ಗುರುವಾರ , ಮಾರ್ಚ್ 23, 2023
30 °C
ಪಿಪಿಇ ಕಿಟ್, ಆರ್‌ಟಿಪಿಸಿಆರ್ ಟೆಸ್ಟ್ ಕಿಟ್‌, ಆಮ್ಲಜನಕ ಸಾಂದ್ರಕ ಸೇರಿ ₹ 48.25 ಲಕ್ಷ ಮೌಲ್ಯದ ಸಾಮಗ್ರಿ ಹಸ್ತಾಂತರ

ಜಿಲ್ಲಾ ಆಸ್ಪತ್ರೆಗೆ ಆರೋಗ್ಯ ಪರಿಕರ ನೀಡಿದ ‘ಸಮರ್ಥನಂ’

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ದಾವಣಗೆರೆ: ಬೆಂಗಳೂರು ಸಮರ್ಥನಂ ಅಂಗವಿಕಲರ ಸಂಸ್ಥೆಯು ಸರ್ವಿಸ್ ಮ್ಯಾಕ್ಸ್ ಮತ್ತು ಇಂಡಸ್ ಬ್ಯಾಂಕ್ ಸಹಯೋಗದೊಂದಿಗೆ ಸಿಎಸ್‍ಆರ್ ನಿಧಿಯಲ್ಲಿ  ₹ 48.25 ಲಕ್ಷ ಮೌಲ್ಯದ ಆರೋಗ್ಯ ಪರಿಕರಗಳನ್ನು ಜಿಲ್ಲಾ ಆಸ್ಪತ್ರೆಗೆ ಶನಿವಾರ ಕೊಡುಗೆಯಾಗಿ ನೀಡಿದರು.

ಪಿಪಿಇ ಕಿಟ್, ಆರ್‌ಟಿಪಿಸಿಆರ್ ಟೆಸ್ಟ್ ಕಿಟ್‌ಗಳು, ಆಮ್ಲಜನಕ ಸಾಂದ್ರಕಗಳು, 3ಪ್ಲೇ ಮಾಸ್ಕ್, ಸ್ಯಾನಿಟೈಸರ್, ಐಸಿಯು ಬೆಡ್‌ಗಳು ಒಳಗೊಂಡಂತೆ ಆರೋಗ್ಯ ಪರಿಕರಗಳನ್ನು ಆಸ್ಪತ್ರೆಗೆ ನೀಡಿದ್ದಾರೆ. ಸರ್ಕಾರವೇ ಎಲ್ಲಾ ಕೆಲಸವನ್ನು ಮಾಡಲು ಆಗುವುದಿಲ್ಲ ಸಂಘ ಸಂಸ್ಥೆಗಳು ಸಹಾಯ ಮಾಡಿದಲ್ಲಿ ಜಿಲ್ಲೆಯಲ್ಲಿ ಕೋವಿಡ್ ನಿಯಂತ್ರಿಸಲು ಸಮರ್ಥವಾಗಿ ಕೆಲಸ ಮಾಡಲು ಅನುಕೂಲವಾಗುತ್ತದೆ ಎಂದು ಸಂಸದ ಜಿ.ಎಂ. ಸಿದ್ದೇಶ್ವರ ತಿಳಿಸಿದರು.

ರಾಜ್ಯದಲ್ಲಿ ಮಿಸ್‌–ಸಿ ಮತ್ತು ಡೆಲ್ಟಾ ಪ್ಲಸ್‍ನಂತಹ ಹೊಸ ಸೋಂಕುಗಳ ಲಕ್ಷಣಗಳು ಕಂಡು ಬಂದಿವೆ. ಜನರು ಇನ್ನಷ್ಟು ಎಚ್ಚರಿಕೆಯಿಂದ ಇರಬೇಕು ಎಂದು ಸಲಹೆ ನೀಡಿದರು.

ಶಾಸಕ ಎಸ್.ಎ. ರವೀಂದ್ರನಾಥ್, ‘ಸಮರ್ಥನಂ ಸಂಸ್ಥೆಯ ಕೊಡುಗೆ ಶ್ಲಾಘನೀಯ, ಈ  ಪರಿಕರಗಳು ಮತ್ತು ವೆಂಟಿಲೇಟರ್‌ಗಳನ್ನು ಸದ್ಬಳಕೆ ಮಾಡಿಕೊಳ್ಳಬೇಕು. ಹಾಳಾಗದಂತೆ ನೋಡಿಕೊಳ್ಳಬೇಕು’ ಎಂದರು.

ಜಿಲ್ಲಾಧಿಕಾರಿ ಮಹಾಂತೇಶ ಬೀಳಗಿ, ‘ಕಳೆದ ವರ್ಷ ₹ 25 ಕೋಟಿ ನಿಧಿಯನ್ನು ಸಂಗ್ರಹಿಸಿ ಅದರಲ್ಲಿ ಈ ಸಾಕಷ್ಟು ಪರಿಕರಗಳನ್ನು ಜಿಲ್ಲೆಗಳಿಗೆ ಮತ್ತು ತಾಲ್ಲೂಕುಗಳಿಗೆ ದಾನ ಮಾಡಿದ್ದಾರೆ. ಈ ಬಾರಿ ₹ 15 ಕೋಟಿ ಹಣವನ್ನು ಸಿಎಸ್‍ಆರ್ ನಿಧಿಯಿಂದ ಸಂಗ್ರಹಿಸಿ ಇಂತಹ ಅರ್ಥಪೂರ್ಣ ಕಾರ್ಯವನ್ನು ಮಾಡುತ್ತಿದ್ದಾರೆ’ ಎಂದು ಶ್ಲಾಘಿಸಿದರು.

ಜಿಲ್ಲಾ ಪಂಚಾಯಿತಿ ಮುಖ್ಯಕಾರ್ಯನಿರ್ವಹಣಾಧಿಕಾರಿ ಡಾ. ವಿಜಯ ಮಹಾಂತೇಶ್ ದಾನಮ್ಮನವರ್, "ಅಂಗವೈಕಲ್ಯ ಯಾವುದೇ ರೀತಿಯ ಸಾಧನೆಗೆ ಅಡಿಯಾಗುವುದಿಲ್ಲ ಎಂಬುದನ್ನು ಸಾಧಿಸಿ ತೋರಿಸಿದ್ದಾರೆ. ಎಲ್ಲಾ ಸೌಕರ್ಯವನ್ನು ಹೊಂದಿದ್ದರೂ ಮಹಾಂತೇಶ್ ಜಿ.ಕೆ ಅವರು ಅಂಗವಿಕಲರ ತೊಂದರೆಗಳನ್ನು ಮನಗಂಡು ಅವರಿಗಾಗಿ ಸಮರ್ಥನಂ  ಅಂಗವಿಕಲರ ಸಂಸ್ಥೆಯನ್ನು ಸ್ಥಾಪಿಸಿದ್ದಾರೆ’ ಎಂದು ವಿವರಿಸಿದರು.

ವಿಶ್ವ ಕುರುಡು ಕ್ರಿಕೆಟ್ ಸಂಸ್ಥೆಯ ಅಧ್ಯಕ್ಷ ಹಾಗೂ ಸಮರ್ಥನಂ ಅಂಗವಿಕಲರ ಸಂಸ್ಥೆಯ ವ್ಯವಸ್ಥಾಪಕ ನಿರ್ದೇಶಕ ಮಹಾಂತೇಶ್ ಜಿ.ಕೆ., ಸಮರ್ಥನಂ ಸಂಸ್ಥೆಯು ಅಂಗವಿಕಲರ ಶಿಕ್ಷಣ, ತರಬೇತಿ, ಕ್ರೀಡೆ, ಸಾಂಸ್ಕೃತಿಕ ರಂಗ ಹಾಗೂ ಪರಿಸರ ರಂಗದಲ್ಲಿ ಕೆಲಸ ಮಾಡುತ್ತದೆ. ದೇಶದ 7 ರಾಜ್ಯಗಳಲ್ಲಿ, ಕರ್ನಾಟಕದ 13  ಜಿಲ್ಲೆಗಳಲ್ಲಿ ಕಾರ್ಯ ನಿರ್ವಹಿಸುತ್ತಿದೆ. ಅಮೆರಿಕ, ಯುಕೆಗಳಲ್ಲಿ ಸಂಸ್ಥೆಯನ್ನು ನೋಂದಾಯಿಸಲಾಗಿದೆ ಎಂದು ಮಾಹಿತಿ ನೀಡಿದರು.

ಕಾರ್ಯಕ್ರಮದಲ್ಲಿ ಡಿಎಚ್‍ಒ ಡಾ.ನಾಗರಾಜ್, ಜಿಲ್ಲಾ ಸರ್ಜನ್ ಡಾ. ಜಯಪ್ರಕಾಶ್, ಡಾ. ಸಂಜಯ್, ಡಾ. ಮೃದುಲಾ ಯಲ್ಲಪ್ಪ, ಸಂಸ್ಥೆಯ ಸಿಬ್ಬಂದಿ ಹಾಗೂ ಆಸ್ಪತ್ರೆಯ ವೈದ್ಯರು, ಸಿಬ್ಬಂದಿ ಇದ್ದರು.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು