ಶನಿವಾರ, 27 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಯುವರೈತರಿಂದ ಸಂಘಕ್ಕೆ ಬಲ

ಹೊನ್ನಾಳಿಯಲ್ಲಿ ರೈತ ಹುತಾತ್ಮ ದಿನಾಚರಣೆಯಲ್ಲಿ ಪವಿತ್ರ ರಾಮಯ್ಯ
Last Updated 12 ಜೂನ್ 2022, 3:21 IST
ಅಕ್ಷರ ಗಾತ್ರ

ಹೊನ್ನಾಳಿ: ರೈತ ಸಂಘಟನೆಗಳು ಬಲಗೊಳ್ಳಬೇಕಾದರೆ ಯುವ ರೈತರನ್ನು ಸೆಳೆಯುವ ಅವಶ್ಯಕತೆ ಇದೆ ಎಂದು ಭದ್ರಾ ಅಚ್ಚುಕಟ್ಟು ಪ್ರದೇಶಾಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷೆ ಪವಿತ್ರ ರಾಮಯ್ಯ ತಿಳಿಸಿದರು.

ಇಲ್ಲಿನ ಹಿರೇಕಲ್ಮಠದಲ್ಲಿ ಹೊನ್ನಾಳಿ ಮತ್ತು ನ್ಯಾಮತಿ ಅವಳಿ ತಾಲ್ಲೂಕಿನ ಅಖಂಡ ಕರ್ನಾಟಕ ರೈತ ಸಂಘ, ಕರ್ನಾಟಕ ರಾಜ್ಯ ರೈತ ಸಂಘ ಸಹಯೋಗದಲ್ಲಿ ರೈತ ಸಂಘದ ಸಂಸ್ಥಾಪಕ ಅಧ್ಯಕ್ಷರಾದ ಎಚ್.ಎಸ್. ರುದ್ರಪ್ಪ, ಎನ್‌.ಡಿ. ಸುಂದರೇಶ್, ಪ್ರೊಫೆಸರ್ ಎನ್‌. ನಂಜುಂಡಸ್ವಾಮಿ, ಕೆ.ಎಸ್. ಪುಟ್ಟಣ್ಣಯ್ಯ, ಬಾಬುಗೌಡ ಪಾಟೀಲ್, ಕೃಷಿಕ ಸಮಾಜದ ಮಾಜಿ ಅಧ್ಯಕ್ಷ ಕುಂದೂರು ಹನುಮಂತಪ್ಪ ಅವರ ಸ್ಮರಣಾರ್ಥ ಹಾಗೂ ರೈತ ಹುತಾತ್ಮ ದಿನಾಚರಣೆಯ ಸಮಾರಂಭ ಉದ್ಘಾಟಿಸಿ ಅವರು ಮಾತನಾಡಿದರು.

ರೈತ ಸಂಘಟನೆ ಹೆಸರಿನಲ್ಲಿ ಭ್ರಷ್ಟಾಚಾರ ನಡೆಸುವವರಿಗೆ ಕಡಿವಾಣ ಹಾಕಬೇಕಾಗಿದೆ. ರೈತರ ಬದಕನ್ನು ಹಸನಾಗಿಸಲು ರೈತ ಸಂಘಟನೆಗಳು ಬಲಗೊಳ್ಳುವ ಅವಶ್ಯಕತೆ ಇದೆ. ರೈತ ಸಂಘಟನೆಗೆ ದುಡಿದ ಹುತಾತ್ಮರ ದಿನಾಚರಣೆ ಆಚರಿಸುವ ಮೂಲಕ ರೈತ ಸಂಘಟನೆಗಳಿಗೆ ಶಕ್ತಿ ಹಾಗೂ ಬಲ ತರಬೇಕಿದೆ ಎಂದರು.

ರೈತ ಸಂಘಕ್ಕೆ ಕೋಡಿಹಳ್ಳಿ ಚಂದ್ರಶೇಖರ್ ಅವರು ಒಂದು ಕಪ್ಪುಚುಕ್ಕಿ. ಅವರು ನಡೆದುಕೊಂಡ ರೀತಿ ಅತ್ಯಂತ ನೋವಿನ ಸಂಗತಿ. ಹಿಂದೆ ರೈತ ಸಂಘದ ಪ್ರತಿಭಟನೆಗಳು ನಡೆಯುತ್ತವೆ ಎಂದರೆ ಅಧಿಕಾರಿ ವರ್ಗ ಹೆದರಿ ಕೈ ಕಟ್ಟಿಕೊಂಡು ನಿಲ್ಲುತ್ತಿತ್ತು. ನಂಜುಂಡಸ್ವಾಮಿ, ಸುಂದರೇಶ್, ಕೆ.ಎಸ್. ಪುಟ್ಟಣ್ಣಯ್ಯ ಅವರ ಕಾರಣ ಸಂಘಟನೆಗೆ ಅಂತಹ ಶಕ್ತಿ ಇತ್ತು. ಇಂದು ರೈತಸಂಘಗಳು ಒಡೆದು ತನ್ನ ಶಕ್ತಿ ಕಳೆದುಕೊಂಡಿವೆ. ಎಲ್ಲಾ ರೈತಸಂಘಗಳು ಒಗ್ಗೂಡಬೇಕು ಎಂದರು.

ರೈತ ಸಂಘಟನೆಯ ರಾಜ್ಯ ಪ್ರಧಾನ ಕಾರ್ಯದರ್ಶಿ ಮಂಡ್ಯ ಕೆ. ಸುಧೀರ್ ಕುಮಾರ್ ಮಾತನಾಡಿ, ‘ತಾಲ್ಲೂಕು ಆಡಳಿತ ಕೂಡಲೇ ಬಗರ್‌ಹುಕುಂ ಸಾಗುವಳಿದಾರರಿಗೆ ಹಕ್ಕುಪತ್ರ ಕೊಡಬೇಕು’ ಎಂದು ಆಗ್ರಹಿಸಿದರು.

ರೈತ ತಾನು ಬೆಳೆದ ಬೆಳೆಗಳಿಗೆ ಬೆಲೆಯನ್ನು ನಿರ್ಧರಿಸುವ ಅವಕಾಶವನ್ನು ಸರ್ಕಾರ ಕೊಡಬೇಕು. ಹೈನುಗಾರಿಕೆಗೆ ಮುಂದಾಗಿರುವ ರೈತರನ್ನು ಪ್ರೋತ್ಸಾಹಿಸಲು ಹಾಲಿನ ದರ ಹೆಚ್ಚಿಸಬೇಕು ಎಂದು ಆಗ್ರಹಿಸಿದರು.

ತಾಲ್ಲೂಕು ರೈತ ಸಂಘದ ಅಧ್ಯಕ್ಷ ಅರಬಗಟ್ಟೆ ಕೆ.ಸಿ. ಬಸಪ್ಪ, ‘ಸಕಾಲದಲ್ಲಿ ರೈತರಿಗೆ ಬೆಳೆ ವಿಮೆ ನೀಡುವುದರ ಜೊತೆಗೆ ರೈತರಿಗೆ ಅನುಕೂಲವಾಗುವಂತೆ ನಮ್ಮ ಹೊಲ ನಮ್ಮ ದಾರಿಗಳ ಬಗ್ಗೆ ತ್ವರಿತವಾಗಿ ಕ್ರಮ ಕೈಗೊಳ್ಳಬೇಕು’ ಎಂದು ಮನವಿ ಮಾಡಿದರು.

ಹಿರೇಕಲ್ಮಠದ ಚನ್ನಮಲ್ಲಿಕಾರ್ಜನ ಸ್ವಾಮೀಜಿ ಸಾನ್ನಿಧ್ಯ ವಹಿಸಿದ್ದರು. ಸಮಾರಂಭದಲ್ಲಿ ರಾಜ್ಯ ರೈತ ಸಂಘದ ಉಪಾಧ್ಯಕ್ಷ ದೊಡ್ಡೇರೆಹಳ್ಳಿ ನಾಗರಾಜಪ್ಪ, ತಾಲ್ಲೂಕು ಗೌರವಾಧ್ಯಕ್ಷ ಹಿರೇಮಠ ಬಸವರಾಜಪ್ಪ, ರಾಜ್ಯ ಕಾರ್ಯದರ್ಶಿ ಎನ್.ಬಿ. ಮುರುಗೇಂದ್ರಯ್ಯ, ಜಿಲ್ಲಾ ಅಧ್ಯಕ್ಷ ಅಂಜನಪ್ಪ ಪೂಜಾರ್, ಸುಂಕದಕಟ್ಟೆ ಕರಿಬಸಪ್ಪ, ಎಚ್.ಬಿ. ಬಸವರಾಜಪ್ಪ ಬಣಕಾರ, ನ್ಯಾಮತಿ ತಾಲ್ಲೂಕು ಅಧ್ಯಕ್ಷ ಬೆಳಗುತ್ತಿ ಉಮೇಶ್, ಎಚ್.ಎ. ಉಮಾಪತಿ, ಮೈಸೂರು ಮಹಾದೇವಪ್ಪ, ಕುಮಾರಸ್ವಾಮಿ, ಸುಧೀರ್, ವಿಜಯಪುರದ ಅರವಿಂದ ಕುಲಕರ್ಣಿ, ಹುಣಸೂರು ಜಯರಾಂ, ರಾಯಚೂರು ಶಾಮ್‍ಸುಂದರ್ ಕಿರ್ತಿ, ಹುಬ್ಬಳ್ಳಿಯ ಯು.ಡಿ ಒಡೆಯರ್ ಸೇರಿ ನೂರಾರು ರೈತರು ಉಪಸ್ಥಿತರಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT