ಶನಿವಾರ, ಮೇ 15, 2021
24 °C
ಸರಿಯಾದ ಚಿಕಿತ್ಸೆ, ಬೇಗ ರೋಗ ಪತ್ತೆಯ ಜತೆಗೆ ಸರ್ಕಾರದ ನಿಯಮವೂ ಕಾರಣ

ಕಡಿಮೆಯಾದ ಕೊರೊನಾ ಮರಣ ಪ್ರಮಾಣ

ಬಾಲಕೃಷ್ಣ ಪಿ.ಎಚ್‌. Updated:

ಅಕ್ಷರ ಗಾತ್ರ : | |

Prajavani

ದಾವಣಗೆರೆ: ಕಳೆದ ವರ್ಷ ಕೊರೊನಾದಿಂದ ಮರಣ ಸಂಖ್ಯೆ ಹೆಚ್ಚಾಗಿತ್ತು. ಈ ಬಾರಿ ಕಡಿಮೆ ಇದೆ. ಇದಕ್ಕೆ ನಾನಾ ಕಾರಣಗಳನ್ನು ವೈದ್ಯಕೀಯ ತಜ್ಞರು ತಿಳಿಸುತ್ತಿದ್ದಾರೆ. ಅದರಲ್ಲಿ ಸರ್ಕಾರದ ನಿಯಮಾವಳಿ ಕೂಡ ಒಂದು ಕಾರಣ ಎಂಬುದು ಅಚ್ಚರಿಗೆ ಕಾರಣವಾಗಿದೆ.

ಯಾವುದೇ ರೋಗ ಇದ್ದು, ಕೊರೊನಾ ಬಂದು ಮೃತಪಟ್ಟರೆ, ಕಳೆದ ವರ್ಷ ಅದನ್ನು ಕೊರೊನಾ ಸಾವು ಪ್ರಕರಣ ಎಂದು ದಾಖಲಿಸಲಾಗುತ್ತಿತ್ತು. ಈ ಬಾರಿ ಬೇರೆ ರೋಗಗಳ ಪರಿಣಾಮ ಹೆಚ್ಚಿದ್ದರೆ ಅದನ್ನು ಕೊರೊನಾ ಲೆಕ್ಕಕ್ಕೆ ತೆಗೆದುಕೊಳ್ಳಲಾಗುತ್ತಿಲ್ಲ. ಉದಾಹರಣೆಗೆ ಒಬ್ಬ ಹೃದಯ ಸಂಬಂಧಿ ಕಾಯಿಲೆ ಇದ್ದ ವ್ಯಕ್ತಿ ಸಾವು ಉಂಟಾಗುವ ಸಮಯದಲ್ಲಿ ಕೊರೊನಾ ಬಂದಿದ್ದರೆ ಅದು ಹೃದಯ ಸಂಬಂಧಿ ಎಂದೇ ಪರಿಗಣಿಸಬೇಕಾಗುತ್ತದೆ ಎಂದು ಆರೋಗ್ಯ ಇಲಾಖೆಯಡಿ ಕೆಲಸ ಮಾಡುತ್ತಿರುವ ತಜ್ಞ ವೈದ್ಯರು ‘ಪ್ರಜಾವಾಣಿ’ಗೆ ತಿಳಿಸಿದ್ದಾರೆ.

ಕೊರೊನಾ ಬಂದು 10 ದಿನಗಳ ಬಳಿಕ ಗುಣಮುಖರಾಗಿ ಬಿಡುಗಡೆಗೊಂಡು ಮನೆಗೆ ಹೋಗಿ ಒಂದೆರಡು ದಿನಗಳಲ್ಲಿ ಮರಣ ಸಂಭವಿಸಿದರೂ ಅದನ್ನು ಕೋವಿಡ್‌ ಎಂದು ಪರಿಗಣಿಸಲಾಗುವುದಿಲ್ಲ ಎಂದು ಹೇಳಿದ್ದಾರೆ.

ಕಳೆದ ವರ್ಷ ಕೊರೊನಾ ಬಗ್ಗೆ ಸ್ಪಷ್ಟವಾದ ತಿಳಿವಳಿಕೆ ಇರಲಿಲ್ಲ. ಯಾವ ಚಿಕಿತ್ಸೆ ಎಂಬುದು ಗೊತ್ತಿರಲಿಲ್ಲ. ಅಲ್ಲದೇ ಜನರೂ ಹೆದರಿಕೊಂಡು ಬೇಗ ಪರೀಕ್ಷೆ ಮಾಡಿಸಿಕೊಳ್ಳುತ್ತಿರಲಿಲ್ಲ. ಈ ಬಾರಿ ಕೊರೊನಾ ಬಂದರೆ ಏನು ಮಾಡಬೇಕು ಎಂಬುದು ಗೊತ್ತಾಗಿದೆ. ಸ್ವಲ್ಪ ಜ್ವರ, ಶೀತಗಳಿದ್ದರೆ ಯಾವ ಔಷಧ, ತೀವ್ರತರಹದ ಲಕ್ಷಣಗಳಿದ್ದರೆ ಯಾವ ಔಷಧ ಎಂಬುದು ಗೊತ್ತಾಗಿದೆ. ಜನರು ಕೂಡ ಹಿಂದಿನಷ್ಟು ಹಿಂಜರಿಕೆ ಇಲ್ಲದೇ ಬೇಗ ಔಷಧ ಪಡೆಯುತ್ತಿದ್ದಾರೆ. ಇದರಿಂದಲೂ ಮರಣ ಕಡಿಮೆಯಾಗಿದೆ ಎಂದು ಬೇರೆ ಕಾರಣಗಳನ್ನು ನೀಡಿದ್ದಾರೆ.

ಉತ್ತಮ ಚಿಕಿತ್ಸೆಯಿಂದ ಎಲ್ಲರೂ ಗುಣಮುಖ: ಜಿಲ್ಲಾಧಿಕಾರಿ

‘ನಮ್ಮ ಜಿಲ್ಲೆಯಲ್ಲಿ ಐಸಿಯುನಲ್ಲಿ ಈಗ 9 ರೋಗಿಗಳಿದ್ದಾರೆ. ಅವರೆಲ್ಲ ಗುಣಮುಖರಾಗಿ ಹೊರಬರುತ್ತಾರೆ. ಯಾಕೆಂದರೆ ಚಿಕಿತ್ಸೆಯನ್ನು ಸಮರ್ಥವಾಗಿ ನಿಭಾಯಿಸುವ ವೈದ್ಯರು ನಮ್ಮಲ್ಲಿದ್ದಾರೆ’ ಎಂದು ಜಿಲ್ಲಾಧಿಕಾರಿ ಮಹಾಂತೇಶ ಬೀಳಗಿ ‘ಪ್ರಜಾವಾಣಿ’ಗೆ ತಿಳಿಸಿದ್ದಾರೆ.

ಐಸಿಯುಗೆ ಬಂದರೆ ಜೀವನ ಮುಗಿದೇ ಹೋಯಿತು ಎಂಬ ಕಲ್ಪನೆ ಈಗ ಹೋಗಿದೆ. ಎಂಐಸಿಯು ಘಟಕ ಜಿಲ್ಲಾ ಆಸ್ಪತ್ರೆಯಲ್ಲಿದೆ. ಆಕ್ಸಿಜನ್‌ ಸಹಿತ
ಎಲ್ಲವನ್ನೂ ಇಲ್ಲೇ ನೀಡಲಾಗುತ್ತದೆ. ಯಾರೂ ಅಂತಿಮ ಸ್ಥಿತಿಗೆ ಹೋಗದಂತೆ ನೋಡಿಕೊಳ್ಳಲಾಗುತ್ತದೆ ಎಂದು ವಿವರಿಸಿದ್ದಾರೆ.

ಜನರು ಆರೋಗ್ಯದಲ್ಲಿ ತೊಂದರೆ ಕಂಡುಬಂದ ಕೂಡಲೇ ಆಸ್ಪತ್ರೆಗೆ ಬಂದರೆ ಅವರನ್ನು ಗುಣಮುಖರಾಗಿ ಮಾಡಿ ಕಳುಹಿಸಲು ಸುಲಭವಾಗುತ್ತದೆ. ಈಗ ಜನರೂ ಎಚ್ಚೆತ್ತುಕೊಂಡು ಬೇಗ ಬರುತ್ತಿದ್ದಾರೆ. ಎಲ್ಲರ ಆರೋಗ್ಯ ಕಾಪಾಡಲು ಜಿಲ್ಲಾಡಳಿತ ಬದ್ಧವಾಗಿದೆ ಎಂದು ಹೇಳಿದ್ದಾರೆ.

ತಜ್ಞ ವೈದ್ಯರ ಅಭಿಪ್ರಾಯಗಳು

* ವರ್ಷಕ್ಕೆ ಎರಡು ಮೂರು ಶೀತ, ಕೆಮ್ಮು, ಜ್ವರ ಬಂದರೆ ದೇಹ ಆರೋಗ್ಯವಾಗಿರಲು ಒಳ್ಳೆಯದು. ಈಗ ಅದುವೇ ಕೊರೊನಾ ಎಂದು ಹೆದರುವಂತಾಗಿದೆ.

* ಕೋವಿಡ್‌ ದೃಢಪಟ್ಟಿರುವ ಆದರೆ ಕೊರೊನಾ ಲಕ್ಷಣಗಳಿಲ್ಲದವರು ಸೋಂಕು ಹರಡುವುದು ಹೇಗೆ ಎಂಬ ಪ್ರಶ್ನೆ ಇನ್ನೂ ಹಾಗೆ ಉಳಿದಿದೆ.

* ಮಲೇರಿಯಾ, ಡೆಂಗಿ, ಚಿಕೂನ್‌ಗುನ್ಯಾ ಸಹಿತ ವಿವಿಧ ರೋಗಗಳು ಯಾವ ತಿಂಗಳಲ್ಲಿ ಹೆಚ್ಚಾಗುತ್ತದೆ. ಯಾವ ತಿಂಗಳುಗಳಲ್ಲಿ ಇರುವುದಿಲ್ಲ ಎಂಬುದು ಈಗ ವೈದ್ಯಕೀಯ ಲೋಕಕ್ಕೆ ಸ್ಪಷ್ಟವಾಗಿ ಗೊತ್ತಿದೆ. ಅದೇ ರೀತಿ ಕೊರೊನಾ ಕೂಡ ಯಾವ ತಿಂಗಳಲ್ಲಿ ಹೆಚ್ಚಾಗುತ್ತದೆ ಎಂಬುದು ಗೊತ್ತಾಗಬೇಕಿದ್ದರೆ ನಾಲ್ಕೈದು ವರ್ಷಗಳ ಅಧ್ಯಯನ ಬೇಕಾಗುತ್ತದೆ.

* ಈಗ ನೀಡುತ್ತಿರುವ ಲಸಿಕೆ ಎಷ್ಟು ಪರಿಣಾಮಕಾರಿ ಎಂಬುದನ್ನು ಕೂಡ ಕನಿಷ್ಠ ಒಂದು ವರ್ಷ ಗಮನಿಸಬೇಕಾಗುತ್ತದೆ. ಒಂದು ವರ್ಷದಲ್ಲಿ ಲಸಿಕೆ ಪಡೆದವರಿಗೆ ಎಷ್ಟು ಮಂದಿಗೆ ಮತ್ತೆ ಕೊರೊನಾ ಬಂದಿದೆ. ಅದರಲ್ಲಿ ಕೊವಾಕ್ಸಿನ್‌ ಎಷ್ಟು? ಕೋವಿಶೀಲ್ಡ್‌ ಎಷ್ಟು ಎಂದು ನೋಡಬೇಕು. ದೇಹದ ಮೇಲೆ ಕೊರೊನಾ ಸೋಂಕು ಉಂಟು ಮಾಡುವ ಪ್ರಮಾಣವನ್ನು ಈ ಲಸಿಕೆ ಕಡಿಮೆ ಮಾಡಿದೆಯೇ ಎಂದು ನೋಡಬೇಕು. ಈ ಎಲ್ಲ ಅಧ್ಯಯನ ಮಾಡದೇ ಅಂತಿಮ ತೀರ್ಮಾನಕ್ಕೆ ಒಮ್ಮೆಲೇ ಬರಲಾಗುವುದಿಲ್ಲ.

* ಲಾಕ್‌ಡೌನ್‌, ಕರ್ಫ್ಯೂ ಅಷ್ಟೇ ಅಲ್ಲ. ಐಸೋಲೇಶನ್ ಕೂಡ ಪರಿಣಾಮಕಾರಿ ದಾರಿಯಲ್ಲ. ಮಾಸ್ಕ್‌ ಧರಿಸುವುದು, ಸ್ವಚ್ಛತೆ ಕಾಪಾಡಿಕೊಳ್ಳುವುದು ಎಲ್ಲರು ಮಾಡಬೇಕು. ಜತೆಗೆ ಮನುಷ್ಯನ ದೇಹದಲ್ಲಿ ಕೊರೊನಾ ಪ್ರತಿರೋಧಕ ಶಕ್ತಿ ಬೆಳೆಯಬೇಕು. ಅದು ಲಸಿಕೆಯಿಂದ ಇಲ್ಲವೇ ಕೊರೊನಾ ಬಂದು ಗುಣಮುಖರಾಗಿ ಪ್ರತಿರೋಧ ಶಕ್ತಿ ಬೆಳೆಯಬೇಕು. ಯಾರ ದೇಹದಲ್ಲಿ ಪ್ರತಿರೋಧ ಶಕ್ತಿ ಬೆಳೆಯುವ ಸಾಮರ್ಥ್ಯ ಇರುವುದಿಲ್ಲವೋ ಅವರು ಚಿಕಿತ್ಸೆ ಪಡೆಯಬೇಕು.

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.