೇ ಉದ್ಘಾಟಿಸಲಾಗುವುದು’ ಎಂದು ಹೇಳಿದರು.

‘ರೈಲು ನಿಲ್ದಾಣದ ಪಕ್ಕದ ಉಪವಿಭಾಗಾಧಿಕಾರಿ ಕಚೇರಿಯ ಜಾಗವನ್ನು ರೈಲ್ವೆ ಇಲಾಖೆಗೆ ಹಸ್ತಾಂತರಿಸಲು ಉದ್ದೇಶಿಸಲಾಗಿದೆ. ಈ ಜಾಗಕ್ಕೆ ಪರ್ಯಾಯವಾಗಿ ರೈಲ್ವೆ ಇಲಾಖೆಯು ದೊಡ್ಡಬಾತಿ ಬಳಿ ಜಾಗ ನೀಡಲಿದೆ. ಉಪವಿಭಾಗಾಧಿಕಾರಿ ಕಚೇರಿ ನಿರ್ಮಿಸಲು ₹ 5 ಕೋಟಿ ಅನುದಾನವನ್ನು ಮುಖ್ಯಮಂತ್ರಿ ಮಂಜೂರು ಮಾಡಿದ್ದಾರೆ. ಜಿಲ್ಲಾಧಿಕಾರಿ ಕಚೇರಿ ಪಕ್ಕದಲ್ಲಿ ನೂತನ ಕಚೇರಿಯನ್ನು ನಿರ್ಮಿಸಲಾಗುವುದು. ಈಗಿರುವ ಉಪವಿಭಾಗಾಧಿಕಾರಿ ಕಚೇರಿ ಜಾಗದಲ್ಲಿ ರೈಲು ನಿಲ್ದಾಣಕ್ಕೆ ಪ್ರವೇಶ ದ್ವಾರ ನಿರ್ಮಿಸಲಾಗುವುದು. ಜೊತೆಗೆ ಪಾರ್ಕಿಂಗ್‌ ಸ್ಥಳವನ್ನಾಗಿ ಅಭಿವೃದ್ಧಿಪಡಿಸಲಾಗುವುದು. ಇಲ್ಲಿ 100ಕ್ಕೂ ಹೆಚ್ಚು ಕಾರು, ಆಟೊಗಳು ಮತ್ತು ಸುಮಾರು 400 ಬೈಕ್‌ಗಳ ನಿಲುಗಡೆಗೆ ಅವಕಾಶ ಕಲ್ಪಿಸಲಾಗುವುದು’ ಎಂದು ಮಾಹಿತಿ ನೀಡಿದರು.

‘ಎರಡನೇ ಹಂತದಲ್ಲಿ ರೈಲು ನಿಲ್ದಾಣದ ನೂತನ ಕಟ್ಟಡದ ಮೇಲೆ ಇನ್ನೊಂದು ಮಹಡಿಯನ್ನು ನಿರ್ಮಿಸಿ, ಅಭಿವೃದ್ಧಿಗೊಳಿಸುವ ಬಗ್ಗೆ ಪ್ರಸ್ತಾವ ಸಲ್ಲಿಸಲಾಗಿದೆ. ಮುಂಬರುವ ದಿನಗಳಲ್ಲಿ ಅದಕ್ಕೂ ಮಂಜೂರಾತಿ ದೊರೆಯಲಿದೆ’ ಎಂದು ಸಂಸದರು ವಿಶ್ವಾಸ ವ್ಯಕ್ತಪಡಿಸಿದರು.

‘ಹರಿಹರದ ರೈಲು ನಿಲ್ದಾಣವನ್ನು ಮೇಲ್ದರ್ಜೆಗೇರಿಸಲು ರೈಲ್ವೆ ಸಚಿವರಿಗೆ ಮನವಿ ಸಲ್ಲಿಸಲಾಗಿದೆ. ಕೋವಿಡ್‌ ಕಾರಣಕ್ಕೆ ಉಂಟಾದ ಆರ್ಥಿಕ ಸಂಕಷ್ಟದಿಂದ ಮಂಜೂರಾತಿ ಸಿಗಲು ವಿಳಂಬವಾಗಿದೆ. ಮುಂಬರುವ ದಿನಗಳಲ್ಲಿ ಮಂಜೂರಾತಿ ಸಿಗಲಿದೆ’ ಎಂದರು.

‘ಹನುಮನಹಳ್ಳಿ ರೈಲು ನಿಲ್ದಾಣದಲ್ಲಿ ರೈಲು ನಿಲುಗಡೆಯ ವ್ಯವಸ್ಥೆಯನ್ನು ಈ ಹಿಂದಿನಂತೆ ಯಥಾಸ್ಥಿತಿ ಕಾಯ್ದುಕೊಳ್ಳುವಂತೆ ಸೂಚಿಸಲಾಗಿದೆ. ಜಿ.ಎಂ.ಐ.ಟಿ ಕಾಲೇಜಿನ ಸಮೀಪದ ಕರೂರಿನಲ್ಲಿನ 203ನೇ ರೈಲ್ವೆ ಗೇಟ್‌ ಬಳಿ ಜುಲೈನಲ್ಲಿ ರೈಲ್ವೆ ಕೆಳಸೇತುವೆ ನಿರ್ಮಿಸುವ ಭರವಸೆಯನ್ನು ಅಧಿಕಾರಿಗಳು ನೀಡಿದ್ದಾರೆ’ ಎಂದು ತಿಳಿಸಿದರು.

‘ಅಶೋಕ ರೈಲ್ವೆ ಗೇಟ್‌ ಬಳಿ ಅಂಡರ್‌ ಪಾಸ್‌ ನಿರ್ಮಿಸಲು ಈಗಾಗಲೇ ಅಗತ್ಯ ಸಿದ್ಧತೆ ಮಾಡಿಕೊಳ್ಳಲಾಗಿದೆ. ಖಾಸಗಿ ಜಮೀನಿನ ಮಾಲೀಕರೊಂದಿಗೆ ಜಿಲ್ಲಾಡಳಿತ ಮಾತುಕತೆ ನಡೆಸಿದ್ದು, ಶೀಘ್ರವೇ ಪರ್ಯಾಯ ಜಾಗವನ್ನು ಕೊಡುವ ಮೂಲಕ ಕಾಮಗಾರಿಗೆ ಚಾಲನೆ ನೀಡಲಾಗುವುದು’ ಎಂದು ಹೇಳಿದರು.

‘ಹರಿಹರದಲ್ಲಿ ಎಥನಾಲ್‌ ಘಟಕ ನಿರ್ಮಿಸಲು ಶಂಕುಸ್ಥಾಪನೆ ನೆರವೇರಿಸಲು ಮಾರ್ಚ್‌ 31ರೊಳಗೆ ದಿನಾಂಕ ನೀಡುವಂತೆ ಕೇಂದ್ರ ಸಚಿವ ಧರ್ಮೇಂದ್ರ ಪ್ರಧಾನ್‌ ಅವರನ್ನು ಕೋರಲಾಗಿದ್ದು, ಶೀಘ್ರದಲ್ಲೇ ದಿನಾಂಕ ನಿಗದಿಗೊಳಿಸಲಾಗುವುದು’ ಎಂದು ಸಂಸದರು ಪ್ರಶ್ನೆಯೊಂದಕ್ಕೆ ಉತ್ತರಿಸಿದರು.

ಇದಕ್ಕೂ ಮೊದಲು ರೈಲು ನಿಲ್ದಾಣ ಕಟ್ಟಡ ಕಾಮಗಾರಿ ಪರಿಶೀಲಿಸಿದ ಸಂಸದರು, ನಿಲ್ದಾಣದ ಮುಖ್ಯ ಪ್ರವೇಶ ದ್ವಾರದ ಬಳಿಯೇ ವಿಐಪಿ ಕಾರು ಬಂದು ನಿಲ್ಲುವಂತೆ ವ್ಯವಸ್ಥೆ ಮಾಡಬೇಕು ಎಂದು ಅಧಿಕಾರಿಗಳಿಗೆ ಸೂಚಿಸಿದರು. ವಿಐಪಿ ಕೊಠಡಿ, ಟಿಕೆಟ್‌ ಕೌಂಟರ್‌ಗಳಿಗೆ ತೆರಳಿ ಪರಿಶೀಲಿಸಿದ ಸಂಸದರು, ಮಹಿಳಾ ವಿಶ್ರಾಂತಿ ಕೊಠಡಿಯಲ್ಲಿ ಎರಡೇ ಶೌಚಾಲಯ ನಿರ್ಮಿಸಿರುವ ಬಗ್ಗೆ ಅಸಮಾಧಾನ ವ್ಯಕ್ತಪಡಿಸಿದರು.

ನೈರುತ್ಯ ರೈಲ್ವೆಯ ಮೈಸೂರು ವಿಭಾಗದ ಡಿ.ಆರ್‌.ಎಂ. ರಾಹುಲ್‌ ಅಗರವಾಲ್‌, ಸೆಕ್ಷನ್‌ ಎಂಜಿನಿಯರ್‌ ಪುಷ್ಪೇಂದ್ರ ಕುಮಾರ್‌, ಕಮರ್ಷಿಯಲ್‌ ಎಂಜಿನಿಯರ್‌ ಮಂಜುನಾಥ್‌, ಮೇಯರ್‌ ಬಿ.ಜಿ. ಅಜಯಕುಮಾರ್‌, ಧೂಡಾ ಅಧ್ಯಕ್ಷ ರಾಜನಹಳ್ಳಿ ಶಿವಕುಮಾರ್‌, ಬಿಜೆಪಿ ಜಿಲ್ಲಾ ಘಟಕದ ಅಧ್ಯಕ್ಷ ವೀರೇಶ ಹನಗವಾಡಿ, ಮಾಜಿ ಅಧ್ಯಕ್ಷ ಯಶವಂತರಾವ್‌ ಜಾಧವ್‌ ಅವರೂ ಇದ್ದರು.

*

₹ 5 ಕೋಟಿ ವೆಚ್ಚದಲ್ಲಿ ಚಲಿಸುವ ಮೆಟ್ಟಿಲು

ನಿತ್ಯ ರೈಲು ನಿಲ್ದಾಣಕ್ಕೆ ಬರುವ ಸಾವಿರಾರು ಪ್ರಯಾಣಿಕರಿಗೆ ಅನುಕೂಲ ಕಲ್ಪಿಸಲು ₹ 5 ಕೋಟಿ ವೆಚ್ಚದಲ್ಲಿ ಚಲಿಸುವ ಮೆಟ್ಟಿಲು (ಎಸ್ಕಲೇಟರ್‌) ನಿರ್ಮಿಸಲಾಗುತ್ತಿದೆ. ರಾಜ್ಯದ ನಾಲ್ಕು ರೈಲು ನಿಲ್ದಾಣಗಳಲ್ಲಿ ಮಾತ್ರ ಸದ್ಯಕ್ಕೆ ಎಸ್ಕಲೇಟರ್‌ ಸೌಲಭ್ಯಗಳಿವೆ. ದಾವಣಗೆರೆ ರೈಲು ನಿಲ್ದಾಣವೂ ಶೀಘ್ರದಲ್ಲೇ ಈ ಸೌಲಭ್ಯ ಹೊಂದಿರುವ ನಿಲ್ದಾಣಗಳ ಪಟ್ಟಿಗೆ ಸೇರಲಿದೆ.

ರೈಲು ನಿಲ್ದಾಣದ ಆವರಣದಲ್ಲಿ ಎಲ್‌ಇಡಿ ಬಲ್ಬ್‌ಗಳನ್ನು ಅಳವಡಿಸಲಾಗಿದೆ. ಇದರಿಂದ ಬಹಳಷ್ಟು ವಿದ್ಯುತ್‌ ಉಳಿತಾಯವಾಗಲಿದೆ. ಹೀಗಾಗಿ ವಿದ್ಯುತ್‌ ಚಾಲಿತ ಎಸ್ಕಲೇಟರ್‌ ಅಳವಡಿಸಿದ್ದರೂ ಹೆಚ್ಚಿನ ವಿದ್ಯುತ್‌ ಹೊರೆಯಾಗುವುದಿಲ್ಲ. ಕಟ್ಟಡದ ಎರಡನೇ ಮಹಡಿ ನಿರ್ಮಾಣಗೊಂಡ ಬಳಿಕ ಮಹಡಿ ಮೇಲೆ ಸೌರ ಫಲಕಗಳನ್ನು ಅಳವಡಿಸಿ ನಿಲ್ದಾಣಕ್ಕೆ ಅಗತ್ಯ ವಿದ್ಯುತ್‌ ಉತ್ಪಾದಿಸುವ ಯೋಜನೆಯೂ ಇದೆ ಎಂದು ರೈಲ್ವೆ ಅಧಿಕಾರಿಗಳು ಮಾಹಿತಿ ನೀಡಿದರು.

*

ಗಮನ ಸೆಳೆಯುತಿದೆ ಬೃಹತ್‌ ರಾಷ್ಟ್ರಧ್ವಜ

ರೈಲು ನಿಲ್ದಾಣದ ಮುಖ್ಯ ಪ್ರವೇಶ ದ್ವಾರದ ಎದುರಿಗೆ ನಿರ್ಮಿಸಿರುವ 100 ಅಡಿ ಎತ್ತರದ ಧ್ವಜಸ್ತಂಭದಲ್ಲಿ ಹಾರುತ್ತಿರುವ ಬೃಹತ್‌ ರಾಷ್ಟ್ರಧ್ವಜ ಗಮನ ಸೆಳೆಯುತ್ತಿದೆ.

ಭಾರತೀಯ ಧ್ವಜ ಪ್ರತಿಷ್ಠಾನವು ನಿರ್ಮಿಸಿರುವ ಈ ಧ್ವಜಸ್ತಂಭದಲ್ಲಿ 30X20 ಅಡಿ ಅಳತೆಯ ರಾಷ್ಟ್ರಧ್ವಜ ಹಾರಾಡುತ್ತಿದೆ. ಈ ಸ್ಮಾರಕ ಧ್ವಜವನ್ನು ಡೆನಿಯರ್‌ ಪಾಲಿಸ್ಟರ್‌ನಿಂದ ತಯಾರಿಸಲಾಗಿದ್ದು, ನಡುವೆ ಇರುವ ಅಶೋಕ ಚಕ್ರವನ್ನು ವಿಶೇಷ ತಾಂತ್ರಿಕತೆಯಿಂದ ಮುದ್ರಿಸಲಾಗಿದೆ.

ಭಾರತೀಯ ನಾಗರಿಕರಲ್ಲಿ ದೇಶಪ್ರೇಮ ಜಾಗೃತಗೊಳಿಸಲು ಹಾಗೂ ಯುವಕರಲ್ಲಿ ಸ್ಫೂರ್ತಿ ತುಂಬಲು ರೈಲ್ವೆ ಇಲಾಖೆಯು ಈ ಸ್ಮಾರಕ ಧ್ವಜಸ್ತಂಭವನ್ನು ನಿರ್ಮಿಸಿದೆ ಎಂದು ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.

*

ರೈಲು ನಿಲ್ದಾಣದ ನೂತನ ಕಟ್ಟಡವು ಸುಂದರ ಹಾಗೂ ವಿಶಾಲವಾಗಿದೆ. ಇದರಿಂದಾಗಿ ದಾವಣಗೆರೆಗೆ ಸುಂದರ ಕಳಸ ಇಟ್ಟಂತಾಗಿದೆ.

– ಜಿ.ಎಂ. ಸಿದ್ದೇಶ್ವರ, ಸಂಸದ

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು