ಭಾನುವಾರ, ನವೆಂಬರ್ 28, 2021
20 °C
ಶೋಭಾಯಾತ್ರೆಗೆ ಸಾಕ್ಷಿಯಾದ ಜನಜಾತ್ರೆ

ದಾವಣಗೆರೆ: ಅದ್ದೂರಿ ಶೋಭಾಯಾತ್ರೆಗೆ ನೃತ್ಯದ ಮೆರುಗು

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ದಾವಣಗೆರೆ: ವಿಜಯ ದಶಮಿಯ ಅಂಗವಾಗಿ ಸಾರ್ವಜನಿಕ ವಿಜಯ ದಶಮಿ ಮಹೋತ್ಸವ ಸಮಿತಿ ಮತ್ತು ವಿಶ್ವ ಹಿಂದೂ ಪರಿಷತ್‌ನಿಂದ ಶುಕ್ರವಾರ ಅದ್ದೂರಿಯಾಗಿ ಶೋಭಾಯಾತ್ರೆ  ನೆರವೇರಿತು.

ವೆಂಕಟೇಶ್ವರ ವೃತ್ತದಲ್ಲಿ ಬೆಳಿಗ್ಗೆ ಬೃಹತ್ ಶೋಭಾಯಾತ್ರೆಗೆ ಸಂಸದ ಜಿ.ಎಂ. ಸಿದ್ದೇಶ್ವರ ಚಾಲನೆ ನೀಡಿದರು. ಕೋಡಿಯಾಲ ಹೊಸಪೇಟೆ ಪುಣ್ಯಕೋಟಿ ಮಠದ ಬಾಲಯೋಗಿ ಜಗದೀಶ್ವರ ಸ್ವಾಮೀಜಿ, ಹಿರೇಹಡಗಲಿ ಹಾಲಸ್ವಾಮಿ ಮಠದ ಅಭಿನವ ಹಾಲಸ್ವಾಮಿ ಸ್ವಾಮೀಜಿ, ವಿನೋಬ ನಗರ ಜಡೇಸಿದ್ಧ ಶಿವಯೋಗೀಶ್ವರ ಮಠದ ಶಿವಾನಂದ ಸ್ವಾಮೀಜಿ ಅವರು ಸಾಥ್ ನೀಡಿದರು.

ಎಲ್ಲೆಲ್ಲೂ ನೃತ್ಯ: ಶೋಭಾಯಾತ್ರೆಯಲ್ಲಿ ಮಕ್ಕಳು ಸೇರಿದಂತೆ ಹಿಂದೂ ಸಂಘಟನೆಯ ಕಾರ್ಯಕರ್ತರು ಡೊಳ್ಳಿನ ಸದ್ದಿಗೆ ಕುಣಿದು ಕುಪ್ಪಳಿಸಿದರು. ಮಕ್ಕಳು ಒಬ್ಬರ ಹೆಗಲಮೇಲೆ ಮತ್ತೊಬ್ಬರು ಕುಳಿತು ಭಗವಾಧ್ವಜವನ್ನು ಪ್ರದರ್ಶಿಸಿ ಸಂಭ್ರಮಿಸಿದರು. ಅಲ್ಲದೇ ಧೂಡಾ ಮಾಜಿ ಅಧ್ಯಕ್ಷ ರಾಜನಹಳ್ಳಿ ಶಿವಕುಮಾರ್, ಜೊಳ್ಳಿ ಗುರು ಸೇರಿದಂತೆ ಅನೇಕರು ನೃತ್ಯ ಮಾಡುವ ಮೂಲಕ ‌ಗಮನ ಸೆಳೆದರು.

ವೆಂಕಟೇಶ್ವರ ವೃತ್ತದಿಂದ ಪ್ರಾರಂಭವಾದ ಬೃಹತ್ ಶೋಭಾಯಾತ್ರೆ ಚೌಕಿಪೇಟೆ, ಹೊಂಡದ ವೃತ್ತ, ಅರುಣಾ ಚಿತ್ರಮಂದಿರ ವೃತ್ತದ ಮೂಲಕ ಬೀರಲಿಂಗೇಶ್ವರ ದೇವಸ್ಥಾನದ ಮೈದಾನ ತಲುಪಿತು. ಮಹಿಳೆಯರು, ಮಕ್ಕಳು ಹಾಗೂ ಕುಟುಂಬದವರು ಮನೆಯ ಮಹಡಿಯ ಮೇಲೆ ನಿಂತು ಶೋಭಾಯಾತ್ರೆಯನ್ನು ಕಣ್ತುಂಬಿಕೊಂಡರು. ಈ ಬಾರಿ ಡಿಜೆಗೆ ಅವಕಾಶ ನೀಡಿರಲಿಲ್ಲ.

ಅಯೋಧ್ಯೆಯ ರಾಮಜನ್ಮಭೂಮಿ: ಶೋಭಾಯಾತ್ರೆ ಮೆರವಣಿಗೆಯಲ್ಲಿ ಅಯೋಧ್ಯೆಯ ರಾಮಮಂದಿರ ಕಲಾಕೃತಿ ಗಮನ ಸೆಳೆಯಿತು. ದಾರ್ಶನಿಕರಾದ ವಾಲ್ಮೀಕಿ ಮಹರ್ಷಿ, ಬಸವಣ್ಣ, ಕನಕದಾಸ, ಗೌತಮಬುದ್ಧ, ಅಂಬೇಡ್ಕರ್ ಅವರ ಚಿತ್ರಗಳು ಆಕರ್ಷಿಸಿದವು. ಸ್ವಾತಂತ್ರ್ಯ ಯೋಧರಾದ ಭಗತ್‌ಸಿಂಗ್, ವೀರ ಸಾವರ್ಕರ್, ಸುಭಾಶ್ ಚಂದ್ರಭೋಸ್ ಅವರ ಚಿತ್ರಗಳನ್ನು ಪ್ರದರ್ಶಿಸಲಾಗಿತ್ತು.

ಅಟಲ್‌ ಬಿಹಾರಿ ವಾಜಪೇಯಿ, ಅಬ್ದುಲ್ ಕಲಾಂ ಹಾಗೂ ಕ್ಷಿಪಣಿಗಳು, ಬಾಲಗಂಗಾಧರನಾಥ ಸ್ವಾಮೀಜಿ, ಕುವೆಂಪು, ಕೆಂಗಲ್ ಹನುಮಂತಯ್ಯ, ಒಲಿಂಪಿಕ್ ಕ್ರೀಡಾಪಟುಗಳು, ಹುತಾತ್ಮ ಯೋಧರಾದ ಸಂದೀಪ್ ಉನ್ನೀಕೃಷ್ಣನ್, ಹೇಮಂತ್ ಕರ್ಕೆರಾ, ಪೊಲೀಸ್ ಅಧಿಕಾರಿ ಮಲ್ಲಿಕಾರ್ಜುನ ಬಂಡೆ ಅವರ ಚಿತ್ರಗಳನ್ನು ಪ್ರದರ್ಶಿಸಲಾಗಿತ್ತು. ಧರ್ಮಸ್ಥಳದ ಸ್ವಚ್ಛಭಾರತ ಚಿತ್ರವೂ ಗಮನ ಸೆಳೆಯಿತು. ಕುಂಭಮೇಳ, ಮಥುರಾದ ದೇವಾಲಯ, ಉಚ್ಚಂಗಿದುರ್ಗ, ಹೊರನಾಡು ಅನ್ನಪೂರ್ಣೇಶ್ವರಿ ದೇವಾಲಯಗಳನ್ನು ಚಿತ್ರಿಸಲಾಗಿತ್ತು.

ದುರ್ಗಾದೇವಿ ಮೂರ್ತಿ, ಆರ್ಯವೈಶ್ಯ ಸಮಾಜದ ಕನ್ನಿಕಾಪರಮೇಶ್ವರಿ ದೇವಿಯ ಪುಷ್ಪಕ ರಥದ ಮೆರವಣಿಗೆ, ರಾಮಮಂದಿರದ ಪ್ರತಿಕೃತಿ, ನಂದಿ ಮತ್ತಿತರ ಚಿತ್ರಗಳು ಮೆರವಣಿಗೆಗೆ ಮೆರುಗು ತಂದವು.

ಶಾಸಕ ಎಸ್.ಎ.‌ ರವೀಂದ್ರನಾಥ್, ಮೇಯರ್ ಎಸ್.ಟಿ. ವೀರೇಶ್, ದಾವಣಗೆರೆ ಹರಿಹರ ನಗರಾಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ದೇವರಮನೆ ಶಿವಕುಮಾರ್, ನಗರಪಾಲಿಕೆ ಸದಸ್ಯರಾದ ಕೆ.ಪ್ರಸನ್ನ ಕುಮಾರ್, ಆರ್.ಎಲ್. ಶಿವಪ್ರಕಾಶ್,‌ ಸೋಗಿ ಶಾಂತಕುಮಾರ್, ಆರ್. ಶಿವಾನಂದ್, ಎಸ್. ಮಂಜುನಾಥ್, ಕೆ.ಎಂ. ವೀರೇಶ್, ಮಾಜಿ ಸದಸ್ಯ ಸಂಕೋಳ್ ಚಂದ್ರಶೇಖರ, ಬಿಜೆಪಿ ಜಿಲ್ಲಾ ಅಧ್ಯಕ್ಷ ವೀರೇಶ್ ಹನಗವಾಡಿ, ಮಾಜಿ ಅಧ್ಯಕ್ಷ ಯಶವಂತ ರಾವ್ ಜಾಧವ್ ಭಾಗವಹಿಸಿದ್ದರು.

ಮುಸ್ಲಿಂ ಸಮಾಜದ ಮುಖಂಡ ಜೆ. ಅಮಾನುಲ್ಲಾ ಖಾನ್ ಇತರರು ಶೋಭಾಯಾತ್ರೆ ಚಾಲನಾ ಸಂದರ್ಭದಲ್ಲಿ ಇದ್ದರು‌. ಮುಸ್ಲಿಂ ಮುಖಂಡರು ನಾಡಹಬ್ಬ ದಸರಾ ಶುಭಾಶಯ ಕೋರುವ ಜೊತೆಗೆ ಸಿಹಿ ಹಂಚುವ ಮೂಲಕ ಭಾವೈಕ್ಯಕ್ಕೆ ಸಾಕ್ಷಿಯಾದರು.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು