ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಗ್ರಾಮೀಣ ರಸ್ತೆಗಳ ದುರಸ್ತಿಗೆ ಆಗ್ರಹ

ಪಡಿತರ ಗುಣಮಟ್ಟ ಪರಿಶೀಲಿಸಿದ ಜಿಲ್ಲಾಧಿಕಾರಿ ಶಿವಾನಂದ ಕಾಪಶಿ
Last Updated 16 ನವೆಂಬರ್ 2022, 4:19 IST
ಅಕ್ಷರ ಗಾತ್ರ

ದಾವಣಗೆರೆ: ಇಲ್ಲಿನ ತಹಶೀಲ್ದಾರ್ ಕಚೇರಿಗೆ ಮಂಗಳವಾರ ಭೇಟಿ ನೀಡಿದ ಜಿಲ್ಲಾಧಿಕಾರಿ ಶಿವಾನಂದ ಕಾಪಶಿ, ನಾಗರಿಕರ ಕುಂದುಕೊರತೆ ಸಭೆಯಲ್ಲಿ ಅಹವಾಲುಗಳನ್ನು ಆಲಿಸಿದರು.

‘ಭಾರಿ ಮಳೆಯಿಂದಾಗಿ ಜಿಲ್ಲೆಯ 170 ಹಳ್ಳಿಗಳಲ್ಲಿ ಸಂಪರ್ಕ ರಸ್ತೆಗಳು ಹದಗೆಟ್ಟಿದ್ದು, ಅವುಗಳ ದುರಸ್ತಿಗೆ ಕ್ರಮ ವಹಿಸಬೇಕು’ ಎಂದು ರೈತ ಸಂಘದ ರಾಜ್ಯ ಕಾರ್ಯದರ್ಶಿ ಬಲ್ಲೂರು ರವಿಕುಮಾರ್ ಮನವಿ ಮಾಡಿದರು.

‘ಹದಗೆಟ್ಟ ರಸ್ತೆಗಳಲ್ಲಿ ಸಂಚರಿಸಲು ತೊಂದರೆಯಾಗಿದ್ದು, ಅಪಘಾತಗಳು ಸಂಭವಿಸುತ್ತಿವೆ. ಪಂಚಾಯತ್‌ರಾಜ್ ಎಂಜಿನಿಯರಿಂಗ್ ವಿಭಾಗದ ಅಧಿಕಾರಿಗಳ ಸಭೆ ನಡೆಸಿ, ಕಾಮಗಾರಿಗೆ ನಿರ್ದೇಶನ ನೀಡಬೇಕು’ ಎಂದು ಮನವಿ ಮಾಡಿದರು.

‘ಒಂದು ಕಿಮೀ ರಸ್ತೆ ನಿರ್ಮಿಸಲು ₹ 60 ಸಾವಿರ ನೀಡಿದರೂ ಸಾಲದು ಎಂದು ಗುತ್ತಿಗೆದಾರರು ಹೇಳುತ್ತಿದ್ದಾರೆ. ಮಂಜೂರಾದ ಹಣದಲ್ಲಿ ಕಾರ್ಮಿಕರ ಸೆಸ್, ಶೇ 18ರಷ್ಟು ಜಿಎಸ್‌ಟಿ ಕೂಡ ಭರಿಸಬೇಕಿದೆ. ಹೀಗಾಗಿ ಈ ವಿಚಾರದಲ್ಲಿ ಚರ್ಚಿಸಿ ಕ್ರಮ ಕೈಗೊಳ್ಳಲಾಗುವುದು’ ಎಂದು ಶಿವಾನಂದ ಕಾಪಶಿ ಹೇಳಿದರು.

‘ಬಲ್ಲೂರಿನಲ್ಲಿ 2 ಕಿಮೀ ದೂರದ ಪಕ್ಕದ ಊರಲ್ಲಿ ರುದ್ರಭೂಮಿ ಕಲ್ಪಿಸಿರುವುದರಿಂದ ಅನಾನುಕೂಲವಾಗಿದ್ದು, ಇಲ್ಲಿಯೇ ಸ್ಮಶಾನ ಒದಗಿಸಲು ಡಿಬಿ ಕೆರೆ ಪಕ್ಕದ 1 ಎಕರೆ ಭೂಮಿ ಇದೆ. ಇದರೊಂದಿಗೆ ಇನ್ನರ್ಧ ಎಕರೆ ಜಾಗ ನೀಡಬೇಕು’ ಎಂದು ರವಿಕುಮಾರ್ ಮನವಿ ಮಾಡಿದರು.

ದಾವಣಗೆರೆಯ ಆನೆಕೊಂಡ ವೃತ್ತದಲ್ಲಿ ಕಾರ್ಯ ನಿರ್ವಹಿಸಿದ್ದ ಗ್ರಾಮ ಲೆಕ್ಕಿಗ ಎಂ.ಎಸ್. ಶಿವಕುಮಾರ್ ಬದಲಾಗಿ ಆವರಗೆರೆ ವೃತ್ತದ ಗ್ರಾಮ ಲೆಕ್ಕಿಗರಾಗಿ ನೇಮಿಸಿಕೊಳ್ಳಲಾಗಿದೆ. ಹಳೆಯ ಗ್ರಾಮ ಲೆಕ್ಕಿಗರನ್ನು ಮರಳಿ ಆನೆಕೊಂಡ ವೃತ್ತಕ್ಕೆ ನಿಯೋಜಿಸಬೇಕು’ ಎಂದು ಪಿ. ಬಸವರಾಜ್ ಆಗ್ರಹಿಸಿದರು.

ಐಗೂರಲ್ಲಿ ನಕಾಶೆ ದಾರಿ ರದ್ದುಪಡಿಸಿ ಹಂಗಾಮಿ ದಾರಿ ನಿರ್ಮಿಸಿ ಶಾಶ್ವತ ಕಾಮಗಾರಿ ನಡೆಸಿಕೊಡುವಂತೆ ಸಿ.ಎಸ್ ಶಿವಮೂರ್ತಪ್ಪ ಮನವಿ ಮಾಡಿದರು. 94 ‘ಸಿ’ ಅಡಿಯಲ್ಲಿ ನಿರ್ಮಿಸಿಕೊಂಡ ಮನೆಗೆ ಹಕ್ಕುಪತ್ರಕ್ಕಾಗಿ ವೃದ್ಧರೊಬ್ಬರು ಅರ್ಜಿ ಸಲ್ಲಿಸಿದರು.

ಎಪಿಎಂಸಿ ಸಮೀಪದ ಚಿಕ್ಕನಹಳ್ಳಿ ಸಂತ್ರಸ್ತರ ಬೇಡಿಕೆಯ ಸೂರು ಕಲ್ಪಿಸುವ ಬೇಡಿಕೆ ಕುರಿತಂತೆ ಜಿಲ್ಲಾಧಿಕಾರಿ ಪ್ರಶ್ನಿಸಿದರು. ಆನಗೋಡು ಬಳಿ ಗುರುತಿಸಿದ್ದ ಜಮೀನನ್ನು ಸಂತ್ರಸ್ತರು ಒಪ್ಪದೇ ಇದ್ದುದರಿಂದ ಹೊಸಳ್ಳಿ ಜಾಗ ಗುರುತಿಸಲಾಯಿತು. ಸಂತ್ರಸ್ತರು ಅಲ್ಲಿಗೆ ಹೋಗಲು ತಯಾರಾಗಿಲ್ಲ ಎಂದು ಅಧಿಕಾರಿಗಳು ವಿವರಿಸಿದರು.

ನಂತರ ಆಹಾರ ನಾಗರಿಕ ಪೂರೈಕೆ ಇಲಾಖೆ ಉಪ‍ನಿರ್ದೇಶಕಿ ನಜ್ಮಾ ಅವರೊಂದಿಗೆ ನಿಟ್ಟುವಳ್ಳಿಯ ನ್ಯಾಯ ಬೆಲೆ ಅಂಗಡಿಗಳಿಗೆ ಭೇಟಿ ನೀಡಿ ಪಡಿತರ ಗುಣಮಟ್ಟ, ತೂಕಗಳನ್ನು ಪರಿಶೀಲಿಸಿದರು. ಪಡಿತರ ಪೂರೈಕೆಯ ಬಗ್ಗೆ ಸಾರ್ವಜನಿಕರೊಂದಿಗೆ ಚರ್ಚಿಸಿದರು.

ಪ್ರಭಾರ ತಹಶೀಲ್ದಾರ್ ಡಾ. ಅಶ್ವತ್ಥ್, ಗ್ರೇಡ್ 2 ತಹಶೀಲ್ದಾರ್ ಕೆ.ಆರ್. ದೇವರಾಜ್, ಶಿರಸ್ತೇದಾರರಾದ ನಾಗಲಿಂಗೇಶ್, ಶಕೀಲ್ ಅಹ್ಮದ್, ಅಧಿಕಾರಿ ತಿಪ್ಪೇಸ್ವಾಮಿ ಇದ್ದರು.

150 ಎಕರೆ ಜಾಗ ಇಂಡೀಕರಣ

ಭೂ ಮಂಜೂರಾತಿ ವಿಭಾಗಕ್ಕೆ ಭೇಟಿ ನೀಡಿದ ಜಿಲ್ಲಾಧಿಕಾರಿಗಳು ಬಾಕಿ ಕೆಲಸಗಳು ಮತ್ತು ನಿರ್ವಹಣೆ ಕುರಿತಂತೆ ಕಡತಗಳನ್ನು ಪರಿಶೀಲಿಸಿದರು.

‘ವಲಯ ಅರಣ್ಯಾಧಿಕಾರಿ ದೇವರಾಜ್ ಮನವಿಯಂತೆ ಹುಲಿಕಟ್ಟೆ ಗ್ರಾಮ ವ್ಯಾಪ್ತಿಯಲ್ಲಿದ್ದ ಅರಣ್ಯ ವಲಯದ 150 ಎಕರೆ ಜಾಗ ಪಹಣಿಯಲ್ಲಿ ತಾಂತ್ರಿಕ ದೋಷದಿಂದ ಕೈಬಿಟ್ಟು ಹೋಗಿತ್ತು. ಇದನ್ನು ಮರು ಇಂಡೀಕರಿಸಲಾಗಿದೆ’ ಎಂದು ಜಿಲ್ಲಾಧಿಕಾರಿ ಹೇಳಿದರು.

ಕುಸಿಯುವ ಹಂತದಲ್ಲಿ ಅಣಬೇರು ಕೋಟೆ

‘ಮಳೆಯಿಂದಾಗಿ ಅಣಬೇರು ಗ್ರಾಮದ ಪಾಳೆಗಾರರ ಕಾಲದ ಐತಿಹಾಸಿಕ ಕಲ್ಲಿನ ಕೋಟೆ ಕುಸಿಯುವ ಹಂತದಲ್ಲಿದ್ದು, ಈ ಬಗ್ಗೆ ಕ್ರಮ ಕೈಗೊಳ್ಳಬೇಕು’ ಎಂದು ರೈತ ಮುಖಂಡ ಕುಮಾರ ಸ್ವಾಮಿ ಜಿಲ್ಲಾಧಿಕಾರಿಗೆ ಮನವಿ ಸಲ್ಲಿಸಿದರು.

‘ಕೋಟೆಯ ಸ್ವಲ್ಪ ಭಾಗ ಕುಸಿದಿದೆ. ಮತ್ತಷ್ಟು ಕುಸಿದಲ್ಲಿ ಜೀವಹಾನಿಯಾಗುವ ಸಂಭವವಿದೆ. ಈ ಬಗ್ಗೆ ಕ್ರಮ ಕೈಗೊಳ್ಳಬೇಕು’ ಎಂದು ಒತ್ತಾಯಿಸಿದರು. ಪಿಆರ್‌ಡಿಎಲ್ ಅಧಿಕಾರಿಗೆ ಕರೆ ಮಾಡಿದ ಡಿಸಿ ಪರಿಶೀಲಿಸಿ ವಾಸ್ತವ ವರದಿ ಸಲ್ಲಿಸುವಂತೆ ಸೂಚಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT