ಶನಿವಾರ, 4 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ನೇರ ನೇಮಕಾತಿಗಾಗಿ ಕಾಯ್ದೆ ತಿದ್ದುಪಡಿಗೆ ಚಿಂತನೆ

ದಾವಣಗೆರೆ ಕೆ.ಎಸ್‌.ಆರ್‌.ಟಿ.ಸಿ ಬಸ್‌ನಿಲ್ದಾಣ ವೀಕ್ಷಿಸಿದ ಸಾರಿಗೆ ಸಚಿವ ಡಿ.ಸಿ. ತಮ್ಮಣ್ಣ
Last Updated 1 ಜುಲೈ 2018, 13:00 IST
ಅಕ್ಷರ ಗಾತ್ರ

ದಾವಣಗೆರೆ: ಸಾರಿಗೆ ಇಲಾಖೆಗೆ ಅಗತ್ಯವಿರುವ ಸಿಬ್ಬಂದಿಯನ್ನು ನೇರವಾಗಿ ನೇಮಕಾತಿ ಮಾಡಿಕೊಳ್ಳಲು ಮೋಟರ್‌ ವಾಹನ ಕಾಯ್ದೆಗೆ ತಿದ್ದುಪಡಿ ತರಲು ಚಿಂತನೆ ನಡೆಸಲಾಗಿದೆ ಎಂದು ಸಾರಿಗೆ ಸಚಿವ ಡಿ.ಸಿ. ತಮ್ಮಣ್ಣ ತಿಳಿಸಿದರು.

ನಗರದಲ್ಲಿ ಕೆ.ಎಸ್‌.ಆರ್‌.ಟಿ.ಸಿ ಬಸ್‌ನಿಲ್ದಾಣ ಹಾಗೂ ಡಿಪೊವನ್ನು ಭಾನುವಾರ ವೀಕ್ಷಿಸಿದ ಬಳಿಕ ಅವರು ಸುದ್ದಿಗಾರರೊಂದಿಗೆ ಮಾತನಾಡಿದರು. ‘ಇಲಾಖೆಯಲ್ಲಿ ಸದ್ಯ ಕೆಳ ಹಂತದ ಸಿಬ್ಬಂದಿಯ ನೇಮಕಾತಿ ಪ್ರಕ್ರಿಯೆ ನಡೆಯುತ್ತಿದೆ. ಆರ್‌.ಟಿ.ಒ ಹಾಗೂ ಮೋಟರ್‌ ವೆಹಿಕಲ್‌ ಇನ್‌ಸ್ಪೆಕ್ಟರ್‌ ಸೇರಿ ಮಂಜೂರಾಗಿರುವ 676 ಅಧಿಕಾರಿಗಳ ಹುದ್ದೆಗಳ ಪೈಕಿ ಸದ್ಯ 260 ಅಧಿಕಾರಿಗಳು ಮಾತ್ರ ಕಾರ್ಯನಿರ್ವಹಿಸುತ್ತಿದ್ದಾರೆ. ಕೆ.ಪಿ.ಎಸ್‌.ಸಿ.ಯಲ್ಲಿನ ತಾಂತ್ರಿಕ ಕಾರಣ ಹಾಗೂ ಸುಪ್ರೀಂ ಕೋರ್ಟ್‌ನಲ್ಲಿ ನೇಮಕಾತಿ ಕುರಿತ ಪ್ರಕರಣದ ವಿಚಾರಣೆ ನಡೆಯುತ್ತಿರುವುದರಿಂದ ಖಾಲಿ ಹುದ್ದೆಗಳ ನೇಮಕಾತಿ ಪ್ರಕ್ರಿಯೆ ಸದ್ಯಕ್ಕೆ ಸ್ಥಗಿತಗೊಂಡಿದೆ. ಹೀಗಾಗಿ ಇಲಾಖೆಗೆ ಅಗತ್ಯವಿರುವ ಸಿಬ್ಬಂದಿಯನ್ನು ಕೆ.ಪಿ.ಎಸ್‌.ಸಿ ಬದಲಾಗಿ, ಇಲಾಖೆಯಿಂದಲೇ ನೇರವಾಗಿ ನೇಮಕಾತಿ ಮಾಡಿಕೊಳ್ಳಲು ನಿಯಮಾವಳಿಗಳಿಗೆ ತಿದ್ದುಪಡಿ ತರಬೇಕಾಗಿದೆ’ ಎಂದು ಹೇಳಿದರು.

ಮಹಾರಾಷ್ಟ್ರ ರಾಜ್ಯದಲ್ಲಿ 1,500 ಅಧಿಕಾರಿಗಳು ಕಾರ್ಯನಿರ್ವಹಿಸುತ್ತಿದ್ದಾರೆ. ಅಲ್ಲಿಗೆ ಹೋಲಿಸಿದರೆ ನಮ್ಮಲ್ಲಿ ಅರ್ಧದಷ್ಟು ಕಡಿಮೆ ಅಧಿಕಾರಿಗಳು ಇದ್ದಾರೆ. ಹೀಗಾಗಿ ಮಹಾರಾಷ್ಟ್ರದಲ್ಲಿ ಎಷ್ಟು ವಾಹನಗಳಿವೆ ಹಾಗೂ ಅವುಗಳಿಗೆ ಅನುಗುಣವಾಗಿ ಎಷ್ಟು ಅಧಿಕಾರಿಗಳು ಕಾರ್ಯನಿರ್ವಹಿಸುತ್ತಿದ್ದಾರೆ ಎಂಬ ಕುರಿತು ವರದಿ ತರಿಸಿಕೊಳ್ಳಲಾಗುವುದು. ಅದನ್ನು ಆಧರಿಸಿ ನಮ್ಮಲ್ಲೂ ಅಗತ್ಯ ಅಧಿಕಾರಿಗಳ ನೇಮಕಾತಿಗೆ ಕ್ರಮ ಕೈಗೊಳ್ಳಲಾಗುವುದು ಎಂದು ಸಚಿವರು ಪ್ರಶ್ನೆಯೊಂದಕ್ಕೆ ಉತ್ತರಿಸಿದರು.

ರಾಜ್ಯದ ಎಲ್ಲ ಬಸ್‌ನಿಲ್ದಾಣಗಳನ್ನೂ ಆಧುನೀಕರಣಗೊಳಿಸಲಾಗುವುದು. ಬಸ್‌ನಿಲ್ದಾಣಗಳಲ್ಲಿ ಕಾಂಪ್ಲೆಕ್ಸ್‌ಗಳನ್ನು ನಿರ್ಮಿಸಿ, ಸಂಸ್ಥೆಗೆ ಹೆಚ್ಚಿನ ಆದಾಯ ಬರುವಂತೆ ಮಾಡಲು ಯೋಜನೆ ರೂಪಿಸಲಾಗುವುದು ಎಂದೂ ಅವರು ಹೇಳಿದರು.

ಖಾಸಗಿ ಬಸ್‌ಗಳ ಜೊತೆ ಪೈಪೋಟಿ ನೀಡಲು ಈ ಹಿಂದೆ ವೊಲ್ವೊ ಬಸ್‌ ದರವನ್ನು ಬಹಳ ಕಡಿತಗೊಳಿಸಲಾಗಿತ್ತು. ಆದರೆ, ಈಗ ಡೀಸೆಲ್‌ ಬೆಲೆ ಹೆಚ್ಚಾಗಿದೆ. ಹೀಗಾಗಿ ಐಶಾರಾಮಿ ಬಸ್‌ಗಳ ದರವನ್ನು ಹೆಚ್ಚಿಸಲು ನಿರ್ಧರಿಸಲಾಗಿದೆ. ಬರಿ ವೋಟ್‌ ಅನ್ನೇ ದೃಷ್ಟಿಯಲ್ಲಿಟ್ಟುಕೊಂಡರೆ ಸಾರಿಗೆ ಸಂಸ್ಥೆಯೂ ನಡೆಯಬೇಕಲ್ಲ ಎಂದು ತಿಳಿಸಿದರು.

ಸರ್ಕಾರಿ ಬಸ್‌ಗಳನ್ನು ಹೆದ್ದಾರಿಗಳಲ್ಲಿ ಎಲ್ಲೆಂದರೆಲ್ಲಿ ಊಟಕ್ಕೆ ನಿಲ್ಲಿಸುವುದರಿಂದ ಪ್ರಯಾಣಿಕರಿಗೆ ತೊಂದರೆಯಾಗುತ್ತಿದೆ. ಅದನ್ನು ತಪ್ಪಿಸಲು ‘ಹೈವೆ ಪ್ಲಾಜಾ’ ನಿರ್ಮಿಸಲು ಉದ್ದೇಶಿಸಲಾಗಿದೆ ಎಂದು ಮಾಹಿತಿ ನೀಡಿದರು.

‘ಜಾತಿ ರಾಜಕಾರಣದಿಂದ ಸರ್ಕಾರ ನಡೆಸಲು ಸಾಧ್ಯವಿಲ್ಲ’

ಕುರುಬ ಸಮಾಜದ ಅಧಿಕಾರಿಗಳ ವರ್ಗಾವಣೆ ಮಾಡುತ್ತಿದ್ದಾರೆ ಎಂಬ ನಿರಂಜನಾನಂದಪುರಿ ಸ್ವಾಮೀಜಿ ಆರೋಪಕ್ಕೆ ಪ್ರತಿಕ್ರಿಯಿಸಿದ ಸಚಿವ ತಮ್ಮಣ್ಣ, ‘ಜಾತಿ ರಾಜಕಾರಣದಲ್ಲಿ ಯಾವ ಸರ್ಕಾರವನ್ನೂ ನಡೆಸಲು ಸಾಧ್ಯವಿಲ್ಲ. ಹಿಂದಿನ ಸರ್ಕಾರದ ಮೇಲೆಯೂ ಇಂಥ ಆರೋಪ ಮಾಡಲಾಗುತ್ತಿತ್ತು. ಅವರ ಜನಾಂಗದವರಿಗಷ್ಟೇ ಆದ್ಯತೆ ನೀಡಲಾಗುತ್ತಿದೆ ಎಂದು ದೂರಲಾಗುತ್ತಿತ್ತು’ ಎಂದು ಹೇಳಿದರು.

‘ಸಾಮಾನ್ಯವಾಗಿ ಎಲ್ಲಾ ಸರ್ಕಾರದ ಅವಧಿಯಲ್ಲೂ ಇಂಥ ಆರೋಪಗಳು ಕೇಳಿ ಬರುತ್ತಿದ್ದವು. ತಮಗೆ ಅನುಕೂಲ ಆಗದೇ ಇದ್ದಾಗ ಯಾರೋ ಕೆಲವರು ಇಂಥ ಅಪಪ್ರಚಾರ ಮಾಡುತ್ತಾರೆ’ ಎಂದು ಅವರು ಪ್ರಶ್ನೆಯೊಂದಕ್ಕೆ ಉತ್ತರಿಸಿದರು.

ಮುಖ್ಯಮಂತ್ರಿ ಕುಮಾರಸ್ವಾಮಿ ಮತ್ತು ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಪರ ಸ್ವಾಮೀಜಿಗಳು ಹೇಳಿಕೆ ನೀಡುತ್ತಿರುವ ಕುರಿತ ಪ್ರಶ್ನೆಗೆ ಉತ್ತರಿಸಿದ ಅವರು, ‘ಪ್ರತಿಯೊಬ್ಬರಿಗೂ ಸ್ವಾತಂತ್ರ್ಯ ಇದೆ; ಮಾತನಾಡುವ ಹಕ್ಕಿದೆ. ಅದನ್ನು ನಾವು ಗಂಭೀರವಾಗಿ ತೆಗೆದುಕೊಳ್ಳಬೇಕಾಗಿಲ್ಲ. ಅವರವರ ಅಭಿಪ್ರಾಯವನ್ನು ಹೇಳಿದ್ದಾರೆ; ಅಷ್ಟೆ’ ಎಂದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT