ಮಂಗಳವಾರ, ಡಿಸೆಂಬರ್ 1, 2020
20 °C
ಸಹಕಾರ ಸಪ್ತಾಹ ಕಾರ್ಯಕ್ರಮದಲ್ಲಿ ಸಹಕಾರ, ಕೃಷಿ ಮಾರುಕಟ್ಟೆ ಸಚಿವ ಎಸ್‌.ಟಿ. ಸೋಮಶೇಖರ್‌

ಕೊರೊನಾ ಕಾಲದಲ್ಲಿ ಜನರಿಗೆ ₹ 39,300 ಕೋಟಿ ನರವು

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ದಾವಣಗೆರೆ: ಕೋವಿಡ್ ಸಂಕಷ್ಟದ ಪರಿಸ್ಥಿತಿಯಲ್ಲಿ, ದೇಶದ ಅರ್ಥ ಮತ್ತು ಆರ್ಥಿಕ ವ್ಯವಸ್ಥೆ ಹಿಂಜರಿಕೆ ಕಂಡಿರುವ ಈ ಸಂದರ್ಭದಲ್ಲಿ ಆರ್ಥಿಕ ಸ್ಪಂದನ ಕಾರ್ಯಕ್ರಮದ ಮೂಲಕ ಸಹಕಾರ ಸಂಸ್ಥೆಗಳಿಂದ ₹ 39,300 ಕೋಟಿ ಮೊತ್ತದ ಆರ್ಥಿಕ ನೆರವನ್ನು ರಾಜ್ಯ ಸರ್ಕಾರ ನೀಡಿದೆ. ಸಹಕಾರಿಗಳು, ವಲಸೆ ಕಾರ್ಮಿಕರು ಒಳಗೊಂಡಂತೆ ಎಲ್ಲರ ನೆರವಿಗೆ ಧಾವಿಸುವ ಮೂಲಕ ಸಹಕಾರ ತತ್ವವನ್ನು ಅರ್ಥಪೂರ್ಣವಾಗಿಸಿದೆ ಎಂದು ಸಹಕಾರ ಮತ್ತು ಕೃಷಿ ಮಾರುಕಟ್ಟೆ ಸಚಿವ ಎಸ್.ಟಿ. ಸೋಮಶೇಖರ್ ಹೇಳಿದರು.

67ನೇ ಅಖಿಲ ಭಾರತ ಸಹಕಾರ ಸಪ್ತಾಹದ ಅಂಗವಾಗಿ ನಗರದ ಬಾಪೂಜಿ ಬ್ಯಾಂಕ್ ಸಮುದಾಯ ಭವನದಲ್ಲಿ ಸೋಮವಾರ ಏರ್ಪಡಿಸಲಾಗಿದ್ದ ‘ಅಂತರ್ಜಾಲ ಸಂಪರ್ಕದ ಮೂಲಕ ಸಹಕಾರ ಶಿಕ್ಷಣ ತರಬೇತಿ ಪುನರ್‌ಮನನ’ ಕಾರ್ಯಕ್ರಮವನ್ನು ಉದ್ಘಾಟಿಸಿ ಅವರು ಮಾತನಾಡಿದರು.

ಕೋವಿಡ್ ಸಂಕಷ್ಟದ ಸಮಯದಲ್ಲಿ ಸಹಕಾರ ಕ್ಷೇತ್ರದಿಂದಲೇ ಮುಖ್ಯಮಂತ್ರಿಗಳ ಪರಿಹಾರ ನಿಧಿಗೆ ಅತಿ ಹೆಚ್ಚು ₹ 53 ಕೋಟಿ ದೇಣಿಗೆ ನೀಡಿದೆ. ರೈತರಿಗೆ ಶೂನ್ಯ ಬಡ್ಡಿದರದಲ್ಲಿ ಸಾಲ, ತೋಟಗಾರಿಕೆ, ಹೈನುಗಾರಿಕೆ, ಮೀನುಗಾರಿಕೆಗೆ ಬಡ್ಡಿ ರಹಿತ ಸಾಲ ನೀಡಿದೆ ಎಂದು ತಿಳಿಸಿದರು.

ಸಹಕಾರ ಧ್ವಜಾರೋಹಣ ನೆರವೇರಿಸಿದ ಜಿಲ್ಲಾ ಉಸ್ತುವಾರಿ ಸಚಿವ ಬೈರತಿ ಬಸವರಾಜ, ‘ಸಹಕಾರ ಕ್ಷೇತ್ರಕ್ಕೆ ಸರ್ಕಾರಗಳು ಹೆಚ್ಚಿನ ಅನುದಾನ ನೀಡುವ ಮೂಲಕ ಪ್ರೋತ್ಸಾಹಿಸುತ್ತಿವೆ. ಕೋವಿಡ್ ಲಾಕ್‌ಡೌನ್ ಸಂದರ್ಭದಲ್ಲಿ ಆರ್ಥಿಕವಾಗಿ ನಷ್ಟ ಅನುಭವಿಸಿದ ಹೂವು, ಹಣ್ಣು ಬೆಳೆಗಾರರು, ಆಟೋ, ಟ್ಯಾಕ್ಸಿ ಚಾಲಕರಿಗೆ ಸರ್ಕಾರ ಪರಿಹಾರ ಧನ ನೀಡುವ ಮೂಲಕ ನೆರವಿಗೆ ಧಾವಿಸಿದೆ. ಕೋವಿಡ್ ಸಂಕಷ್ಟ ಕಾಲದಲ್ಲಿ ಎಲ್ಲ ಕ್ಷೇತ್ರಗಳಲ್ಲಿ ಆರ್ಥಿಕ ಸಂದಿಗ್ಧತೆ ಉಂಟಾಗಿದ್ದು, ಸಹಕಾರಿ ಸಂಘಗಳು ಹೈನುಗಾರಿಕೆ, ಮೀನುಗಾರಿಕೆ, ಕೃಷಿ, ತೋಟಗಾರಿಕೆ ಸೇರಿದಂತೆ ವಿವಿಧ ಕ್ಷೇತ್ರಗಳಲ್ಲಿ ಹೆಚ್ಚಿನ ನೆರವು ನೀಡಬೇಕಿದೆ’ ಎಂದು ಹೇಳಿದರು.

ಶಾಸಕ ಶಾಮನೂರು ಶಿವಶಂಕರಪ್ಪ, ಮುಖ್ಯಮಂತ್ರಿಗಳ ರಾಜಕೀಯ ಕಾರ್ಯದರ್ಶಿ ಎಂ.ಪಿ. ರೇಣುಕಾಚಾರ್ಯ, ಮಹರ್ಷಿ ವಾಲ್ಮೀಕಿ ಅಭಿವೃದ್ಧಿ ನಿಗಮದ ಅಧ್ಯಕ್ಷ ಎಸ್.ವಿ. ರಾಮಚಂದ್ರ, ಶಾಸಕರಾದ ಎಸ್‌.ಎ. ರವೀಂದ್ರನಾಥ್‌, ‌‌ಪ್ರೊ. ಎನ್. ಲಿಂಗಣ್ಣ, ಎಸ್. ರಾಮಪ್ಪ, ಜಿಲ್ಲಾ ಪಂಚಾಯಿತಿ ಅಧ್ಯಕ್ಷೆ ದೀಪಾ ಜಗದೀಶ್, ಮೇಯರ್‌ ಬಿ.ಜೆ. ಅಜಯ್‌ಕುಮಾರ್, ತೋಟ ಉತ್ಪನ್ನಗಳ ಮಾರಾಟ ಸಹಕಾರ ಸಂಘದ ಅಧ್ಯಕ್ಷ ಆರ್.ಎಂ. ರವಿ, ದಾವಣಗೆರೆ ಡಿಸಿಸಿ ಬ್ಯಾಂಕ್ ನಿರ್ದೇಶಕ ಬಿ.ವಿ. ಚಂದ್ರಶೇಖರ್ ಅವರೂ ಇದ್ದರು.

ಜಿಲ್ಲಾ ಸಹಕಾರ ಯೂನಿಯನ್ ಅಧ್ಯಕ್ಷ ಎನ್.ಎ. ಮುರುಗೇಶ್ ಸ್ವಾಗತಿಸಿದರು,  ಜಿಲ್ಲಾ ಕೇಂದ್ರ ಸಹಕಾರ ಬ್ಯಾಂಕ್ ಅಧ್ಯಕ್ಷ ಡಾ. ಜೆ.ಆರ್. ಷಣ್ಮುಖಪ್ಪ ಪ್ರಾಸ್ತಾವಿಕವಾಗಿ ಮಾತನಾಡಿದರು. ಆರ್.ಜಿ. ಶ್ರೀನಿವಾಸಮೂರ್ತಿ ವಂದಿಸಿದರು.

ಬ್ಯಾಂಕ್‌ ವಿಲೀನ ಮಾರಕ

‘ಉತ್ತಮ ಆರ್ಥಿಕ ವಹಿವಾಟು ನಡೆಸುತ್ತಿರುವ ಸಣ್ಣ ಪುಟ್ಟ ಬ್ಯಾಂಕ್‌ಗಳನ್ನು ದೊಡ್ಡ ದೊಡ್ಡ ರಾಷ್ಟ್ರೀಕೃತ ಬ್ಯಾಂಕ್‌ಗಳೊಂದಿಗೆ ವಿಲೀನಗೊಳಿಸುತ್ತಿರುವುದು ಸಹಕಾರ ಕ್ಷೇತ್ರಕ್ಕೆ ಮಾರಕ’ ಎಂದು ಎಮಿರೇಟಸ್, ನ್ಯಾಫ್‌ಕಬ್ ಅಧ್ಯಕ್ಷ ಎಚ್.ಕೆ. ಪಾಟೀಲ್ ತಿಳಿಸಿದರು.

ಬಡವರ ಸ್ವಾಭಿಮಾನ ಎತ್ತಿಹಿಡಿಯುವ ಕ್ಷೇತ್ರಗಳಾಗಿರುವ ಕೃಷಿ ಪತ್ತಿನ ಬ್ಯಾಂಕ್‌ಗಳಂಥ ಸಣ್ಣ ಸಣ್ಣ ಬ್ಯಾಂಕ್‌ಗಳನ್ನು ವಿಲೀನಗೊಳಿಸಿದರೆ ಸಹಕಾರ ಕ್ಷೇತ್ರಕ್ಕೆ ಹರಿದು ಬರುವ ಹಣ ದೊಡ್ಡ ಬ್ಯಾಂಕ್‌ಗಳಿಗೆ ವರ್ಗಾವಣೆಯಾಗುತ್ತದೆ. ವಾರ್ಷಿಕ ಸುಮಾರು ₹ 6 ಲಕ್ಷ ಕೋಟಿ ವಹಿವಾಟು ನಡೆಸುವ ಸಣ್ಣ ಬ್ಯಾಂಕ್‌ಗಳಿಂದ ಸುಮಾರು ₹ 1.5 ಲಕ್ಷ ಕೋಟಿ ಈ ರೀತಿ ವರ್ಗಾವಣೆಯಾಗುತ್ತಿದೆ ಎಂದು ಅಂಕಿಅಂಶ ನೀಡಿದರು.

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.

ಈ ವಿಭಾಗದಿಂದ ಇನ್ನಷ್ಟು