ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಬಾಯಾರಿಕೆ ನೀಗಿಸುವ ‘ಬಡವರ ಫ್ರಿಡ್ಜ್’

ಹದಡಿ ರಸ್ತೆಯಲ್ಲಿ ಮಣ್ಣಿನ ಮಡಕೆಗಳ ಮಾರಾಟ
Last Updated 20 ಏಪ್ರಿಲ್ 2021, 3:16 IST
ಅಕ್ಷರ ಗಾತ್ರ

ದಾವಣಗೆರೆ:ಜಿಲ್ಲೆಯಲ್ಲಿ 35ರಿಂದ 36 ಡಿಗ್ರಿ ಸೆಲ್ಸಿಯಸ್‌ ತಾಪಮಾನ ದಾಖಲಾಗುತ್ತಿದೆ. ತಾಪಮಾನ ಹೆಚ್ಚಾದಂತೆಲ್ಲ ನಗರದ ಜನರು ‘ಬಡವರ ಫ್ರಿಡ್ಜ್’ ಎಂದೇ ಹೆಸರಾಗಿರುವ ಮಣ್ಣಿನ ಹೂಜಿ ಮತ್ತು ಮಡಕೆಗಳಿಗೆ ಎಲ್ಲಿಲ್ಲದ ಬೇಡಿಕೆ ಬಂದಿದೆ.

ಬಿಸಿಲಿನ ತಾಪ ತಣಿಸಲು ಜನರು ವಿವಿಧ ತಂಪು ಪಾನೀಯಗಳು, ಕಬ್ಬಿನ ರಸ ಹಾಗೂ ಎಳನೀರುಗಳ ಮೊರೆಹೋಗಿದ್ದಾರೆ. ಇವುಗಳ ಜೊತೆ ಮನೆಯಲ್ಲೇ ತಣ್ಣನೆಯ ನೀರು ಕುಡಿಯಲು ಮಡಕೆಗಳ ಮೊರೆಹೋಗಿದ್ದಾರೆ. ನಗರದ ಹದಡಿ ರಸ್ತೆಯಲ್ಲಿ ವಿವಿಧ ವಿನ್ಯಾಸದ ಮಡಕೆಗಳು, ಹೂಜಿಗಳು ಕಣ್ಮನ ಸೆಳೆಯುತ್ತಿವೆ.ಅಧಿಕ ತಾಪಮಾನ, ಕೈಕೊಡುವ ವಿದ್ಯುತ್‌ನಿಂದಾಗಿ ಜನರು ಆರೋಗ್ಯದ ದೃಷ್ಟಿಯಿಂದ ಮಡಕೆಯನ್ನು
ಬಳಸುತ್ತಿದ್ದಾರೆ.

ಬೇಸಿಗೆಯಲ್ಲಿ ನೀರನ್ನು ತಣ್ಣಗೆ ಇಡಬಲ್ಲ ಮಡಕೆಯನ್ನು ಒಮ್ಮೆ ಖರೀದಿಸಿದರೆ ಸಾಕು, ಇರುವಷ್ಟು ದಿನ ನೀರನ್ನು ತಣ್ಣಗೆ ಇಡುತ್ತದೆ. ಕುಂಬಾರಿಕೆ ನಡೆಯುತ್ತಿದ್ದ ಸಮಯದಲ್ಲಿ ಅಗತ್ಯವಿರುವ ಮಡಕೆಗಳನ್ನು ನೇರವಾಗಿ ಖರೀದಿಸುತ್ತಿದ್ದರು. ಬದಲಾದ ಪರಿಸ್ಥಿತಿಯಲ್ಲಿ ಕುಂಬಾರಿಕೆ ವೃತ್ತಿ ಮಹತ್ವ ಕಳೆದುಕೊಂಡಿದೆ. ದಾವಣಗೆರೆಗೆ ದೂರದ ರಾಜಸ್ಥಾನದವರು ಹದಡಿ ರಸ್ತೆ ಸೇರಿ ವಿವಿಧ ಕಡೆಗಳಲ್ಲಿ ಮಣ್ಣಿನ ಮಡಕೆಗಳನ್ನು ಮಾರಾಟ ಮಾಡಲಾಗುತ್ತಿದೆ.

18 ಲೀಟರ್, 10 ಹಾಗೂ 7 ಲೀಟರ್ ಸಾಮರ್ಥ್ಯದ ಹೂಜಿಗಳು ಗಮನ ಸೆಳೆಯುತ್ತಿವೆ. ಗಾತ್ರಕ್ಕೆ ತಕ್ಕಂತೆ ₹ 200ರಿಂದ ₹ 500ರ ವರೆಗೂ ಮಾರಾಟ ಮಾಡಲಾಗುತ್ತಿದೆ. ಈ ಹೂಜಿಗಳಿಗೆ ನಲ್ಲಿಯನ್ನು ಅಳವಡಿಸಿದ್ದು, ನೋಡಲು ಆಕರ್ಷಕವಾಗಿವೆ.

ವಿವಿಧ ಬಳಕೆಯ ವಸ್ತುಗಳು:
ವಿವಿಧ ಪ್ರದೇಶದಿಂದ ಬರುವ ಮಣ್ಣಿನ ಮಡಕೆಗಳ ಜೊತೆಗೆ ಶಿವಲಿಂಗಗಳು, ತುಳಸೀಕಟ್ಟೆ, ಗಾರ್ಡನ್ ವಸ್ತುಗಳು, ಮಣ್ಣಿನ ವಾಟರ್ ಬಾಟಲ್, ಚಹಾದ ಕಪ್‌ ಹೀಗೆ ವಿವಿಧ ಬಗೆಯ ದಿನ ಬಳಕೆಯ ಸಾಮಗ್ರಿಗಳನ್ನು ಇಡಲಾಗಿದೆ. ಇವುಗಳ ಜೊತೆಗೆಹಣತೆ, ಧೂಪಾರತಿ, ಹುಂಡಿಗಳನ್ನು ಮಾರಾಟಕ್ಕೆ ಇಡಲಾಗಿದೆ. ಇಷ್ಟು ದಿನ ಬರೀ ಒಂದೇ ಶೈಲಿ ಮಡಕೆ ಖರೀದಿಸುತ್ತಿದ್ದ ಜನರು ಆಧುನಿಕ ಶೈಲಿಯ ಮಣ್ಣಿನ ವಸ್ತುಗಳಿಗೆ ಮಾರುಹೋಗಿದ್ದಾರೆ.

ರಾಜಸ್ಥಾನದ ರಾಜು ಅವರು ಮೂರು ತಿಂಗಳ ಹಿಂದೆ ವಿವಿಧ ವಿನ್ಯಾಸದ ವಸ್ತುಗಳನ್ನು ದಾವಣಗೆರೆಗೆ ತಂದಿದ್ದಾರೆ. ಇವರಿಗೆ ಇವರ ಪತ್ನಿ ನಂದಾ ಸಾಥ್ ನೀಡುತ್ತಿದ್ದಾರೆ. ಇವರು ವರ್ಷದಲ್ಲಿ ಎರಡು ಬಾರಿ ದಾವಣಗೆರೆಯಲ್ಲಿ ಮಾರಾಟ ಮಾಡುತ್ತಾರೆ. ದೀಪಾವಳಿಯಲ್ಲಿ ಹಣತೆಗಳು ಹಾಗೂ ಆಲಂಕಾರಿಕ ವಸ್ತುಗಳು, ಫೆಬ್ರುವರಿ ತಿಂಗಳಿನಿಂದ ಬೇಸಿಗೆ ಆರಂಭವಾಗಲಿದ್ದು, ಮೇ ತಿಂಗಳವರೆಗೂ ಮಣ್ಣಿನ ಮಡಕೆಗಳ ವಹಿವಾಟು ನಡೆಯುತ್ತದೆ.

‘ಬಿಸಿಲಿನ ತಾಪ ಏರುತ್ತಿದ್ದು, ಎಷ್ಟು ನೀರು ಕುಡಿದರೂ ಬಾಯಾರಿಕೆ ತಣಿಯುತ್ತಿಲ್ಲ. ಮಡಕೆಯ ನೀರು ಕುಡಿದರೆ ಒಳ್ಳೆಯದು. ಇದರಿಂದಾಗಿ ಖರೀದಿ ಮಾಡುತ್ತಿದ್ದೇನೆ’ ಎನ್ನುತ್ತಾರೆ ನಿಟುವಳ್ಳಿಯ
ಪರಶುರಾಂ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT