ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸಾಮೂಹಿಕ ನಾಯಕತ್ವದಲ್ಲೇ ಚುನಾವಣೆಗೆ ಸಜ್ಜು: ಡಿ.ಕೆ. ಶಿವಕುಮಾರ್‌

ಭ್ರಷ್ಟ ಸರ್ಕಾರ ಕಿತ್ತೊಗೆದಾಗಲೇ ರಾಜ್ಯಕ್ಕೆ ನೆಮ್ಮದಿ: ಡಿ.ಕೆ. ಶಿವಕುಮಾರ್‌
Last Updated 4 ಆಗಸ್ಟ್ 2022, 5:14 IST
ಅಕ್ಷರ ಗಾತ್ರ

ದಾವಣಗೆರೆ: ‘ನಾವೆಲ್ಲ ಸಿದ್ದರಾಮಯ್ಯ ಅವರ ಮುಂದಾಳತ್ವದಲ್ಲಿ ಒಟ್ಟಿಗೆ ಸೇರಿ 2023ರ ವಿಧಾನಸಭೆ ಚುನಾವಣೆಯನ್ನು ಸಾಮೂಹಿಕ ನಾಯಕತ್ವದಲ್ಲಿ ಎದುರಿಸಬೇಕು ಎಂಬ ತೀರ್ಮಾನವನ್ನು ಮಾಡಿದ್ದೇವೆ. ಎಲ್ಲರೂ ಒಗ್ಗಟ್ಟಿನಿಂದ ದುಡಿಯೋಣ. ಕಾಂಗ್ರೆಸ್‌ ನಾಯಕಿ ಸೋನಿಯಾ ಗಾಂಧಿ ಕೈ ಬಲಪಡಿಸೋಣ. ರಾಹುಲ್‌ ಗಾಂಧಿ ಅವರನ್ನು ದೇಶದ ಪ್ರಧಾನಿಯನ್ನಾಗಿ ಮಾಡೋಣ’ ಎಂದು ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್‌ ಹೇಳಿದರು.

ಅಮೃತ ಮಹೋತ್ಸವದಲ್ಲಿ ಮಾತನಾಡಿದ ಅವರು, ‘ವಿಧಾನಸೌಧದ ಮೂರನೇ ಮೆಟ್ಟಿಲ ಮೇಲೆ ನಡೆದುಕೊಂಡು ಓಡಾಡಬೇಕು ಎಂಬ ನಮ್ಮ ಕಾರ್ಯಕರ್ತರ ಆಸೆ ಈಡೇರಬೇಕಾದರೆ ನಾವು–ನೀವೆಲ್ಲ ಸೇರಿಕೊಂಡು ಭಷ್ಟ್ರ ಸರ್ಕಾರವನ್ನು ಕಿತ್ತುಹಾಕುವ ಸಂಕಲ್ಪ ಮಾಡಬೇಕು. ಈ ಸರ್ಕಾರವನ್ನು ತೆಗೆಯುತ್ತೇವೆ ಎಂದು ಎಲ್ಲರೂ ಪ್ರತಿಜ್ಞೆ ಮಾಡಿ’ ಎಂದು ಕಾರ್ಯಕರ್ತರ ಕೈಗಳನ್ನು ಮೇಲಕ್ಕೆ ಎತ್ತಿಸಿದರು.

‘ಅವಕಾಶ ನಿಮ್ಮ ಮನೆ ಬಾಗಿಲಿಗೇ ಬಂದಿದೆ. ಹೊಸ ಬೆಳಕು ಬರುತ್ತಿದೆ. ಅಧಿಕಾರದ ಲಕ್ಷ್ಮಿ ಮನೆ ಬಾಗಿಲಿಗೇ ಬರುತ್ತಿದೆ. ಹಳ್ಳಿಗಳಲ್ಲಿ ಎಲ್ಲರನ್ನೂ ಸೇರಿಸಿಕೊಂಡು ಇತಿಹಾಸ ಸೃಷ್ಟಿಸಬೇಕು. ಈ ಕೆಟ್ಟ ಸರ್ಕಾರದಿಂದ ಯುವಕರು, ರೈತರು, ಬಡವರಿಗೆ ಆಗಿರುವ ಅನ್ಯಾಯವನ್ನು ಕೊನೆಗಾಣಿಸಬೇಕಾದರೆ ಬಿಜೆಪಿ ಸರ್ಕಾರವನ್ನು ಮೊದಲು ಕಿತ್ತು ಹಾಕಬೇಕು. ಆಗಲೇ ಇಡೀ ರಾಜ್ಯಕ್ಕೆ ನೆಮ್ಮದಿ ಸಿಗಲಿದೆ’ ಎಂದು ಅಭಿಪ್ರಾಯಪಟ್ಟರು.

‘ನನ್ನ ಮತ್ತು ಸಿದ್ದರಾಮಯ್ಯ ಅವರಿಂದ ಮಾತ್ರ ಕಾಂಗ್ರೆಸ್‌ ಸರ್ಕಾರವನ್ನು ಅಧಿಕಾರಕ್ಕೆ ತರಲು ಸಾಧ್ಯವಿಲ್ಲ. ಕಾರ್ಯಕರ್ತರು ಮನೆ–ಮನೆಗೆ ಹೋಗಿ ಭ್ರಷ್ಟ ಸರ್ಕಾರವನ್ನು ಕಿತ್ತು ಹಾಕಬೇಕು ಎಂಬ ಬಗ್ಗೆ ಜನರಿಗೆ ಮನವರಿಕೆ ಮಾಡಿಕೊಡಬೇಕು’ ಎಂದು ಕರೆ ನೀಡಿದರು.

‘ದೇಶಕ್ಕೆ ಸ್ವಾತಂತ್ರ್ಯ ಬಂದು 75ನೇ ವರ್ಷ ಆಚರಿಸುತ್ತಿದ್ದ ಸಂದರ್ಭದಲ್ಲೇ ಸಿದ್ದರಾಮಯ್ಯ ಅವರ ಅಮೃತ ಮಹೋತ್ಸವವನ್ನೂ ಆಚರಿಸುತ್ತಿದ್ದೇವೆ. ದೇಶಕ್ಕೂ ಸಂಭ್ರಮ, ಕಾಂಗ್ರೆಸ್‌ ಹಾಗೂ ಸಿದ್ದರಾಮಯ್ಯ ಅವರಿಗೂ ಸಂಭ್ರಮ, ನಿಮಗೂ ಸಂಭ್ರಮ–ನಮಗೂ ಸಂಭ್ರಮ. ನಮ್ಮ ಉದ್ದೇಶ ಈ ರಾಜ್ಯಕ್ಕೆ ನ್ಯಾಯವನ್ನು ಒದಗಿಸಿಕೊಡುವುದಾಗಿದೆ. ಕಾಂಗ್ರೆಸ್‌ ಶಕ್ತಿಯೇ ಈ ದೇಶದ ಶಕ್ತಿ. ಕಾಂಗ್ರೆಸ್‌ ಇತಿಹಾಸವೇ ದೇಶದ ಇತಿಹಾಸ. ಬಸವಣ್ಣನವರ ತತ್ವವೇ ಕಾಂಗ್ರೆಸ್‌ ತತ್ವವೂ ಆಗಿದೆ. ಸಿದ್ದರಾಮಯ್ಯ ನೇತೃತ್ವದಲ್ಲಿ ನಮ್ಮ ಸರ್ಕಾರ ರಾಜ್ಯಕ್ಕೆ ಕೊಟ್ಟ ಕಾರ್ಮಕ್ರಮಗಳನ್ನು ಮೆಲುಕು ಹಾಕಲು ನಾವು ಇಲ್ಲಿ ಸೇರಿದ್ದೇವೆ’ ಎಂದು ಹೇಳಿದರು.

‘ಸೋನಿಯಾ ಗಾಂಧಿ ಆಶಯದಂತೆ ಆಗಸ್ಟ್‌ 15ರಂದು ಸ್ವಾತಂತ್ರ್ಯೋತ್ಸವ ಆಚರಿಸುತ್ತಿದ್ದೇವೆ. ಅಂದು ಬೆಂಗಳೂರಿನ ಸಂಗೊಳ್ಳಿ ರಾಯಣ್ಣ ಸರ್ಕಲ್‌ನಿಂದ ನ್ಯಾಷನಲ್‌ ಕಾಲೇಜು ಮೈದಾನದವರೆಗೆ ಕಾಂಗ್ರೆಸ್‌ ವತಿಯಿಂದ ಪಾದಯಾತ್ರೆ ಹಮ್ಮಿಕೊಳ್ಳಲಾಗಿದ್ದು, ರಾಷ್ಟ್ರಧ್ವಜ ಹಿಡಿದು ಹೆಜ್ಜೆ ಹಾಕಲು ನೀವೆಲ್ಲ ಬರಬೇಕು’ ಎಂದು ಮನವಿ ಮಾಡಿದರು.

ಸಿದ್ದರಾಮಯ್ಯಗೆ ಡಿಕೆಶಿಯ ‘ಪ್ರೀತಿ’ ಅಪ್ಪುಗೆ

ಡಿ.ಕೆ. ಶಿವಕುಮಾರ್‌ ಅವರು ಸಿದ್ದರಾಮ್ಮಯ ಅವರಿಗೆ ರಾಮನಗರದ ರೇಷ್ಮೆ ಶಾಲು ಹೊದೆಸಿ, ಇಂದಿರಾ ಗಾಂಧಿ ಕುರಿತ ಕೃತಿಯನ್ನು ನೀಡಿ ಸನ್ಮಾನಿಸಿದರು. ಈ ವೇಳೆ ಬೇರೆ ಯಾವ ಮುಖಂಡರಿಗೂ ಅಕ್ಕ–ಪಕ್ಕಕ್ಕೆ ಬರಲು ಅವಕಾಶ ನೀಡದೇ ಇಬ್ಬರು ಮಾತ್ರ ಕ್ಯಾಮೆರಾಕ್ಕೆ ಪೋಸು ನೀಡಿದರು. ಸಿದ್ದರಾಮಯ್ಯ ಅವರ ಕೈಯನ್ನು ಹಿಡಿದು ಮೇಲೆಕ್ಕೆ ಎತ್ತುವ ಮೂಲಕ ‘ತಮ್ಮಿಬ್ಬರ ನಡುವೆ ಯಾವುದೇ ಭಿನ್ನಾಭಿಪ್ರಾಯ ಇಲ್ಲ’ ಎಂಬ ಸಂದೇಶವನ್ನು ಸಾರಲು ಯತ್ನಿಸಿದರು. ಬಳಿಕ ಸಿದ್ದರಾಮಯ್ಯ ಅವರನ್ನು ಅಪ್ಪಿಕೊಂಡು ಜನ್ಮದಿನದ ಶುಭಾಶಯವನ್ನು ಕೋರಿದರು. ಈ ದೃಶ್ಯವನ್ನು ಕಣ್ತುಂಬಿಕೊಂಡ ಕಾರ್ಯಕರ್ತರ ಹರ್ಷೋದ್ಗಾರ ಮುಗಿಲು ಮುಟ್ಟಿತು.

ಶಿವಕುಮಾರ್‌ ಅವರು ಭಾಷಣ ಆರಂಭಿಸುವ ಮುನ್ನ ‘ಸಿದ್ದರಾಮಯ್ಯಗೆ ಜೈ’ ಎಂದು ಘೋಷಣೆ ಕೂಗಿದಾಗ ಕಾರ್ಯಕರ್ತರು ಸುಮಾರು ಅರ್ಧ ನಿಮಿಷ ಕಾಲ ಕೇಕೆ ಹಾಕಿ ಸಂಭ್ರಮಿಸಿದರು. ಶಿವಕುಮಾರ್‌ ಅವರು ಭಾಷಣದ ನಡುವೆ ಸಿದ್ದರಾಮಯ್ಯ ಹೆಸರು ಉಲ್ಲೇಖಿಸಿದಾಗಲೆಲ್ಲ ಕೇಕೇ ಹಾಕುತ್ತಿದ್ದರು.

*

ಸಿದ್ದರಾಮಯ್ಯ ಅವರನ್ನು ಕೇವಲ ಹಿಂದುಳಿದ ವರ್ಗದವರ ನಾಯಕ ಎಂದು ಬಿಂಬಿಸಬೇಡಿ. ಅವರು ಸರ್ವ ಜನಾಂಗದವರಿಗೂ, ಸರ್ವ ಧರ್ಮದವರಿಗೂ ನಾಯಕರಾಗಿದ್ದಾರೆ.

– ಡಿ.ಕೆ. ಶಿವಕುಮಾರ್‌, ಕೆಪಿಸಿಸಿ ಅಧ್ಯಕ್ಷ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT