ಶನಿವಾರ, 27 ಜುಲೈ 2024
×
ADVERTISEMENT
ಈ ಕ್ಷಣ :
ADVERTISEMENT

ದಾವಣಗೆರೆ: ಜಾನಪದ ವಿದ್ವಾಂಸ ಎಂ.ಜಿ. ಈಶ್ವರಪ್ಪ ನಿಧನ

Published 1 ಜೂನ್ 2024, 13:46 IST
Last Updated 1 ಜೂನ್ 2024, 13:46 IST
ಅಕ್ಷರ ಗಾತ್ರ

ದಾವಣಗೆರೆ: ಶಿಕ್ಷಣ ತಜ್ಞ, ಜಾನಪದ ವಿದ್ವಾಂಸ, ಬಾಪೂಜಿ ವಿದ್ಯಾಸಂಸ್ಥೆಯ ಶೈಕ್ಷಣಿಕ ನಿರ್ದೇಶಕ ಎಂ.ಜಿ. ಈಶ್ವರಪ್ಪ (74) ಅವರು ಬೆಂಗಳೂರಿನ ಖಾಸಗಿ ಆಸ್ಪತ್ರೆಯಲ್ಲಿ ಶನಿವಾರ ನಿಧನರಾದರು.

15 ದಿನಗಳಿಂದ ನ್ಯುಮೊನಿಯಾದಿಂದ ಬಳಲುತ್ತಿದ್ದ ಅವರು ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದರು. ಶ್ವಾಸಕೋಶದ ಸಮಸ್ಯೆಯಿಂದ ಶನಿವಾರ ಮಧ್ಯಾಹ್ನ ನಿಧನರಾದರು.

ಅವರಿಗೆ ಪತ್ನಿ, ಪುತ್ರ ಹಾಗೂ ಪುತ್ರಿ ಇದ್ದಾರೆ. ಅಂತ್ಯಕ್ರಿಯೆ ಜೂನ್ 2ರಂದು ಭಾನುವಾರ ದಾವಣಗೆರೆಯಲ್ಲಿ ನಡೆಯಲಿದೆ ಎಂದು ಕುಟುಂಬದ ಮೂಲಗಳು ತಿಳಿಸಿವೆ.

ರಂಗಭೂಮಿ, ಜಾನಪದ, ಸಂಶೋಧನೆಯಲ್ಲಿ ತಮ್ಮದೇ ಆದ ಛಾಪು ಮೂಡಿಸಿರುವ ಅವರು ‘ಈಶ್ವರಪ್ಪ ಮೇಷ್ಟ್ರು‘ ಎಂದೇ ಹೆಸರಾಗಿದ್ದರು. 38 ವರ್ಷ ಅಧ್ಯಾಪಕರಾಗಿ ದುಡಿದಿರುವ ಇವರು ಈ ಕ್ಷೇತ್ರಗಳ ಅನುಭವವನ್ನು ಪಾಠಕ್ಕೆ ಬಳಸಿಕೊಂಡು ವಿದ್ಯಾರ್ಥಿಗಳಿಗೆ ಧಾರೆ ಎರೆದಿದ್ದರು. ಶಿಕ್ಷಣ ಕ್ಷೇತ್ರದಲ್ಲಿನ ಸಾಧನೆಗಾಗಿ 2020ನೇ ಸಾಲಿನ ಕರ್ನಾಟಕ ರಾಜ್ಯೋತ್ಸವ ಪ್ರಶಸ್ತಿ ಬಂದಿದೆ.

1950ರಂದು ಶಿವಮೊಗ್ಗ ತಾಲ್ಲೂಕಿನ ಹಾಡೋನಹಳ್ಳಿಯಲ್ಲಿ ಜನಿಸಿದ ಇವರು ಅಲ್ಲಿಯೇ ಪ್ರಾಥಮಿಕ ಶಿಕ್ಷಣ ಪೂರೈಸಿ, ಸಹ್ಯಾದ್ರಿ ಕಾಲೇಜಿನಲ್ಲಿ ಪದವಿ ಪಡೆದು ಮೈಸೂರಿನ ಮಾನಸ ಗಂಗೋತ್ರಿಯಲ್ಲಿ ಎಂ.ಎ. ಪಿಎಚ್‌.ಡಿ ಮುಗಿಸಿದರು. ಹುಟ್ಟಿದ್ದು, ಶಿವಮೊಗ್ಗ ಜಿಲ್ಲೆಯಾದರೂ ದಾವಣಗೆರೆ ಈಶ್ವರಪ್ಪ ಅವರ ಕಾರ್ಯಕ್ಷೇತ್ರವನ್ನಾಗಿಸಿಕೊಂಡಿದ್ದರು.

1987ರಿಂದ 90ರವರೆಗೆ ಮೈಸೂರು ವಿಶ್ವವಿದ್ಯಾಲಯದ ಸೆನೆಟ್ ಸದಸ್ಯರಾಗಿ ಕಾರ್ಯ ನಿರ್ವಹಿಸಿದರು. 2003ರಿಂದ 2006ರವರೆಗೆ ಹಂಪಿಯ ಕನ್ನಡ ವಿಶ್ವವಿದ್ಯಾಲಯದ ಸಿಂಡಿಕೇಟ್ ಸದಸ್ಯರಾಗಿ ಹಾಗೂ 2007ರಲ್ಲಿ ಕುವೆಂಪು ವಿಶ್ವವಿದ್ಯಾಲಯದ ಅಕಾಡೆಮಿಕ್ ಕೌನ್ಸಿಲ್ ಮೆಂಬರ್ ಆಗಿ ಕೆಲಸ ನಿರ್ವಹಿಸಿ ಅಪಾರ ಅನುಭವಗಳಿಸಿದ್ದರು.

ಆರಂಭದಲ್ಲಿ ಡಿ.ಆರ್.ಎಂ ಕಾಲೇಜು ಆನಂತರ ಎಂ.ಎಸ್‌.ಬಿ ಕಾಲೇಜುಗಳಲ್ಲಿ ಅಧ್ಯಾಪಕರಾಗಿ ಕಾರ್ಯನಿರ್ವಹಿಸಿದ ಬಳಿಕ ಬಾಪೂಜಿ ಶಿಕ್ಷಣ ಸಂಸ್ಥೆಯಲ್ಲಿ ಶೈಕ್ಷಣಿಕ ನಿರ್ದೇಶಕರಾಗಿ ಕಾರ್ಯನಿರ್ವಹಿಸುತ್ತಿದ್ದರು. ‘ಪ್ರಜಾವಾಣಿ’ ಯುವ ಸಾಧಕ–2020’ಗಾಗಿ ಸಾಧಕರ ಆಯ್ಕೆಯ ತೀರ್ಪುಗಾರರಲ್ಲಿ ಒಬ್ಬರಾಗಿದ್ದರು.

ಕರ್ನಾಟಕ ನಾಟಕ ಅಕಾಡೆಮಿಯ ಗೌರವ ಫೆಲೋಶಿಪ್, ಕರ್ನಾಟಕ ಜಾನಪದ ಅಕಾಡೆಮಿಯ`ತಜ್ಞ ಪ್ರಶಸ್ತಿ’, ಕು.ಶಿ. ಹರಿದಾಸ ಭಟ್ಟ ಜಾನಪದ ಪ್ರಶಸ್ತಿ, ದಾವಣಗೆರೆ ಜಿಲ್ಲೆಯ ‘ಮಹಲಿಂಗರಂಗ’ ಸಾಣೇಹಳ್ಳಿಯ ಶಿವಕುಮಾರ ಕಲಾ ಸಂಘದ ‘ಶಿವಕುಮಾರ ರಂಗ ಪ್ರಶಸ್ತಿ’ಗಳು ಇವರಿಗೆ ಲಭಿಸಿವೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT