ದಾವಣಗೆರೆ: ದಾವಣಗೆರೆ ವಿಶ್ವವಿದ್ಯಾಲಯದ ವಾಣಿಜ್ಯ ವಿಭಾಗದ ಅಂತಿಮ ವರ್ಷದ ‘ಇ–ಕಾಮರ್ಸ್’ ವಿಷಯದ ಪ್ರಶ್ನೆಪತ್ರಿಕೆ ಜತೆಗೆ ಉತ್ತರ ಮುದ್ರಿಸಿದ ಪ್ರತಿಯನ್ನು ಪರೀಕ್ಷಾರ್ಥಿಗಳಿಗೆ ವಿತರಿಸಿದ ಪ್ರಸಂಗ ಮಂಗಳವಾರ ನಡೆದಿದೆ. ತಪ್ಪಿನ ಅರಿವಾಗುತ್ತಿದ್ದಂತೆ ಪರೀಕ್ಷೆ ರದ್ದುಪಡಿಸಿ ಅನಿರ್ದಿಷ್ಟಾವಧಿಗೆ ಮುಂದೂಡಲಾಗಿದೆ.
ವಾಣಿಜ್ಯ ವಿಭಾಗದ ಮುಕ್ತ ಆಯ್ಕೆ (ಓಪನ್ ಎಲೆಕ್ಟಿವ್) ‘ಇ–ಕಾಮರ್ಸ್’ ವಿಷಯದ ಪರೀಕ್ಷೆ ಮಂಗಳವಾರ ಬೆಳಿಗ್ಗೆ 10ಕ್ಕೆ ನಿಗದಿಯಾಗಿತ್ತು. 60 ಅಂಕದ ಪ್ರಶ್ನೆಪತ್ರಿಕೆಯನ್ನು ಪರೀಕ್ಷಾರ್ಥಿಗಳಿಗೆ ವಿತರಿಸಲಾಯಿತು. ಕೆಲ ಹೊತ್ತಿನಲ್ಲಿ ಪ್ರಶ್ನೆಗಳೊಂದಿಗೆ ಉತ್ತರವೂ ಮುದ್ರಣವಾಗಿರುವುದು ಪರೀಕ್ಷಾ ಮೇಲ್ವಿಚಾರಕರ ಗಮನಕ್ಕೆ ಬಂದಿದೆ.
ದಾವಣಗೆರೆ ಹಾಗೂ ಚಿತ್ರದುರ್ಗ ಜಿಲ್ಲೆಯ 70ಕ್ಕೂ ಹೆಚ್ಚು ಕಾಲೇಜುಗಳು ವಿಶ್ವವಿದ್ಯಾಲಯದ ವ್ಯಾಪ್ತಿಯಲ್ಲಿವೆ. ಇದರಲ್ಲಿ ಈ ವಿಷಯವನ್ನು 500ಕ್ಕೂ ಹೆಚ್ಚು ವಿದ್ಯಾರ್ಥಿಗಳು ಆಯ್ಕೆ ಮಾಡಿಕೊಂಡಿದ್ದರು. 15 ಪರೀಕ್ಷಾ ಕೇಂದ್ರಗಳಲ್ಲಿ ಪ್ರಶ್ನೆಪತ್ರಿಯೆ ಜತೆಗೆ ಉತ್ತರ ಮುದ್ರಿಸಿದ ಪ್ರತಿಯನ್ನು ನೀಡಲಾಗಿತ್ತು ಎಂದು ಮೂಲಗಳು ಮಾಹಿತಿ ನೀಡಿವೆ.
‘ತಾಂತ್ರಿಕ ಕಾರಣಕ್ಕೆ ಪರೀಕ್ಷೆಯಲ್ಲಿ ಲೋಪ ಉಂಟಾಗಿದೆ. ಪರೀಕ್ಷೆಯನ್ನು ಮುಂದೂಡಲಾಗಿದ್ದು, ವಿದ್ಯಾರ್ಥಿಗಳಿಗೆ ಆಗಿರುವ ತೊಂದರೆಗೆ ವಿಷಾದ ವ್ಯಕ್ತಪಡಿಸುತ್ತೇವೆ’ ಎಂದು ಪರೀಕ್ಷಾಂಗ ಕುಲಸಚಿವ ಪ್ರೊ.ಸಿ.ಕೆ.ರಮೇಶ್ ತಿಳಿಸಿದ್ದಾರೆ.