ಶನಿವಾರ, 4 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಮಿಡಿಸೌತೆ ಆಸರೆಗಾಗಿ ಮರಗಳ ಕಡಿತಲೆ

ಕೊಂಡುಕುರಿ ವನ್ಯಧಾಮದಲ್ಲಿ ವನ್ಯಜೀವಿಗಳ ಆವಾಸಸ್ಥಾನಕ್ಕೆ ಕುತ್ತು
Last Updated 27 ಜೂನ್ 2022, 5:29 IST
ಅಕ್ಷರ ಗಾತ್ರ

ಜಗಳೂರು: ಅಳಿವಿನ ಅಂಚಿನಲ್ಲಿರುವ ಕೊಂಡುಕುರಿ ಮತ್ತು ಜೀವವೈವಿಧ್ಯ ತಾಣವಾಗಿರುವ ತಾಲ್ಲೂಕಿನ ರಂಗಯ್ಯನದುರ್ಗ ಅರಣ್ಯ ಪ್ರದೇಶದಲ್ಲಿ ಮರಗಳ ಕಡಿತಲೆ ನಡೆದಿದ್ದು, ಅಪರೂಪದ ವನ್ಯಜೀವಿಗಳ ಆವಾಸಸ್ಥಾನಕ್ಕೆ ಸಂಚಕಾರ ಎದುರಾಗಿದೆ.

ಮಿಡಿಸೌತೆಕಾಯಿ ಬಳ್ಳಿ, ಟೊಮೆಟೊ, ಹಾಗಲಕಾಯಿ, ಅಡಿಕೆ ಸಸಿಗಳಿಗೆ ಊರುಗೋಲುಗಳಿಗೆ ಅರಣ್ಯದ ಗಿಡಮರಗಳನ್ನೇ ಅವಲಂಬಿಸಲಾಗಿದೆ. ಪ್ರಸ್ತುತ ಮುಂಗಾರು ಬಿತ್ತನೆಯ ಅವಧಿಯಾಗಿದ್ದು, ವಿದೇಶಕ್ಕೆ ರಫ್ತಾಗುವ ಮಿಡಿಸೌತೆ (ಗರ್ಕಿನ್) ಬೆಳೆಯನ್ನು ಈ ಪ್ರದೇಶದಲ್ಲಿ ವ್ಯಾಪಕವಾಗಿ ಬೆಳೆಯಲಾಗುತ್ತದೆ.

‘ರಂಗಯ್ಯನದುರ್ಗ ಅರಣ್ಯ ಪ್ರದೇಶದ ಐನಹಳ್ಳಿ ವಿಭಾಗದ ಕೆಂಚಪ್ಪನಕಟ್ಟೆ ಬೀಟ್ ವ್ಯಾಪ್ತಿಯಲ್ಲಿ ಒಂದು ವಾರದ ಅವಧಿಯಲ್ಲಿ ಸಾವಿರಾರು ಎಳೆಯ ಗಿಡ, ಮರಗಳನ್ನು ಕಡಿದು ಸಾಗಿಸಲಾಗುತ್ತಿದೆ. ಅಧಿಕಾರಿಗಳು ಮತ್ತು ಸಿಬ್ಬಂದಿಯ ನಿರ್ಲಕ್ಷ್ಯದಿಂದಾಗಿ ಮರಗಳ ಕಡಿತಲೆ ಅವ್ಯಾಹತವಾಗಿ ನಡೆಯುತ್ತಿದೆ’ ಎಂದು ತಾಲ್ಲೂಕು ಪಂಚಾಯಿತಿ ಮಾಜಿ ಸದಸ್ಯ ಮರೇನಹಳ್ಳಿ ಬಸವರಾಜ್ ಆರೋಪಿಸಿದ್ದಾರೆ.

‘ಕೊಂಡುಕುರಿ ವಲಯ ಅರಣ್ಯಾಧಿಕಾರಿ ಶ್ರೀನಿವಾಸ್ ನಾಯ್ಕ ಅವರನ್ನು ಪ್ರಾದೇಶಿಕ ಅರಣ್ಯ ಇಲಾಖೆ ಅಧಿಕಾರಿಯಾಗಿ ವರ್ಗಾವಣೆ ಮಾಡಿದ್ದು, ಆದೇಶ ಪತ್ರಕ್ಕಾಗಿ ಕಾಯುತ್ತಿದ್ದಾರೆ. ನಿಯಮಿತವಾಗಿ ಅರಣ್ಯ ಗಸ್ತು ನಡೆಸುತ್ತಿಲ್ಲ. ಅಧೀನ ಸಿಬ್ಬಂದಿ ಸಹ ಅರಣ್ಯದತ್ತ ಮುಖ ಮಾಡುತ್ತಿಲ್ಲ’ ಎಂದು ದೂರಿದ್ದಾರೆ.

‘ಮರಗಳ ಕಡಿತಲೆ ಅಲ್ಲದೇ ಮರಳು ಗಣಿಗಾರಿಕೆ ಹಾಗೂ ವನ್ಯಪ್ರಾಣಿಗಳ ಅಕ್ರಮ ಬೇಟೆ ಪ್ರಕರಣಗಳು ಸಹ ಹೆಚ್ಚಾಗಿವೆ. ಈಚೆಗೆ ಅರಣ್ಯದಲ್ಲಿ ನಿರಂತರವಾಗಿ ಮಳೆ ಸುರಿಯುತ್ತಿರುವುದರಿಂದ ನೂರಾರು ಹಳ್ಳಗಳು ಮೈದುಂಬಿ ಹರಿಯುತ್ತಿವೆ. ಉತ್ಕ್ರಷ್ಟ ಗುಣಮಟ್ಟದ ಮರಳು ರಾಶಿರಾಶಿಯಾಗಿ ಮೇಲೆ ಬಂದಿದೆ. ಇದನ್ನೇ ಕಾಯುತ್ತಿದ್ದ ಮರಳು ಮಾಫಿಯಾದ ಕೆಲವು ವ್ಯಕ್ತಿಗಳು ವನ್ಯಧಾಮದ ಐನಹಳ್ಳಿ ಭಾಗದ ಸೋಮವಾರದ ಹಳ್ಳಿ, ಕೆಂಪಯ್ಯನಕಟ್ಟೆ, ಗೊರೆಗುದ್ನಾಳ್ ಹಳ್ಳದಲ್ಲಿ ಯಾವುದೇ ಅಡೆತಡೆ ಇಲ್ಲದೆ ನೂರಾರು ಲೋಡ್ ಮರಳು ಸಾಗಿಸುತ್ತಿದ್ದಾರೆ‘ ಎಂದು ವನ್ಯಜೀವಿ ಆಸಕ್ತರಾದ ಎನ್.ಜೆ. ತಿಪ್ಪೇಸ್ವಾಮಿ ಮಾಹಿತಿ ನೀಡಿದರು.

ಅರಣ್ಯದಲ್ಲಿ ಅಲ್ಲಲ್ಲಿ ಕ್ಲಚ್ ತಂತಿಗಳನ್ನು ಬಳಸಿ ಪ್ರಾಣಿಗಳಿಗೆ ಉರುಳು ಹಾಕುತ್ತಿದ್ದು, ಕಾಡುಹಂದಿಗಳು ಹಾಗೂ ವಿನಾಶದ ಅಂಚಿನಲ್ಲಿರುವ ಕೊಂಡುಕುರಿಗಳು ಅಕ್ರಮ ಬೇಟೆಗೆ ಬಲಿಯಾಗುತ್ತಿವೆ. ಆದರೂ ಅರಣ್ಯ ಇಲಾಖೆ ಯಾವುದೇ ಕ್ರಮ ಕೈಗೊಳ್ಳದಿರುವುದು ವನ್ಯಜೀವಿ ಪ್ರೇಮಿಗಳಲ್ಲಿ ಆತಂಕ ಮೂಡಿಸಿದೆ.

ದೇಶದ ಏಕೈಕ ಕೊಂಡುಕುರಿ ವನ್ಯಧಾಮವಾಗಿರುವ ಇಲ್ಲಿ ಕೊಂಡುಕುರಿ ಅಲ್ಲದೇ ಕೃಷ್ಣಮೃಗ, ಚಿಂಕಾರ (ಇಂಡಿಯನ್ ಗೆಜೆಲ್), ಕತ್ತೆಕಿರುಬ, ತೋಳ, ಪ್ಯಾಂಗೋಲಿನ್, ಚಿರತೆ, ಕರಡಿ, ನಕ್ಷತ್ರ ಆಮೆ ಮುಂತಾದ ಅಪರೂಪದ ವನ್ಯಪ್ರಾಣಿಗಳು ಹಾಗೂ ಶ್ರೀಗಂಧ, ಮತ್ತಿ, ತರೇದ್ದು, ಕಮರ ಸೇರಿ ಅಮೂಲ್ಯ ಸಸ್ಯ ಪ್ರಭೇದಗಳಿವೆ. ಇದರ ಸಂರಕ್ಷಣೆ ಕೊರತೆಯಿಂದ ವನ್ಯಜೀವಿಗಳ ಆವಾಸಸ್ಥಾನಕ್ಕೆ ಅಪಾಯ ಎದುರಾಗಿದೆ.ಅಧಿಕಾರಿಗಳು ಕ್ರಮ ಕೈಗೊಳ್ಳಬೇಕು ಎಂದು ಪರಿಸರ ಪ್ರೇಮಿಗಳು ಆಗ್ರಹಿಸಿದ್ದಾರೆ.

* ಐನಹಳ್ಳಿ ಭಾಗದಲ್ಲಿ ಕೆಲವು ಮರಗಳನ್ನು ಕಡಿದಿದ್ದು, ಅರಣ್ಯದಲ್ಲಿ ಕಡಿದು ರಾಶಿಯಾಗಿದ್ದ ಸ್ಟೇಕ್ಸ್‌ಗಳನ್ನು ವಶಪಡಿಸಿಕೊಳ್ಳಲಾಗಿದೆ. ಶೀಘ್ರವೇ ಆರೋಪಿಗಳ ವಿರುದ್ಧ ಕ್ರಮ ಕೈಗೊಳ್ಳಲಾಗುವುದು.

-ಶ್ರೀನಿವಾಸನಾಯ್ಕ, ವಲಯ ಅರಣ್ಯಾಧಿಕಾರಿ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT