ಅಭಿವೃದ್ಧಿಗೆ ಮಾರಕವಾದ ವಲಸೆ

7
ಕೇಂದ್ರ ಸ್ಥಾನ ಮರೆತ ತಾಲ್ಲೂಕು ಮಟ್ಟದ ಅಧಿಕಾರಿಗಳು

ಅಭಿವೃದ್ಧಿಗೆ ಮಾರಕವಾದ ವಲಸೆ

Published:
Updated:
Prajavani

ಹರಿಹರ: ತಾಲ್ಲೂಕಿನಲ್ಲಿ ಕಾರ್ಯನಿರ್ವಹಿಸುವ ಬಹುತೇಕ ಅಧಿಕಾರಿಗಳು ತಾಲ್ಲೂಕು ಕೇಂದ್ರ ಸ್ಥಾನ ಬಿಟ್ಟು, ಜಿಲ್ಲಾ ಕೇಂದ್ರದಲ್ಲಿ ವಾಸಿಸುತ್ತಿದ್ದಾರೆ. ಅಧಿಕಾರಿಗಳ ಈ ವಲಸೆ ನೀತಿಯಿಂದ ಅಭಿವೃದ್ಧಿ ಕಾರ್ಯಗಳ ಪ್ರಗತಿ ಕುಂಠಿತವಾಗಿದೆ ಎಂದು ಸಾರ್ವಜನಿಕರು ಆರೋಪಿಸಿದ್ದಾರೆ.

ತಹಶೀಲ್ದಾರ್ ರೆಹಾನ್‍ ಪಾಷ, ಗ್ರೇಡ್‍-2 ತಹಶೀಲ್ದಾರ್ ವೆಂಕಟಮ್ಮ, ತಾಲ್ಲೂಕು ಪಂಚಾಯಿತಿ ಇಒ ಕೆ. ನೀಲಗಿರಿಯಪ್ಪ, ನಗರಸಭೆ ಪೌರಾಯುಕ್ತೆ ಎಸ್‍. ಲಕ್ಷ್ಮೀ, ಸಾರ್ವಜನಿಕ ಶಿಕ್ಷಣ ಇಲಾಖೆಯ ಬಿಇಒ ಡಿ. ನರಸಿಂಹಪ್ಪ, ತಾಲ್ಲೂಕು ಆರೋಗ್ಯಾಧಿಕಾರಿ ಡಾ. ಚಂದ್ರಮೋಹನ್‍, ಸಾರ್ವಜನಿಕ ಆಸ್ಪತ್ರೆ ಆಡಳಿತ ವೈದ್ಯಾಧಿಕಾರಿ ಡಾ.ಎಲ್. ಹನುಮಾನಾಯ್ಕ್, ಕೃಷಿ ಸಹಾಯಕ ನಿರ್ದೇಶಕ ವಿ.ಪಿ. ಗೋವರ್ಧನ್‍, ಸಮಾಜ ಕಲ್ಯಾಣ ಇಲಾಖೆ ಅಧಿಕಾರಿ ಡಿ. ಪರಮೇಶ್ವರಪ್ಪ, ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಯ ಸಿಡಿಪಿಒ ರಾಮಲಿಂಗಪ್ಪ, ಆಹಾರ ಮತ್ತು ನಾಗರಿಕ ಸರಬರಾಜು ಇಲಾಖೆ ನಿರೀಕ್ಷಕ ರಮೇಶ್‍ ಸೇರಿ ಬಹುತೇಕ ತಾಲ್ಲೂಕು ಮಟ್ಟದ ಅಧಿಕಾರಿಗಳಿಗೆ ನಗರದಲ್ಲಿ ವಸತಿ ಸೌಲಭ್ಯ ಇದ್ದರೂ ದಾವಣಗೆರೆಯಲ್ಲಿ ವಾಸಿಸುತ್ತಿದ್ದಾರೆ.

ತಾಲ್ಲೂಕು ಮಟ್ಟದ ಎಲ್ಲಾ ಅಧಿಕಾರಿಗಳು ಕಾರ್ಯನಿರ್ವಹಿಸುವವರು ಆಯಾ ಕೇಂದ್ರ ಸ್ಥಾನದಲ್ಲಿ ವಾಸಿಸಬೇಕು ಎಂಬುದು ಸರ್ಕಾರಿ (ಕೆಸಿಎಸ್‍ಆರ್) ನಿಯಮಗಳಲ್ಲಿ ಒಂದು. ಆದರೆ, ಇದು ಅನುಷ್ಠಾನಗೊಳ್ಳದೇ ಹಾಳೆಯಲ್ಲಿಯೇ ಉಳಿಯುವಂತಾಗಿದೆ ಎಂದು ನಾಗರಿಕರು ದೂರಿದ್ದಾರೆ.

ಅಧಿಕಾರಿಗಳನ್ನು ದಾವಣಗೆರೆಯಿಂದ ಹರಿಹರದ ಕಚೇರಿಗೆ ಕರೆತರಲು ಹಾಗೂ ಬಿಟ್ಟು ಬರಲು ಸರ್ಕಾರಿ ವಾಹನ ದಿನಕ್ಕೆ ಕನಿಷ್ಠ ಎರಡು ಬಾರಿ ದಾವಣಗೆರೆಗೆ ಹೋಗಿ ಬರುತ್ತದೆ. ಒಟ್ಟು 60 ಕಿ.ಮೀ. ಕ್ರಮಿಸುವಷ್ಟು (6 ಲೀ) ಡೀಸೆಲ್ ಒಬ್ಬ ಅಧಿಕಾರಿಗೆ ವ್ಯಯವಾಗುತ್ತದೆ. ಈ ಲೆಕ್ಕಚಾರದ ಪ್ರಕಾರ ಪ್ರತಿ ಅಧಿಕಾರಿ ವಾರ್ಷಿಕವಾಗಿ ಲಕ್ಷಾಂತರ ಮೌಲ್ಯದ ಇಂಧನವನ್ನು ಹಾಗೂ ಅಮೂಲ್ಯ ಸಮಯ ವ್ಯರ್ಥವಾಗುತ್ತಿದೆ.

‘ಹರಿಹರ ದಾವಣಗೆರೆಯ ಒಂದು ಬಡಾವಣೆ ಇದ್ದಂತೆ. ಕೇವಲ 15 ಕಿ.ಮೀ. ದೂರವಿದೆ ಅಷ್ಟೆ. ನೆನೆಸಿಕೊಂಡಾಗ ಓಡಿ ಬರಬಹುದು. ಬೆಂಗಳೂರಿನಂಥ ಮಹಾನಗರಗಳಲ್ಲಿ ಅಧಿಕಾರಿಗಳ ಮನೆ 40ರಿಂದ 50 ಕಿ.ಮೀ. ದೂರ ಇರುತ್ತದೆ. ದಾವಣಗೆರೆ ಏನೂ ಅಷ್ಟು ದೂರವಿಲ್ಲ. ಹರಿಹರದಲ್ಲಿ ಒಂದು ಒಳ್ಳೆಯ ಕಾಲೇಜು ಇಲ್ಲ, ಹೊಟೇಲ್ ಇಲ್ಲ, ಉದ್ಯಾನವಿಲ್ಲ. ಯಾವ ಸೌಲಭ್ಯ ಕಂಡು ಹರಿಹರದಲ್ಲಿ ವಾಸ ಮಾಡಬೇಕು’ ಎಂದು ಅಧಿಕಾರಿಯೊಬ್ಬರು ಪ್ರಶ್ನಿಸುತ್ತಾರೆ.

ತಾಲ್ಲೂಕಿನ ಏಳಿಗೆಗಾಗಿ ದುಡಿಯಲು ಸಂಬಳ ಪಡೆಯುವ ಅಧಿಕಾರಿಗಳು. ವಾಸಕ್ಕೆ ದಾವಣಗೆರೆ ಆಯ್ಕೆ ಮಾಡಿಕೊಂಡು ಪ್ರಗತಿಯ ಬದ್ಧತೆಯನ್ನು ಮರೆತಿದ್ದಾರೆ ಎಂಬುದು ಸಾರ್ವಜನಿಕರ ದೂರು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !