ಮಲೇಬೆನ್ನೂರು: ಭದ್ರಾ ನಾಲೆಯ ಅಚ್ಚುಕಟ್ಟು ವ್ಯಾಪ್ತಿಯ ಕೊನೆಯ ಭಾಗದ ರೈತರು ಸಮರ್ಪಕ ನಾಲೆ ನೀರು ಪೂರೈಸಲು ಆಗ್ರಹಿಸಿ ಮಂಗಳವಾರ ಕರ್ನಾಟಕ ನೀರಾವರಿ ನಿಗಮದ 3ನೇ ವಿಭಾಗೀಯ ಕಚೇರಿ ಎದುರು ಧರಣಿ ನಡೆಸಿದರು.
ನಾಲೆ ನೀರಿನ ಆಂತರಿಕ ಸರದಿ
ಯಂತೆ ನಾಲೆ ನೀರು ಹರಿದ ಬರುತ್ತಿಲ್ಲ. ನಾಟಿ ಕಾರ್ಯ ಮುಗಿದ ನಂತರ ಭತ್ತದ ಗದ್ದೆ ನೀರಿಲ್ಲದೇ ಒಣಗಿ ಬಿರುಕು ಮೂಡಿವೆ.
ನಿಗದಿತ ಪ್ರಮಾಣದಲ್ಲಿ ಮೇಲ್ಭಾಗದಿಂದ ನೀರು ಹರಿದು ಬರುತ್ತಿಲ್ಲ. ನಾಲೆ ನೀರಿನ ಮಾಪಕ ವ್ಯವಸ್ಥೆ ಸರಿಯಿಲ್ಲ. ಕಡಿಮೆ ಪ್ರಮಾಣದಲ್ಲಿ ನೀರು ಹರಿದು ಬರ್ತಿದೆ. ಅಧಿಕಾರಿಗಳು ಸಮರ್ಪಕವಾಗಿ ಕೆಲಸ ಮಾಡುತ್ತಿಲ್ಲ ಎಂದು ವಾಗ್ದಾಳಿ ನಡೆಸಿ ಹರಿಹಾಯ್ದ ಆಕ್ರೋಶ ವ್ಯಕ್ತಪಡಿಸಿ ಕಚೇರಿಗೆ ಬೀಗ ಹಾಕಿದರು. ಉಪಸ್ಥಿತ ಪೊಲೀಸರು ಪರಿಸ್ಥಿತಿ ನಿಯಂತ್ರಿಸಿದರು.
ಕಾರ್ಯಪಾಲಕ ಎಂಜಿನಿಯರ್‌ಗೆ ಸಮಸ್ಯೆ ಮನವರಿಕೆ ಮಾಡಿಕೊಟ್ಟಿದ್ದೇವೆ, ಆದರೆ ಇಂದು ಶಿವಮೊಗ್ಗದ ಸಭೆ ಹೋಗಿದ್ದಾರೆ ಎಂದು ರೈತ ಮುಖಂಡ ತಿಪ್ಪೇರುದ್ರಪ್ಪ, ಚಂದ್ರಪ್ಪ ಬೇಸರ ವ್ಯಕ್ತಪಡಿಸಿದರು.
ಕೊನೆಯ ಭಾಗಕ್ಕೆ ನೀರು ಒದಗಿಸುವ ನಿಟ್ಟಿನಲ್ಲಿ ನ್ಯಾಯಾಲಯದ ಪಂಪ್ ಸೆಟ್ ತೆರವಿನ ಆದೇಶಕ್ಕೆ ಕಿಮ್ಮತ್ತು ನೀಡುತ್ತಿಲ್ಲ. ಭದ್ರಾ ಜಲಾಶಯ ವ್ಯಾಪ್ತಿಯಲ್ಲಿ ನೀರಿನ ನಿರ್ವಹಣೆ ಹದಗೆಟ್ಟಿದೆ. ಆಂತರಿಕ ಸರದಿ ನಿಯಮ ಸರಿಯಾಗಿಲ್ಲ. ಸಂಜೆಯಾದೊಡನೆ ನಾಲೆ ನೀರು ಹರಿವು ಕಡಿಮೆ ಆಗುತ್ತದೆ.
ಡಿಸಿ, ಎಸಿ, ಬೆಸ್ಕಾಂ, ತಹಶೀಲ್ದಾರ್, ಎಂಜಿನಿಯರ್ ಚನ್ನಗಿರಿ ಭಾಗದ ಅಕ್ರಮ ಪಂಪ್ ತೆರವು ಮಾಡುವಲ್ಲಿ ವಿಫಲರಾಗಿದ್ದಾರೆ. ರಾಜಕಾರಣಿಗಳ ಮಾತು ಕೇಳಿ ನಕಲಿ ಚಿತ್ರ ನೀಡಿದ್ದಾರೆ. ಒಂದೆರಡು ದಿನಗಳಲ್ಲಿ ನ್ಯಾಯಾಂಗ ನಿಂದನಾ ಅರ್ಜಿ ಸಲ್ಲಿಸಲಾಗುವುದು ಎಂದರು.
ಪೊಲೀಸ್ ರಕ್ಷಣೆ ಒದಗಿಸಿ ಗೇಜ್ ನಿರ್ವಹಣೆ ಮಾಡಲು ತುಂಗಭದ್ರಾ ಜಲಾಶಯದ ಮಾದರಿಯಂತೆ ಸಿಬ್ಬಂದಿ ನಿಯೋಜಿಸುವಂತೆ
ಕೋರಿದರು.
ಉಪಸ್ಥಿತರಿದ್ದ ಎಇಇ ಚಂದ್ರಕಾಂತ್ ರೈತರ ಸಮಸ್ಯೆ ಆಲಿಸಿ, ಅಸಹಾಯಕತೆ ವ್ಯಕ್ತಪಡಿಸಿದರು. ವಾಸನ, ಯಲವಟ್ಟಿ, ಕೆ.ಎನ್. ಹಳ್ಳಿ, ಹೊಳೆಸಿರಿಗೆರೆ, ಕಾಮಲಾಪುರ, ಪಾಳ್ಯ, ಎಳೆಹೊಳೆ ಭಾಗದ ರೈತರಾದ ಸುರೇಶ್, ಕುಬೇರಪ್ಪ, ವೀರಭದ್ರಪ್ಪ, ರಾಜಶೇಖರ್, ತಿಪ್ಪೇರುದ್ರಪ್ಪ ಇದ್ದರು.
ಕಾಡಾ ಅಧ್ಯಕ್ಷೆ ಭೇಟಿ: ಸಮಸ್ಯೆ ಆಲಿಸಲು ಕಾಡಾ ಅಧ್ಯಕ್ಷೆ ಪವಿತ್ರಾ ರಾಮಯ್ಯ ಭೇಟಿ ನೀಡಲಿದ್ದಾರೆ ಎಂದು ರೈತರು ಮಾಹಿತಿ ನೀಡಿದರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.