ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸೂರಿಗಾಗಿ ಸಿಪಿಐನಿಂದ ಹೋರಾಟ

ಸಿಪಿಐ ರಾಜ್ಯ ಮಂಡಳಿ ಕಾರ್ಯದರ್ಶಿ ಸಾತಿ ಸುಂದರೇಶ್ ಹೇಳಿಕೆ
Last Updated 29 ಡಿಸೆಂಬರ್ 2019, 13:27 IST
ಅಕ್ಷರ ಗಾತ್ರ

ದಾವಣಗೆರೆ: ವಸತಿರಹಿತರಿಗೆ ಸೂರು ಕೊಡಿಸುವ ಉದ್ದೇಶದಿಂದ ಸಿಪಿಐನಿಂದ ಸೂರಿಗಾಗಿ ಸಮಿತಿ ರಚಿಸಿದ್ದು, ರಾಜ್ಯದಾದ್ಯಂತ ಹೋರಾಟ ಆರಂಭವಾಗಿದೆ ಸಿಪಿಐ ರಾಜ್ಯ ಮಂಡಳಿ ಕಾರ್ಯದರ್ಶಿ ಸಾತಿ ಸುಂದರೇಶ್ ಹೇಳಿದರು.

ಭಾರತ ಕಮ್ಯುನಿಸ್ಟ್ ಪಕ್ಷದ ಜಿಲ್ಲಾ ಮಂಡಳಿಯಿಂದ ಅಶೋಕ ರಸ್ತೆಯ ಪಂಪಾಪತಿ ಭವನದಲ್ಲಿ ಭಾನುವಾರ ಆಯೋಜಿಸಿದ್ದ ‘ಸೂರಿಗಾಗಿ ಸಮರ ಸಭೆ ಮತ್ತು ಅಧ್ಯಯನ ಶಿಬಿರ’ವನ್ನು ಉದ್ಘಾಟಿಸಿ ಅವರು ಮಾತನಾಡಿದರು.

ಈಗಾಗಲೇ ಬಳ್ಳಾರಿ, ಹಾಸನ, ಕೊಡಗು, ತುಮಕೂರಿನಲ್ಲಿ ಹೋರಾಟ ಆರಂಭವಾಗಿದೆ. ರಾಜ್ಯದಲ್ಲಿ 1.50 ಕೋಟಿ ಜನರಿಗೆ ಇಂದು ಸೂರು ಇಲ್ಲ. ಎಲ್ಲರಿಗೂ ಸೂರು ಸಿಗುವ ತನಕ ಸಿಪಿಐ ಹೋರಾಟ ಮಾಡಲಿದೆ. ಈ ವಸತಿರಹಿತರ ಚಳವಳಿ ಮುಂದಿನ ಸರ್ಕಾರವನ್ನು ನಿರ್ಧರಿಸಲಿದೆ. ಬೇಡಿಕೆಗಳು ಈಡೇರದಿದ್ದರೆ ಮುಂದಿನ ಚುನಾವಣೆಯಲ್ಲಿ ಪಾಠ ಕಲಿಸಬೇಕಾಗುತ್ತದೆ’ ಎಂದು ಎಚ್ಚರಿಸಿದರು.

‘ಭಾರತದ ಪ್ರತಿಯೊಬ್ಬ ನಾಗರಿಕನೂ ಸೂರು ಹೊಂದಿರಬೇಕು ಎಂಬುದು ಸಂವಿಧಾನದ ಆಶಯ. ಆದರೆ ಆ ಆಶಯಕ್ಕೆ ಭಂಗ ಬಂದಿದ್ದು, ಆಳುವ ಸರ್ಕಾರಗಳು ಜಾರಿಗೊಳಿಸಿಲ್ಲ. ಸರ್ಕಾರದ ಅಧಿಕಾರಿಗಳು ಜನರ ಸಮಸ್ಯೆಗೆ ಸ್ಪಂದಿಸುತ್ತಿಲ್ಲ. ಅದಕ್ಕಾಗಿಯೇ ಇಂದು ಹೋರಾಟ ಮಾಡುವ ಪರಿಸ್ಥಿತಿ ನಿರ್ಮಾಣವಾಗಿದೆ’ ಎಂದು ಹೇಳಿದರು.

‘ಬಡಜನರು ತಮ್ಮ ಹಕ್ಕುಗಳಿಗಾಗಿ ಹೋರಾಡುವ ಸಮಯದಲ್ಲಿಯೇ ಎನ್‌ಆರ್‌ಸಿಗಳು ಬಂದು ಜನರ ಹೋರಾಟದ ದಿಕ್ಕು ತಪ್ಪಿಸುತ್ತವೆ. ಕೆಳವರ್ಗದವರು. ತಳ ಸಮುದಾಯದವರು, ಭೂಮಿ ಇಲ್ಲದ ಜನರು ರಾಷ್ಟ್ರೀಯ ಪೌರತ್ವ ನೋಂದಣಿಯಿಂದ ಜೈಲು ಪಾಲಾಗುತ್ತಾರೆ. ಆಳುವ ಸರ್ಕಾರಗಳು ರಾಜಕೀಯ ಕಾರಣಕ್ಕಾಗಿ ಹಿಂದೂ–ಮುಸ್ಲಿಮರನ್ನು ಬೇರೆ ಬೇರೆ ತರುವ ಯೋಚನೆ ಮಾಡುತ್ತಿವೆ’ ಎಂದು ಆರೋಪಿಸಿದರು.

‘ಸರ್ಕಾರಿ ಜಮೀನಿನಲ್ಲಿ ಮನೆ ನಿರ್ಮಿಸಿ ಫಲಾನುಭವಿಗಳಿಗೆ ನೀಡಬೇಕು. ಇಲ್ಲದಿದ್ದರೆ ಖಾಸಗಿ ಜಮೀನನ್ನು ಖರೀದಿಸಿ ಅಲ್ಲಿ ಮನೆ ನೀಡಬೇಕು. ಅದು ಇಲ್ಲದಿದ್ದರೆ ನಿವೇಶನಕ್ಕಾಗಿ ಭೂಸ್ವಾಧೀನ ಮಾಡಿ ಮನೆ ನಿರ್ಮಿಸಬೇಕು. ಆದರೆ ಯಾವ ಕಾನೂನುಗಳು ಜಾರಿಯಾಗುತ್ತಿಲ್ಲ. ಆದ್ದರಿಂದ ಸಿಪಿಐ ಪಕ್ಷದಿಂದ ನಿವೇಶನಕ್ಕಾಗಿ ಭೂಮಿ ಕಾಯ್ದಿರಿಸುವುದು ಹಾಗೂ ಮನೆ ನಿರ್ಮಾಣಕ್ಕೆ ₹5 ಲಕ್ಷ ನೀಡಬೇಕು ಮುಂತಾದ ಬೇಡಿಕೆಗಳನ್ನು ಇಟ್ಟು ಹೋರಾಟ ಮಾಡಬೇಕಿದೆ’ ಎಂದು ಹೇಳಿದರು.

ಸಿಪಿಐ ಜಿಲ್ಲಾ ಮಂಡಳಿ ಕಾರ್ಯದರ್ಶಿ ಎಚ್‌.ಕೆ.ರಾಮಚಂದ್ರಪ್ಪ ಮಾತನಾಡಿ, ‘ಪಶ್ಚಿಮ ಬಂಗಾಳ, ಕೇರಳ ಹಾಗೂ ಬೆಂಗಳೂರಿನ ಸಿಪಿಐ ಕಚೇರಿಗಳನ್ನು ಕೋಮುವಾದಿಗಳು ಸುಟ್ಟು ಹಾಕಿದ್ದು, ಅಪರಾಧಿಗಳು ಯಾರೂ ಎಂದು ತಿಳಿದರೂ ಪೊಲೀಸರು ಅವರನ್ನು ಬಂಧಿಸಿಲ್ಲ. ಸರ್ಕಾರಗಳು ಜಾತಿ–ಜಾತಿಗಳ ನಡುವೆ, ಧರ್ಮ–ಧರ್ಮಗಳ ನಡುವೆ ಸೌಹಾರ್ದ ಹಾಳು ಮಾಡುತ್ತಿವೆ’ ಎಂದು ಆರೋಪಿಸಿದರು.

ಸಿಪಿಐ ರಾಜ್ಯ ಮಂಡಳಿ ಸಹ ಕಾರ್ಯದರ್ಶಿ ಡಾ.ಕೆ.ಎಸ್. ಜನಾರ್ದನ್, ಸಿಪಿಐ ರಾಜ್ಯ ನಾಯಕ ಎಂ.ಸಿ. ಡೋಂಗ್ರೆ, ಪಕ್ಷದ ಜಿಲ್ಲಾ ಮಂಡಳಿ ಖಜಾಂಚಿ ಆನಂದರಾಜ್, ಸಹ ಕಾರ್ಯದರ್ಶಿ ಆವರಗೆರೆ ಚಂದ್ರು, ಸದಸ್ಯೆ ಎಂ.ಬಿ. ಶಾರದಮ್ಮ, ಚನ್ನಗಿರಿ ತಾಲ್ಲೂಕು ಸಮಿತಿ ಕಚೇರಿ ಮಹಮ್ಮದ್ ರಫೀಕ್, ಹರಿಹರ ಸಮಿತಿ ಕಾರ್ಯದರ್ಶಿ ಟಿ.ಎಚ್.ನಾಗರಾಜ್ ಇದ್ದರು. ಆವರಗೆರೆ ವಾಸು ಸ್ವಾಗತಿಸಿದರು. ಮಹಮ್ಮದ್ ಭಾಷಾ ವಂದಿಸಿದರು.

***

45,699 -ರಾಜೀವ್‌ಗಾಂಧಿ ವಸತಿ ಯೋಜನೆಯಡಿ ಜಿಲ್ಲೆಯಲ್ಲಿ ಸಲ್ಲಿಕೆಯಾಗಿರುವ ಅರ್ಜಿಗಳು

37 ಲಕ್ಷ -ಕುಟುಂಬಗಳಿಗೆ ರಾಜ್ಯದಲ್ಲಿ ಸೂರು ಇಲ್ಲ

17,272 -ಅಂಗವಿಕಲರು ಜಿಲ್ಲೆಯಲ್ಲಿ ಅರ್ಜಿ ಸಲ್ಲಿಸಿದ್ದಾರೆ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT