ಬುಧವಾರ, 24 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಚುನಾವಣಾ ಕಾವು: ಸಂಕಷ್ಟ ತಂದ ಫ್ಲೆಕ್ಸ್‌ ಹಾವಳಿ

ನಿಯಂತ್ರಣಕ್ಕೆ ಹರಸಾಹಸ; ಎಗ್ಗಿಲ್ಲದೆ ನಿಯಮ ಉಲ್ಲಂಘನೆ
Last Updated 20 ಮಾರ್ಚ್ 2023, 6:46 IST
ಅಕ್ಷರ ಗಾತ್ರ

ಚಿತ್ರದುರ್ಗ: ದಿನೇದಿನೇ ಬಿಸಿಲಿನಂತೆಯೇ ವಿಧಾನಸಭೆ ಚುನಾವಣೆಯ ಕಾವು ಏರುತ್ತಿದೆ. ಚುನಾವಣಾ ಆಯೋಗ ನೀತಿ ಸಂಹಿತೆ ಜಾರಿಯ ಮುನ್ನವೇ ಬಹುತೇಕ ರಾಜಕೀಯ ಪಕ್ಷಗಳು ಒಂದು ಹಂತದ ಪ್ರಚಾರ ಮುಗಿಸುವ ಧಾವಂತದಲ್ಲಿ ಕಾಲಿಗೆ ಚಕ್ರ ಕಟ್ಟಿಕೊಂಡು ಪ್ರವಾಸ ಮಾಡುತ್ತಿವೆ. ರಾಜ್ಯ ಹಾಗೂ ರಾಷ್ಟ್ರೀಯ ನಾಯಕರನ್ನು ಸ್ವಾಗತಿಸುವ ಸಲುವಾಗಿ ಬೆಂಬಲಿಗರು, ಕಾರ್ಯಕರ್ತರು ನಗರದಲ್ಲಿ ಎಗ್ಗಿಲ್ಲದಂತೆ ಹಾಕುತ್ತಿರುವ ಫ್ಲೆಕ್ಸ್‌ಗಳು ಜನರಿಗೆ ಸಂಕಷ್ಟ ತಂದಿಟ್ಟಿವೆ.

ಬಿಜೆಪಿ, ಕಾಂಗ್ರೆಸ್‌, ಜೆಡಿಎಸ್‌ ಸೇರಿದಂತೆ ಇತರೆ ಪಕ್ಷಗಳು ಮತದಾರರನ್ನು ಸೆಳೆಯಲು ಯಾತ್ರೆಗಳನ್ನು ಆರಂಭಿಸಿದ್ದು, ಯಾತ್ರೆ ಆಗಮನಕ್ಕೂ ಒಂದೆರಡು ದಿನಗಳ ಮುಂಚೆಯೇ ಇಡೀ ನಗರ ತನ್ನ ಬಣ್ಣ ಬದಲಾಯಿಸುತ್ತಿದೆ. ಒಮ್ಮೆ ಕೇಸರಿಯಾದರೆ ಮತ್ತೊಮ್ಮೆ ಹಸಿರು, ಕೆಂಪು ರಾರಾಜಿಸುತ್ತವೆ. ಪಕ್ಷದ ಚಿಹ್ನೆಗಳ ಬಂಟಿಂಗ್ಸ್‌, ಬಾವುಟಗಳು ರಸ್ತೆಯನ್ನು ಆಪೋಶನಕ್ಕೆ ತೆಗೆದುಕೊಳ್ಳುತ್ತಿವೆ.

ಈಗಾಗಲೇ ಅವೈಜ್ಞಾನಿಕ ರಸ್ತೆ ವಿಭಜಕಗಳಿಂದ ಹೈರಾಣಾಗಿರುವ ಜನರು ರಾಜಕೀಯ ಸಮಾವೇಶಗಳ ವೇಳೆಯಲ್ಲಿನ ಫ್ಲೆಕ್ಸ್‌, ಬಂಟಿಂಗ್ಸ್‌ ಹಾವಳಿಗೆ ನಲುಗಿದ್ದಾರೆ. ವಾಹನ ಸವಾರರು ಹಾಗೂ ಪಾದಚಾರಿಗಳು ಜೀವ ಕೈಯಲ್ಲಿ ಹಿಡಿದು ಸಾಗುವ ಪರಿಸ್ಥಿತಿ ಎದುರಾಗಿದೆ.

ನಗರಕ್ಕೆ ಪ್ರವೇಶಿಸುವ ಚಳ್ಳಕೆರೆ ಟೋಲ್‌ಗೇಟ್‌ನಿಂದ ಹೊಳಲ್ಕೆರೆ ರಸ್ತೆಯ ಎಸ್‌ಜೆಎಂ‌ ಕಾಲೇಜು ಹಾಗೂ ಮಹಾತ್ಮ ಗಾಂಧಿ ವೃತ್ತದಿಂದ ಎಸ್‌ಜೆಎಂಐಟಿ ವೃತ್ತದವರೆಗೂ ಫ್ಲೆಕ್ಸ್‌ ಹಾಕುವುದು ಮಾಮೂಲಿಯಾಗಿವೆ. ಅಲ್ಲದೇ, ಅಂಬೇಡ್ಕರ್‌ ವೃತ್ತ, ಕನಕ ವೃತ್ತ, ಜಿಲ್ಲಾಧಿಕಾರಿ ಕಚೇರಿ ಸಮೀಪದ ಒನಕೆ ಓಬವ್ವ ವೃತ್ತದಲ್ಲೂ ನಿತ್ಯವೂ ಒಂದಿಲ್ಲೊಂದು ಫ್ಲೆಕ್ಸ್‌ ಕಂಡುಬರುತ್ತವೆ. ಪಕ್ಕದಲ್ಲಿನ ಜಿಲ್ಲಾ ಪೊಲೀಸ್‌ ವರಿಷ್ಠಾಧಿಕಾರಿಯ ಅಧಿಕೃತ ನಿವಾಸದ ಗೇಟ್‌ವರೆಗೂ ಫ್ಲೆಕ್ಸ್‌ಗಳನ್ನು ಹಾಕಿದ ನಿದರ್ಶನಗಳಿವೆ.

ರಾಜಕೀಯ ಮುಖಂಡರ ಜನ್ಮದಿನ, ಜಯಂತಿ, ಹೋರಾಟ, ಸಮಾವೇಶ, ಕ್ರೀಡಾಕೂಟ, ಧಾರ್ಮಿಕ ಕಾರ್ಯಕ್ರಮ, ಪ್ರತಿಭಟನೆ ಸೇರಿದಂತೆ ವಿವಿಧ ಕಾರ್ಯಕ್ರಮಗಳ ರಂಗುರಂಗಿನ ಭಿತ್ತಿಪತ್ರಗಳನ್ನು ‘ಇಲ್ಲಿ ಭಿತ್ತಿಪತ್ರ ಅಂಟಿಸಬೇಡಿ’ ಎಂದು ಬರೆದ ಗೋಡೆಯನ್ನೂ ಬಿಡದೆ ಅಂಟಿಸುತ್ತಿದ್ದಾರೆ. ಸರ್ಕಾರಿ ಶಾಲೆ– ಕಾಲೇಜು, ಕಚೇರಿ, ಕಾಂಪೌಂಡ್‌ಗಳು, ಮರಗಳು, ರಸ್ತೆ ವಿಭಜಕಗಳನ್ನು ಪೋಸ್ಟರ್‌ಗಳು ಆಕ್ರಮಿಸಿವೆ.

ನಗರಸಭೆಯಿಂದ ಅನುಮತಿ ಪಡೆದರೂ ಯಾರೊಬ್ಬರೂ ಮಾರ್ಗಸೂಚಿ ಪಾಲಿಸುತ್ತಿಲ್ಲ. ಬೃಹತ್‌ ಫ್ಲೆಕ್ಸ್‌ಗಳನ್ನು ರಸ್ತೆ ತುಂಬೆಲ್ಲ ಹಾಕುತ್ತಿದ್ದಾರೆ. ರಸ್ತೆಗಳ ಇಕ್ಕೆಲಗಳು, ತಿರುವುಗಳಲ್ಲಿ ಅಡ್ಡಲಾಗಿ ಬ್ಯಾನರ್‌ಗಳನ್ನು ಹಾಕುವುದು ಸಾಮಾನ್ಯವಾಗಿದೆ. ಇದರಿಂದ ಸಂಚಾರಕ್ಕೆ ಅಡಚಣೆಯಾಗಿ ಅಪಘಾತ ಸಂಭವಿಸಿದ ಉದಾಹರಣೆಗಳಿವೆ.

ರಾಜ್ಯ ಸರ್ಕಾರ 2016ರಲ್ಲಿ ಫ್ಲೆಕ್ಸ್‌ಗಳಿಗೆ ನಿಷೇಧ ಹೇರಿದೆ. ಅನಧಿಕೃತವಾಗಿ ಫ್ಲೆಕ್ಸ್‌ ಅಳವಡಿಸುವವರ ವಿರುದ್ಧ ‘ಸಾರ್ವಜನಿಕ ಸ್ಥಳ ವಿರೂಪ ತಡೆ ಕಾಯ್ದೆ–1981’ ಅನ್ವಯ ಕಾನೂನು ಕ್ರಮ ಜರುಗಿಸಲು ಅವಕಾಶವಿದೆ. ಇದನ್ನು ಕ್ರಿಮಿನಲ್‌ ಸ್ವರೂಪದ ಪ್ರಕರಣವೆಂದು ಸಹ ಪರಿಗಣಿಸಲಾಗುತ್ತದೆ. ಆರು ತಿಂಗಳು ಜೈಲು ಹಾಗೂ ₹1 ಲಕ್ಷದವರೆಗೆ ದಂಡ ವಿಧಿಸುವ ಅವಕಾಶ ಕಾನೂನಿನಲ್ಲಿದೆ.

ನಗರ, ಪಟ್ಟಣದ ಸೌಂದರ್ಯಕ್ಕೆ ಧಕ್ಕೆಯಾಗದ ರೀತಿಯಲ್ಲಿ ಜಾಹೀರಾತು ಫಲಕ ಅಳವಡಿಕೆಗೆ ಸ್ಥಳೀಯ ಸಂಸ್ಥೆ ಸ್ಥಳ ನಿಗದಿಪಡಿಸಿದೆ. ಆಯ್ದ ಸ್ಥಳಗಳಲ್ಲಿ ಹೋರ್ಡಿಂಗ್ಸ್‌ಗಳನ್ನು ಹಾಕಲಾಗಿದೆ. ಇವುಗಳನ್ನು ಗುತ್ತಿಗೆ ಆಧಾರದ ಮೇಲೆ ನೀಡಲಾಗುತ್ತದೆ. ಅಳತೆ, ಸ್ಥಳ ಹಾಗೂ ದಿನಗಳ ಆಧಾರದ ಮೇರೆಗೆ ಶುಲ್ಕ ನಿಗದಿಪಡಿಸಲಾಗುತ್ತದೆ. ಆದರೂ ಇದರ ಹಾವಳಿ ತಡೆಯಲು
ಸಾಧ್ಯವಾಗುತ್ತಿಲ್ಲ.

ಬಹುತೇಕ ಬಾರಿ ರಾಜಕೀಯ ನಾಯಕರ ಒತ್ತಡಕ್ಕೆ ಮಣಿದು ಸ್ಥಳೀಯ ಆಡಳಿತ ಈ ವಿಚಾರದಲ್ಲಿ ಕೈಚೆಲ್ಲಿ ಕುಳಿತುಕೊಂಡಿದೆ. ಈ ಪರಿಣಾಮ ಪೂರ್ವಾನುಮತಿ ಪಡೆಯದೇ ಅನಧಿಕೃತವಾಗಿ ಅಳವಡಿಸುವವರ ಸಂಖ್ಯೆಯೂ ಹೆಚ್ಚುತ್ತಿದೆ. ಕೆಲವೊಮ್ಮೆ ಶಾಸ್ತ್ರಕ್ಕೆ ಅನುಮತಿ ಪಡೆದು ಮನಸ್ಸಿಗೆ ತೋಚಿದಷ್ಟು ಫ್ಲೆಕ್ಸ್‌, ಪೋಸ್ಟರ್‌ ಹಾಗೂ ಬಂಟಿಂಗ್ಸ್‌ ಆಳವಡಿಸುವ ಕಾರ್ಯ ನಡೆಯುತ್ತಿದೆ. ಈ ಎಲ್ಲದರ ವಿರುದ್ಧ ಕ್ರಮ ಕೈಗೊಳ್ಳಲು ನಗರಸಭೆ ಅಧಿಕಾರಿಗಳು ಹಿಂದೇಟು ಹಾಕುತ್ತಿದ್ದಾರೆ ಎಂಬ ಆರೋಪ ಕೇಳಿಬಂದಿದೆ.

ಡಿಸಿ ಆದೇಶದಂತೆ ತೆರವು

ಚುನಾವಣಾ ಆಯೋಗದ ನಿರ್ದೇಶನದಂತೆ ನೀತಿ ಸಂಹಿತೆಗೆ ಮೊದಲು ಚುನಾವಣೆ ಅಕ್ರಮ ತಡೆಯಲು ಜಿಲ್ಲಾಧಿಕಾರಿ ದಿವ್ಯಪ್ರಭು ಜಿ.ಆರ್.ಜೆ. ಅಧಿಕಾರಿಗಳಿಗೆ ಸೂಚಿಸಿದ್ದಾರೆ. ಇದರಂತೆ ಜಿಲ್ಲೆಯಾದ್ಯಂತ ಖಾಸಗಿ ಹಾಗೂ ಸಾರ್ವಜನಿಕ ಸ್ಥಳಗಳಲ್ಲಿ ಅನಧಿಕೃತವಾಗಿ, ಅನುಮತಿ ಇಲ್ಲದೇ ಹಾಕಿರುವ ಫಲಕಗಳನ್ನು ಆಯಾ ಸ್ಥಳೀಯ ಸಂಸ್ಥೆಗಳು ತೆರವುಗೊಳಿಸಲು ಮುಂದಾಗಿವೆ.

ಸಾವಿರ ಲೆಕ್ಕದಲ್ಲಿ ಆದಾಯ

ವರ್ಷ ಪೂರ್ತಿ ಚಿತ್ರದುರ್ಗ ನಗರದ ತುಂಬೆಲ್ಲ ಫ್ಲೆಕ್ಸ್‌, ಬಂಟಿಂಗ್ಸ್‌, ಭಿತ್ತಿಪತ್ರಗಳು ಕಾಣಿಸಿದರೂ ನಗರಸಭೆ ಆದಾಯ ಮಾತ್ರ ಪ್ರತಿ ತಿಂಗಳಲ್ಲಿ ಸಾವಿರ ಲೆಕ್ಕದಲ್ಲಿದೆ. 2022 ರ ಮೇ ತಿಂಗಳಿನಲ್ಲಿ ₹ 15,000, ಜೂನ್‌ ₹ 14,000, ಜುಲೈ ₹ 6,800, ಆಗಸ್ಟ್‌ ₹ 16,000, ಸೆಪ್ಟಂಬರ್‌ ₹ 32,000, ಅಕ್ಟೋಬರ್‌ ₹ 15,500, ನವೆಂಬರ್‌ ₹ 4,175, ಡಿಸೆಂಬರ್‌ ₹ 11,800, 2023 ರ ಜನವರಿ ₹ 7,000, ಫೆಬ್ರವರಿ ₹ 22,890 ಹಾಗೂ ಮಾರ್ಚ್‌ 18 ರವರಗೆ ₹ 6,500 ಶುಲ್ಕ ಸಂದಾಯವಾಗಿದೆ.

ಸಹಕಾರ ಮುಖ್ಯ

ಯಾವುದೇ ಸಭೆ, ಸಮಾರಂಭ, ಕಾರ್ಯಕ್ರಮ ನಡೆಸುವ ಒಂದು ದಿನ ಮುಂಚಿತವಾಗಿ ಹಣ ಪಾವತಿಸಿ ನಗರಸಭೆಯಿಂದ ಪರವಾನಗಿ ಪಡೆಯಬೇಕು. ಕಾರ್ಯಕ್ರಮ ಮುಗಿದ ನಂತರ ಒಂದು ಗಂಟೆ ಒಳಗೆ ತೆರವುಗೊಳಿಸಬೇಕು.

ಸರ್ಕಾರದ ತುರ್ತು ಆದೇಶ ಬಂದಲ್ಲಿ ನಿಯಾಮನುಸಾರ ಯಾವುದೇ ತಿಳಿವಳಿಕೆ ನೀಡದೆ ಪರವಾನಗಿ ರದ್ದುಪಡಿಸಲಾಗುವುದು. ಯಾವುದೇ ಸರ್ಕಾರಿ ಆಸ್ತಿ ಮತ್ತು ಕಟ್ಟಡದ ಮೇಲೆ, ವಿದ್ಯುತ್‌ ಕಂಬ ಹಾಗೂ ಮರಗಳಿಗೆ ಫ್ಲೆಕ್ಸ್‌ ಕಟ್ಟಬಾರದು. ಪರವಾನಗಿ ನೀಡಲಾದ ನಿಗದಿತ ಸ್ಥಳದಲ್ಲೇ ಅಳವಡಿಸಬೇಕು. ಅನಧಿಕೃತ ಫ್ಲೆಕ್ಸ್‌ಗಳ ತೆರವಿಗೆ ಜನಪ್ರತಿನಿಧಿಗಳು ಸಹಕಾರ ನೀಡಬೇಕು ಎನ್ನುತ್ತಾರೆ ಚಳ್ಳಕೆರೆ ಪೌರಾಯುಕ್ತ ರಾಮಕೃಷ್ಣಪ್ಪ.

ಕೇವಲ ₹ 60,000 ಆದಾಯ

ಸುವರ್ಣಾ ಬಸವರಾಜ್‌

ಹಿರಿಯೂರು: ಸರ್ಕಾರದ ಸೂಚನೆ ಮೇರೆಗೆ ಕಳೆದ ಮೂರ್ನಾಲ್ಕು ದಿನದಿಂದ ನಗರದ ಪ್ರಮುಖ ರಸ್ತೆಗಳಲ್ಲಿ, ಸರ್ಕಾರಿ ಕಚೇರಿಗಳ ಕಾಂಪೌಂಡ್‌ಗಳ ಮೇಲೆ ಹಾಕಿದ್ದ ಫ್ಲೆಕ್ಸ್‌, ಪೋಸ್ಟರ್‌ಗಳನ್ನು ನಗರಸಭೆ ಸಿಬ್ಬಂದಿ ತೆರವುಗೊಳಿಸಿದ್ದು, ಸಾರ್ವಜನಿಕರಲ್ಲಿ ಸಂತಸ ತಂದಿದೆ.

ಸಣ್ಣಪುಟ್ಟ ಜಾತ್ರೆ, ದೇವಸ್ಥಾನದ ಪೂಜೆಗಳು, ಜನ್ಮದಿನ, ರಾಜಕೀಯ ಪಕ್ಷಗಳ ಸಮಾರಂಭಗಳು, ಗಣ್ಯರ ಜನ್ಮದಿನಗಳು, ಜ್ಯೋತಿಷ್ಯ, ನಾಟಿವೈದ್ಯ ಪದ್ಧತಿ, ನಾಟಕ ಪ್ರದರ್ಶನ, ನಿಧನ ಹೊಂದಿದವರ ಫ್ಲೆಕ್ಸ್‌ಗಳನ್ನು ನಗರದಲ್ಲಿ ಎಲ್ಲೆಂದರಲ್ಲಿ ಅಳವಡಿಸಿ ನಗರ ಸೌಂದರ್ಯವನ್ನು ಕೆಡಿಸಲಾಗಿತ್ತು. ಕೆಲವೊಮ್ಮೆ ತಿಂಗಳುಗಟ್ಟಲೆ ಫ್ಲೆಕ್ಸ್‌, ಪೋಸ್ಟರ್‌ಗಳಲ್ಲಿ ಅದೇ ಮುಖಗಳನ್ನು ನೋಡಿ ನೋಡಿ ಜನ ಬೇಸತ್ತಿದ್ದರು. ಸರ್ಕಾರದ ಸೂಚನೆ ನಂತರ ಇಡೀ ನಗರದಲ್ಲಿನ ಫ್ಲೆಕ್ಸ್‌, ಪೋಸ್ಟರ್ ತೆರವುಗೊಳಿಸಿರುವ ಕಾರಣ ರಸ್ತೆ ಕಡೆ ಗಮನ ಇಟ್ಟು ಸಂಚರಿಸಬಹುದಾಗಿದೆ. ಫ್ಲೆಕ್ಸ್ ಅಳವಡಿಸಲು ನಗರಸಭೆ ದಿನವೊಂದಕ್ಕೆ ಒಂದು ಅಡಿ ಅಳತೆಗೆ ಒಂದೂವರೆ ರೂಪಾಯಿ ದರ ನಿಗದಿ ಪಡಿಸಿದೆ. ಬಹುತೇಕ ಫ್ಲೆಕ್ಸ್‌ಗಳು ಬಲಾಢ್ಯರಿಗೆ ಸಂಬಂಧಿಸಿರುವ ಕಾರಣ ಅವಧಿ ಮುಗಿದ ತಕ್ಷಣೆ ತೆರವುಗೊಳಿಸಲು ನಗರಸಭೆ ಸಿಬ್ಬಂದಿ ಧೈರ್ಯ ಮಾಡದ ಕಾರಣ 2022 ಏಪ್ರಿಲ್‌ನಿಂದ 2023 ಮಾರ್ಚ್‌ 15ರವರೆಗೆ ಫ್ಲೆಕ್ಸ್, ಪೋಸ್ಟರ್‌ ಅಳವಡಿಕೆಯಿಂದ ಕೇವಲ ₹ 60 ಸಾವಿರ ಆದಾಯ ಬಂದಿದೆ.

ಫ್ಲೆಕ್ಸ್‌ ತೆರವುಗೊಳಿಸದೇ ಇರುವುದಕ್ಕೆ ನಾಗರಿಕರಿಂದ ವ್ಯಾಪಕ ಪ್ರಶಂಸೆ ವ್ಯಕ್ತವಾಗುತ್ತಿದೆ. ಕಟ್ಟುನಿಟ್ಟಾಗಿ ಬಾಡಿಗೆ ವಸೂಲಿ ಕಷ್ಟ. ಸರ್ಕಾರದ ಆದೇಶದಂತೆ ತೆರವು ಕಾರ್ಯಾಚರಣೆ ಸುಲಭವಾಗಿದೆ ಎನ್ನುತ್ತಾರೆ ಪೌರಾಯುಕ್ತ ಬಸವರಾಜ್‌.

ಅನಧಿಕೃತ ಫ್ಲೆಕ್ಸ್‌: ಹೆಚ್ಚಿದ ಹಾವಳಿ

ಶಿವಗಂಗಾ ಚಿತ್ತಯ್ಯ

ಚಳ್ಳಕೆರೆ: ಸರ್ಕಾರಿ– ಖಾಸಗಿ ಸಭೆ, ಸಮಾರಂಭ ಮುಂತಾದ ಕಾರ್ಯಕ್ರಮದ ಪ್ರಚಾರದ ಸಲುವಾಗಿ ನಗರದ ಮುಖ್ಯರಸ್ತೆಯ ಬದಿ ಎಲ್ಲೆಂದರಲ್ಲೆ ಕಟ್ಟುವ ಅನಧಿಕೃತ ಫ್ಲೆಕ್ಸ್‌ಗಳ ಹಾವಳಿ ದಿನ ದಿನಕ್ಕೂ ಹೆಚ್ಚುತ್ತಿದ್ದು, ಇದರಿಂದ ನಗರಸಭೆಯ ನಿರೀಕ್ಷಿತ ಆದಾಯ ಹಿನ್ನಡೆಯಾಗುತ್ತಿದೆ.

ಪೌರಾಡಳಿತ ನಿರ್ದೇಶಕರು ಮತ್ತು ಜಿಲ್ಲಾಧಿಕಾರಿ ಆದೇಶದ ಮೇರೆಗೆ ರಾಜಕೀಯ ಪಕ್ಷದ ಬಾವುಟ, ಬಂಟಿಗ್ಸ್‌, ರಾಜಕೀಯ ನಾಯಕರ ಭಾವಚಿತ್ರ ಹಾಗೂ ಇನ್ನು ಮುಂತಾದ ಫ್ಲೆಕ್ಸ್ ಕಟ್ಟುವ ವಿಚಾರದಲ್ಲಿ ನಗರಸಭೆ ಕಟ್ಟುನಿಟ್ಟಿನ ಕ್ರಮ ಕೈಗೊಂಡಿರುವುದು ರಾಜಕೀಯ ಪಕ್ಷಗಳ ಕೆಂಗಣ್ಣಿಗೆ ಗುರಿಯಾಗಿದೆ.

ನಗರ ಹಾಗೂ ಗ್ರಾಮೀಣ ಪ್ರದೇಶಗಳಲ್ಲಿ ಜರುಗುವ ಹಬ್ಬ, ಹರಿದಿನ, ಜಾತ್ರೆ, ಉತ್ಸವ, ಮದುವೆ, ನಾಮಕರಣ, ಜವುಳ, ಅಂಗಡಿ ಹಾಗೂ ಹೋಟೆಲ್ ಪ್ರಾರಂಭಿಸುವ ಸಂದರ್ಭ ಸಣ್ಣಪುಟ್ಟ ಸಾಮಾನ್ಯ ಕಾರ್ಯಕ್ರಮಗಳಿಗೂ ಮುಖ್ಯರಸ್ತೆ ಬದಿಯಲ್ಲಿ ಅನಧಿಕೃತವಾಗಿ ಫ್ಲೆಕ್ಸ್‌ ಹಾಕುವ ಪರಿಪಾಠ ಬೆಳೆಸಿಕೊಂಡಿದ್ದಾರೆ. ನಗರಸಭೆ ಸಿಬ್ಬಂದಿ ಹಾಗೂ ಸಾರ್ವಜನಿಕರು ಕಿತ್ತು ಹಾಕಬಾರದು ಎಂಬ ಕಾರಣಕ್ಕೆ ಫ್ಲೆಕ್ಸ್‌ಗಳಲ್ಲಿ ಪ್ರಭಾವಿ ಜನಪ್ರತಿನಿಧಿಗಳ ಭಾವಚಿತ್ರ ಹಾಕಿಸುವುದು ಸಾಮಾನ್ಯವಾಗಿದೆ.

ಫ್ಲೆಕ್ಸ್‌ ಕಟ್ಟಲು ಕೆಲವರಿಗೆ ಇಂತಿಷ್ಟು ಹಣಕ್ಕೆ ಗುತ್ತಿಗೆ ನೀಡುತ್ತಾರೆ. ನಗರದಲ್ಲಿ ಒಮ್ಮೆ ಕಟ್ಟಿದ ದೊಡ್ಡದೊಡ್ಡ ಫ್ಲೆಕ್ಸ್‌ಗಳು ಕನಿಷ್ಠ 20-30 ದಿನಗಳ ತನಕ ರಸ್ತೆ ಬದಿಯಲ್ಲಿ ರಾರಾಜಿಸುತ್ತಿರುತ್ತವೆ. ಅನಧಿಕೃತ ಫ್ಲೆಕ್ಸ್‌ ಅಳವಡಿಕೆಗೆ ಜನಪ್ರತಿನಿಧಿಗಳು ತೆರೆಮರೆಯಲ್ಲಿ ಕುಮ್ಮಕ್ಕು ನೀಡುತ್ತಾ ಬಂದಿದ್ದಾರೆ. ಹಾಗಾಗಿ ಇದರಿಂದ ಬರುವ ಆದಾಯ ಸಂಪೂರ್ಣ ಕುಸಿದಿದೆ.

ಚಿತ್ರದುರ್ಗ ನಗರದಲ್ಲಿ ಅನಧಿಕೃತ ಫ್ಲೆಕ್ಸ್‌ಗಳಿಗೆ ಕಡಿವಾಣ ಹಾಕಲಾಗುತ್ತಿದೆ. ಈಗಾಗಲೇ ತೆರವು ಕಾರ್ಯ ಪ್ರಾರಂಭಿಸಲಾಗಿದೆ. ಫ್ಲೆಕ್ಸ್‌ ಪ್ರಿಂಟಿಂಗ್‌ ಮಾಲೀಕರಿಗೆ ಜಾಗೃತಿ ಮೂಡಿಸಲಾಗಿದೆ. ನಗರಸಭೆ ಅನುಮತಿ ಇಲ್ಲದೆ ಫ್ಲೆಕ್ಸ್‌ ಮುದ್ರಣ ಮಾಡಿದರೆ ಕ್ರಮ ಖಚಿತ.

–ಶ್ರೀನಿವಾಸ್‌, ಪೌರಾಯುಕ್ತ, ಚಿತ್ರದುರ್ಗ

ಫ್ಲೆಕ್ಸ್‌ಗಳ ಹಾವಳಿಯಿಂದ ಜನರು ತೀವ್ರ ಸಮಸ್ಯೆ ಎದುರಿಸುತ್ತಿದ್ದಾರೆ. ರಸ್ತೆ ತಿರುವಿನಲ್ಲಿ ವಾಹನ ಸವಾರರು, ಆಟೊ ಚಾಲಕರು ಜೀವ ಕೈಯಲ್ಲಿಡಿದು ಮುಂದೆ ಸಾಗಬೇಕಾಗಿದೆ. ಸಂಬಂಧಪಟ್ಟವರು ಈ ಬಗ್ಗೆ ಕ್ರಮವಹಿಸಬೇಕಿದೆ.

–ಇಸ್ಮಾಯಿಲ್‌ ಜಬಿವುಲ್ಲಾ, ಆಟೊ ಚಾಲಕ, ಚಿತ್ರದುರ್ಗ

ಹಿರಿಯೂರಿನ ಅಂದ ಹಾಳುಮಾಡಿದ್ದ ಫ್ಲೆಕ್ಸ್‌ಗಳನ್ನು ತೆರವು ಮಾಡಿರುವುದು ಸಂತಸದ ಸಂಗತಿ. ಕೆಲವೊಮ್ಮೆ ರಸ್ತೆ ವಿಭಜಕದ ಸ್ಥಳದಲ್ಲಿ ಫ್ಲೆಕ್ಸ್‌ ಕಟ್ಟಿ ಅಪಘಾತಕ್ಕೆ ಕಾರಣವಾಗಿದ್ದೂ ಉಂಟು. ರಾಜಕೀಯ ಮುಖಂಡರ ನಡುವೆ ಗಲಭೆಯೂ ನಡೆದಿತ್ತು.

ಎಂ.ಓ.ಮಂಜುನಾಥ್‌, ಹಿರಿಯೂರು

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT