ಭಾನುವಾರ, 5 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ದಾವಣಗೆರೆ: ಶಿವಾನಂದ ಪಾಟೀಲ ವಜಾಕ್ಕೆ ರೈತ ಒಕ್ಕೂಟ ಆಗ್ರಹ

Published 27 ಡಿಸೆಂಬರ್ 2023, 7:37 IST
Last Updated 27 ಡಿಸೆಂಬರ್ 2023, 7:37 IST
ಅಕ್ಷರ ಗಾತ್ರ

ದಾವಣಗೆರೆ: ‘ರೈತರನ್ನು ನಿಂದಿಸಿ ಅವಹೇಳನಕಾರಿ ಹೇಳಿಕೆ ನೀಡಿರುವ ಸಚಿವ ಶಿವಾನಂದ ಪಾಟೀಲ ಅವರನ್ನು ಸಚಿವ ಸಂಪುಟದಿಂದ ವಜಾಗೊಳಿಸಬೇಕು’ ಎಂದು ರೈತ ಒಕ್ಕೂಟ ಆಗ್ರಹಿಸಿತು.

‘₹ 5 ಲಕ್ಷದ ಪರಿಹಾರ ಆಸೆಗಾಗಿ ರೈತರು ಆತ್ಮಹತ್ಯೆ ಮಾಡಿಕೊಳ್ಳುವುದು ಹೆಚ್ಚಾಗಿದೆ ಎಂದು ಹೇಳುವ ಮೂಲಕ ರೈತರನ್ನು ಹಂಗಿಸಿದ್ದರು. ಹೈದರಾಬಾದ್‌ನಲ್ಲಿ ನಡೆದ ಸಮಾರಂಭವೊಂದರಲ್ಲಿ ನೋಟುಗಳನ್ನು ತೂರುತ್ತಿರುವ ವಿಡಿಯೊ ಹರಿದಾಡಿತ್ತು. ರೈತರನ್ನು ಕೀಳಾಗಿ ಕಾಣುವುದು ಇವರ ಸಂಸ್ಕೃತಿಯಾಗಿದೆ’ ಎಂದು ಒಕ್ಕೂಟದ ಮುಖಂಡ ಬಿ.ಎಂ. ಸತೀಶ್ ಕೊಳೇನಹಳ್ಳಿ ಮಂಗಳವಾರ ಪತ್ರಿಕಾಗೋಷ್ಠಿಯಲ್ಲಿ ಆರೋಪಿಸಿದರು.

‘ರಾಜ್ಯದಲ್ಲಿ 123 ವರ್ಷಗಳ ಬಳಿಕ ಕಂಡರಿಯದ ಭೀಕರ ಬರ ತಲೆದೋರಿವೆ ಎಂದು ಸಮೀಕ್ಷೆಗಳು ಹೇಳುತ್ತಿವೆ. 48.17 ಲಕ್ಷ ಹೆಕ್ಟೇರ್ ಪ್ರದೇಶದಲ್ಲಿ ಬೆಳೆ ಹಾನಿಯಾಗಿದೆ. ಆದರೂ ರಾಜ್ಯ ಸರ್ಕಾರ ಬರ ಪರಿಹಾರ ನೀಡಿಲ್ಲ. ರೈತರ ಬಗ್ಗೆ ಸರ್ಕಾರಕ್ಕೆ ಕಾಳಜಿ ಇಲ್ಲ. ಇದು ಸರ್ಕಾರದ ಅಹಂಕಾರದ ಪರಮಾವಧಿ ತೋರುತ್ತದೆ’ ಎಂದು ಕಿಡಿಕಾರಿದರು.

‘ರಾಜ್ಯ ಸರ್ಕಾರ ವಿಳಂಬ ನೀತಿ ಬದಿಗಿರಿಸಿ ‌ತತ್‌ಕ್ಷಣ ಬೆಳೆ ಪರಿಹಾರ ನೀಡಬೇಕು. ಬರಗಾಲದಿಂದ ಹುಲ್ಲಿನ ಬೆಲೆ ದುಬಾರಿಯಾಗಿ ರೈತರು ಸಂಕಷ್ಟಕ್ಕೆ ಸಿಲುಕಿದ್ದು, ಜಾನುವಾರುಗಳನ್ನು ಸಾಕುವುದು ಕಷ್ಟವಾಗಿದೆ. ಆದ್ದರಿಂದ ಮೇವಿನ ಕಿಟ್ ವಿತರಣೆ ಮಾಡಿ ಅಭಾವ ನೀಗಿಸಬೇಕು’ ಎಂದು ಆಗ್ರಹಿಸಿದರು.

‘ಶಿವಾನಂದ ಪಾಟೀಲ ಅವರನ್ನು ಕೇವಲ ಸಚಿವ ಸ್ಥಾನದಿಂದಷ್ಟೇ ವಜಾಗೊಳಿಸುವುದಲ್ಲ. ಬದಲಾಗಿ ಶಾಸಕ ಸ್ಥಾನದಿಂದಲೂ ವಜಾಗೊಳಿಸಬೇಕು. ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ತಕ್ಷಣ ಅವರನ್ನು ವಜಾ ಮಾಡಿದರೆ ಬೆಲೆ ಸಿಗುತ್ತದೆ’ ಎಂದು ರೈತ ಮುಖಂಡ ಬೆಳವನೂರು ನಾಗೇಶ್ವರರಾವ್ ಹೇಳಿದರು.

‘ರಾಜ್ಯ ಸರ್ಕಾರ ರೈತರನ್ನು ಕಡೆಗಣಿಸುತ್ತಿರುವುದು ಸರಿಯಾದ ಬೆಳವಣಿಗೆಯಲ್ಲ. ಮುಖ್ಯಮಂತ್ರಿಗಳು ಒಂದು ವಾರದೊಳಗೆ ರೈತರಿಗೆ ಬೆಳೆನಷ್ಟ ಪರಿಹಾರ ನೀಡದಿದ್ದರೆ ರಾಜ್ಯದಾದ್ಯಂತ ಉಗ್ರ ಹೋರಾಟ ನಡೆಸಬೇಕಾಗುತ್ತದೆ’ ಎಂದು ಎಚ್ಚರಿಕೆ ನೀಡಿದರು.

‘ರೈತರು ಬೆಳೆ ಬೆಳೆಯದಿದ್ದರೆ ಸಚಿವ ಶಿವಾನಂದ ಪಾಟೀಲ ಅವರ ಪರಿಸ್ಥಿತಿ ಏನಾಗಬಹುದು ಎಂದು ಊಹಿಸಲಿ. 10 ವರ್ಷಗಳ ಕಾಲ ಬರ ಬಂದರೂ ಅವರಿಗೆ ಊಟ ಹಾಕುವ ಶಕ್ತಿ ರೈತ ಸಮುದಾಯಕ್ಕೆ ಇದೆ. 5 ವರ್ಷ ಇಡೀ ಸಚಿವ ಸಂಪುಟಕ್ಕೆ ‌‌ಅಕ್ಕಿ, ರೊಟ್ಟಿ, ಚಟ್ನಿ ಪೂರೈಸುತ್ತೇವೆ. ಕೂಡಲೇ ಹೇಳಿಕೆ ವಾಪಸ್ ಪಡೆಯಬೇಕು’ ಎಂದು ಮುಖಂಡ ಧನಂಜಯ ಕಡ್ಲೇಬಾಳು ಒತ್ತಾಯಿಸಿದರು.

ಎನ್. ರಾಜಶೇಖರ್, ಆರನೇಕಲ್ ವಿಜಯಕುಮಾರ್, ವಾಸನ ಬಸವರಾಜಪ್ಪ, ಚಿಕ್ಕಬೂದಿಹಾಳ್ ಭಗತ್‌ಸಿಂಗ್, ಕಲ್ಲಪ್ಪ ಮತ್ತಿತರರು ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT