ಶನಿವಾರ, 27 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಗೂಳಿ ಎದುರು ‘ಕುರಿ’ ನಿಲ್ಲಿಸಬೇಡಿ: ಮಲ್ಲಿಕಾರ್ಜುನ ಸ್ಪರ್ಧೆಗೆ ಶಿವಶಂಕರ ಒತ್ತಾಯ

Last Updated 2 ಏಪ್ರಿಲ್ 2019, 15:06 IST
ಅಕ್ಷರ ಗಾತ್ರ

ದಾವಣಗೆರೆ: ‘ಚುನಾವಣೆ ಸಮೀಪಿಸಿದಾಗ ಬೆನ್ನು ತೋರಿಸಿ ಓಡಬಾರದು. ಗೂಳಿಯ ಮುಂದೆ ‘ಕುರಿ’ಯನ್ನು ಬಿಟ್ಟರೆ ಚುನಾವಣೆಯಲ್ಲಿ ಗೆಲ್ಲಲು ಆಗುವುದಿಲ್ಲ. ಹೀಗಾಗಿ ಮಾಜಿ ಸಚಿವ ಎಸ್‌.ಎಸ್‌. ಮಲ್ಲಿಕಾರ್ಜುನ ಅವರೇ ಸ್ಪರ್ಧಿಸಬೇಕು’ ಎಂದು ಹರಿಹರದ ಜೆಡಿಎಸ್‌ ಮಾಜಿ ಶಾಸಕ ಎಚ್‌.ಎಸ್‌. ಶಿವಶಂಕರ ಒತ್ತಾಯಿಸಿದರು.

ದಾವಣಗೆರೆ ಲೋಕಸಭಾ ಕ್ಷೇತ್ರದ ಟಿಕೆಟ್‌ ಗೊಂದಲ ನಿವಾರಿಸದ ಕಾಂಗ್ರೆಸ್‌ ನಾಯಕರನ್ನು ಶಿವಶಂಕರ ಮಂಗಳವಾರ ಪತ್ರಿಕಾಗೋಷ್ಠಿಯಲ್ಲಿ ತಮ್ಮ ತೀಕ್ಷಣ ಮಾತುಗಳಿಂದ ತಿವಿದರು.

‘ಮಲ್ಲಿಕಾರ್ಜುನ ಅವರು ಈ ಹಿಂದೆ ಮೂರು ಬಾರಿ ಸೋತಿರಬಹುದು. ನಾಲ್ಕನೇ ಭಾರಿಯೂ ಸೋತರೆ ಎಂಬ ಭಯ ಅವರನ್ನು ಕಾಡುತ್ತಿರಬಹುದು. ಆದರೆ, ದಕ್ಷಿಣ ವಿಧಾನಸಭಾ ಕ್ಷೇತ್ರದಲ್ಲಿ ಸತತವಾಗಿ ನಾಲ್ಕು ಬಾರಿ ಬಿಜೆಪಿಯಿಂದ ಯಶವಂತರಾವ್‌ ಸ್ಪರ್ಧಿಸಿ ಸೋತಿದ್ದರೂ ಉತ್ಸಾಹದಿಂದ ಇಲ್ಲವೇ? ಹತಾಷ ಮನೋಭಾವ ಬೇಡ. ಮಲ್ಲಿಕಾರ್ಜುನ ಅವರೇ ನಾಮಪತ್ರ ಸಲ್ಲಿಸಬೇಕು. ಇಲ್ಲದಿದ್ದರೆ ಕಾಂಗ್ರೆಸ್‌ಗೆ ಹಿನ್ನಡೆಯಾಗುತ್ತದೆ’ ಎಂದು ಎಚ್ಚರಿಸಿದರು.

‘ಒಂದು ತಿಂಗಳ ಹಿಂದೆ ನಾನು ಚುನಾವಣೆಗೆ ಸ್ಪರ್ಧಿಸಲು ಆಸಕ್ತಿ ತೋರಿಸಿದಾಗ ಶಾಮನೂರು ಶಿವಶಂಕರಪ್ಪ ಅವರು ಮನೆಗೆ ‘ಬಿ’ ಫಾರಂ ಬಂದರೆ ಸ್ಪರ್ಧಿಸುವುದಾಗಿ ಹೇಳಿಕೆ ನೀಡಿದ್ದರು. ಆದರೆ, ಟಿಕೆಟ್‌ ಘೋಷಿಸಿದ ಬಳಿಕ ಸ್ಪರ್ಧಿಸಲು ನಿರಾಕರಿಸಿದರು. ಮಲ್ಲಿಕಾರ್ಜುನ ಅವರೂ ಸ್ಪರ್ಧಿಸದೇ ಇರುವುದು ಗೊಂದಲ ಮೂಡಿಸಿದೆ. ಇವರು ಒಂದು ರೀತಿಯಲ್ಲಿ ‘ಆಡೋಣ ಬಾ, ಕೆಡಿಸೋಣ ಬಾ’ ಆಟವಾಡುತ್ತಿದ್ದಾರೆ. ಇವರಿಗೆ ಚುನಾವಣೆ ಮಾಡುವ ಉದ್ದೇಶ ಇಲ್ಲವೇ? ವ್ಯವಸ್ಥಿತವಾಗಿ ಜೆಡಿಎಸ್‌ ಹಾಗೂ ಕಾಂಗ್ರೆಸ್‌ ಕಾರ್ಯಕರ್ತರನ್ನು ನಿರುತ್ಸಾಹಗೊಳಿಸಲಾಗುತ್ತಿದೆ’ ಎಂದು ಶಿವಶಂಕರ ಅಸಮಾಧಾನ ವ್ಯಕ್ತಪಡಿಸಿದರು.

‘1994ರಿಂದಲೂ ಇಲ್ಲಿ ಜಿ. ಮಲ್ಲಿಕಾರ್ಜುನಪ್ಪ, ಶಾಮನೂರು ಶಿವಶಂಕರಪ್ಪ ಹಾಗೂ ಜಿ.ಎಂ. ಸಿದ್ದೇಶ್ವರ ಗೆಲ್ಲುತ್ತಿದ್ದಾರೆ. ಇದು ಲಿಂಗಾಯತ ಸಮುದಾಯ ಪ್ರತಿನಿಧಿಸುವ ಕ್ಷೇತ್ರ. ಮೈಸೂರು–ಮಂಡ್ಯ ಭಾಗದಲ್ಲಿ ಒಕ್ಕಲಿಗರಿಗೆ ಪ್ರಾತಿನಿಧ್ಯ ನೀಡಿದರೆ, ಈ ಭಾಗದಲ್ಲಿ ಲಿಂಗಾಯತರಿಗೆ ಪ್ರಾತಿನಿಧ್ಯ ನೀಡಬೇಕು ಎಂದು ಮಾಜಿ ಮುಖ್ಯಮಂತ್ರಿ ದಿವಂಗತ ಜೆ.ಎಚ್‌. ಪಟೇಲ್‌ ಈ ಹಿಂದೆಯೇ ಪ್ರತಿಪಾದಿಸಿದ್ದರು. ಅದರಂತೆ ಜಾತಿ ಸಮೀಕರಣ ಲೆಕ್ಕ ಹಾಕಿದರೆ ಮಲ್ಲಿಕಾರ್ಜುನ ಅವರೇ ಸ್ಪರ್ಧಿಸಿದರೆ ಗೆಲುವು ನಿಶ್ಚಿತ. ಕೊನೆ ಕ್ಷಣದಲ್ಲಿ ಅಭ್ಯರ್ಥಿ ಹುಡುಕಾಟ ನಡೆಸುತ್ತಿರುವುದರಿಂದ ಬಿಜೆಪಿಯನ್ನು ಸಮರ್ಥವಾಗಿ ಎದುರಿಸಲು ಸಾಧ್ಯವಾಗುವುದಿಲ್ಲ’ ಎಂದು ಪ್ರತಿಪಾದಿಸಿದರು.

‘ವಿಧಾನಸಭಾ ಚುನಾವಣೆಯಲ್ಲಿ ನನ್ನ ಸೋಲಿಗೆ ಅವರೂ ಕಾರಣ. ಹರಿಹರ ಕ್ಷೇತ್ರದ ಅಭಿವೃದ್ಧಿಗೆ ಸಹಕಾರ ನೀಡಿರಲಿಲ್ಲ. ಹೀಗಿದ್ದರೂ ಅವರು ಸ್ಪರ್ಧಿಸಿದರೆ ವಿಶಾಲ ಮನೋಭಾವದಿಂದ ಗೆಲುವಿಗೆ ಶ್ರಮಿಸುತ್ತೇನೆ’ ಎಂದು ಹೇಳಿದರು.

‘ಮೂರು ಬಾರಿ ಸೋತಿರುವ ಮಲ್ಲಿಕಾರ್ಜುನ ಅವರ ಮೇಲೆ ಜನರಿಗೆ ಅನುಕಂಪ ಇದೆ. ಹೀಗಿದ್ದರೂ ಕಾಂಗ್ರೆಸ್‌ನ ಮಾಜಿ ಶಾಸಕರು ಸ್ಪರ್ಧಿಸುವಂತೆ ಅವರನ್ನು ಒತ್ತಾಯಿಸುತ್ತಿಲ್ಲ. ಜೆಡಿಎಸ್‌ನ ನಾಯಕರೇ ಒತ್ತಾಯ ಮಾಡಬೇಕಾದ ಪರಿಸ್ಥಿತಿ ಬಂದಿದೆ. ಅಧಿಕಾರ ವಿರೋಧಿ ಅಲೆಯೂ ಇತ್ತು. ಹೀಗಿದ್ದರೂ ಅವರು ಸ್ಪರ್ಧಿಸಲು ಹಿಂದೇಟು ಹಾಕುತ್ತಿರುವುದು ವಿಪರ್ಯಾಸ’ ಎಂದು ಬೇಸರ ವ್ಯಕ್ತಪಡಿಸಿದರು.

‘ಕಾಂಗ್ರೆಸ್‌–ಜೆಡಿಎಸ್‌ ಮೈತ್ರಿ ಪಕ್ಷಗಳ ಅಭ್ಯರ್ಥಿಗಳ ಆಪ್ತರ ಮೇಲೆ ಆದಾಯ ತೆರಿಗೆ ಇಲಾಖೆ ಅಧಿಕಾರಿಗಳು ದಾಳಿ ನಡೆಸುತ್ತಿರುವುದರ ಹಿಂದೆ ಕೇಂದ್ರ ಸರ್ಕಾರದ ಕೈವಾಡವಿದೆ. ತಮ್ಮ ಮನೆ ಮೇಲೂ ಐಟಿ ದಾಳಿ ನಡೆಯಬಹುದು ಎಂಬ ಭೀತಿ ಮಲ್ಲಿಕಾರ್ಜುನ ಅವರನ್ನು ಕಾಡುತ್ತಿದೆಯೇ? ಅವರ ಮನೆ ಮೇಲೆ ದಾಳಿ ನಡೆದರೆ ನಾವೂ ಪ್ರತಿಭಟಿಸುತ್ತೇವೆ’ ಎಂದು ಹೇಳಿದರು.

‘ಕಾಂಗ್ರೆಸ್‌ನವರು ನಿಮಗೆ ಟಿಕೆಟ್‌ ನೀಡಿದರೆ ಸ್ಪರ್ಧಿಸಲು ಸಿದ್ಧರಿದ್ದೀರಾ’ ಎಂಬ ಸುದ್ದಿಗಾರರ ಪ್ರಶ್ನೆಗೆ, ‘ಈಗ ಚುನಾವಣೆಗೆ ನಿಂತುಕೊಂಡರೆ ಮರ ಬೀಳುವಾಗ ಅದರ ಕೆಳಗೆ ಹೋಗಿ ನಿಂತುಕೊಂಡಂತಾಗುತ್ತದೆ. ಕೊನೆ ಗಳಿಗೆಯಲ್ಲಿ ನಿಂತುಕೊಂಡು ನಾನೇಕೆ ಬಲಿಯಾಗಲಿ. ಮೂರು ತಿಂಗಳ ಹಿಂದಿನಿಂದಲೇ ತಯಾರಿ ನಡೆಸಿದ್ದರೆ ಮಲ್ಲಿಕಾರ್ಜುನ ಒಂದು ಲಕ್ಷ ಮತಗಳ ಅಂತರದಿಂದ ಗೆಲ್ಲುವ ಸಾಧ್ಯತೆ ಇತ್ತು. ಕಾಂಗ್ರೆಸ್‌ ಪಕ್ಷದವರು ಇನ್ನೂ ನಮ್ಮನ್ನು ಸಂಪರ್ಕಿಸಿಲ್ಲ. ಬೇರೆಯವರಿಗೆ ಟಿಕೆಟ್‌ ನೀಡಿದರೂ ಕಾಂಗ್ರೆಸ್‌ ಅಭ್ಯರ್ಥಿ ಪರ ನಾವು ಮೈತ್ರಿ ಧರ್ಮವನ್ನು ಪಾಲಿಸಿ ಪ್ರಚಾರ ನಡೆಸುತ್ತೇವೆ. ಆದರೆ ಗೆಲುವು ನಿಶ್ಚಿತವಾಗುವುದಿಲ್ಲ’ ಎಂದು ಉತ್ತರಿಸಿದರು.

ತೇಜಸ್ವಿ ಪಟೇಲ್‌ ಅವರನ್ನು ಕಣಕ್ಕೆ ಇಳಿಸುವ ಕುರಿತ ಪ್ರಶ್ನೆಗೆ, ‘ಗೂಳಿ ಎದುರು ‘ಆಡು’ ನಿಲ್ಲಿಸಿದಂತಾಗಲಿದೆ. ಏಟಿಗೆ ಎದಿರೇಟು ನೀಡುವ ಶಕ್ತಿ ಶಾಮನೂರು ಕುಟುಂಬದವರಿಗೆ ಮಾತ್ರ ಇದೆ. ಹೀಗಾಗಿ ಶಾಮನೂರು ಶಿವಶಂಕರಪ್ಪ ಅಥವಾ ಮಲ್ಲಿಕಾರ್ಜುನ ಸ್ಪರ್ಧಿಸಬೇಕು’ ಎಂದು ಒತ್ತಾಯಿಸಿದರು.

ಜೆಡಿಎಸ್‌ ಜಿಲ್ಲಾ ಘಟಕದ ಅಧ್ಯಕ್ಷ ಚಿದಾನಂದಪ್ಪ, ಮುಖಂಡರಾದ ಶೀಲಾಕುಮಾರ್‌, ಪರಮೇಶ್ವರ, ದನಂಜಯ್‌, ದೇವೇಂದ್ರಪ್ಪ ಅವರೂ ಇದ್ದರು.

‘ಎಥನಾಲ್‌ ಘಟಕ ಮಂಜೂರಾತಿಯಲ್ಲಿ ಸಂಸದರ ಶ್ರಮವಿಲ್ಲ’

ಹರಿಹರದಲ್ಲಿ ₹ 966 ಕೋಟಿಯ 2ಜಿ–ಎಥನಾಲ್‌ ಉತ್ಪಾದನಾ ಘಟಕವನ್ನು ಮಂಜೂರು ಮಾಡಿಸಿರುವುದರ ಹಿಂದೆ ಸಂಸದ ಜಿ.ಎಂ. ಸಿದ್ದೇಶ್ವರ ಅವರ ಪರಿಶ್ರಮ ಇಲ್ಲ ಎಂದು ಶಿವಶಂಕರ ಪ್ರತಿಪಾದಿಸಿದರು.

‘ಎಂ.ಆರ್‌.ಪಿ.ಎಲ್‌ ಕಂಪನಿ ರಾಜ್ಯದಲ್ಲಿ ಘಟಕವನ್ನು ಸ್ಥಾಪಿಸುವ ಬಗ್ಗೆ ರಾಜ್ಯ ಸರ್ಕಾರಕ್ಕೆ ಪ್ರಸ್ತಾವ ಸಲ್ಲಿಸಿತ್ತು. ಇದು ನನ್ನ ಗಮನಕ್ಕೆ ಬಂತು. ಅಧಿಕಾರಿಗಳೊಂದಿಗೆ ಚರ್ಚಿಸಿ ಹರಿಹರದಲ್ಲಿ ಇದಕ್ಕೆ ಅಗತ್ಯವಿರುವ ಜಮೀನು ಇರುವ ಬಗ್ಗೆ ಮನವರಿಕೆ ಮಾಡಿಕೊಟ್ಟೆ. ನಂತರ ಸಿದ್ದರಾಮಯ್ಯ ಸರ್ಕಾರ ಈ ಘಟಕವನ್ನು ಹರಿಹರದಲ್ಲಿ ಸ್ಥಾಪಿಸಲು ತೀರ್ಮಾನ ಕೈಗೊಂಡಿತು. ಸಂಸದರು ತಾವು ಪ್ರಸ್ತಾವ ಸಲ್ಲಿಸಿರುವ ಬಗ್ಗೆ ದಾಖಲೆಗಳಿದ್ದರೆ ಬಹಿರಂಗಗೊಳಿಸಲಿ’ ಎಂದು ಸವಾಲು ಹಾಕಿದರು.

‘ಹರಿಹರದಲ್ಲಿ ₹ 6,000 ಕೋಟಿಯ ರಸಗೊಬ್ಬರ ಕಾರ್ಖಾನೆ ಮಂಜೂರು ಮಾಡಿಸಿರುವುದಾಗಿ ಸಂಸದರು ಹೇಳಿಕೊಂಡಿದ್ದಾರೆ. ಆದರೆ, ಕೆ.ಐ.ಎ.ಡಿ.ಬಿ ಅಧಿಕಾರಿಗಳು ಈ ಬಗ್ಗೆ ತಮಗೆ ಪ್ರಸ್ತಾವ ಬಂದಿಲ್ಲ ಎನ್ನುತ್ತಿದ್ದಾರೆ. ಹದಿನೈದು ವರ್ಷಗಳಲ್ಲಿ ಸಂಸದರು ಒಂದೇ ಒಂದು ಕಾರ್ಖಾನೆಯನ್ನೂ ಆರಂಭಿಸಿಲ್ಲ. ಚುನಾವಣೆಗಾಗಿ ಸುಳ್ಳು ಹೇಳುವುದನ್ನು ನಿಲ್ಲಿಸಬೇಕು’ ಎಂದು ಮನವಿ ಮಾಡಿದರು.

‘ಮಾವ–ಅಳಿಯ’ನ ನಡುವೆ ಒಪ್ಪಂದ: ಅಮಾನುಲ್ಲಾ ಖಾನ್‌ ಆರೋಪ

‘ಕಾಂಗ್ರೆಸ್‌ ಟಿಕೆಟ್‌ ಗೊಂದಲ ಸೃಷ್ಟಿಸಿರುವುದನ್ನು ನೋಡಿದರೆ ಜಿಲ್ಲೆಯಲ್ಲಿ ಬಿಜೆಪಿ ಜೊತೆ ಕಾಂಗ್ರೆಸ್‌ ಒಳ ಒಪ್ಪಂದ ಮಾಡಿಕೊಂಡಂತೆ ಕಾಣುತ್ತಿದೆ’ ಎಂದು ಜೆಡಿಎಸ್‌ ಮುಖಂಡ ಅಮಾನುಲ್ಲಾ ಖಾನ್‌ ಆರೋಪಿಸಿದರು.

‘ಸಮಾರಂಭಗಳಲ್ಲಿ ಶಾಮನೂರು ಶಿವಶಂಕರಪ್ಪ ಹಾಗೂ ಜಿ.ಎಂ. ಸಿದ್ದೇಶ್ವರ ಅವರು ಪರಸ್ಪರ ‘ಮಾವ–ಅಳಿಯ’ ಎಂದು ಬಹಿರಂಗವಾಗಿಯೇ ಕರೆದುಕೊಳ್ಳುತ್ತಾರೆ. ರಾಜ್ಯ ಸರ್ಕಾರದಲ್ಲಿ ನಾವಿರುತ್ತೇವೆ; ಕೇಂದ್ರ ಸರ್ಕಾರದಲ್ಲಿ ನೀವು ಇರಿ ಎಂದು ಮಾವ–ಅಳಿಯ ಒಪ್ಪಂದ ಮಾಡಿಕೊಂಡಿದ್ದಾರೆಯೇ ಎಂಬ ಸಂದೇಹ ಮೂಡುತ್ತಿದೆ’ ಎಂದು ಅವರು ದೂರಿದರು.

‘ಜಿಲ್ಲೆಯಲ್ಲಿರುವ ಸುಮಾರು 2.50 ಲಕ್ಷ ನಿರ್ಣಾಯಕ ಮುಸ್ಲಿಂ ಮತಗಳಿವೆ. ಶೇ 90ರಷ್ಟು ಅಲ್ಪಸಂಖ್ಯಾತರ ಮತಗಳು ಕಳೆದ ಚುನಾವಣೆಗಳಲ್ಲಿ ಕಾಂಗ್ರೆಸ್‌ ಪರ ಚಲಾವಣೆಗೊಂಡಿವೆ. ಮತದಾರರಲ್ಲಿ ಗೊಂದಲ ಮೂಡಿಸಿರುವುದನ್ನು ನೋಡಿದರೆ ಒಳ ಒಪ್ಪಂದ ನಡೆದಿದೆಯೇ ಎಂಬ ಪ್ರಶ್ನೆ ಕಾಡುತ್ತದೆ’ ಎಂದು ಅಮಾನುಲ್ಲಾ ಹೇಳಿದರು.

‘ರಾಜ್ಯದ ಎಲ್ಲಾ ಕಡೆ ಚುನಾವಣೆ ಪ್ರಚಾರ ಬಿರುಸಿನಿಂದ ನಡೆಯುತ್ತಿದೆ. ಆದರೆ, ಜಿಲ್ಲೆಯಲ್ಲಿ ಚುನಾವಣಾ ಪ್ರಚಾರಕ್ಕೆ ಮೋಡ ಕವಿದ ವಾತಾವರಣ ಇದೆ. ಮೈತ್ರಿ ಪಕ್ಷದ ಅಭ್ಯರ್ಥಿ ಯಾರು ಎಂಬುದು ನಿರ್ಧಾರವಾಗದೆ ಗೊಂದಲ ಉಂಟಾಗಿದೆ. ರಾಜ್ಯದಲ್ಲಿ 21 ಸ್ಥಾನಗಳನ್ನು ಕಾಂಗ್ರೆಸ್‌ಗೆ ಬಿಟ್ಟುಕೊಡಲಾಗಿದೆ. ಜೆಡಿಎಸ್‌ ಸಂಪೂರ್ಣ ಬೆಂಬಲ ವ್ಯಕ್ತಪಡಿಸಿದೆ. ಹೀಗಿದ್ದರೂ ಅಭ್ಯರ್ಥಿ ಅಂತಿಮಗೊಳಿಸದೆ ಒಪ್ಪಂದದ ರಾಜಕಾರಣ ಮಾಡುವುದರಿಂದ ಬಿಜೆಪಿಗೆ ಅನುಕೂಲ ಮಾಡಿಕೊಡಲಾಗಿದೆ’ ಎಂದು ಆರೋಪಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT