ಶನಿವಾರ, ಸೆಪ್ಟೆಂಬರ್ 21, 2019
21 °C

‘ರಾಷ್ಟ್ರೀಯ ಗುಣಮಟ್ಟ ಖಾತ್ರಿ’ ಪಡೆಯುವ ಗುರಿ: ವೈದ್ಯಾಧಿಕಾರಿ ಡಾ. ದೇವರಾಜ

Published:
Updated:
Prajavani

ಆಸ್ಪತ್ರೆಯಲ್ಲಿ ರೋಗಿಗಳಿಗೆ ಸೋಂಕು ಹರಡದಂತೆ ಅಗತ್ಯ ಸ್ವಚ್ಛತಾ ಕಾರ್ಯ ಕೈಗೊಳ್ಳಲಾಗಿತ್ತು. ಗುಣಮಟ್ಟದ ಉಪಕರಣಗಳನ್ನು ಬಳಸುತ್ತಿದ್ದೆವು. ರೋಗಿಗಳಿಗೆ ಒಳ್ಳೆಯ ಚಿಕಿತ್ಸೆ ನೀಡಿದ್ದರಿಂದ ಸ್ವಚ್ಛ ಮಹೋತ್ಸವ ಪ್ರಶಸ್ತಿ ಲಭಿಸಿದೆ ಎಂದು ತಾವರೆಕರೆ ಪ್ರಾಥಮಿಕ ಆರೋಗ್ಯ ಕೇಂದ್ರ ಆಡಳಿತ ವೈದ್ಯಾಧಿಕಾರಿ ಡಾ. ದೇವರಾಜ ಎಸ್‌. ಅವರು ಅಭಿಪ್ರಾಯಪಟ್ಟಿದ್ದಾರೆ.

* ಕೇಂದ್ರ ಸರ್ಕಾರದ ಜಲಶಕ್ತಿ ಸಚಿವಾಲಯ ನೀಡುವ ‘ಸ್ವಚ್ಛ ಮಹೋತ್ಸವ’ ರಾಷ್ಟ್ರೀಯ ಪ್ರಶಸ್ತಿಯ ಮೂರನೇ ಸ್ಥಾನ ತಾವರೆಕೆರೆ ಪ್ರಾಥಮಿಕ ಆರೋಗ್ಯ ಕೇಂದ್ರಕ್ಕೆ ಸಿಗಲು ಕಾರಣಗಳೇನು?

ಆಸ್ಪತ್ರೆಯಲ್ಲಿ ರೋಗಿಗಳಿಗೆ ಸೋಂಕು ಹರಡದಂತೆ ಅಗತ್ಯ ಸ್ವಚ್ಛತಾ ಕಾರ್ಯ ಕೈಗೊಳ್ಳಲಾಗಿತ್ತು. ಗುಣಮಟ್ಟದ ಉಪಕರಣಗಳನ್ನು ಬಳಸುತ್ತಿದ್ದೆವು. ರೋಗಿಗಳಿಗೆ ಒಳ್ಳೆಯ ಚಿಕಿತ್ಸೆ ನೀಡಿದ್ದರಿಂದ ಈ ಪ್ರಶಸ್ತಿ ಲಭಿಸಿದೆ.

* ತಾವರೆಕೆರೆ ಪಿಎಚ್‌ಸಿಗೆ ಎಲ್ಲಾ ವೈದ್ಯರೂ ಹೋಗಲು ಹಿಂದೇಟು ಹಾಕುತ್ತಿದ್ದಾಗ ಅಲ್ಲಿಗೆ ಹೋಗಲು ನಿಮಗೆ ಹೇಗೆ ಮನಸ್ಸು ಬಂತು?

ದಾವಣಗೆರೆಯಲ್ಲೇ ನಮ್ಮ ಮನೆ ಇತ್ತು. ಕೆಪಿಎಸ್‌ಸಿ ಮೂಲಕ ಆಯ್ಕೆಯಾದ ತಕ್ಷಣ ಈ ಪಿಎಚ್‌ಸಿಗೆ ನನ್ನನ್ನು ನಿಯೋಜಿಸಿದರು. ಅಲ್ಲಿನ ಅವ್ಯವಸ್ಥೆಯನ್ನು ಹೋಗಲಾಡಿಸಿ ಮಾದರಿ ಪಿಎಚ್‌ಸಿಯನ್ನಾಗಿ ಅಭಿವೃದ್ಧಿಗೊಳಿಸಬೇಕು ಎಂದು ಸಂಕಲ್ಪ ಮಾಡಿದೆ. ಸಿಬ್ಬಂದಿ, ಗ್ರಾಮ ಪಂಚಾಯಿತಿ ಸದಸ್ಯರ ಹಾಗೂ ಆರೋಗ್ಯಾಧಿಕಾರಿಗಳ ವಿಶ್ವಾಸ ಗಳಿಸಿ ಕೆಲಸ ಮಾಡಿದ್ದರಿಂದಲೇ ಇದು ಯಶಸ್ಸಿಯಾಯಿತು.

* ‘ಕಾಯಕಲ್ಪ’ ಪ್ರಶಸ್ತಿಯಿಂದ ಲಭಿಸಿದ ಹಣವನ್ನು ಏನು ಮಾಡಿದಿರಿ?

2016ರಲ್ಲಿನ ಸಮಾಧಾನಕರ ಪ್ರಶಸ್ತಿಯಿಂದ ₹ 50 ಸಾವಿರ ಹಾಗೂ ಕಳೆದ ಸಾಲಿಗೆ ಮೊದಲ ಬಹುಮಾನದಿಂದ ₹ 2 ಲಕ್ಷ ಹಣ ಸಿಕ್ಕಿತ್ತು. ಈ ವರ್ಷದ ಹಣ ಇನ್ನೂ ಸಿಕ್ಕಿಲ್ಲ. ಮಾರ್ಗಸೂಚಿಯಂತೆ ಪಿಎಚ್‌ಸಿ ಅಭಿವೃದ್ಧಿಗೆ ಹಣ ಬಳಸಿಕೊಂಡಿದ್ದೇವೆ. ಪ್ರವೇಶ ದ್ವಾರದಿಂದ ಎಲ್ಲಾ ಕಿಟಕಿಗಳಿಗೂ ಸೊಳ್ಳೆಪರದೆಗಳನ್ನು ಹಾಕಿ, ಸೋಂಕು ಹರಡದಂತೆ ಮುನ್ನೆಚ್ಚರಿಕಾ ಕ್ರಮ ಕೈಗೊಂಡಿದ್ದೇವೆ.

* ನಿಮ್ಮ ಮುಂದಿನ ಗುರಿ ಏನು?

ರಾಷ್ಟ್ರೀಯ ಗುಣಮಟ್ಟ ಖಾತ್ರಿ ಯೋಜನೆಯಡಿ ರಾಜ್ಯದಲ್ಲಿ ಯಾವ ಪಿಎಚ್‌ಸಿ ಕೂಡ ಇನ್ನೂ ಆಯ್ಕೆಯಾಗಿಲ್ಲ. ಈ ಯೋಜನೆಗೆ ನಮ್ಮ ಪಿಎಚ್‌ಸಿ ನೇಮಕ ಮಾಡಲು ಪ್ರಸ್ತಾವ ಕಳುಹಿಸಿಕೊಡಲಾಗಿದೆ. ಇದಕ್ಕೆ ಆಯ್ಕೆಗೊಂಡರೆ ಪ್ರತಿ ಹಾಸಿಗೆಗೆ ₹ 10 ಸಾವಿರದಂತೆ ನಮ್ಮ ಆಸ್ಪತ್ರೆಗೆ ಒಟ್ಟು ₹ 60 ಸಾವಿರ ಅನುದಾನ ಲಭಿಸಲಿದೆ. ಇದಕ್ಕೆ ಆಯ್ಕೆಯಾಗುವ ನಿಟ್ಟಿನಲ್ಲಿ ಕಾರ್ಯನಿರ್ವಹಿಸುತ್ತಿದ್ದೇವೆ.

ಗುಡ್ಡಗಾಡು ಪ್ರದೇಶವಾಗಿರುವ ಈ ಭಾಗದಲ್ಲಿ ಹಿಂದುಳಿದ ವರ್ಗದವರೇ ಹೆಚ್ಚಿದ್ದಾರೆ. ಹೆಚ್ಚಿನ ಚಿಕಿತ್ಸೆಗೆ ಇಲ್ಲಿನ ಜನ ದೂರದ ದಾವಣಗೆರೆ ಅಥವಾ ಶಿವಮೊಗ್ಗವನ್ನು ಅಲವಂಬಿಸಿದ್ದಾರೆ. ಇದನ್ನು ತಪ್ಪಿಸಲು ಪಿಎಚ್‌ಸಿಯನ್ನು ಸಮುದಾಯ ಆರೋಗ್ಯ ಕೇಂದ್ರವನ್ನಾಗಿ ಮೇಲ್ದರ್ಜೆಗೆ ಏರಿಸಲು ಯತ್ನಿಸುತ್ತಿದ್ದೇವೆ.

Post Comments (+)