ಪತ್ರಿಕೆ ಹಂಚಿ ಚಿನ್ನ ಗೆದ್ದ ಲಕ್ಷ್ಮಣ್
ಪತ್ರಿಕೆ ವಿತರಿಸುತ್ತ ಶಿಕ್ಷಣ ಮುಂದುವರಿಸಿದ ಆರ್.ಲಕ್ಷ್ಮಣ್ ಪತ್ರಿಕೋದ್ಯಮ ಸ್ನಾತಕೋತ್ತರ ವಿಭಾಗದಲ್ಲಿ 2 ಚಿನ್ನದ ಪದಕ ಪಡೆದಿದ್ದಾರೆ. ಪತ್ನಿಯೊಂದಿಗೆ ಸ್ನಾತಕೋತ್ತರ ಪದವಿಗೆ ಪ್ರವೇಶ ಪಡೆದಿದ್ದ ಇವರು ಪ್ರಥಮ ರ‍್ಯಾಂಕಿನೊಂದಿಗೆ ಉತ್ತೀರ್ಣರಾಗಿದ್ದಾರೆ. ಚಿತ್ರದುರ್ಗ ತಾಲ್ಲೂಕಿನ ಕೋಗುಂಡೆ ಗ್ರಾಮದ 38 ವರ್ಷದ ಆರ್.ಲಕ್ಷ್ಮಣ್ 10 ವರ್ಷದಿಂದ ಪತ್ರಿಕಾ ವಿತರಕರಾಗಿದ್ದಾರೆ. ‘ಪ್ರಜಾವಾಣಿ’ ಸೇರಿ ಹಲವು ಪತ್ರಿಕೆಗಳನ್ನು ಮನೆ–ಮನೆಗೆ ತಲುಪಿಸುತ್ತ ಶಿಕ್ಷಣವನ್ನು ಮುಂದುವರಿಸಿದ್ದಾರೆ. ‘ಪತ್ರಿಕೆಯ ಮೇಲಿನ ವ್ಯಾಮೋಹ ಸ್ನಾತಕೋತ್ತರ ಪದವಿಗೆ ಕರೆತಂದಿತು. ಪತ್ನಿ ಸುಮಲತಾ ಕನ್ನಡ ವಿಭಾಗಕ್ಕೆ ಪ್ರವೇಶ ಪಡೆದರು. ಬೆಳಿಗ್ಗೆ ಪತ್ರಿಕೆ ವಿತರಿಸಿ ಪತ್ನಿಯೊಂದಿಗೆ ವಿಶ್ವವಿದ್ಯಾಲಯಕ್ಕೆ ಬರುತ್ತಿದ್ದೆ’ ಎಂದು ಪುತ್ರಿಯ ಕೊರಳಿಗೆ ಚಿನ್ನದ ಪದಕ ಹಾಕಿ ಸಂಭ್ರಮಿಸಿದರು.