ಶನಿವಾರ, ಏಪ್ರಿಲ್ 1, 2023
25 °C
ಬರೆಯವ ಮಕ್ಕಳಲ್ಲಿ ಮಾಸ್ಕು, ಸ್ಯಾನಿಟೈಸರ್‌ ಜತೆಗೆ ಧೈರ್ಯವೂ ಇರಲಿ

ಎಸ್ಸೆಸ್ಸೆಲ್ಸಿ ಪರೀಕ್ಷೆ: ವಿಜಯೀಭವ, ಯಶಸ್ವಿಭವ...

ಸಂತೆಬೆನ್ನೂರು ಫೈಜ್ನಟ್ರಾಜ್ Updated:

ಅಕ್ಷರ ಗಾತ್ರ : | |

Prajavani

ನಾಳೆಯೇ ಹತ್ತನೇ ತರಗತಿ ವಾರ್ಷಿಕ ಪರೀಕ್ಷೆ. ಬಹುನಿರೀಕ್ಷಿತ ಘಟ್ಟ. ಕೊರೊನಾ ಸಂಕಷ್ಟದ ದಿನಗಳಲ್ಲಿ ಮೀನ–ಮೇಷ ಮಾಡಿ ಕೊನೆಗೂ ಪರೀಕ್ಷೆ ಬಂದೇ ಬಿಟ್ಟಿತು.

ಮಕ್ಕಳೇ ಪರೀಕ್ಷೆ ಕೇವಲ ಅಂಕಗಳಿಗಲ್ಲ, ನಮ್ಮೊಳಗಿನ ಚಿತ್ತಸ್ವಾಸ್ಥ್ಯ ಮತ್ತು ಜ್ಞಾನದ ಪರಿಧಿಯನ್ನು ನಾವೇ ಕಂಡುಕೊಳ್ಳಬೇಕಾದ ಸುವರ್ಣ ರಸನಿಮಿಷ!

ಕೇಂದ್ರ ಪರೀಕ್ಷೆ, ರಾಜ್ಯದ ಕೆಲ ಪರೀಕ್ಷೆಗಳು ರದ್ದಾಗಿವೆ. ಎಸ್ಸೆಸ್ಸೆಲ್ಸಿ ಪರೀಕ್ಷೆಯೂ ರದ್ದಾಗುತ್ತಾ? ಅಥವಾ ರದ್ದಾಗಲಿ ಅನ್ನುವ ತುಮುಲಗಳಿಗೆಲ್ಲಾ ತೆರೆ ಬಿದ್ದಿದೆ. ಸರ್ಕಾರ ನಿಮ್ಮ ಶ್ರೇಯೋಭಿಲಾಷೆಗೆ ತಕ್ಕಂತೆ ಸರಳ, ಭಯರಹಿತ, ಮಾರ್ಗದರ್ಶಿ, ಸ್ನೇಹಮಯಿ ಪರೀಕ್ಷೆಗೆ ಮುಂದಾಗಿರುವುದು ಮೆಚ್ಚಬೇಕಾದ ವಿಚಾರ.

ಒಳಪ್ರವೇಶ ಪಡೆದು, ಕುಳಿತು ಎದ್ದು ಬಂದರೆ ಸಾಕು ಉತ್ತೀರ್ಣ ಆಗಬಹುದೆಂಬ ಸಣ್ಣ ಭಾವನೆ ತೊರೆದು ಇದುವರೆಗೂ ಓದಿದ, ಅರ್ಥೈಸಿಕೊಂಡ, ಚಂದನ ವಾಹಿನಿ ಮೂಲಕ ಕಲಿತ, ಶಾಲೆಯ ಗುರುಗಳ ಮಾರ್ಗದರ್ಶನದಲ್ಲಿ ಅರಿತ ಅಂಶಗಳನ್ನು ಮನನ ಮಾಡಿಕೊಂಡು ಸರಿಯಾದ ಉತ್ತರ ತುಂಬಬೇಕಿದೆ.

ಈ ಪರೀಕ್ಷೆಯೂ ಯಥಾ ವರ್ಷದ ಪರೀಕ್ಷೆಯಂತೆ ಅಲ್ಲ ಅನ್ನುವ ಜ್ಞಾನ ಇರಬೇಕಾದ್ದು ಕಡ್ಡಾಯ. ‘ಬಹು ಆಯ್ಕೆ, ಹೇಗಾದರೂ ಗುಂಡು ಸುತ್ತುವ ಬಿಡಿ’ ಅನ್ನುವ ಉಡಾಫೆ ಬಿಟ್ಟು ಜಾಣತನದ, ಜ್ಞಾನವೃದ್ಧಿಯ, ಅಧಿಕ ಅಂಕ ಪಡೆಯುವತ್ತ ನಿಮ್ಮ ಚಿತ್ತ ಇರಲಿ. ಯಾವುದೇ ಆತಂಕ, ಭಯ, ನಿರಾಸಕ್ತಿ ಇಟ್ಟುಕೊಂಡು ಪರೀಕ್ಷೆಯ ಕೇಂದ್ರಕ್ಕೆ ಹೋಗಬೇಡಿ. ಒಂದು ನಗು, ಆತ್ಮವಿಶ್ವಾಸ, ದೃಢತೆ, ಎಲ್ಲಾ ಗೆಲ್ಲುವ ದಿಟ್ಟತನ ನಿಮ್ಮಲ್ಲಿರಲಿ.

ಎಲ್ಲಕ್ಕಿಂತ ಮುಖ್ಯವಾಗಿ ನಿಮ್ಮ ಆರೋಗ್ಯ ನಿಮ್ಮ ಕೈಲಿದೆ. ಕೊರೊನಾ ಮಾಯವಾಗಿಲ್ಲ. ಮಾಸ್ಕ್‌, ಸ್ಯಾನಿಟೈಸರ್, ಅಂತರ, ಕುಡಿಯುವ ನೀರು, ಕರವಸ್ತ್ರ ಮತ್ತು ಧೈರ್ಯ ನಿಮ್ಮ ಜೊತೆಗೆ ಇರಲಿ.

ಈ ಹಂತ ದಾಟಿ ಹೋದಾಗ ಪರೀಕ್ಷೆ ಬರೆದು ಬಂದವರೆಂಬ ಸ್ವಾಭಿಮಾನ ಎದೆಯ ಮೇಲೆ ಪದಕದಂತೆ ಮೆರೆಯುತ್ತಿರಲಿ. ಮುಂದಿನ ಶೈಕ್ಷಣಿಕ ಹೆಜ್ಜೆಗೆ ಇದು ತುಂಬಾ ಪ್ರಾಮುಖ್ಯದ ಏಣಿ. ಪರೀಕ್ಷೆ ಇಲ್ಲದೇ ಪಾಸಾಗುವುದು ಅಂತಹ ಮಹತ್ವದ ಸಾಧನೆ ಅಲ್ಲ ಎಂಬುದು ನಿಮಗೂ ಗೊತ್ತಿದೆ. ಇಡೀ ವರ್ಷ ಓದಿದ್ದೀರಿ, ನೂರಾರು ಕನಸುಗಳನ್ನು ಕಟ್ಟಿಕೊಂಡಿದ್ದೀರಿ, ಅಪ್ಪ–ಅಮ್ಮನ ಇರಾದೆಗೆ ಧೈರ್ಯ ತುಂಬುವವರಿದ್ದೀರಿ... ಇದಕ್ಕೆಲ್ಲಾ ಪರೀಕ್ಷೆ ಉತ್ತರ ಹೊರತುಪಡಿಸಿ ಬೇರೆ ದಾರಿ ಇಲ್ಲ.

ನಿಮಗಾಗಿ ಸರ್ಕಾರ ಅಪಾರ ಕಾಳಜಿ, ಆಸಕ್ತಿ ವಹಿಸಿ, ನಿಮ್ಮ ಹಿತದೃಷ್ಟಿಯಿಂದ ಕಣ್ಣಲ್ಲಿ ಕಣ್ಣಿಟ್ಟು ಪರೀಕ್ಷೆಯ ವ್ಯವಸ್ಥೆ ಮಾಡಿದೆ. ಸಾವಿರಾರು ಶಿಕ್ಷಕರು ನಿಮಗಾಗಿ, ನಿಮ್ಮ ಗೆಲುವಿಗೆ ಕಂಕಣಬದ್ಧರಾಗಿ ನಿಂತಿದ್ದಾರೆ.

ಹೋಗಿ ಬನ್ನಿ ಮಕ್ಕಳೇ, ನಾಳೆ ದಿನ ನಿಮ್ಮದೇ... ಗೆಲುವು ನಿಮ್ಮದೇ... ಆರೋಗ್ಯ ಪ್ರಾಪ್ತಿ, ವಿಜಯಿ ಪ್ರಾಪ್ತಿ... ಸಕಲ ಶ್ರೇಯಸ್ಸು ಪ್ರಾಪ್ತಿ ರಸ್ತು!

(ಲೇಖಕರು ಸಾಹಿತಿ, ಸಂತೆಬೆನ್ನೂರು ಕರ್ನಾಟಕ ಪಬ್ಲಿಕ್ ಸ್ಕೂಲ್ ಶಿಕ್ಷಕರು)

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.