ದಾವಣಗೆರೆ: ಗಣೇಶನ ಹಬ್ಬಕ್ಕೆ ಖರೀದಿಗಾಗಿ ಜನರು ಕೊನೇ ಕ್ಷಣದಲ್ಲಿ ಮಾರುಕಟ್ಟೆ ಕಡೆ ದಾಂಗುಡಿ ಇಟ್ಟಿದ್ದಾರೆ. ಇದರಿಂದಾಗ ಗುರುವಾರ ಸಂಜೆ ಹಬ್ಬದ ವ್ಯವಹಾರದ ಭರಾಟೆ ಜೋರಾಗಿ ನಡೆಯಿತು.
ಜಯದೇವ ಸರ್ಕಲ್–ಪಿ.ಬಿ. ರಸ್ತೆಯಲ್ಲಿ ಜನಸಂದಣಿ ಹೆಚ್ಚಾಗಿದ್ದರಿಂದ ಪೊಲೀಸರು ಬ್ಯಾರಿಕೇಡ್ ಹಾಕಿ ವಾಹನ ಸಂಚಾರವನ್ನೇ ಸ್ಥಗಿತಗೊಳಿಸಿದರು.
ನಿಟುವಳ್ಳಿ, ಕೆಎಸ್‌ಆರ್‌ಟಿಸಿ ಬಸ್ ನಿಲ್ದಾಣದ ಮುಂಭಾಗ, ಕೆ.ಆರ್. ಮಾರುಕಟ್ಟೆ, ಪಿ.ಬಿ. ರಸ್ತೆ, ಗಡಿಯಾರ ಕಂಬ, ಚೌಕಿ ಪೇಟೆ ಸಹಿತ ಎಲ್ಲ ಮಾರುಕಟ್ಟೆಗಳಲ್ಲಿ ಭಾರಿ ಸಂಖ್ಯೆಯಲ್ಲಿ ಜನರು ನೆರೆದಿದ್ದರು. ಅದರಲ್ಲಿ ಮಹಿಳೆಯರ ಪ್ರಮಾಣವೇ ಅಧಿಕವಾಗಿತ್ತು.
ಹಬ್ಬ ಬಂದಾಗ ಹೂವು, ಹಣ್ಣುಗಳ ದರ ವಿಪರೀತ ಜಾಸ್ತಿಯಾಗಿ ಬಿಡುತ್ತಿತ್ತು. ಆದರೆ ಕೊರೊನಾ ಸೋಂಕಿನ ಪರಿಣಾಮ ಈ ಬಾರಿ ಭಾರಿ ಹೆಚ್ಚಳವಾಗಿಲ್ಲ. ‘ನಾವು ಬೆಳಿಗ್ಗೆಯೇ ಬಂದಿದ್ದೆವು. ರೇಟ್ ಹೆಚ್ಚಿಸುವುದು ಬಿಡಿ. ಮಾಮೂಲಿ ದರಕ್ಕೆ ಮಾರಾಟವಾದರೆ ಸಾಕು ಎಂದು ಕುಳಿತಿದ್ದೇವೆ. ಮಧ್ಯಾಹ್ನದ ವರೆಗೆ ಏನೇನೂ ವ್ಯಾಪಾರ ಇರಲಿಲ್ಲ. ಸಂಜೆಯಾಗುತ್ತಿದ್ದಂತೆ ಜನ ಬಂದಿದ್ದಾರೆ. ಚೆಂಡು ಹೂವು ಮಾರಿಗೆ ₹ 30ರಂತೆ ನೀಡುತ್ತಿದ್ದೇವೆ. ಎರಡು ವರ್ಷಗಳ ಹಿಂದೆ ಇದೇ ಚೆಂಡು ಹೂವನ್ನು ಮಾರಿಗೆ ₹ 50ರಂತೆ ಮಾಡಿದ್ದೆವು’ ಎಂದು ಚೆಂಡು ಹೂವು ಮಾರಾಟಗಾರ ಜಂಗಮ ತುಂಬಿಗೆರೆಯ ರವೀಂದ್ರ ನೆನಪು ಮಾಡಿಕೊಂಡರು.
‘ಬಾಳೆಕಂದಿಗೆ ಜೋಡಿಗೆ ₹ 20 ಎಂದು ಮಾರಾಟ ಮಾಡುತ್ತಿದ್ದೇವೆ. ಸ್ವಲ್ಪ ಸಣ್ಣದಾದರೆ ಜೋಡಿಗೆ ₹ 10ಕ್ಕೆ ನೀಡುತ್ತಿದ್ದೇವೆ’ ಎಂದು ಅಣಜಿ ಕೆರೆಗಳಹಳ್ಳಿಯ ಅಂಜಿನಮ್ಮ, ರೇಣುಕಮ್ಮ ಮಾಹಿತಿ ನೀಡಿದರು.
‘ಸೇಬು ಕೆ.ಜಿ.ಗೆ ₹ 100ರಿಂದ ₹ 120, ಚಿಕ್ಕು ₹ 40, ದ್ರಾಕ್ಷಿ ₹ 100, ಸೀತಾಫಲ ₹ 60 ಇದೆ. ಎಲ್ಲ ಮಿಕ್ಸ್ ಕೆ.ಜಿ.ಗೆ ₹ 100ಕ್ಕೆ ನೀಡುತ್ತಿದ್ದೇವೆ’ ಎಂದು ಪಿ.ಬಿ. ರಸ್ತೆ ಬಳಿಯ ಹಣ್ಣಿನ ವ್ಯಾಪಾರಿ ರಾಣೆಬೆನ್ನೂರಿನ ದುರುಗಪ್ಪ ತಿಳಿಸಿದರು.
ಕೊರೊನಾ ಕಾರಣದಿಂದ ವ್ಯಾಪಾರವೇ ಇಲ್ಲ. ಈಗ ಜನ ಬರುತ್ತಿದ್ದಾರೆ. ತಂದಿರುವುದನ್ನು ಮಾರಾಟ ಮಾಡಿ ಮನೆ ಸೇರಬೇಕು. ನಾಳೆ ಅಷ್ಟೊಂದು ವ್ಯಾಪಾರ ಇರುವುದಿಲ್ಲ ಎಂದು ಹೂವಿನ ವ್ಯಾಪಾರಿ ಉಚ್ಚಂಗಿದುರ್ಗ ಕರಡಿದುರ್ಗದ ಮಂಜಮ್ಮ, ನಿಟುವಳ್ಳಿಯ ಶ್ರೀನಿವಾಸ ಅಭಿಪ್ರಾಯ ಪಟ್ಟರು.
ಗಣೇಶನ ಹಬ್ಬಕ್ಕೆ ಕಬ್ಬಿಗೆ ಎಲ್ಲಿಲ್ಲದ ಬೇಡಿಕೆ ಇರುತ್ತದೆ. ಈ ಬಾರಿ ಮಾರುಕಟ್ಟೆಗೆ ಕಬ್ಬು ಬಹಳ ಕಡಿಮೆ ಪ್ರಮಾಣದಲ್ಲಿ ಕಂಡು ಬಂತು. ಸೇವಂತಿಗೆ ಮಾರಿಗೆ ₹ 30ರಿಂದ ₹ 50, ಕನಕಾಂಬರಿ ₹ 60ರಿಂದ ₹ 80, ಕಮಲ ಪುಷ್ಪ ಒಂದಕ್ಕೆ ₹ 20, ಬಿಲ್ವಪತ್ರೆ ಮಾಲೆಗೆ ₹ 40, ತುಳಸಿ ಮಾಲೆಗೆ ₹ 30, ವಿಳ್ಯದೆಲೆ ಕವಳೆಗೆ (40 ಎಲೆ) ₹ 25 ದರದಲ್ಲಿ ವ್ಯಾಪಾರ ನಡೆಯುತ್ತಿತ್ತು.
ಗಣೇಶನ ವಿಗ್ರಹಗಳಿಗೂ ಬೇಡಿಕೆ
ಮನೆಗಳಲ್ಲಿ ಪ್ರತಿಷ್ಠಾಪಿಸಿ ಪೂಜಿಸಲು ಪುಟ್ಟ ಪುಟ್ಟ ಗಣಪನ ವಿಗ್ರಹಗಳಿಗೆ ಎಲ್ಲಿಲ್ಲದ ಬೇಡಿಕೆ ಕಂಡು ಬಂತು. ₹ 200ರಿಂದ ₹ 800 ವರೆಗಿನ ಗಣೇಶನ ವಿಗ್ರಹಗಳಿಗೆ ಬಹುತೇಕರು ಆದ್ಯತೆ ನೀಡಿದ್ದರು. ₹ 1000ದಿಂದ ₹ 8000 ವರೆಗಿನ ವಿಗ್ರಹಗಳು ಕೂಡ ಇದ್ದವು. ಬಹುತೇಕ ಕಡೆಗಳಲ್ಲಿ ಜನರು ದೊಡ್ಡ ವಿಗ್ರಹಗಳನ್ನು ನೋಡುತ್ತಿದ್ದರೇ ವಿನಃ ಖರೀದಿ ಮಾಡುತ್ತಿರಲಿಲ್ಲ. ಅರ್ಧ ಅಡಿಯಿಂದ ಎರಡು ಅಡಿವರೆಗಿನ ಗಣೇಶನ ಮೂರ್ತಿಗಳನ್ನು ಎಲ್ಲೆಡೆ ಒಯ್ಯುತ್ತಿರುವುದು ಕಂಡು ಬಂತು.
ಹೈಸ್ಕೂಲ್ ಮೈದಾನದಲ್ಲಿ ಬೃಹತ್ ಗಣಪತಿ ಪ್ರತಿಷ್ಠಾಪನೆಗೆ ಭರದ ಸಿದ್ಧತೆ
ದಾವಣಗೆರೆ: ಹೈಸ್ಕೂಲ್ ಮೈದಾನದಲ್ಲಿ 8 ಅಡಿ ಎತ್ತರದ ಗಣಪತಿಯ ಮೂರ್ತಿಯನ್ನು ಇಟ್ಟು ಪೂಜಿಸಲು ಸಕಲ ಸಿದ್ಧತೆಗಳು ನಡೆದಿವೆ.
ಹಿಂದೂ ಮಹಾಗಣಪತಿ ಸಮಿತಿಯಿಂದ ನಡೆಸುವ ಈ ಗಣೇಶೋತ್ಸವಕ್ಕೆ ಸಂಬಂಧಿಸಿದಂತೆ ಈಗಾಗಲೇ ಹಂದರಗಂಬ ಪೂಜೆ ಮಾಡಲಾಗಿದ್ದು, ಮೂರ್ತಿ ಪ್ರತಿಷ್ಠಾಪನಾ ಪೀಠ, ಸುತ್ತ ಹಂದರಗಳನ್ನು ನಿರ್ಮಿಸಲಾಗಿದೆ.
ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ
ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್
ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.