ಶನಿವಾರ, 27 ಜುಲೈ 2024
×
ADVERTISEMENT
ಈ ಕ್ಷಣ :
ADVERTISEMENT

ಕೋಮುವಾದಿ, ಕಾರ್ಪೊರೇಟ್ ಸರ್ಕಾರ ತೊಲಗಿಸಿ

ಸಿಪಿಐ ರಾಜ್ಯ ಕಾರ್ಯದರ್ಶಿ ಮಂಡಳಿ ಸದಸ್ಯ ಸಿದ್ದನಗೌಡ ಪಾಟೀಲ
Published 17 ಏಪ್ರಿಲ್ 2024, 7:41 IST
Last Updated 17 ಏಪ್ರಿಲ್ 2024, 7:41 IST
ಅಕ್ಷರ ಗಾತ್ರ

ದಾವಣಗೆರೆ: ‘ಪ್ರಸ್ತುತ ಕೇಂದ್ರದಲ್ಲಿರುವುದು ಕೋಮುವಾದಿ, ಕಾರ್ಪೊರೇಟ್‌ಗಳ ಕಾಂಬಿನೇಷನ್ (ಕೋಕಾ) ಸರ್ಕಾರ. ಇದು ಅಧಿಕಾರಕ್ಕೆ ಬಾರದಂತೆ ತಡೆಯಬೇಕಿದೆ’ ಎಂದು ಸಿಪಿಐ ರಾಜ್ಯ ಕಾರ್ಯದರ್ಶಿ ಮಂಡಳಿ ಸದಸ್ಯ ಸಿದ್ದನಗೌಡ ಪಾಟೀಲ ಹೇಳಿದರು.

‘ಪ್ರಜಾಸತ್ತೆಗೆ ಮಾರಕವಾಗಿರುವ ಬಿಜೆಪಿ ಅಧಿಕಾರದಿಂದ ತೊಲಗಬೇಕು. ಈ ನಿಟ್ಟಿನಲ್ಲಿ ಸಿಪಿಐ ರಾಜ್ಯದ 28 ಕ್ಷೇತ್ರಗಳಲ್ಲೂ ‘ಇಂಡಿಯಾ’ ಒಕ್ಕೂಟಕ್ಕೆ ಬೆಂಬಲ ನೀಡಲಿದ್ದು, ದಾವಣಗೆರೆ ಕ್ಷೇತ್ರದಲ್ಲಿ ಡಾ.ಪ್ರಭಾ ಮಲ್ಲಿಕಾರ್ಜುನ್ ಅವರನ್ನು ಬೆಂಬಲಿಸಲಿದೆ’ ಎಂದು ಮಂಗಳವಾರ ಪತ್ರಿಕಾಗೋಷ್ಠಿಯಲ್ಲಿ ತಿಳಿಸಿದರು. 

‘ಬಿಜೆಪಿ ಅಧಿಕಾರಕ್ಕೆ ಬಂದರೆ ಸಂವಿಧಾನ ಬದಲಾವಣೆ ಮಾಡಲು ಹುನ್ನಾರ ನಡೆಸುತ್ತಿದೆ. ಬದಲಾವಣೆ ಕೇವಲ ಪುಸ್ತಕದಲ್ಲಿ ಅಷ್ಟೇ ಅಲ್ಲ. ಜೀವನ ವಿಧಾನ, ಉತ್ಪಾದನಾ ವಿಧಾನ, ಸಮಾಜ, ಸಾಂಸ್ಕೃತಿಕ ವ್ಯವಸ್ಥೆಗಳು ಬದಲಾಗಲಿವೆ. ಆರ್‌ಎಸ್‌ಎಸ್‌ನ ರಾಜಕೀಯ ವೇದಿಕೆಯಾಗಿರುವ ಬಿಜೆಪಿ, ಗೋಲ್ವಾಲ್ಕರ್ ಸಿದ್ಧಾಂತದಂತೆ ಒಕ್ಕೂಟ ವ್ಯವಸ್ಥೆಯನ್ನು ನಾಶ ಮಾಡಲು ಹೊರಟಿದೆ’ ಎಂದು ಆರೋಪಿಸಿದರು.

‘ಆರ್‌ಎಸ್‌ಎಸ್ ಸ್ಥಾಪನೆಯಾಗಿ 100 ವರ್ಷ ಕಳೆಯುವ ವೇಳೆಗೆ ಭಾರತವನ್ನು ಹಿಂದೂ ರಾಷ್ಟ್ರ ಮಾಡಿ ಅದಕ್ಕೆ ಅದಕ್ಕೆ ಕಾಣಿಕೆಯಾಗಿ ಅರ್ಪಿಸುವುದು, ಸಂವಿಧಾನವನ್ನು ಮನುಸ್ಮೃತಿಯಂತೆ ಬದಲಾಯಿಸುವ ಗುರಿಯನ್ನು ಬಿಜೆಪಿ ಹೊಂದಿದೆ’ ಎಂದು ಆಪಾದಿಸಿದರು. 

‘ಹಿಟ್ಲರ್ ತನ್ನ ಆಡಳಿತದಲ್ಲಿ ವಿರೋಧ ಪಕ್ಷದವರನ್ನು ನಾಶ ಮಾಡಿದಂತೆ, ನರೇಂದ್ರ ಮೋದಿ ಸರ್ಕಾರ ಆಡಳಿತಕ್ಕೆ ಬರುವ ಮುಂಚೆ ವಿರೋಧ ಪಕ್ಷಗಳನ್ನು ಮಟ್ಟ ಹಾಕುವ ಕೆಲಸ ಮಾಡುತ್ತಿದೆ. ವಿರೋಧ ಪಕ್ಷಗಳ ಕೈಕಟ್ಟಿ ಕುಸ್ತಿ ಮಾಡಲು ಹೊರಟಿದೆ. ಮುಂದಿನ ದಿನಗಳಲ್ಲಿ ಚುನಾವಣೆ ನಡೆಯುವುದೇ ಅನುಮಾನವಾಗಿದೆ. ಈ ನಿಟ್ಟಿನಲ್ಲಿ ಮತದಾನದ ಹಕ್ಕು ಉಳಿಸಿಕೊಳ್ಳಲು ಬಿಜೆಪಿ ಸೋಲಿಸಬೇಕಿದೆ’ ಎಂದು ಹೇಳಿದರು.

‘ಪ್ರಧಾನಿ ನರೇಂದ್ರ ಮೋದಿ ಅವರು ಅಧಿಕಾರಕ್ಕೆ ಬರುವ ಮುನ್ನ ಮಾಡಿದ್ದ ಘೋಷಣೆಗಳು ಈಡೇರಿಲ್ಲ. ಉದ್ಯೋಗ ಸೃಷ್ಟಿಯಾಗಿಲ್ಲ. ಮೇಕ್ ಇನ್ ಇಂಡಿಯಾ ಘೋಷಣೆ ಕೈಬಿಡಲಾಗಿದೆ. ರೈತರ ಬೆಲೆ ದ್ವಿಗುಣಗೊಂಡಿಲ್ಲ. ಮೋದಿ ಬಳಿ ಮತ ಕೇಳಲು ಮುಖವಿಲ್ಲ. ಶ್ರೀರಾಮನ ಮುಖವನ್ನು ಬಳಸಿ ಮತ ಕೇಳಲಾಗುತ್ತಿದೆ’ ಎಂದು ಆರೋಪಿಸಿದರು.

ಮುಖಂಡರಾದ ಆವರೆಗೆರೆ ಚಂದ್ರು, ಎಚ್.ಜಿ. ಉಮೇಶ್, ಆನಂದರಾಜ್, ಕೆ.ಎಸ್.ನಾಗರಾಜ್, ಎಂ.ಬಿ.ಶಾರದಮ್ಮ, ವಿ.ಲಕ್ಷ್ಮಣ ಇದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT