ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಯೋಜನೆ ಮಾರ್ಪಡಿಸಲು ಜನಪ್ರತಿನಿಧಿಗಳ ಒತ್ತಾಯ

ಸ್ಮಾರ್ಟ್‌ ಸಿಟಿ ಸಲಹಾ ಸಮಿತಿ ಸಭೆಯಲ್ಲಿ ಅಧಿಕಾರಿಗಳ ಮೇಲೆ ಶಾಸಕ, ಸಂಸದರ ಅಸಮಾಧಾನ
Last Updated 24 ಜನವರಿ 2019, 12:52 IST
ಅಕ್ಷರ ಗಾತ್ರ

ದಾವಣಗೆರೆ: ತುಮಕೂರು, ಬೆಳಗಾವಿ ನಗರದಲ್ಲಿ ನಾಗರಿಕರ ಅನುಕೂಲಕ್ಕೆ ತಕ್ಕಂತೆ ಸಮಗ್ರ ಯೋಜನೆಯನ್ನು ಮಾರ್ಪಡಿಸಿರುವ ರೀತಿಯಲ್ಲೇ ದಾವಣಗೆರೆ ನಗರದಲ್ಲೂ ಬದಲಾವಣೆ ಮಾಡಬೇಕು ಎಂದು ಶಾಸಕ ಎಸ್‌.ಎ. ರವೀಂದ್ರನಾಥ, ಮಹಾನಗರ ಪಾಲಿಕೆ ಸದಸ್ಯ ಶಿವನಹಳ್ಳಿ ರಮೇಶ್‌ ಒತ್ತಾಯಿಸಿದರು.

ಜಿಲ್ಲಾಧಿಕಾರಿ ಡಾ. ಬಗಾದಿ ಗೌತಮ್‌ ಅಧ್ಯಕ್ಷತೆಯಲ್ಲಿ ಗುರುವಾರ ನಡೆದ ‘ಸ್ಮಾರ್ಟ್‌ ಸಿಟಿ’ ಸಲಹಾ ಸಮಿತಿ ಸಭೆಯ ಆರಂಭದಲ್ಲೇ ರವೀಂದ್ರನಾಥ, ‘ಸ್ಮಾರ್ಟ್‌ ಸಿಟಿ ಯೋಜನೆ ಒಂದು ಭಾಗಕ್ಕೆ ಮಾತ್ರ ಸೀಮಿತವಾಗಿದೆ. ಉತ್ತರ ಭಾಗದ ಜನ ನಮ್ಮನ್ನು ಪ್ರಶ್ನಿಸುತ್ತಿದ್ದಾರೆ’ ಎಂದು ಆಕ್ಷೇಪ ವ್ಯಕ್ತಪಡಿಸಿದರು.

ಇದಕ್ಕೆ ಧ್ವನಿಗೂಡಿಸಿದ ಶಿವನಹಳ್ಳಿ ರಮೇಶ್‌, ‘ಈ ಹಿಂದೆ ಅಭಿವೃದ್ಧಿ ಕಾಣದ ದುರ್ಗಾಂಬಿಕಾ ದೇವಸ್ಥಾನದ ಸುತ್ತಲಿನ 750 ಕಿ.ಮೀ ಭೂಭಾಗವನ್ನು ಪ್ರದೇಶಾಭಿವೃದ್ಧಿ (ಎ.ಬಿ.ಡಿ) ಅಡಿ ಅಭಿವೃದ್ಧಿ ಕಾರ್ಯ ಹಾಗೂ ಜೊತೆಗೆ ಪರಿಸರ ಮಾಲಿನ್ಯ ಮಾಡುತ್ತಿದ್ದ ಮಂಡಕ್ಕಿ ಭಟ್ಟಿ ಅಭಿವೃದ್ಧಿಗೊಳಿಸುವುದನ್ನು ಮುಖ್ಯ ಕೆಲಸವಾಗಿ ತೆಗೆದುಕೊಳ್ಳಲು ನಿರ್ಧರಿಸಲಾಗಿತ್ತು. ಆದರೆ, ಇಂದು ನಮಗೆ ಮುಖ್ಯವಾಗಿ ಟ್ರಾಫಿಕ್‌ ಸಮಸ್ಯೆ ಹಾಗೂ ಅತಿವೃಷ್ಟಿ ಮತ್ತು ಅನಾವೃಷ್ಟಿ ಸಂದರ್ಭದಲ್ಲಿ ನಗರ ಎದುರಿಸುವ ಸಮಸ್ಯೆಗಳಿಗೆ ಪರಿಹಾರ ಕಲ್ಪಿಸಬೇಕಾಗಿದೆ. ಈ ನಿಟ್ಟಿನಲ್ಲಿ ಕೆಲಸಗಳನ್ನು ಕೈಗೊಳ್ಳಲು ಯೋಜನೆಗಳಲ್ಲಿ ಕೆಲವು ಮಾರ್ಪಾಡು ಮಾಡುವುದು ಅಗತ್ಯವಾಗಿದೆ. ಆದರೆ, ಅಧಿಕಾರಿಗಳು ನಮ್ಮನ್ನು ಕತ್ತಲೆಯಲ್ಲಿ ಇಡುತ್ತಿದ್ದಾರೆ’ ಎಂದು ಬೇಸರ ವ್ಯಕ್ತಪಡಿಸಿದರು.

ಇದಕ್ಕೆ ಪ್ರತಿಕ್ರಿಯಿಸಿದ ‘ಸ್ಮಾರ್ಟ್‌ ಸಿಟಿ’ ಕಂಪನಿಯ ವ್ಯವಸ್ಥಾಪಕ ನಿರ್ದೇಶಕ ಅಶಾದ್‌ ಷರೀಫ್‌, ‘ಮಂಡಕ್ಕಿ ಭಟ್ಟಿಯನ್ನು ಅಭಿವೃದ್ಧಿ ಪಡಿಸುವ ವಿಷಯವನ್ನು ಸೇರಿಸಿರುವುದರಿಂದಲೇ ದಾವಣಗೆರೆ ಈ ಯೋಜನೆಗೆ ಆಯ್ಕೆಯಾಗಿದೆ. ಎರಡು–ಮೂರು ಮಾದರಿ ಸ್ಮಾರ್ಟ್‌ ರಸ್ತೆಗಳನ್ನು ನಾವು ಮಾಡಿ ತೋರಿಸಬೇಕು ಹಾಗೂ ಅದರಂತೆ ಉಳಿದ ರಸ್ತೆಗಳನ್ನು ಪಾಲಿಕೆ ನಿರ್ಮಿಸಬೇಕು. ನಗರದ ಎಲ್ಲಾ ಭಾಗಗಳಿಗೂ ಅನುಕೂಲ ಆಗುವಂತೆ ಎಲ್‌ಇಡಿ ಬೀದಿ ದೀಪಗಳನ್ನು ಅಳವಡಿಸುತ್ತೇವೆ. ಇ–ಶೌಚಾಲಯ, ಬೈಸಿಕಲ್‌, ಇ–ರಿಕ್ಷಾ ಸೌಲಭ್ಯ ಕಲ್ಪಿಸುತ್ತೇವೆ. ಕುಡಿಯುವ ನೀರಿನ ಸಲುವಾಗಿ ಬ್ಯಾರೇಜ್‌ ನಿರ್ಮಿಸುತ್ತೇವೆ’ ಎಂದು ಮಾಹಿತಿ ನೀಡಿದರು.

‘ಸ್ಮಾರ್ಟ್‌ ಸಿಟಿ ಎಂದರೆ ಬರಿ ಮಂಡಕ್ಕಿ ಭಟ್ಟಿ ಅಭಿವೃದ್ಧಿ ಎಂಬ ಭಾವನೆ ಜನರಲ್ಲಿ ಮೂಡಿದೆ. ಹೀಗಾಗಿ ಉಳಿದ ಭಾಗಗಳಲ್ಲಿ ಯಾವ ಯಾವ ಕೆಲಸಗಳನ್ನು ತೆಗೆದುಕೊಳ್ಳುತ್ತೀದ್ದೀರಿ ಹಾಗೂ ಅವುಗಳು ಯಾವಾಗ ಪೂರ್ಣಗೊಳ್ಳಲಿವೆ ಎಂಬ ಬಗ್ಗೆ ಸಾರ್ವಜನಿಕರಿಗೆ ಮಾಹಿತಿ ನೀಡುವ ವ್ಯವಸ್ಥೆ ಮಾಡಬೇಕು’ ಎಂದು ಜಿಲ್ಲಾಧಿಕಾರಿ ಸೂಚಿಸಿದರು.

‘ಎಸ್‌.ಎಸ್‌. ಬಡಾವಣೆಯ ಹಲವು ಕಡೆ ಕಚ್ಚಾ ರಸ್ತೆಗಳಿವೆ. ಅವುಗಳನ್ನು ಸ್ಮಾರ್ಟ್‌ ಸಿಟಿ ಯೋಜನೆಯೊಳಗೆ ತೆಗೆದುಕೊಳ್ಳಬೇಕು. ನಗರದ ಒಳಗೆ ಕಚ್ಚಾ ರಸ್ತೆಗಳಿದ್ದರೆ ದಾವಣಗೆರೆ ಸ್ಮಾರ್ಟ್‌ ಸಿಟಿ ಹೇಗೆ ಆಗಲಿದೆ? ಮಣ್ಣು ರಸ್ತೆಗಳನ್ನು ಅಭಿವೃದ್ಧಿ ಪಡಿಸದಿದ್ದರೆ ನಾವು ಸುಮ್ಮನೆ ಇರುವುದಿಲ್ಲ’ ಎಂದು ರವೀಂದ್ರನಾಥ ಎಚ್ಚರಿಕೆ ನೀಡಿದರು.

ಇದಕ್ಕೆ ಧ್ವನಿಗೂಡಿಸಿದ ಶಾಸಕ ಶಾಮನೂರು ಶಿವಶಂಕರಪ್ಪ, ‘ನಗರದ ಎಲ್ಲಾ ಕಚ್ಚಾ ರಸ್ತೆಗಳನ್ನು ಅಭಿವೃದ್ಧಿ ಪಡಿಸಲು ಯೋಜನೆ ರೂಪಿಸಿ’ ಎಂದು ಸಲಹೆ ನೀಡಿದರು.

ಜಿಲ್ಲಾಧಿಕಾರಿ ಬಗಾದಿ, ‘ತುಮಕೂರು, ಬೆಳಗಾವಿಯಲ್ಲಿ ಯಾವ ರೀತಿ ಯೋಜನೆಯನ್ನು ಮಾರ್ಪಡಿಸಲಾಗಿದೆ ಎಂಬುದನ್ನು ತಿಳಿದುಕೊಳ್ಳಿ. ಅವಕಾಶವಿದ್ದರೆ ಇಲ್ಲಿಯೂ ಯೋಜನೆಯಲ್ಲಿ ಅಗತ್ಯ ಮಾರ್ಪಾಡು ಮಾಡೋಣ. ಜಿಲ್ಲಾ ಉಸ್ತುವಾರಿ ಕಾರ್ಯದರ್ಶಿ ಅಧ್ಯಕ್ಷತೆಯ ಸಮಿತಿ ಎದುರು ವಿಷಯ ಇಟ್ಟು ಒಪ್ಪಿಗೆ ಪಡೆಯೋಣ’ ಎಂದು ಹೇಳಿದರು.

‘ಯೋಜನೆಯ ವರದಿಯಲ್ಲಿ ಇರುವುದಕ್ಕೂ ಹಾಗೂ ಸ್ಥಳದಲ್ಲಿ ಕೈಗೊಳ್ಳಬೇಕಾದ ಕೆಲಸಕ್ಕೂ ಹೊಂದಾಣಿಕೆ ಆಗುತ್ತಿಲ್ಲ. ಕೆಲಸದಲ್ಲಿನ ವ್ಯತ್ಯಾಸದಿಂದಾಗಿ ಗುತ್ತಿಗೆದಾರರಿಗೆ ಹೆಚ್ಚುವರಿ ಹಣ ಖರ್ಚಾಗುತ್ತಿದೆ. ಅದನ್ನು ಬದಲಾಯಿಸಿಕೊಡುವಂತೆ ಕೇಳಿದರೆ, ಅಧಿಕಾರಿಗಳು ವಿಳಂಬ ಮಾಡುತ್ತಿದ್ದಾರೆ. ಇದರಿಂದಾಗಿಯೇ ಸ್ಮಾರ್ಟ್‌ ಸಿಟಿ ಕೆಲಸ ಆಮೆ ಗತಿಯಲ್ಲಿ ನಡೆಯುತ್ತಿದೆ’ ಎಂದು ಶಿವನಹಳ್ಳಿ ರಮೇಶ್‌ ದೂರಿದರು.

‘ಕಾಮಗಾರಿ ವ್ಯತ್ಯಾಸಗೊಂಡಿರುವುದಕ್ಕೆ 48 ಗಂಟೆ ಒಳಗೆ ಒಪ್ಪಿಗೆ ನೀಡಬೇಕು. ಇದರಿಂದಾಗಿ ಯಾವುದೇ ಕಾರಣಕ್ಕೂ ಕೆಲಸ ವಿಳಂಬ ಆಗದಂತೆ ನೋಡಿಕೊಳ್ಳಿ’ ಎಂದು ಜಿಲ್ಲಾಧಿಕಾರಿ ಸೂಚಿಸಿದರು.

ಮೇಯರ್‌ ಶೋಭಾ ಪಲ್ಲಾಗಟ್ಟೆ, ಸಲಹಾ ಸಮಿತಿ ಸದಸ್ಯರಾದ ಅಥಣಿ ವೀರಣ್ಣ, ದಿನೇಶ್‌ ಶೆಟ್ಟಿ, ಡಾ. ಶಾಂತಾ ಭಟ್‌, ಡಾ. ಎಚ್‌. ಈರಮ್ಮ, ಮಂಜುಳಾ ಬಸವಲಿಂಗಪ್ಪ, ರಾಜೇಂದ್ರ ಚಿಗಟೇರಿ, ಪಾಲಿಕೆ ಆಯುಕ್ತ ಮಂಜುನಾಥ ಬಳ್ಳಾರಿ, ‘ಸ್ಮಾರ್ಟ್‌ ಸಿಟಿ’ ಜಂಟಿ ವ್ಯವಸ್ಥಾಪಕ ನಿರ್ದೇಶಕ ವಿ.ಕೆ. ಪ್ರಸನ್ನಕುಮಾರ್‌, ಮುಖ್ಯ ಎಂಜಿನಿಯರ್‌ ಸತೀಶ್‌, ಕಾರ್ಯನಿರ್ವಾಹಕ ಎಂಜಿನಿಯರ್‌ ಕೆ.ಎಂ. ಗುರುಪಾದಯ್ಯ ಇದ್ದರು.

ಲಂಚ ಬೇಡಿಕೆ: ಕಾವೇರಿದ ಚರ್ಚೆ

‘ಸ್ಮಾರ್ಟ್‌ ಸಿಟಿ’ ಸಂಸ್ಥೆಯ ಅಧಿಕಾರಿಗಳು ಬಿಲ್‌ ಪಾಸ್‌ ಮಾಡಲು ಲಂಚ ಕೇಳುತ್ತಿದ್ದಾರೆ ಎಂದು ‘ಗುತ್ತಿಗೆದಾರರ ಸಂಘ’ದ ಹೆಸರಿನಲ್ಲಿ ಬರೆದ ಪತ್ರ ಸಭೆಯಲ್ಲಿ ತೀರ್ವ ಚರ್ಚೆಗೆ ಒಳಗಾಯಿತು.

ಶಾಸಕ ಶಾಮನೂರು ಶಿವಶಂಕರಪ್ಪ ಅವರು ತಮಗೆ ಬಂದ ಪತ್ರದ ಬಗ್ಗೆ ಸಭೆಯಲ್ಲಿ ವಿಷಯ ಪ್ರಸ್ತಾಪಿಸಿದರು. ‘ಪತ್ರದಲ್ಲಿ ಕೆಲವು ಅಧಿಕಾರಿಗಳ ಹೆಸರನ್ನೂ ಉಲ್ಲೇಖಿಸಲಾಗಿದೆ. ಇಂಥ ವಾತಾವರಣದಲ್ಲಿ ತಾವು ಹೇಗೆ ಕೆಲಸ ಮಾಡಲು ಸಾಧ್ಯ ಎಂದು ಗುತ್ತಿಗೆದಾರರು ಪ್ರಶ್ನಿಸಿದ್ದಾರೆ’ ಎಂದು ಶಾಮನೂರು ಕಿಡಿ ಕಾರಿದರು.

ಇದಕ್ಕೆ ಧ್ವನಿಗೂಡಿಸಿದ ಜಿಲ್ಲಾಧಿಕಾರಿ, ತಮಗೂ ನಿನ್ನೆ ಪತ್ರ ಬಂದಿದೆ ಎಂದರು. ‘ಈ ಹಿಂದೆಯೂ ಈ ಬಗ್ಗೆ ದೂರು ಬಂದಿತ್ತು. ಇದು ಗಂಭೀರ ವಿಚಾರ’ ಎಂದು ಸಂಸದರು ಹೇಳಿದರು.

ವ್ಯವಸ್ಥಾಪಕ ನಿರ್ದೇಶಕ ಅಶಾದ್‌ ಷರೀಫ್‌, ‘ಗುತ್ತಿಗೆದಾರರ ಹೆಸರಿನಲ್ಲಿ ನನಗೂ ಅನಾಮದೇಯ ಪತ್ರ ಬರೆದಿದ್ದಾರೆ. ನಿಖರ ಪ್ರಕರಣವನ್ನು ಉಲ್ಲೇಖಿಸಿಲ್ಲ. ಹೀಗಿದ್ದರೂ ಸಂಬಂಧಪಟ್ಟ ಅಧಿಕಾರಿಗಳಿಗೆ ನೋಟಿಸ್‌ ನೀಡಿದ್ದೇನೆ. ಮೂರ್ನಾಲ್ಕು ಮಂದಿ ಮಾತ್ರ ಸರ್ಕಾರಿ ಅಧಿಕಾರಿಗಳಿದ್ದಾರೆ. ಉಳಿದಂತೆ ಪ್ರತಿಷ್ಠಿತ ಕಂಪನಿಗಳಲ್ಲಿ ಈ ಹಿಂದೆ ಕೆಲಸ ಮಾಡಿದವರನ್ನೇ ನೇಮಕ ಮಾಡಿಕೊಳ್ಳಲಾಗಿದೆ. ನಾವು ಉತ್ತಮವಾಗಿ ಕೆಲಸ ಮಾಡುತ್ತಿರುವುದರಿಂದಲೇ ಯೋಜನೆಯ ಅನುಷ್ಠಾನದಲ್ಲಿ ದಾವಣಗೆರೆ ದೇಶದಲ್ಲೇ 10ನೇ ಸ್ಥಾನದಲ್ಲಿದೆ. ಹೀಗಿದ್ದರೂ ಯಾರಾದರೂ ಹಣದ ಬೇಡಿಕೆ ಇಡುತ್ತಿದ್ದರೆ ಲೋಕಾಯುಕ್ತರಿಗೆ ದೂರು ನೀಡಿ ಟ್ರ್ಯಾಪ್‌ ಮಾಡಿಸಬಹುದು’ ಎಂದು ಸ್ಪಷ್ಟಪಡಿಸಿದರು.

ಇದಕ್ಕೆ ತೀಕ್ಷ್ಣವಾಗಿ ಪ್ರತಿಕ್ರಿಯಿಸಿದ ಶಾಮನೂರು, ‘ಬೆಂಕಿ ಇಲ್ಲದೆ ಹೊಗೆ ಬರುವುದಿಲ್ಲ. ಇಂಥ ಪ್ರಕರಣ ನಡೆದಿರುವುದರಿಂದಲೇ ಪತ್ರ ಬರೆದಿದ್ದಾರೆ’ ಎಂದು ಪ್ರತಿಪಾದಿಸಿದರು.

‘ಇಂದು ಸರ್ಕಾರಿ ಕೆಲಸಗಳಲ್ಲಿ ಲಂಚ ತೆಗೆದುಕೊಳ್ಳುವುದು ಮಾಮೂಲಿ ಎಂಬಂತಾಗಿದೆ’ ಎಂದು ಸಂಸದರು ಬೇಸರ ವ್ಯಕ್ತಪಡಿಸಿದಾಗ, ‘ಎಲ್ಲಾ ಬಹಿರಂಗವಾಗಿಯೇ ತೆಗೆದುಕೊಳ್ಳುತ್ತಾರೆ’ ಎಂದು ಶಾಮನೂರು ಮಾತಿನಲ್ಲೇ ತಿವಿದರು.

‘ಇಂಥ ದೂರುಗಳು ಬಾರದಂತೆ ಕೆಲಸ ಮಾಡುವುದು ಮುಖ್ಯ. ಈ ಬಗ್ಗೆ ಹೆಚ್ಚಿನ ನಿಗಾ ವಹಿಸಿ. ಗುತ್ತಿಗೆದರರ ಬಿಲ್‌ಗಳ ಕಡತಗಳನ್ನು ನಿಯಮಿತವಾಗಿ ವಿಲೇವಾರಿ ಮಾಡಿ’ ಎಂದು ಜಿಲ್ಲಾಧಿಕಾರಿ ಸೂಚಿಸಿದರು.

₹ 396 ಕೋಟಿ ಬಿಡುಗಡೆ: ₹ 31 ಕೋಟಿ ವೆಚ್ಚ!

‘ಸ್ಮಾರ್ಟ್‌ ಸಿಟಿ’ಯಡಿ ಒಟ್ಟು ₹ 1,092.64 ಕೋಟಿ ವೆಚ್ಚದಲ್ಲಿ ಹಲವು ಅಭಿವೃದ್ಧಿ ಕಾಮಗಾರಿಗಳನ್ನು ಕೈಗೊಳ್ಳಲು ಯೋಜನೆ ರೂಪಿಸಲಾಗಿದ್ದು, ನಗರಕ್ಕೆ ಇದುವರೆಗೆ ಒಟ್ಟು ₹ 396 ಕೋಟಿ ಅನುದಾನ ಬಿಡುಗಡೆಯಾಗಿದೆ. ಯೋಜನಾ ವೆಚ್ಚ ಹಾಗೂ ಭೌತಿಕ ಕಾಮಗಾರಿ ಸೇರಿ ಒಟ್ಟು ₹ 31.42 ಕೋಟಿ ವೆಚ್ಚ ಮಾಡಲಾಗಿದೆ.

ಒಟ್ಟು 62 ಕಾಮಗಾರಿಗಳ ಪೈಕಿ 4 ಕೆಲಸಗಳು ಪೂರ್ಣಗೊಂಡಿವೆ. 28 ಕೆಲಸಗಳು ಪ್ರಗತಿಯಲ್ಲಿದ್ದು, 18 ಕಾಮಗಾರಿಗಳಿಗೆ ಟೆಂಡರ್‌ ಪ್ರಕ್ರಿಯೆ ನಡೆಯುತ್ತಿದೆ. ಮೂರು ಕಾಮಗಾರಿಗಳಿಗೆ ತಾಂತ್ರಿಕ ಹಾಗೂ ಆಡಳಿತಾತ್ಮಕ ಅನುಮೋದನೆ ಸಿಗುವ ಹಂತದಲ್ಲಿದ್ದು, ಒಂಬತ್ತು ಕಾಮಗಾರಿಗಳು ಡಿಪಿಆರ್‌ ಸಿದ್ಧಪಡಿಸುವ ಹಂತದಲ್ಲಿದೆ ಎಂದು ಅಧಿಕಾರಿಗಳು ಮಾಹಿತಿ ನೀಡಿದರು.

ಈ ಯೋಜನೆ ಅನುಷ್ಠಾನಗೊಳಿಸುವಲ್ಲಿ ದಾವಣಗೆರೆಯು ದೇಶದಲ್ಲಿಯೇ 10ನೇ ಸ್ಥಾನದಲ್ಲಿದ್ದು, ರಾಜ್ಯದಲ್ಲಿ ಮೊದಲ ಸ್ಥಾನದಲ್ಲಿದೆ. ತುಮಕೂರು 28ನೇ ರ‍್ಯಾಂಕ್‌, ಬೆಳಗಾವಿ 40ನೇ ರ‍್ಯಾಂಕ್‌, ಹುಬ್ಬಳ್ಳಿ–ಧಾರವಾಡ 41ನೇ ರ‍್ಯಾಂಕ್‌, ಶಿವಮೊಗ್ಗ 43ನೇ ರ‍್ಯಾಂಕ್‌, ಮಂಗಳೂರು 48ನೇ ರ‍್ಯಾಂಕ್‌ ಹಾಗೂ ಬೆಂಗಳೂರು 52ನೇ ರ‍್ಯಾಂಕಿಂಗ್‌ ಪಡೆದಿದೆ ಎಂದು ಅಧಿಕಾರಿಗಳು ತಮ್ಮ ಕೆಲಸವನ್ನು ಸಮರ್ಥಿಸಿಕೊಂಡರು.

ಸೈಕಲ್‌ ಬದಲು ಡಿಜಿಟಲ್‌ ಗ್ರಂಥಾಲಯ ನಿರ್ಮಿಸಿ

‘₹ 6.17 ಕೋಟಿ ವೆಚ್ಚದಲ್ಲಿ ಮೈಸೂರಿನ ಮಾದರಿಯಲ್ಲೇ 200 ಸೈಕಲ್‌ಗಳನ್ನು ಸಾರ್ವಜನಿಕರಿಗೆ ಬಾಡಿಗೆ ಆಧಾರದಲ್ಲಿ ಓಡಿಸಲು ವ್ಯವಸ್ಥೆ ಮಾಡಲಾಗುವುದು. 10 ಕಡೆ ಸೈಕಲ್ ನಿಲ್ದಾಣಗಳನ್ನು ನಿರ್ಮಿಸಲಾಗುವುದು’ ಎಂದು ಅಧಿಕಾರಿಗಳು ಮಾಹಿತಿ ನೀಡಿದರು.

ಇದಕ್ಕೆ ಆಕ್ಷೇಪ ವ್ಯಕ್ತಪಡಿಸಿದ ಶಿವನಹಳ್ಳಿ ರಮೇಶ್‌, ‘ನಗರದಲ್ಲಿ ಸರಿಯಾಗಿ ರಸ್ತೆ, ಫುಟ್‌ಪಾತ್‌ ಇಲ್ಲ. ಹೀಗಿರುವಾಗ ಸೈಕಲ್‌ ಓಡಿಸಲು ಯಾರೂ ಆಸಕ್ತಿ ತೋರಿಸುವುದಿಲ್ಲ. ಇದೊಂದು ನಿಷ್ಪ್ರಯೋಜಕ ಯೋಜನೆಯಾಗಲಿದೆ. ಅದರ ಬದಲು ಆ ಹಣದಲ್ಲಿ ನಗರದ ನಾಲ್ಕು ಭಾಗಗಳಲ್ಲಿ ಡಿಜಿಟಲ್‌ ಗ್ರಂಥಾಲಯ ನಿರ್ಮಿಸಿದರೆ ಬಡ ವಿದ್ಯಾರ್ಥಿಗಳಿಗೆ ಸ್ಪರ್ಧಾತ್ಮಕ ಪರೀಕ್ಷೆಗಳನ್ನು ಎದುರಿಸಲು ಅನುಕೂಲವಾಗಲಿದೆ’ ಎಂದು ಹೇಳಿದರು.

ಸಂಸದ ಸಿದ್ದೇಶ್ವರ, ರವೀಂದ್ರನಾಥ ಅವರೂ ಸೈಕಲ್‌ ಹೊಡೆಯುವವರ ಸಂಖ್ಯೆ ಕಡಿಮೆ ಎಂದು ಅಭಿಪ್ರಾಯಪಟ್ಟರು.

‘ಪರಿಸರ ಸ್ನೇಹಿಯಾದ ಸೈಕಲ್‌ ಓಡಿಸುವುದಕ್ಕೆ ಪ್ರೋತ್ಸಾಹ ನೀಡಬೇಕು ಎಂಬ ಉದ್ದೇಶದಿಂದ ಇದನ್ನು ಯೋಜನೆಯೊಳಗೆ ಸೇರಿಸಲಾಗಿದೆ. ಕೈಬಿಡುವುದು ಸರಿಯಲ್ಲ’ ಎಂದು ಅಶಾದ್‌ ಷರೀಫ್‌ ಪ್ರತಿಪಾದಿಸಿದರು.

‘₹ 2 ಕೋಟಿ ವೆಚ್ಚದಲ್ಲಿ 100 ‘ಇ–ರಿಕ್ಷಾ’ ಸೌಲಭ್ಯವನ್ನು ಕಲ್ಪಿಸಲಾಗುವುದು. ಒಂದು ಇ–ರಿಕ್ಷಾ ಬೆಲೆ ₹ 1.81 ಲಕ್ಷ ಇದ್ದು, ಶೇ 50ರಷ್ಟು ಸಬ್ಸಿಡಿ ನೀಡಲಾಗುತ್ತದೆ’ ಎಂದು ಅಶಾದ್‌ ಷರೀಫ್‌ ಮಾಹಿತಿ ನೀಡಿದರು.

ಸೈಕಲ್‌ ಹಾಗೂ ಇ–ರಿಕ್ಷಾ ಸೌಲಭ್ಯಗಳನ್ನು ಶೇ 50ರಷ್ಟನ್ನು ಪ್ರಾಯೋಗಿಕವಾಗಿ ಕಲ್ಪಿಸಿ. ಜನರಿಂದ ಸ್ಪಂದನೆ ಸಿಕ್ಕರೆ ಮಾತ್ರ ಉಳಿದವನ್ನೂ ಆರಂಭಿಸಿ ಎಂದು ಸಲಹಾ ಸಮಿತಿ ಸದಸ್ಯರು ಹಾಗೂ ಜನಪ್ರತಿನಿಧಿಗಳು ಸೂಚಿಸಿದರು.

ಮಾರ್ಚ್‌ ಒಳಗೆ ರಸ್ತೆ ಕಾಮಗಾರಿ ಪೂರ್ಣ

ಚೌಕಿಪೇಟೆ ಹಾಗೂ ಎಂ.ಜಿ. ರಸ್ತೆ ಅಭಿವೃದ್ಧಿ ಕಾಮಗಾರಿಗಳು ವಿಳಂಬ ಆಗುತ್ತಿರುವುದಕ್ಕೆ ಸ್ಥಳೀಯರು ಆಕ್ರೋಶ ವ್ಯಕ್ತಪಡಿಸುತ್ತಿದ್ದಾರೆ ಎಂದು ಜನಪ್ರತಿನಿಧಿಗಳು ಅಧಿಕಾರಿಗಳ ಕಾರ್ಯವೈಖರಿಗೆ ಅಸಮಾಧಾನ ವ್ಯಕ್ತಪಡಿಸಿದರು.

‘ಇದೇ ರೀತಿ ಕೆಲಸ ಮಾಡಿದರೆ ಸ್ಮಾರ್ಟ್‌ ಸಿಟಿ ಯೋಜನೆ 10 ವರ್ಷವಾದರೂ ಪೂರ್ಣಗೊಳ್ಳುವುದಿಲ್ಲ. ನಿಗದಿತ ಅವಧಿಯಲ್ಲಿ ಕೆಲಸ ಪೂರ್ಣಗೊಳಿಸಬೇಕು. ಚೌಕಿಪೇಟೆಯಲ್ಲಿ ರಥೋತ್ಸವ ನಡೆಯಲಿದ್ದು, ಅಷ್ಟರೊಳಗೆ ರಸ್ತೆ ಕೆಲಸ ಪೂರ್ಣಗೊಳಿಸಿ’ ಎಂದು ಶಾಮನೂರು ಶಿವಶಂಕರಪ್ಪ ಸೂಚಿಸಿದರು.

ಮಾರ್ಚ್‌ ಅಂತ್ಯದೊಳಗೆ ಚೌಕಿಪೇಟೆ, ಎಂ.ಜಿ. ರಸ್ತೆ ಅಭಿವೃದ್ಧಿ ಕೆಲಸ ಪೂರ್ಣಗೊಳಿಸುವುದಾಗಿ ಅಧಿಕಾರಿಗಳು ಭರವಸೆ ನೀಡಿದರು.

₹ 90 ಕೋಟಿ ವೆಚ್ಚದಲ್ಲಿ ತುಂಗಭದ್ರಾ ನದಿಗೆ ಬ್ಯಾರೇಜ್ ನಿರ್ಮಾಣ ಕಾಮಗಾರಿಗೂ ಕೂಡಲೇ ಟೆಂಡರ್‌ ಕರೆದು ಮಳೆಗಾಲ ಆರಂಭಗೊಳ್ಳುವ ಮೊದಲೇ ಕಾಮಗಾರಿ ಪೂರ್ಣಗೊಳಿಸುವಂತೆ ಜನಪ್ರತಿನಿಧಿಗಳು ಸೂಚಿಸಿದರು.

ರಾಜಕಾಲುವೆ ಅಭಿವೃದ್ಧಿಗೆ ₹ 25 ಕೋಟಿ

ಅತಿವೃಷ್ಟಿಯಾದಾಗ ಹಳೆ ದಾವಣಗೆರೆ ಭಾಗದ ಹಲವು ಪ್ರದೇಶ ಮುಳುಗಡೆಯಾಗುತ್ತದೆ. ನೀಲಮ್ಮನ ತೋಟ ಸೇರಿ ಕೆಲ ಭಾಗಗಳಲ್ಲಿ ನಾಗರಿಕರ ಸಮಸ್ಯೆ ಹೇಳತೀರದಾಗಿದೆ. ಹೀಗಾಗಿ ಉಳಿದ ಎಲ್ಲಾ ಕೆಲಸಗಳಿಗಿಂತ ರಾಜಕಾಲುವೆ ನಿರ್ಮಾಣಕ್ಕೆ ಆದ್ಯತೆ ನೀಡಬೇಕು ಎಂದು ಶಿವನಹಳ್ಳಿ ರಮೇಶ್‌ ಒತ್ತಾಯಿಸಿದರು.

ಇದಕ್ಕೆ ರವೀಂದ್ರನಾಥ, ಜಿ.ಎಂ. ಸಿದ್ದೇಶ್ವರ, ಶಾಮನೂರು ಶಿವಶಂಕರಪ್ಪ ಅವರೂ ಧ್ವನಿಗೂಡಿಸಿದರು.

ಇದಕ್ಕೆ ಪ್ರತಿಕ್ರಿಯಿಸಿದ ಅಶಾದ್‌ ಷರೀಫ್‌, ‘₹ 25 ಕೋಟಿ ಅನುದಾನವನ್ನು ರಾಜಕಾಲುವೆ ಅಭಿವೃದ್ಧಿಗೆ ಮೀಸಲಿಡಲಾಗಿದೆ. ಶೀಘ್ರವೇ ಟೆಂಡರ್‌ ಕರೆದು ಕಾಮಗಾರಿಯನ್ನು ಆರಂಭಿಸಲಾಗುವುದು’ ಎಂದರು.

‘ಮಳೆಗಾಲ ಬಂದರೆ ಕೆಲಸ ಮಾಡಲು ಸಾಧ್ಯವಿಲ್ಲ. ಹೀಗಾಗಿ ಅಲ್ಪಾವಧಿಯ ಟೆಂಡರ್‌ ಕರೆಯಿರಿ’ ಎಂದು ಜಿಲ್ಲಾಧಿಕಾರಿ ಸೂಚಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT