ಮಂಗಳವಾರ, 7 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಮಾಯಕೊಂಡ: ಶಿಕ್ಷಣಕ್ಕೆ ದಾನಿಗಳು ನೆರವು ನೀಡಲಿ- ಸಂಸದ ಜಿ.ಎಂ.ಸಿದ್ದೇಶ್ವರ

ಬಾಡದ ಸರ್ಕಾರಿ ಶಾಲೆಯ ನವೀಕೃತ ಕಟ್ಟಡ ಉದ್ಘಾಟನೆ
Last Updated 31 ಮಾರ್ಚ್ 2021, 3:36 IST
ಅಕ್ಷರ ಗಾತ್ರ

ಮಾಯಕೊಂಡ: ಗ್ರಾಮೀಣ ಪ್ರದೇಶದಲ್ಲಿ ಶಿಕ್ಷಣಕ್ಕೆ ದಾನಿಗಳು ಉದಾರವಾಗಿ ನೆರವು ನೀಡಬೇಕು ಎಂದು ಸಂಸದ ಜಿ.ಎಂ.ಸಿದ್ದೇಶ್ವರ ಮನವಿ ಮಾಡಿದರು.

ಸಮೀಪದ ಬಾಡ ಗ್ರಾಮದಲ್ಲಿ ಮಂಗಳವಾರ ನವೀಕೃತ ಶಾಲಾ ಕಟ್ಟಡದ ಸ್ಮಾಟ್ ಕ್ಲಾಸ್, ಹಳೆ ವಿದ್ಯಾರ್ಥಿಗಳ ಸಂಘವನ್ನು ಉದ್ಘಾಟಿಸಿ ಅವರು ಮಾತನಾಡಿದರು.

‘ಶಿಕ್ಷಕರು ಮತ್ತು ಪೋಷಕರು ವಿದ್ಯಾರ್ಥಿಗಳಲ್ಲಿ ಶಿಸ್ತು, ಆತ್ಮಸ್ಥೈರ್ಯ ತುಂಬಿ, ದೇಶದ ಸತ್ಪ್ರಜೆಗಳ ನ್ನಾಗಿಸಬೇಕು. ಎಲ್ಲಾ ನೆರವನ್ನೂ ಸರ್ಕಾರದಿಂದಲೇ ನಿರೀಕ್ಷಿಸಬಾರದು. ಶಿಕ್ಷಣ ಕ್ಷೇತ್ರಕ್ಕೆ ದಾನಿಗಳೂ ನೆರವು ನೀಡಬೇಕು. ಬಾಡ ಗ್ರಾಮಸ್ಥರು ಸರ್ಕಾರದ ನೆರವಿಲ್ಲದೇ, ದಾನಿಗಳ ಮನೆ ಬಾಗಿಲಿಗೆ ಹೋಗಿ ದೇಣಿಗೆ ಪಡೆದು ಶಾಲೆ ನವೀಕರಿಸಿದ್ದಾರೆ’ ಎಂದು ಶ್ಲಾಘಿಸಿದರು.

‘ಯುವಕರು ವೈಜ್ಞಾನಿಕವಾಗಿ ಕೃಷಿಯಲ್ಲಿ ತೊಡಗಿಕೊಂಡು ಉತ್ತಮ ಸಾಧನೆ ಮಾಡಬೇಕು. ಫಸಲ್ ಬಿಮಾ, ಮಣ್ಣು ಆರೋಗ್ಯ ಕಾರ್ಡ್‌, ನೀಮ್ ಕೋಟೆಡ್ ಯೂರಿಯಾ ಸೌಲಭ್ಯವನ್ನು ಕಲ್ಪಿಸಿರುವ ಪ್ರಧಾನಿ ನರೇಂದ್ರ ಮೋದಿ ಅವರು ರೈತರ ಆದಾಯ ದ್ವಿಗುಣಗೊಳಿಸಲು ಬದ್ಧರಾಗಿದ್ದಾರೆ’ ಎಂದರು.

ಜಿಲ್ಲಾಧಿಕಾರಿ ಮಹಾಂತೇಶ ಬೀಳಗಿ, ‘ದೇಶದ ಎಲ್ಲಾ ಸಾಧಕರು ಸರ್ಕಾರಿ ಶಾಲೆಯಲ್ಲಿಯೇ ಓದಿದ್ದು, ಸರ್ಕಾರಿ ಶಾಲೆಯಲ್ಲಿ ಓದುವುದೇ ಸೌಭಾಗ್ಯ ಎಂದು ಭಾವಿಸಬೇಕು. ಉನ್ನತ ಹುದ್ದೆಗೆ ಹೋದವರು ಓದಿದ ಶಾಲೆಯನ್ನು ಎಂದೂ ಮರೆಯಬಾರದು. ಒಳ್ಳೆಯ ಶಿಕ್ಷಕರು ಶಾಲೆಯಲ್ಲಿದ್ದರೆ ಮಾತ್ರ ಅಭಿವೃದ್ಧಿ ಸಾಧ್ಯ. ನೌಕರರು ಕೇವಲ ಸಂಬಳಕ್ಕಾಗಿ ಕೆಲಸ ಮಾಡಬಾರದು’ ಎಂದು ಹೇಳಿದರು.

‘ಪ್ರಜಾವಾಣಿ’ ವರದಿಗಾರ ವೆಂಕಟೇಶ್ ಅವರು ತಮ್ಮೂರಿನ ಶಾಲೆ ಬಗ್ಗೆ ಹೊಂದಿರುವ ಕಾಳಜಿ ಇತರರಿಗೂ ಮಾದರಿಯಾಗಿದೆ’ ಎಂದು ಜಿಲ್ಲಾಧಿಕಾರಿ ಬಣ್ಣಿಸಿದರು.

ಶಾಸಕ ಪ್ರೊ.ಲಿಂಗಣ್ಣ, ‘ಬಾಡದ ಯುವಕರ ಕೆಲಸ ಜಿಲ್ಲೆಗೆ ಮಾದರಿ. ಅನೇಕ‌ ಶಾಲೆ‌ಗಳು ಮೂಲಸೌಕರ್ಯ ಕೊರತೆಯಿಂದ ಬಳಲುತ್ತಿವೆ. ದಾನಿಗಳಿಂದ ದೇಣಿಗೆ ಪಡೆದು ಪಾರದರ್ಶಕವಾಗಿ ಕೆಲಸ ಮಾಡಬೇಕು’ ಎಂದು ಸಲಹೆ ನೀಡಿದರು.

ಇನ್ಫೊಸಿಸ್ ಸಂಚಾಲಕ ನಾರಾಯಣ ಕುಲಕರ್ಣಿ, ‘ಬಾಗಲಕೋಟೆ ಜಿಲ್ಲೆಯಲ್ಲಿ ಸುಧಾಮೂರ್ತಿ 700 ಕಂಪ್ಯೂಟರ್ ವಿತರಿಸಿದ್ದಾರೆ. ಒಬ್ಬರಿಂದ ಏನೂ ಆಗದು. ಸಂಘಟಿತರಾಗಿ ಕೆಲಸ ಮಾಡಿದರೆ ಅದ್ಭುತ ಸಾಧನೆ ಮಾಡಬಹುದು’ ಎಂದರು.

ಜಿಲ್ಲಾ ಪಂಚಾಯಿತಿ ಸದಸ್ಯೆ ಶೈಲಜಾ ಬಸವರಾಜ್, ‘ಅಂದಿನ ಜಿಲ್ಲಾ ಉಸ್ತುವಾರಿ ಸಚಿವ ಮಲ್ಲಿಕಾರ್ಜುನ ಅವರ ಅನುದಾನದಿಂದ ಮೂರು ಕೊಠಡಿಗಳನ್ನು ನಿರ್ಮಿಸಲಾಗಿದೆ. ಕೊಠಡಿಗೆ ಅನುದಾನ ನೀಡುವಂತೆ ಸಚಿವರೊಂದಿಗೆ ವಾಗ್ವಾದವನ್ನೂ ಮಾಡಿದ್ದೆ’ ಎಂದು ಸ್ಮರಿಸಿದರು.

ಗ್ರಾಮ ಪಂಚಾಯಿತಿ ಮಾಜಿ‌ ಅಧ್ಯಕ್ಷ ರುದ್ರಪ್ಪ, ಪ್ರಾಥಮಿಕ ಶಾಲಾ ಶಿಕ್ಷಕರ ಸಂಘದ ಅಧ್ಯಕ್ಷೆ ಪದ್ಮಲತಾ, ಗ್ರಾಮ ಪಂಚಾಯಿತಿ ಅಧ್ಯಕ್ಷ ಎಂ.ಡಿ.ಸುರೇಶ್ ಮಾತನಾಡಿದರು.

ಬಯಲು ಸೀಮೆ ಅಭಿವೃದ್ಧಿ ಮಂಡಳಿ ಅಧ್ಯಕ್ಷ ಅಣಬೇರು ಜೀವನ್‌ಮೂರ್ತಿ, ಗ್ರಾಮ ಪಂಚಾಯಿತಿ ಅಧ್ಯಕ್ಷೆ ಮಮತಾ ಮತ್ತು ಸದಸ್ಯರು, ಡಿಡಿಪಿಐ ಸಿ.ಆರ್‌.ಪರಮೇಶ್ವರಪ್ಪ, ಬಿಇಒ ನಿರಂಜನ ಮೂರ್ತಿ, ಮುಖ್ಯ ಶಿಕ್ಷಕ ನಾಗರಾಜ್ ಮತ್ತು ಶಿಕ್ಷಕರು, ಮುಖಂಡರಾದ ಜಿ.ಕೆ.ದಿನೇಶ್, ಶ್ಯಾಗಲೆ ದೇವೇಂದ್ರಪ್ಪ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT