ಸೋಮವಾರ, ಮೇ 23, 2022
21 °C
ನಗರದಲ್ಲಿ 9 ಪ್ರಾಥಮಿಕ ಆರೋಗ್ಯ ಕೇಂದ್ರ; ಕೆಲಸ ನಿರ್ವಹಿಸದ ಆರೋಗ್ಯ ರಕ್ಷಾ ಸಮಿತಿ: ಆರೋಪ

ದಾವಣಗೆರೆ: ಗರ್ಭಿಣಿ, ಬಾಣಂತಿಯರಿಗೆ ಕಾಸಿದ್ದರಷ್ಟೇ ಚಿಕಿತ್ಸೆ

ಎಚ್‌. ಅನಿತಾ Updated:

ಅಕ್ಷರ ಗಾತ್ರ : | |

Prajavani

ದಾವಣಗೆರೆ: ನಗರದ ವಿವಿಧ ಬಡಾವಣೆಗಳಲ್ಲಿ ಒಟ್ಟು ಒಂಬತ್ತು ನಗರ ಪ್ರಾಥಮಿಕ ಆರೋಗ್ಯ ಕೇಂದ್ರಗಳಿದ್ದು, ಇಲ್ಲಿ ಬಡವರಿಗೆ ಚಿಕಿತ್ಸೆ ಸರಿಯಾಗಿ ಲಭ್ಯವಾಗುತ್ತಿಲ್ಲ ಎಂಬ ಆರೋಪಗಳು ಕೇಳಿಬಂದಿವೆ.

ಬಾಷಾನಗರ, ಆಜಾದ್ ನಗರ, ಎಸ್‌ಎಮ್‌ ಕೃಷ್ಣ ನಗರ, ಭಾರತ್‌ ಕಾಲೊನಿ ಆರೋಗ್ಯ ಕೇಂದ್ರಗಳ ವ್ಯಾಪ್ತಿಯಲ್ಲಿ ಬಡವರು, ಅಸಂಘಟಿತ ವಲಯದ ಮಂಡಕ್ಕಿ ಭಟ್ಟಿ ಕಾರ್ಮಿಕರು, ಬೀಡಿ ಕಾರ್ಮಿಕರು, ಬೀದಿ ವ್ಯಾಪಾರಸ್ಥರು, ಗುಜರಿ, ಹಮಾಲಿ ಇತರೆ ಶೋಷಿತ ಸಮುದಾಯದವರು ಹೆಚ್ಚಿನ ಸಂಖ್ಯೆಯಲ್ಲಿ ಇದ್ದಾರೆ. ಆದರೆ, ಕೇಂದ್ರಗಳಲ್ಲಿ ಯಾವುದೇ ಸೌಲಭ್ಯಗಳು ಉಚಿತವಾಗಿ ಸಿಗುತ್ತಿಲ್ಲ ಎಂದು ಸಾರ್ವಜನಿಕರು ದೂರಿದ್ದಾರೆ.

‘ಒಬ್ಬ ಮಹಿಳೆ ಗರ್ಭಿಣಿಯಾದಾಗಿನಿಂದ ಹೆರಿಗೆ ಆಗುವ ತನಕ ತಾಯಿ ಕಾರ್ಡ್‌, ರಕ್ತ ಪರೀಕ್ಷೆ, ಇಂಜೆಕ್ಷನ್ ಎಲ್ಲದಕ್ಕೂ ಹಣ ಕೊಡಬೇಕು. ಹೊರಗಿನ ಮೆಡಿಕಲ್‌ನಲ್ಲಿ ಔಷಧ ಖರೀದಿಸುವಂತೆ ಚೀಟಿ ಬರೆದುಕೊಡುತ್ತಾರೆ. ಡಾಕ್ಟರ್ ಬರುವುದು ಗೊತ್ತಾಗುವುದೇ ಇಲ್ಲ. ಬರೀ ನರ್ಸ್‌ಗಳು ಮಾತ್ರ ಇರುತ್ತಾರೆ. ಜನ ಕೇಳಿದರೆ ಮೀಟಿಂಗ್ ಹೋಗಿದ್ದಾರೆ ಎಂದು ಹೇಳುತ್ತಾರೆ. ಎಂತಹ ತುರ್ತು ಪರಿಸ್ಥಿತಿ ಇದ್ದಾಗಲೂ ರೋಗಿಗಳಿಗೆ ಆಂಬುಲೆನ್ಸ್‌ ವ್ಯವಸ್ಥೆ ಮಾಡುವುದಿಲ್ಲ. ಆಟೊಗಳ ಮೊರೆ ಹೋಗಬೇಕು’ ಎಂದು ಆರೋಪಿಸುತ್ತಾರೆ ನೆರಳು ಬೀಡಿ ಕಾರ್ಮಿಕರ ಯೂನಿಯನ್ ಅಧ್ಯಕ್ಷೆ ಜಬೀನಾ ಖಾನಂ.

‘ಯಾವುದೇ ವೈದ್ಯರು ರೋಗಿಗಳನ್ನು ಗೌರವದಿಂದ ಮಾತಮಾಡಿಸುವುದಿಲ್ಲ. ಏಕವಚನದಲ್ಲಿ ಮಾತಾಡುತ್ತಾರೆ. ರೋಗಿಗಳ ಭಾವನೆಗೆ ಯಾವುದೇ ಬೆಲೆ ಇಲ್ಲವಾಗಿದೆ. ಪೌಷ್ಟಿಕ ದಿನಾಚರಣೆಯಂದು ಕೇಂದ್ರದಲ್ಲಿ ಗರ್ಭಿಣಿ/ಬಾಣಂತಿಯರಿಗೆ ಪೌಷ್ಟಿಕ ಆಹಾರ ಸೇವನೆ ಬಗ್ಗೆ ಮಾಹಿತಿ ಕೊಡುವ ಜೊತೆಗೆ ಶುಗರ್, ಬಿಪಿ, ರಕ್ತ ಪರಿಕ್ಷೆ, ಹೈಟ್ ವೇಟ್, ಹೊಟ್ಟೆ ಪರಿಕ್ಷೆ ಮಾಡಬೇಕು. ಆದರೆ, ಯಾವುದನ್ನೂ ಮಾಡುವುದಿಲ್ಲ. ನಾಮಕಾವಸ್ತೆಗೆ ಅಂಗನವಾಡಿ ಕೇಂದ್ರದಲ್ಲಿ ಬ್ಯಾನರ್ ಕಟ್ಟಿ, 4 ನಮೂನೆ ಸೊಪ್ಪು ಇಟ್ಟು ಫೋಟೊ ತಗೆದುಕೊಂಡು ಬರುತ್ತಾರೆ. ಆರೋಗ್ಯ ರಕ್ಷಾ ಸಮಿತಿಗಳು ಪರಿಣಾಮಕಾರಿಯಾಗಿ ಕೆಲಸ ನಿರ್ವಹಿಸದಿರುವುದೂ ಸಮಸ್ಯೆಗಳು ಹೆಚ್ಚಲು ಕಾರಣ’ ಎನ್ನುತ್ತಾರೆ ಅವರು.

‘ಪ್ರಾಥಮಿಕ ಆರೋಗ್ಯ ಕೇಂದ್ರಗಳಿಗೆ ಬಜೆಟ್‌ನಲ್ಲಿ ಅಗತ್ಯ ಅನುದಾನವನ್ನು ನೀಡುತ್ತಿಲ್ಲ. ಮುಂದುವರಿದ ದೇಶಗಳಲ್ಲಿ ಜನರು ಆರೋಗ್ಯಕ್ಕಾಗಿ ತಮ್ಮ ಕಿಸೆಯಿಂದ ₹ 20 ಖರ್ಚು ಮಾಡಿದರೆ, ಸರ್ಕಾರ ₹ 80 ಖರ್ಚು ಮಾಡುತ್ತದೆ. ಆದರೆ, ನಮ್ಮ ದೇಶದಲ್ಲಿ ಜನರು ₹ 80 ಖರ್ಚು ಮಾಡುತ್ತಾರೆ. ₹ 20 ಕ್ಕಿಂತ ಕಡಿಮೆ ಹಣವನ್ನು ಸರ್ಕಾರ ಖರ್ಚು ಮಾಡುತ್ತಿದೆ. ಜನಪ್ರತಿನಿಧಿಗಳೇ ಖಾಸಗಿ ವೈದ್ಯಕೀಯ ಕಾಲೇಜು ಮತ್ತು ಆಸ್ಪತ್ರೆಗಳ ಮಾಲೀಕರಾಗಿದ್ದು, ಸರ್ಕಾರದ ಸಾರ್ವಜನಿಕ ಆರೋಗ್ಯ ವ್ಯವಸ್ಥೆ ಬಲಗೊಳ್ಳುತ್ತಿಲ್ಲ’ ಎನ್ನುತ್ತಾರೆ ನೆರಳು ಬೀಡಿ ಕಾರ್ಮಿಕರ ಯೂನಿಯನ್ ಪ್ರಧಾನ ಕಾರ್ಯದರ್ಶಿ ಎಂ. ಕರಿಬಸಪ್ಪ.

ಇಲ್ಲಿ ವೈದ್ಯ, ಅಲ್ಲಿ ಪೆಟ್ರೋಲ್‌ ಬಂಕ್‌ ಮಾಲೀಕ

ನಗರದ ದೊಡ್ಡಪೇಟೆಯಲ್ಲಿರುವ ನಗರ ಪ್ರಾಥಮಿಕ ಆರೋಗ್ಯ ಕೇಂದ್ರದ ವೈದ್ಯ ಡಾ.ನಾಗರಾಜ್‌ ಅವರು ಕೇಂದ್ರಕ್ಕೆ ಬರುವ ರೋಗಿಗಳಿಗೆ ಸಿಗುವುದೇ ಇಲ್ಲ ಎಂದು ಸಾರ್ವಜನಿಕರು ದೂರಿದ್ದಾರೆ.

ಈ ಸಂಬಂಧ ಸಮೀಪದ ಕುರುಬರ ಕೇರಿಯ ಗುಡ್ಡಪ್ಪ ಎಂಬುವವರು ಜಿಲ್ಲಾಧಿಕಾರಿ, ಜಿಲ್ಲಾ ಪಂಚಾಯಿತಿ ಅಧ್ಯಕ್ಷರು ಮತ್ತು ಮುಖ್ಯ ಕಾರ್ಯನಿರ್ವಹಣಾಧಿಕಾರಿ, ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಅಧಿಕಾರಿ ಅವರಿಗೆ 2021ರ ಸೆಪ್ಟೆಂಬರ್‌ನಲ್ಲಿ ಪತ್ರ ಬರೆದಿದ್ದು, ವೈದ್ಯರ ವಿರುದ್ಧ ಕ್ರಮ ಕೈಗೊಳ್ಳುವಂತೆ ಆಗ್ರಹಿಸಿದ್ದಾರೆ.

‘ವೈದ್ಯಾಧಿಕಾರಿ ಡಾ.ನಾಗರಾಜ್ ಅವರು ಕೆಲಸದ ವೇಳೆ ಸಾರ್ವಜನಿಕರಿಗೆ ಲಭ್ಯವಿರುವುದಿಲ್ಲ. ದಾವಣಗೆರೆ ಪಟ್ಟಣದಲ್ಲಿ ಅವರದೇ ಆದ ಪೆಟ್ರೋಲ್ ಬಂಕ್ ಹಾಗೂ ಹಣಕಾಸಿನ ಬ್ಯಾಂಕ್‍ಗಳಿದ್ದು ಅಲ್ಲಿಗೆ ತೆರಳುತ್ತಾರೆ. ಸಿಬ್ಬಂದಿಯನ್ನು ವಿಚಾರಿಸಿದರೆ ಮೀಟಿಂಗ್‌ ಮೇಲೆ ಹೊರಗೆ ಹೋಗಿದ್ದಾರೆ ಎಂದು ಸಬೂಬು ಹೇಳುತ್ತಾರೆ. ಇವರ ವಿರುದ್ಧ ಕ್ರಮ ಕೈಗೊಂಡು ಪ್ರಾಮಾಣಿಕ ಅಧಿಕಾರಿಯನ್ನು ನೇಮಿಸಬೇಕು’ ಎಂದು ಒತ್ತಾಯಿಸಿದ್ದಾರೆ.

ತಲಾ 10 ಸಾವಿರ ಜನಸಂಖ್ಯೆಗೆ ಒಂದು ಕೇಂದ್ರ ಇರಬೇಕು. ಆದರೆ, 60 ಸಾವಿರ ಜನಸಂಖ್ಯೆಗೆ ಒಂದು ಕೇಂದ್ರವಿದೆ. ಸಾವಿರ ಜನಸಂಖ್ಯೆಗೆ ಒಬ್ಬ ಆಶಾ ಕಾರ್ಯಕರ್ತೆ ಇರಬೇಕು. ಆದರೆ, ಐದು ಸಾವಿರ ಜನಸಂಖ್ಯೆಗೆ ಒಬ್ಬ ಆಶಾ ಕಾರ್ಯಕರ್ತೆ ಇದ್ದಾರೆ.

ಜಬೀನಾ ಖಾನಂ, ಅಧ್ಯಕ್ಷೆ, ನೆರಳು ಬೀಡಿ ಕಾರ್ಮಿಕರ ಯೂನಿಯನ್, ದಾವಣಗೆರೆ

ನಗರ ಆರೋಗ್ಯ ಕೇಂದ್ರಗಳಲ್ಲಿ ಗುತ್ತಿಗೆ ಆಧಾರದಲ್ಲಿ ಹಲವು ಸಿಬ್ಬಂದಿ ಕೆಲಸ ಮಾಡುತ್ತಿದ್ದಾರೆ. ಆದರೆ, ಸರಿಯಾಗಿ ವೇತನ ನೀಡುತ್ತಿಲ್ಲ. ಸರ್ಕಾರದಿಂದ ನೇಮಕವಾಗಿರುವವರಿಗಿಂತಲೂ ಹೆಚ್ಚು ಕೆಲಸ ಮಾಡುತ್ತಾರೆ. ಸಂಬಳ ಮಾತ್ರ ಕಡಿಮೆ.

ಕೆ.ಎಚ್‌. ಆನಂದರಾಜು, ಜಿಲ್ಲಾ ಸಂಚಾಲಕ, ಸಿಐಟಿಯು, ದಾವಣಗೆರೆ

ಪ್ರತಿ ಹತ್ತು ಸಾವಿರ ಜನಸಂಖ್ಯೆಗೆ ಒಂದು ವಿಶೇಷ ಚಿಕಿತ್ಸಾ ಕೇಂದ್ರವನ್ನು ಸ್ಥಾಪಿಸುವ ಸಂಬಂಧ ಪ್ರಸ್ತಾವ ಸಲ್ಲಿಸಲಾಗಿದೆ. ದೊಡ್ಡಪೇಟೆ ವೈದ್ಯರ ಮೇಲಿನ ಆರೋಪ ಸಂಬಂಧ ಅವರಿಗೆ ಎಚ್ಚರಿಕೆ ನೀಡಲಾಗಿದೆ.

ಡಾ.ಕೆ.ಎಸ್‌. ಮೀನಾಕ್ಷಿ, ಜಿಲ್ಲಾ ಸಂತಾನೋತ್ಪತ್ತಿ ಮತ್ತು ಮಕ್ಕಳ ಅಭಿವೃದ್ಧಿ ಅಧಿಕಾರಿ, ದಾವಣಗೆರೆ.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು