ಭಾನುವಾರ, ನವೆಂಬರ್ 17, 2019
21 °C
ಉಳಿದ ಹಣ ನೆರೆ ಸಂತ್ರಸ್ತರ ಪರಿಹಾರ ನಿಧಿಗೆ: ಜಿಲ್ಲಾಧಿಕಾರಿ

ಕನಕದಾಸರ ಸರಳ ಜಯಂತಿ ಆಚರಣೆಗೆ ನಿರ್ಧಾರ

Published:
Updated:
Prajavani

ದಾವಣಗೆರೆ: ಸರ್ಕಾರದಿಂದ ನ.15ರಂದು ಜಿಲ್ಲೆ ಮತ್ತು ತಾಲ್ಲೂಕು ಮಟ್ಟದಲ್ಲಿ ಆಚರಿಸಲಾಗುತ್ತಿರುವ ಕನಕದಾಸರ ಜಯಂತಿಯನ್ನು ನೆರೆ ಹಿನ್ನೆಲೆಯಲ್ಲಿ ಸರಳವಾಗಿ ಆಚರಿಸಲು ಸಭೆ ನಿರ್ಧರಿಸಿತು.

ಕನಕ ಜಯಂತಿ ಸಂಬಂಧ ಜಿಲ್ಲಾಡಳಿತ ಕಚೇರಿ ಸಭಾಂಗಣದಲ್ಲಿ ಶುಕ್ರವಾರ ನಡೆದ ಸಮಾಜದ ಮುಖಂಡರು ಮತ್ತು ಅಧಿಕಾರಿಗಳ ಪೂರ್ವಭಾವಿ ಸಭೆಯಲ್ಲಿ ಅವರು ಮಾತನಾಡಿದರು.

ಅಧ್ಯಕ್ಷತೆ ವಹಿಸಿದ್ದ ಜಿಲ್ಲಾಧಿಕಾರಿ ಮಹಾಂತೇಶ್ ಬೀಳಗಿ, ‘ರಾಜ್ಯದಲ್ಲಿ ಈ ಬಾರಿ ಅನೇಕ ಜಿಲ್ಲೆಗಳು ತುತ್ತಾದ ಹಿನ್ನೆಲೆಯಲ್ಲಿ ಮಹಾತ್ಮರ ಜಯಂತಿಗಳನ್ನು ಸರಳವಾಗಿ ಆಚರಿಸಿ, ಉಳಿದ ಅನುದಾನವನ್ನು ಮುಖ್ಯಮಂತ್ರಿಗಳ ಪರಿಹಾರ ನಿಧಿಗೆ ನೀಡಲಾಗುತ್ತಿದೆ. ಅದೇ ರೀತಿ ಕನಕದಾಸರ ಜಯಂತಿಯನ್ನು ಸರಳ ಮತ್ತು ಅರ್ಥಪೂರ್ಣವಾಗಿ ಆಚರಿಸಿ ಉಳಿದ ಅನುದಾನವನ್ನು ನೆರೆ ಸಂತ್ರಸ್ತರ ನಿಧಿಗೆ ನೀಡುವ ಮೂಲಕ ಜನರ ಸಂಕಷ್ಟಕ್ಕೆ ಸ್ಪಂದಿಸುವ ಕೆಲಸ ಮಾಡೋಣ. ಈ ಬಗ್ಗೆ ಸಮಾಜದ ಮುಖಂಡರು ತಮ್ಮ ಅಭಿಪ್ರಾಯ ವ್ಯಕ್ತಪಡಿಸಬೇಕು’ ಎಂದರು.

ಕುರುಬರ ಸಂಘದ ಜಿಲ್ಲಾಧ್ಯಕ್ಷ ಕೆಂಗೋ ಹನುಮಂತಪ್ಪ, ಸಮಾಜದ ಮುಖಂಡ ಬಳ್ಳಾರಿ ಷಣ್ಮುಖಪ್ಪ ಅವರು ಇದಕ್ಕೆ ಸಮ್ಮತಿ ಸೂಚಿಸಿದರು.

‘ಕುರುಬ ಸಮಾಜದ ಜಿಲ್ಲಾ ಪ್ರಧಾನ ಕಾರ್ಯದರ್ಶಿ ಲೋಕಿಕೆರೆ ಸಿದ್ದಪ್ಪ ಮಾತನಾಡಿ, ‘ಕನಕದಾಸರ ಜಯಂತಿಯನ್ನು ಈ ಹಿಂದೆ ಆಚರಿಸಿದಂತೆ ಬೀರಲಿಂಗೇಶ್ವರ ದೇವಸ್ಥಾನ ಆವರಣ ಅಥವಾ ಜಿಲ್ಲಾಡಳಿತ ಭವನದ ತುಂಗಭದ್ರಾ ಸಭಾಂಗಣದಲ್ಲಿ ಸರಳವಾಗಿ ಆಚರಿಸುವುದು ಸೂಕ್ತ’ ಎಂದರು.

ಕುರುಬರ ಹಾಸ್ಟೆಲ್‍ನ ನಿರ್ದೇಶಕ ಅಡಾಣಿ ಸಿದ್ದಪ್ಪ, ಕನಕದಾಸರ ಜಯಂತಿ ಅಂಗವಾಗಿ ಪ್ರೌಢಶಾಲೆ ಮತ್ತು ಪಿಯು ವಿದ್ಯಾರ್ಥಿಗಳಿಗೆ ಕನಕದಾಸರ ಚಿತ್ರ ಬರೆಯುವ ಮತ್ತು ಅವರ ಕುರಿತು ಪ್ರಬಂಧ ಸ್ಪರ್ಧೆ ಏರ್ಪಡಿಸುವಂತೆ ಹಾಗೂ ನಗರದಲ್ಲಿ ಕನಕ ಭವನ ನಿರ್ಮಿಸಲು ನಿವೇಶನ ಒದಗಿಸುವಂತೆ ಮನವಿ ಮಾಡಿದರು.

ಜಿಲ್ಲಾಧಿಕಾರಿ ಪ್ರತಿಕ್ರಿಯಿಸಿ, ‘ಸಮಾಜದ ಮುಖಂಡರ ನಿರ್ಧಾರದಂತೆ ಯಾವುದೇ ಮೆರವಣಿಗೆ, ವೇದಿಕೆ ಕಾರ್ಯಕ್ರಮಗಳಿಲ್ಲದೇ, ಜಿಲ್ಲಾಡಳಿತ ಕಚೇರಿ ಸಭಾಂಗಣದಲ್ಲಿ ಕನಕದಾಸರ ಭಾವಚಿತ್ರಕ್ಕೆ ಪುಷ್ಪನಮನ ಅರ್ಪಿಸುವ ಮೂಲಕ ಸರಳವಾಗಿ ಜಯಂತಿ ಆಚರಿಸ
ಲಾಗುವುದು. ಸರಳ ಆಚರಣೆಯಲ್ಲಿ ಉಪನ್ಯಾಸಕರಿಂದ ಕನಕದಾಸರ ಕುರಿತು ಉಪನ್ಯಾಸ ಏರ್ಪಡಿಸಲಾಗುವುದು. ಪ್ರೌಢಶಾಲೆ ಮತ್ತು ಪಿಯು ವಿದ್ಯಾರ್ಥಿಗಳಿಗೆ ಭಕ್ತ ಕನಕದಾಸರ ಚಿತ್ರ ಬಿಡಿಸುವ ಹಾಗೂ ‘ಭಕ್ತ ಕನಕದಾಸರ ಕೊಡುಗೆ’ ಕುರಿತು ಪ್ರಬಂಧ ಸ್ಪರ್ಧೆ ಏರ್ಪಡಿಸಲಾಗುವುದು’ ಎಂದು ತಿಳಿಸಿದರು.

ಹೆಚ್ಚುವರಿ ಜಿಲ್ಲಾಧಿಕಾರಿ ನಜ್ಮಾ ಸ್ವಾಗತಿಸಿದರು, ಕುರುಬ ಸಮಾಜದ ಮುಖಂಡರಾದ ಬಳ್ಳಾರಿ ಷಣ್ಮುಖಪ್ಪ ವಂದಿಸಿದರು. ಸಭೆಯಲ್ಲಿ ಸಮಾಜದ ಮುಖಂಡರಾದ ಎಚ್.ಪಿ.ಗೋಣೆಪ್ಪ, ಕೆ.ಗೋವಿಂದಪ್ಪ, ಎಚ್.ಜೆ.ವೀರಪ್ಪ, ಉಪವಿಭಾಗಾಧಿಕಾರಿ ಮಮತಾ, ತಹಶೀಲ್ದಾರ್ ಸಂತೋಷ್‍ಕುಮಾರ್, ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಪ್ರಭಾರ ಸಹಾಯಕ ನಿರ್ದೇಶಕ ದಿವಾಕರ ರೆಡ್ಡಿ ಹಾಜರಿದ್ದರು.

ಪ್ರತಿಕ್ರಿಯಿಸಿ (+)