ಶನಿವಾರ, 27 ಜುಲೈ 2024
×
ADVERTISEMENT
ಈ ಕ್ಷಣ :
ADVERTISEMENT

ಪರೀಕ್ಷಾ ಲೋಪದೋಷ: ಉನ್ನತ ಮಟ್ಟದ ಸಮಿತಿ ರಚನೆಗೆ ಆಗ್ರಹ

Published 24 ಮೇ 2024, 13:30 IST
Last Updated 24 ಮೇ 2024, 13:30 IST
ಅಕ್ಷರ ಗಾತ್ರ

ದಾವಣಗೆರೆ: ‘ಎಸ್ಸೆಸ್ಸೆಲ್ಸಿ ಪರೀಕ್ಷೆ-1 ಹಾಗೂ 5, 8, 9 ಹಾಗೂ 11ನೇ ತರಗತಿಗಳ ಪರೀಕ್ಷೆ ಕಾರ್ಯದಲ್ಲಿನ ಲೋಪದೋಷಗಳ ಕುರಿತ ತನಿಖೆ ನಡೆಸಬೇಕು. ಇದಕ್ಕಾಗಿ ಉನ್ನತ ಮಟ್ಟದ ಅಧಿಕಾರಿಗಳ ಸಮಿತಿ ರಚಿಸಬೇಕು’ ಎಂದು ವಿಧಾನ ಪರಿಷತ್ ಸದಸ್ಯ ಎಸ್.ವಿ. ಸಂಕನೂರ ರಾಜ್ಯ ಸರ್ಕಾರವನ್ನು ಒತ್ತಾಯಿಸಿದರು.

‘ಎಸ್‌ಎಸ್‌ಎಲ್‌ಸಿ ಹಾಗೂ ಪಿಯುಸಿಗೆ ಮೂರು ಪರೀಕ್ಷೆಗಳನ್ನು ನಡೆಸುವ ತಪ್ಪು ನಿರ್ಧಾರವನ್ನು ಸರ್ಕಾರ ಕೈಗೊಂಡಿದ್ದು, ಇದಕ್ಕೆ ವಿದ್ಯಾರ್ಥಿಗಳು ಹಾಗೂ ಪೋಷಕರ ಬೇಡಿಕೆ ಇತ್ತೇ ಎಂದು ಪ್ರಶ್ನಿಸಿದ ಅವರು ಶಿಕ್ಷಣ ಸಚಿವ ಮಧು ಬಂಗಾರಪ್ಪ ಯಾರ ಒತ್ತಡಕ್ಕೆ ಮಣಿದು ಈ ನಿರ್ಧಾರ ಕೈಗೊಂಡರು ಎಂಬುದನ್ನು ಸ್ಪಷ್ಟಪಡಿಸಬೇಕು. ಎಸ್‌ಎಸ್‌ಎಲ್‌ಸಿ ಪರೀಕ್ಷೆಯಲ್ಲಿ ನಕಲು ತಡೆಗೆ ಈ ಬಾರಿ ವೆಬ್‌ಕ್ಯಾಸ್ಟಿಂಗ್ ವ್ಯವಸ್ಥೆ ಜಾರಿಗೊಳಿಸಿದ್ದು ಸರಿ. ಆದರೆ ಈ ಸಂಬಂಧ ಶಾಲಾ ಆಡಳಿತ ಮಂಡಳಿ, ಶಿಕ್ಷಕರು, ವಿದ್ಯಾರ್ಥಿಗಳನ್ನು ವಿಶ್ವಾಸಕ್ಕೆ ಪಡೆಯಲಾಗಿಲ್ಲ’ ಎಂದು ಶುಕ್ರವಾರ ಸುದ್ದಿಗೋಷ್ಠಿಯಲ್ಲಿ ಅಸಮಾಧಾನ ವ್ಯಕ್ತಪಡಿಸಿದರು.

‘ಈ ಬಾರಿ ಫಲಿತಾಂಶ ಶೇ 43ರಷ್ಟು ಆಗಿದ್ದರ ಹಿನ್ನೆಲೆಯಲ್ಲಿ ಟೀಕೆ ಎದುರಾಗುತ್ತದೆ ಎಂದು ಗ್ರೇಸ್ ಮಾರ್ಕ್ಸ್‌ಗಳನ್ನು ನೀಡಿ ಫಲಿತಾಂಶದ ಪ್ರಮಾಣವನ್ನು ಶೇ 73.40ಕ್ಕೆ ಹೆಚ್ಚಿಸಲಾಯಿತು. ಇದಕ್ಕೆ ಶಿಕ್ಷಣ ತಜ್ಞರ ಅಭಿಪ್ರಾಯ ನೀಡಲಾಗಿತ್ತೆ? ಯಾರ ಒತ್ತಡದ ಮೇಲೆ ಸರ್ಕಾರ ಈ ಕ್ರಮ ಕೈಗೊಂಡಿದೆ’ ಎಂಬುದನ್ನು ಬಹಿರಂಗಪಡಿಸಬೇಕೆಂದು ಆಗ್ರಹಿಸಿದರು.

‘5,8, 9 ಹಾಗೂ 11ನೇ ತರಗತಿಗೆ ಮೊದಲ ಬಾರಿಗೆ ಪರೀಕ್ಷಾ ಮಂಡಳಿಯಿಂದಲೇ ಪರೀಕ್ಷೆ ನಡೆಸಿದ್ದಕ್ಕೆ ನಮ್ಮ ವಿರೋಧವಿಲ್ಲ. ಶಿಕ್ಷಕರು, ಶಿಕ್ಷಕ ಸಂಘಟನೆಗಳು, ಆಡಳಿತ ಮಂಡಳಿಗೆ ಈ ಬಗ್ಗೆ ಮನವರಿಕೆ ಮಾಡಲಾಗಿರಲಿಲ್ಲ. ಹೀಗಾಗಿ ಈ ವಿಚಾರ ಸುಪ್ರೀಂಕೋರ್ಟ್ ಮಟ್ಟಿಲೇರಿದೆ. ಪರೀಕ್ಷೆಯ ಫಲಿತಾಂಶವನ್ನು ಪ್ರಕಟಿಸದಿರಲು ಕೋರ್ಟ್ ತೀರ್ಪು ನೀಡಿದೆ.

‘1 ಕೋಟಿ ವಿದ್ಯಾರ್ಥಿಗಳು, ಪಾಲಕರಿಗೆ ಇದು ತಲೆನೋವಾಗಿದೆ. ಇದೀಗ ವಿದ್ಯಾರ್ಥಿಗಳು ಕಿರುಪರೀಕ್ಷೆಯಲ್ಲಿ ಪಡೆದ ಅಂಕಗಳ ಮಾನದಂಡದ ಮೇಲೆ ತೇರ್ಗಡೆ ನಿರ್ಧಾರ ಮಾಡಲು ಹೊರಟಿದೆ. ಶಿಕ್ಷಣ ಸಚಿವರಿಗೆ ಇಲಾಖೆಯ ಆಗುಹೋಗುಗಳ ಬಗ್ಗೆ ಕಾಳಜಿ ಇಲ್ಲವಾಗಿದೆ’ ಎಂದು ದೂರಿದರು.

‘ಸಿದ್ದರಾಮಯ್ಯ ನೇತೃತ್ವದ ರಾಜ್ಯ ಸರ್ಕಾರ ಶಿಕ್ಷಣ ಇಲಾಖೆಯಲ್ಲಿ ಅನೇಕ ತಪ್ಪುಗಳನ್ನು ಕೈಗೊಂಡು ಶೈಕ್ಷಣಿಕ ಕ್ಷೇತ್ರವನ್ನೇ ಹಾಳು ಮಾಡಿದೆ. ಅಧಿಕಾರ ವಹಿಸಿದ ಕೆಲವೇ ತಿಂಗಳಲ್ಲೇ 6ರಿಂದ 10ನೇ ತರಗತಿವರೆಗೆ ಇದ್ದ 10 ಪಾಠಗಳನ್ನು ತೆಗೆದುಹಾಕಿತು. ಅಲ್ಲದೆ ರಾಷ್ಟ್ರೀಯ ಶಿಕ್ಷಣ ನೀತಿ ರದ್ದುಪಡಿಸಿ ರಾಜ್ಯದಲ್ಲಿ ಎಸ್‌ಇಪಿ ಜಾರಿಗೊಳಿಸುವ ಮೂಲಕ ಕಾಂಗ್ರೆಸ್  ಬಿಜೆಪಿ ಮೇಲೆ ಸೇಡಿನ ತೀರ್ಮಾನಗಳನ್ನು ಕೈಗೊಂಡಿತು’ ಎಂದು ಆರೋಪಿಸಿದರು.

‘ಕಾಂಗ್ರೆಸ್ ಸಚಿವರ ಒಡೆತನದ ಶಾಲೆಗಳಲ್ಲಿ ಶ್ರೀಮಂತರ ಮಕ್ಕಳಿಗೆ ಎನ್‌ಇಪಿ ಜಾರಿಗೊಳಿಸಲಾಗಿದೆ. ಆದರೆ ಬಡವರ ಮಕ್ಕಳಿಗೆ ಇದು ಸಿಗುತ್ತಿಲ್ಲ. ರಾಜ್ಯ ಸರ್ಕಾರ ಇಬ್ಬಗೆಯ ನೀತಿ ಅನುಸರಿಸುತ್ತಿದೆ ಎಂದು ವಿಧಾನ ಪರಿಷತ್ ಸದಸ್ಯ ಅರುಣ್ ಶಹಾಪೂರ್ ದೂರಿದರು.

‘ಆಗ್ನೇಯ ಶಿಕ್ಷಕರ ಕ್ಷೇತ್ರದಿಂದ ವಿಧಾನಪರಿಷತ್‌ಗೆ ನಡೆಯಲಿರುವ ಚುನಾವಣೆಗೆ ಮೈತ್ರಿ ಅಭ್ಯರ್ಥಿಯಾಗಿ ಸ್ಪರ್ಧಿಸಿರುವ  ವೈ.ಎ. ನಾರಾಯಣಸ್ವಾಮಿ ಅವರನ್ನು ಬೆಂಬಲಿಸಬೇಕು’ ಎಂದು ಮನವಿ ಮಾಡಿದರು.

ಬಿಜೆಪಿ ಜಿಲ್ಲಾ ಘಟಕದ ಅಧ್ಯಕ್ಷ ಎನ್.ರಾಜಶೇಖರ್, ಧನಂಜಯ ಕಡ್ಲೇಬಾಳ್, ಯಶವಂತರಾವ್ ಜಾಧವ್, ಎಚ್.ಎನ್. ಶಿವಕುಮಾರ್, ಮಂಜು ಪೈಲ್ವಾನ್, ವಿಶ್ವಾಸ್ ಇದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT