ವಿದ್ಯಾರ್ಥಿಗಳಿಗೆ ಗಾಂಜಾ ಮಾರಾಟ: ಇಬ್ಬರ ಬಂಧನ

7

ವಿದ್ಯಾರ್ಥಿಗಳಿಗೆ ಗಾಂಜಾ ಮಾರಾಟ: ಇಬ್ಬರ ಬಂಧನ

Published:
Updated:
Prajavani

ದಾವಣಗೆರೆ: ಕಾಲೇಜು ವಿದ್ಯಾರ್ಥಿಗಳಿಗೆ ಗಾಂಜಾ ಮಾರಾಟ ಮಾಡುತ್ತಿದ್ದ ಎರಡು ಪ್ರತ್ಯೇಕ ಪ್ರಕರಣಗಳಿಗೆ ಸಂಬಂಧಿಸಿದಂತೆ ಪೊಲೀಸರು ಇಬ್ಬರು ಆರೋಪಿಗಳನ್ನು ಸೋಮವಾರ ಬಂಧಿಸಿದ್ದಾರೆ.

ಆಂಜನೇಯ ಬಡಾವಣೆಯ 18ನೇ ಕ್ರಾಸ್‌ ನಿವಾಸಿ ಎಸ್‌.ಎ. ಪ್ರಮೋದ್‌ (28) ಹಾಗೂ ಹರಿಹರ ತಾಲ್ಲೂಕಿನ ಹರ್ಲಾಪುರದ ವಿಜಯನಗರ ಬಡಾವಣೆ ಗುರುನಾಥ (34) ಬಂಧಿತರು.

ಸಿದ್ದವೀರಪ್ಪ ಬಡಾವಣೆಯಲ್ಲಿ ಗಾಂಜಾ ಸೇವಿಸುತ್ತಿದ್ದಾಗ ಬಂಧಿಸಿದ್ದ 12 ವೈದ್ಯಕೀಯ ವಿದ್ಯಾರ್ಥಿಗಳನ್ನು ವಿಚಾರಣೆ ನಡೆಸಿದಾಗ ಆಂಜನೇಯ ಬಡಾವಣೆಯಲ್ಲಿ ಅಕ್ವೇರಿಯಂ ಅಂಗಡಿ ನಡೆಸುತ್ತಿದ್ದ ಪ್ರಮೋದ ಗಾಂಜಾ ಮಾರಾಟ ಮಾಡುತ್ತಾನೆ ಎಂಬ ಸಂಗತಿ ಬೆಳಕಿಗೆ ಬಂದಿತ್ತು. ಸಿಇಎನ್‌ ಪೊಲೀಸ್‌ ಠಾಣೆಯ ಇನ್‌ಸ್ಪೆಕ್ಟರ್‌ ಟಿ.ವಿ. ದೇವರಾಜ್‌ ನೇತೃತ್ವದ ತಂಡವು ನಿಜಲಿಂಗಪ್ಪ ಬಡಾವಣೆಯ ಬಕ್ಕೇಶ್ವರ ಕಲ್ಯಾಣ ಮಂಟಪದ ಬಳಿ ಗಾಂಜಾ ಮಾರಾಟ ಮಾಡುತ್ತಿದ್ದ ಪ್ರಮೋದ್‌ನನ್ನು ಬಂಧಿಸಿ ₹ 15 ಸಾವಿರ ಮೌಲ್ಯದ ಗಾಂಜಾ ಸೊಪ್ಪು ಹಾಗೂ ಟವೆರಾ ವಾಹನವನ್ನು ವಶಪಡಿಸಿಕೊಂಡಿದೆ ಎಂದು ಜಿಲ್ಲಾ ಪೊಲೀಸ್‌ ವರಿಷ್ಠಾಧಿಕಾರಿ ಆರ್‌. ಚೇತನ್‌, ಮಂಗಳವಾರ ಪತ್ರಿಕಾಗೋಷ್ಠಿಯಲ್ಲಿ ಮಾಹಿತಿ ನೀಡಿದರು.

ಹರಿಹರ ಗ್ರಾಮಾಂತರ ಠಾಣೆಯ ಪಿ.ಎಸ್‌.ಐ ಸಿದ್ದೇಗೌಡ ನೇತೃತ್ವದ ತಂಡವು ಅಮರಾವತಿ ಕಾಲೊನಿಯ ಬಸ್‌ನಿಲ್ದಾಣದ ಬಳಿ ಸ್ಕೂಟರ್‌ನಲ್ಲಿ ಗಾಂಜಾ ಇಟ್ಟುಕೊಂಡು ವಿದ್ಯಾರ್ಥಿಗಳಿಗೆ ಮಾರಾಟ ಮಾಡುತ್ತಿದ್ದ ಗುರುನಾಥನನ್ನು ಬಂಧಿಸಿ, 165 ಗ್ರಾಂ ಗಾಂಜಾ ವಶಪಡಿಸಿಕೊಂಡಿದೆ. ಇಬ್ಬರು ಆರೋಪಿಗಳನ್ನು ನ್ಯಾಯಾಂಗ ಬಂಧನಕ್ಕೆ ಒಪ್ಪಿಸಲಾಗುತ್ತಿದೆ ಎಂದು ತಿಳಿಸಿದರು.

ಆರೋಪಿಗಳೂ ವಿಶೇಷವಾಗಿ ವೈದ್ಯಕೀಯ ಹಾಗೂ ಎಂಜಿನಿಯರಿಂಗ್‌ ವಿದ್ಯಾರ್ಥಿಗಳಿಗೆ ಗಾಂಜಾ ಪೂರೈಕೆ ಮಾಡುತ್ತಿದ್ದರು. ಹೊರ ಜಿಲ್ಲೆಗಳಿಂದ ಗಾಂಜಾವನ್ನು ದಾವಣಗೆರೆಗೆ ತರುತ್ತಿದ್ದರು. ಮೊಬೈಲ್‌ ಮೂಲಕ ವಿದ್ಯಾರ್ಥಿಗಳೊಂದಿಗೆ ‘ಸ್ಕೋರ್‌’, ‘ವೀಡ್‌’ ಹಾಗೂ ‘ಗ್ರೀನ್‌’ ಎಂಬಂತಹ ಕೋಡ್‌ವರ್ಡ್‌ಗಳನ್ನು ಬಳಸಿ ವಹಿವಾಟು ನಡೆಸುತ್ತಿದ್ದರು. ವಿದ್ಯಾರ್ಥಿಗಳಿಗೆ ಒಂದು ಕಡೆ ಬರುವಂತೆ ಹೇಳಿ ಹಣ ಪಡೆದುಕೊಂಡು ಹೋಗಿ ಇನ್ನೊಂದು ಸ್ಥಳಕ್ಕೆ ಕರೆಸಿಕೊಂಡು ಗಾಂಜಾ ಪಾಕೀಟ್‌ ಅನ್ನು ನೀಡುತ್ತಿದ್ದರು ಎಂದು ವಿವರಿಸಿದರು.

‘ಕಾಲೇಜು ಆಡಳಿತ ಮಂಡಳಿ ಹಾಗೂ ಪ್ರಾಧ್ಯಾಪಕರಿಂದಲೂ ನಶೆಯಲ್ಲಿರುವ ವಿದ್ಯಾರ್ಥಿಗಳ ಬಗ್ಗೆ ಮಾಹಿತಿ ಕಲೆ ಹಾಕಲಾಗಿತ್ತು. ಗಾಂಜಾ ಸೇವಿಸುತ್ತಿದ್ದಾಗ ಸಿಕ್ಕಿಬಿದ್ದ ವಿದ್ಯಾರ್ಥಿಗಳಿಂದಲೂ ಮಾಹಿತಿ ಸಂಗ್ರಹಿಸಿ ಕಾರ್ಯಾಚರಣೆ ನಡೆಸಲಾಗುತ್ತಿದೆ. ಈ ದಂಧೆಯಲ್ಲಿ ಇನ್ನೂ ಯಾರು ಯಾರು ಭಾಗಿಯಾಗಿದ್ದಾರೆ ಎಂಬ ಬಗ್ಗೆ ತನಿಖೆ ನಡೆಸುತ್ತಿದ್ದೇವೆ’ ಎಂದರು.

ಪ್ರೊಬೆಷನರಿ ಐಪಿಎಸ್‌ ಅಧಿಕಾರಿ ಶ್ರೀನಿವಾಸಲು, ಡಿ.ಸಿ.ಆರ್‌.ಬಿ ಡಿ.ಎಸ್‌.ಪಿ ಗೋಪಾಲಕೃಷ್ಣ ಗೌಡರ, ಸಿಇಎನ್‌ ಠಾಣೆಯ ಟಿ.ವಿ. ದೇವರಾಜ್‌, ಹರಿಹರ ಗ್ರಾಮಾಂತರ ಠಾಣೆಯ ಪಿಎಸ್‌ಐ ಸಿದ್ದೇಗೌಡ ಹಾಗೂ ಪೊಲೀಸ್‌ ಸಿಬ್ಬಂದಿ ಹಾಜರಿದ್ದರು.

Tags: 

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 1

  Frustrated
 • 0

  Angry

Comments:

0 comments

Write the first review for this !