ದಾವಣಗೆರೆ: ಕ್ಷೇತ್ರದ ಜನರ ಆಶೋತ್ತರಗಳಿಗೆ ಸ್ಪಂದಿಸಲು ಹಾಗೂ ಅಭಿವೃದ್ಧಿ ಕಾಮಗಾರಿ ಕೈಗೊಳ್ಳಲು ಸ್ಥಳೀಯ ಪ್ರದೇಶಾಭಿವೃದ್ಧಿ ನಿಧಿಯಡಿ ದೊರೆತ ಅನುದಾನವನ್ನು ಜಿಲ್ಲೆಯ ಶಾಸಕರು ಕಾಲಮಿತಿಯಲ್ಲಿ ಬಳಕೆ ಮಾಡಿಕೊಳ್ಳುತ್ತಿಲ್ಲ. ಸರ್ಕಾರ ಬಿಡುಗಡೆಗೊಳಿಸಿದ ₹ 14 ಕೋಟಿಯಲ್ಲಿ ₹ 6.25 ಕೋಟಿ ಮಾತ್ರ ವೆಚ್ಚವಾಗಿದೆ.
ಕರ್ನಾಟಕ ಶಾಸಕರ ಸ್ಥಳೀಯ ಪ್ರದೇಶಾಭಿವೃದ್ಧಿ ನಿಧಿ (ಕೆಎಲ್‌ಲ್ಯಾಡ್ಸ್) ಅಡಿಯಲ್ಲಿ ವಿಧಾನಸಭೆ ಹಾಗೂ ವಿಧಾನಪರಿಷತ್ ಸದಸ್ಯರಿಗೆ ಪ್ರತಿ ವರ್ಷ ₹ 2 ಕೋಟಿ ಅನುದಾನವನ್ನು ಸರ್ಕಾರ ಮಂಜೂರು ಮಾಡುತ್ತದೆ. 2023–24ನೇ ಆರ್ಥಿಕ ವರ್ಷದಲ್ಲಿ ಜಿಲ್ಲೆಯ ಏಳು ವಿಧಾನಸಭಾ ಕ್ಷೇತ್ರದ ಸದಸ್ಯರಿಗೆ ನಿಗದಿತ ಅನುದಾನ ಒದಗಿಸಲಾಗಿದೆ. ಇದರಲ್ಲಿ ಇನ್ನೂ ₹ 8.16 ಕೋಟಿ ಅನುದಾನ ಬಳಕೆಗೆ ಬಾಕಿ ಉಳಿದಿದೆ. ಭೀಕರ ಬರ ಪರಿಸ್ಥಿತಿಯ ಸಂದರ್ಭದಲ್ಲಿಯೂ ಶಾಸಕರು ಅನುದಾನ ಬಳಸಿಕೊಳ್ಳದಿರುವುದಕ್ಕೆ ಆಕ್ಷೇಪ ವ್ಯಕ್ತವಾಗಿದೆ.
ಚನ್ನಗಿರಿ ಶಾಸಕ ಬಸವರಾಜು ಶಿವಗಂಗಾ ₹ 1.5 ಕೋಟಿ ಅನುದಾನ ಬಳಸಿಕೊಂಡಿದ್ದಾರೆ. ಶಾಮನೂರು ಶಿವಶಂಕರಪ್ಪ ₹ 1.1 ಕೋಟಿ ಅನುದಾನ ವಿನಿಯೋಗ ಮಾಡಿದ್ದಾರೆ. ಉಳಿದ ಯಾರೊಬ್ಬರೂ ₹ 1 ಕೋಟಿಗಿಂತ ಹೆಚ್ಚು ಅನುದಾನ ವೆಚ್ಚ ಮಾಡಿಲ್ಲ. ಹರಿಹರ ಶಾಸಕ ಬಿ.ಪಿ.ಹರೀಶ್ ₹ 3.7 ಲಕ್ಷ, ಮಾಯಕೊಂಡ ಶಾಸಕ ಕೆ.ಎಸ್.ಬಸವಂತಪ್ಪ ₹ 32 ಲಕ್ಷ, ಹೊನ್ನಾಳಿಯ ಡಿ.ಜಿ.ಶಾಂತನಗೌಡ ₹ 50 ಲಕ್ಷ, ಜಗಳೂರು ಶಾಸಕ ಬಿ.ದೇವೇಂದ್ರಪ್ಪ ₹ 53 ಲಕ್ಷ ಹಾಗೂ ಜಿಲ್ಲಾ ಉಸ್ತುವಾರಿ ಸಚಿವ ಎಸ್.ಎಸ್.ಮಲ್ಲಿಕಾರ್ಜುನ್ ₹ 72 ಲಕ್ಷ ಮಾತ್ರ ವೆಚ್ಚ ಮಾಡಿದ್ದಾರೆ.
ಶಾಲೆ, ಅಂಗನವಾಡಿ, ಕಾಲೇಜು, ಸಮುದಾಯ ಭವನ, ಹಾಸ್ಟೆಲ್, ಸರ್ಕಾರಿ ಕಟ್ಟಡ ನಿರ್ಮಾಣ ಹಾಗೂ ದುರಸ್ತಿ, ರಸ್ತೆ, ಕುಡಿಯುವ ನೀರು, ಆರೋಗ್ಯ, ದೇಗುಲಗಳ ಜೀರ್ಣೋದ್ಧಾರ, ಸರ್ಕಾರಿ ಸ್ಥಳದಲ್ಲಿ ಸಾರ್ವಜನಿಕ ಉಪಯೋಗಿ ಕಾಮಗಾರಿ, ಸರ್ಕಾರದ ವಿವಿಧ ಇಲಾಖೆಯ ವ್ಯಾಪ್ತಿಯ ಅಭಿವೃದ್ಧಿ ಕಾಮಗಾರಿ ಸೇರಿ ಹಲವು ಉದ್ದೇಶಗಳಿಗೆ ಈ ನಿಧಿ ಬಳಸಲು ಅವಕಾಶವಿದೆ. ಬಹುತೇಕ ಶಾಸಕರು ಕಟ್ಟಡ, ರಸ್ತೆಗಳಿಗೆ ಹೆಚ್ಚಿನ ಅನುದಾನ ವೆಚ್ಚ ಮಾಡುತ್ತಿದ್ದಾರೆ.
‘ಸ್ಥಳೀಯ ಪ್ರದೇಶಾಭಿವೃದ್ಧಿ ನಿಧಿಯ ಅನುದಾನವನ್ನು ಸರ್ಕಾರ ಬಿಡುಗಡೆ ಮಾಡುತ್ತಿದ್ದಂತೆಯೇ ಬೆಂಬಲಿಗರು, ಹಿಂಬಾಲಕರು ದುಂಬಾಲು ಬೀಳುತ್ತಾರೆ. ಜನರ ನಿರೀಕ್ಷೆ, ಅಗತ್ಯಕ್ಕೆ ಅನುಗುಣವಾಗಿ ನಿಧಿ ಬಳಸಲು ಹಲವು ಸವಾಲುಗಳಿವೆ. ಪಕ್ಷದ ಕಾರ್ಯಕರ್ತರು, ಸಾರ್ವಜನಿಕರ ಹಿತವನ್ನು ಗಮನದಲ್ಲಿ ಇಟ್ಟುಕೊಂಡು ಕ್ರಿಯಾಯೋಜನೆ ರೂಪಿಸಲು ಹೆಚ್ಚುಕಾಲ ಬೇಕಾಗುತ್ತದೆ.
ಇದರಲ್ಲಿ ಗೋಪ್ಯತೆ ಕಾಪಾಡುವ ಪರಿಸ್ಥಿತಿ ನಿರ್ಮಾಣವಾಗಿದೆ’ ಎಂದು ಹೆಸರು ಹೇಳಲು ಇಚ್ಛಿಸದ ಶಾಸಕರೊಬ್ಬರು ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.
ಸರ್ಕಾರ ಏಕಕಾಲಕ್ಕೆ ₹ 2 ಕೋಟಿ ಅನುದಾನ ಬಿಡುಗಡೆ ಮಾಡಿದರೆ ಕಾರ್ಯಯೋಜನೆ ರೂಪಿಸಲು ಅನುಕೂಲವಾಗುತ್ತದೆ. ಕಂತುಗಳ ಲೆಕ್ಕದಲ್ಲಿ ಅನುದಾನ ನೀಡಿದ್ದರಿಂದ ಕ್ಷೇತ್ರದ ಜನರ ಆದ್ಯತೆಯನ್ನು ಗಮನಿಸಿ ಶಿಫಾರಸು ಮಾಡಲು ಕಷ್ಟವಾಗುತ್ತಿದೆಬಿ.ಪಿ.ಹರೀಶ್, ಶಾಸಕ ಹರಿಹರ
ರ ಪರಿಸ್ಥಿತಿ ತಲೆದೋರಿದ್ದರಿಂದ ಕುಡಿಯುವ ನೀರು ಮತ್ತು ಕೊಳವೆಬಾವಿಗೆ ಅನುದಾನ ಮೀಸಲಿಟ್ಟುಕೊಂಡಿದ್ದೆ. ಉತ್ತಮ ಮಳೆಯ ಮುನ್ಸೂಚನೆ ಸಿಕ್ಕ ಬಳಿಕ ಹೊಸ ಕ್ರಿಯಾಯೋಜನೆ ಸಲ್ಲಿಸಲಾಗಿದೆ. ಅನುಮೋದನೆ ಸಿಕ್ಕ ತಕ್ಷಣ ಬಳಸಿಕೊಳ್ಳಲಾಗುವುದು.ಕೆ.ಎಸ್.ಬಸವಂತಪ್ಪ, ಶಾಸಕ, ಮಾಯಕೊಂಡ
₹ 50 ಲಕ್ಷ ಬಿಡುಗಡೆ
2024–25ನೇ ಸಾಲಿನ ಮೊದಲ ಕಂತಿನಲ್ಲಿ ಜಿಲ್ಲೆಯ ಪ್ರತಿ ಶಾಸಕರಿಗೆ ₹ 50 ಲಕ್ಷ ಅನುದಾನವನ್ನು ಬಿಡುಗಡೆ ಮಾಡಲಾಗಿದೆ. ಅನುದಾನಕ್ಕೆ ಅನುಗುಣವಾಗಿ ಕಾಮಗಾರಿಗಳನ್ನು ಪ್ರಸ್ತಾಪಿಸುವಂತೆ ಶಾಸಕರಿಗೆ ಜಿಲ್ಲಾಡಳಿತ ಕೋರಿದೆ.
ಸರ್ಕಾರ ನಿಗದಿಪಡಿಸಿದ ₹ 2 ಕೋಟಿ ಅನುದಾನದಲ್ಲಿ ಅಗತ್ಯ ಕಾಮಗಾರಿಗಳನ್ನು ಕೈಗೊಳ್ಳುವ ಕುರಿತು ಶಾಸಕರು ಪ್ರತಿ ವರ್ಷದ ಜೂನ್ ಅಂತ್ಯದ ವೇಳೆಗೆ ಶಿಫಾರಸು ಮಾಡಬೇಕು. ಇದನ್ನು ಪರಿಶೀಲಿಸಿ ಜಿಲ್ಲಾಧಿಕಾರಿ ಮಂಜೂರಾತಿ ನೀಡುತ್ತಾರೆ. ಪ್ರಸಕ್ತ ಆರ್ಥಿಕ ವರ್ಷದ ಕಾಮಗಾರಿಗಳ ಕುರಿತು ಶಾಸಕರು ಇನ್ನೂ ಕಾಮಗಾರಿಗಳ ಶಿಫಾರಸು ಮಾಡುವುದು ಬಾಕಿ ಇದೆ.
ಶಾಸಕರ ನಿಧಿಯಡಿ ಕೈಗೊಂಡ ಕಾಮಗಾರಿಗ ವಿವರ
ವಿಧಾನಸಭಾ ಕ್ಷೇತ್ರ; ಶಾಸಕರು ಶಿಫಾರಸು ಮಾಡಿದ ಕಾಮಗಾರಿ; ಮಂಜೂರಾತಿ; ಬಿಡುಗಡೆ ಮಾಡಿದ ಅನುದಾನ; ಪೂರ್ಣ; ಪ್ರಗತಿ; ಪ್ರಾರಂಭವಾಗದ ಕಾಮಗಾರಿ
ದಾವಣಗೆರೆ ಉತ್ತರ; 15; 11; ₹ 1.3 ಕೋಟಿ; 0; 10; 5
ದಾವಣಗೆರೆ ದಕ್ಷಿಣ; 25; 15; ₹ 72 ಲಕ್ಷ; 1 14 10
ಮಾಯಕೊಂಡ; 35; 5; ₹ 32 ಲಕ್ಷ; 4; 1; 30
ಹರಿಹರ; 28; 1; ₹ 3.7 ಲಕ್ಷ 0; 1; 27
ಜಗಳೂರು; 26; 5; ₹ 53 ಲಕ್ಷ; 5; 0; 21
ಚನ್ನಗಿರಿ; 49; 49; ₹ 1.5 ಕೋಟಿ; 22; 23; 4
ಹೊನ್ನಾಳಿ; 56; 56; ₹ 50 ಲಕ್ಷ; 0; 56; 0
ಒಟ್ಟು; 234; 142; ₹ 4.7 ಕೋಟಿ 32; 105; 97
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.