15ರಂದು ಸೂರಗೊಂಡನಕೊಪ್ಪಕ್ಕೆ ಡಿಕೆಶಿ ಭೇಟಿ: ಲಂಬಾಣಿ ಸಮುದಾಯದವರೊಂದಿಗೆ ಸಂವಾದ

ದಾವಣಗೆರೆ: ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್ ಅವರು ಜುಲೈ 15ರಂದು ನ್ಯಾಮತಿ ತಾಲ್ಲೂಕಿನ ಸೂರಗೊಂಡನಕೊಪ್ಪದ ಭಾಯಾಗಡದ ಸಂತ ಸೇವಾಲಾಲ್ ದೇವಾಲಯಕ್ಕೆ ಭೇಟಿ ನೀಡಲಿದ್ದು, ಲಂಬಾಣಿ ಸಮಾಜದ ಧರ್ಮಗುರುಗಳು ಹಾಗೂ ಮುಖಂಡರು, ಸಮುದಾಯದವರೊಂದಿಗೆ ಸಂವಾದ ನಡೆಸಲಿದ್ದಾರೆ ಎಂದು ಮಾಜಿ ಸಚಿವ ಬಾಬುರಾವ್ ಚವಾಣ್ ಹೇಳಿದರು.
‘ಜುಲೈ 15 ರಂದು ಬೆಳಿಗ್ಗೆ 10.30ಕ್ಕೆ ಭೇಟಿ ನೀಡಿ, ಬಳಿಕ ಕೊರೊನಾದಿಂದ ಮೃತಪಟ್ಟವರ ಕುಟುಂಬದವರಿಗೆ ಸಾಂತ್ವನ ಹೇಳಲಿದ್ದಾರೆ. ಸಂವಾದದಲ್ಲಿ ಸಮುದಾಯದವರು ವಲಸೆ ಹೋಗುತ್ತಿರುವುದು, ತಾಂಡಾಗಳನ್ನು ಕಂದಾಯ ಗ್ರಾಮಗಳನ್ನಾಗಿ ಮಾಡಲು ಹೋರಾಟ ಸೇರಿ ಸಮುದಾಯದ ಸಮಸ್ಯೆಗಳ ಬಗ್ಗೆ ಚರ್ಚೆ ನಡೆಯಲಿದೆ. ಇದು ರಾಜಕೀಯೇತರ ಕಾರ್ಯಕ್ರಮವಾಗಿದ್ದು, ಎಲ್ಲ ಪಕ್ಷದ ಮುಖಂಡರು ಭಾಗವಹಿಸಲಿದ್ದಾರೆ. ಸಮುದಾಯದವರೂ ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಬೇಕು’ ಎಂದು ಸೋಮವಾರ ಪತ್ರಿಕಾಗೋಷ್ಠಿಯಲ್ಲಿ ಮನವಿ ಮಾಡಿದರು.
ರಾಜ್ಯದಲ್ಲಿ ತಾಂಡಾಗಳು ಇನ್ನು ಸಂಪೂರ್ಣವಾಗಿ ಕಂದಾಯ ಗ್ರಾಮಗಳಾಗಿಲ್ಲ. ಇದರಿಂದ ಮೂಲಸೌಲಭ್ಯದಿಂದ ವಂಚಿತವಾಗುವಂತಾಗಿದೆ. ಸರ್ಕಾರ ಶೀಘ್ರ ಎಲ್ಲ ತಾಂಡಾಗಳನ್ನು ಕಂದಾಯ ಗ್ರಾಮಗಳನ್ನಾಗಿ ಘೋಷಿಸಬೇಕು. ಈ ಬಗ್ಗೆ ಕಾರ್ಯಕ್ರಮದಲ್ಲಿ ಚರ್ಚೆ ನಡೆಯಲಿದೆ ಎಂದು ತಿಳಿಸಿದರು.
‘ಸದಾಶಿವ ಆಯೋಗ ವರದಿ ಜಾರಿಗೆ ಸಮುದಾಯದ ವಿರೋಧ ಇದೆ. ಸಮಾಜದವರಿಗೆ ಮೀಸಲಾತಿ ಸಿಗುವ ವಿಚಾರದಲ್ಲಿ ರಾಜಿ ಮಾಡಿಕೊಳ್ಳುವುದಿಲ್ಲ’ ಎಂದು ಹೇಳಿದರು.
ಮಾಜಿ ಸಚಿವ ಮನೋಹರ ಐನಾಪುರ ಮಾತನಾಡಿ, ‘ಯಾವುದೇ ರಾಜಕೀಯ ಉದ್ದೇಶಕ್ಕಾಗಿ ಡಿ.ಕೆ.ಶಿವಕುಮಾರ್ ಬರುತ್ತಿಲ್ಲ. ಪಕ್ಷಾತೀತವಾಗಿ ಸಮುದಾಯದ ಮುಖಂಡರು ಭಾಗವಹಿಸಲಿದ್ದಾರೆ. ತಾಂಡಾಗಳ ಸಮಸ್ಯೆಗಳನ್ನು ಆಲಿಸಲು ಬರುತ್ತಿದ್ದಾರೆ’ ಎಂದರು.
ಪತ್ರಿಕಾಗೋಷ್ಠಿಯಲ್ಲಿ ಅಸಂಘಟಿತ ಕಾರ್ಮಿಕ ಕಾಂಗ್ರೆಸ್ ಜಿಲ್ಲಾಧ್ಯಕ್ಷ ಎಸ್.ನಂಜಾನಾಯ್ಕ್, ಮುಖಂಡರಾದ ಕಾಶಿನಾಥ್ ನಾಯ್ಕ್, ಜೆ.ಆರ್. ಮೋಹನ್ ಕುಮಾರ್, ಬಿ.ವಿ. ದೀಪಕ್, ಕುಬೇರ್ ನಾಯ್ಕ್ ಇದ್ದರು.
ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ
ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್
ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.