ಭಾನುವಾರ, 28 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಅಭಿವೃದ್ಧಿ ಜೊತೆ ಜಾಗತಿಕ ತಾಪಮಾನವೂ ಹೆಚ್ಚಳ

ಕಾರ್ಬನ್ ಡೈಆಕ್ಸೈಡ್‌ ಉತ್ಪಾದನೆಯಲ್ಲಿ ಭಾರತ 3ನೇ ದೊಡ್ಡ ರಾಷ್ಟ್ರ: ಬಿ.ಎಂ.ಕುಮಾರಸ್ವಾಮಿ
Last Updated 8 ಜುಲೈ 2018, 10:49 IST
ಅಕ್ಷರ ಗಾತ್ರ

ದಾವಣಗೆರೆ: ಭಾರತವು ಜಗತ್ತಿನ ಅಭಿವೃದ್ಧಿ ರಾಷ್ಟ್ರಗಳೊಂದಿಗೆ ಗುರುತಿಸಿಕೊಳ್ಳುವುದರ ಜೊತೆಗೆ ಜಗತ್ತಿನಲ್ಲಿ ಅತಿ ಹೆಚ್ಚು ಕಾರ್ಬನ್‌ ಡೈಆಕ್ಸೈಡ್‌ ಉತ್ಪಾದಿಸುವ ಮೂರನೇ ಅತಿ ದೊಡ್ಡ ರಾಷ್ಟ್ರ ಎಂಬ ಕುಖ್ಯಾತಿಗೂ ಪಾತ್ರವಾಗಿದೆ ಎಂದು ಅರ್ಥಶಾಸ್ತ್ರಜ್ಞ ಬಿ.ಎಂ. ಕುಮಾರಸ್ವಾಮಿ ಹೇಳಿದರು.

ಭಾರತ ವಿಕಾಸ ಪರಿಷದ್ ಗೌತಮ ಶಾಖೆ ನಗರದ ರಾಷ್ಟ್ರೋತ್ಥಾನ ವಿದ್ಯಾ ಕೇಂದ್ರದಲ್ಲಿ ಶನಿವರ ಹಮ್ಮಿಕೊಂಡಿದ್ದ ‘ಹಸಿರು ಸಂವಾದ’ದಲ್ಲಿ ಅವರು ಮಾತನಾಡಿದರು. ಇಂದು ಪ್ರಪಂಚದ ಎಲ್ಲೆಡೆ ಜಾಗತಿಕ ತಾಪಮಾನ ಕುರಿತು ಚರ್ಚೆಗಳು ನಡೆಯುತ್ತಿವೆ. ಜಾಗತಿಕ ತಾಪಮಾನವನ್ನು ಕಡಿಮೆಗೊಳಿಸುವ ಉದ್ದೇಶದಿಂದ ಜೈವಿಕ ಇಂಧನವನ್ನೂ ಬಳಕೆ ಮಾಡಲಾಗುತ್ತಿದೆ. ಹೀಗಿದ್ದರೂ ಅಭಿವೃದ್ಧಿ ಹೆಸರಿನಲ್ಲಿ ನಿತ್ಯ ಜಾಗತಿಕ ತಾಪಮಾನ ಏರಿಕೆಯಾಗುತ್ತಲೇ ಇದೆ. ಯುರೋಪ್‌ನಲ್ಲಿ ಆದ ಕೈಗಾರಿಕಾ ಕ್ರಾಂತಿ ನಂತರ ಜಗತ್ತಿನ ಎಲ್ಲೆಡೆ ಕೈಗಾರೀಕರಣ, ನಗರೀಕರಣ, ವಾಣಿಜ್ಯೀಕರಣಗಳಿಂದಾಗಿ ಕಾರ್ಬನ್ ಡೈಆಕ್ಸೈಡ್ ಪ್ರಮಾಣ ಹೆಚ್ಚಾಗುತ್ತಲೇ ಇದೆ ಎಂದು ಬೇಸರ ವ್ಯಕ್ತಪಡಿಸಿದರು.

ಆರೋಗ್ಯಕರ ಭೂಮಿಗೆ 280 ಪಿ.ಪಿ.ಎಂ ಕಾರ್ಬನ್ ಡೈಆಕ್ಸೈಡ್ ಇರಬೇಕು. ಆದರೆ, 1992ರಲ್ಲಿ 357 ಪಿ.ಪಿ.ಎಂ ಕಾರ್ಬನ್ ಡೈಆಕ್ಸೈಡ್, 1997ರಲ್ಲಿ 365 ಪಿ.ಪಿ.ಎಂ, 2015ರಲ್ಲಿ 357 ಪಿ.ಪಿ.ಎಂ ಮತ್ತು 2017ರಲ್ಲಿ 407 ಪಿ.ಪಿ.ಎಂ ಕಾರ್ಬನ್ ಡೈಆಕ್ಸೈಡ್ ಗಾಳಿಯಲ್ಲಿದೆ ಎಂದು ಮಾಹಿತಿ ನೀಡಿದರು.

ಶೇ 6.96ರಷ್ಟು ಪ್ರಮಾಣದಲ್ಲಿ ಭಾರತದಲ್ಲಿ ಕಾರ್ಬನ್ ಡೈಆಕ್ಸೈಡ್ ಉತ್ಪತ್ತಿಯಾಗುತ್ತಿದೆ. ಅಮೆರಿಕದಲ್ಲಿ ಶೇ 14.15, ಯೂರೋಪಿಯನ್ ಒಕ್ಕೂಟದಲ್ಲಿ ಶೇ 10.16ರಷ್ಟಿದೆ. ವರ್ಷದಿಂದ ವರ್ಷಕ್ಕೆ ಇದು ಏರಿಕೆಯಾಗುತ್ತಿರುವ ಪರಿಣಾಮ ಐಪಿಸಿಸಿ ವರದಿ ಪ್ರಕಾರ 2040ರ ಹೊತ್ತಿಗೆ ಸಂಪೂರ್ಣ ಭೂಮಿಯೇ ನಾಶವಾಗುವ ಸಾಧ್ಯತೆ ಇದೆ. ಹೀಗಾಗಿ 2020ರ ಹೊತ್ತಿಗೆ ಕಾರ್ಬನ್ ಡೈಆಕ್ಸೈಡ್ ಪ್ರಮಾಣವನ್ನು ಕಡಿಮೆ ಮಾಡಬೇಕಿದೆ ಎಂದು ಹೇಳಿದರು.

ಪ್ರಾಸ್ತಾವಿಕವಾಗಿ ಮಾತನಾಡಿದ ಭಾರತ ವಿಕಾಸ ಪರಿಷದ್ ಕರ್ನಾಟಕ ದಕ್ಷಿಣ ಪ್ರಾಂತ್ಯ ಉಪಾಧ್ಯಕ್ಷ ಬಿ.ಕೆ.ತಿಪ್ಪೇಸ್ವಾಮಿ, ‘ಭಾರತ ವಿಕಾಸ ಪರಿಷದ್ ಅನ್ನು 1963ರಲ್ಲಿ ದೆಹಲಿಯಲ್ಲಿ ಪ್ರಾರಂಭಿಸಲಾಯಿತು. 1962ರಲ್ಲಿ ಭಾರತ ಮತ್ತು ಚೀನಾ ನಡುವೆ ನಡೆಯುತ್ತಿದ್ದ ಯುದ್ಧ ಸಂದರ್ಭದಲ್ಲಿ ಭಾರತೀಯ ಸೇನೆಗೆ ಸಹಕಾರಿಯಾಗಿ ಸಿಟಿಜನ್ ಫೋರಂ ಅನ್ನು ಹುಟ್ಟುಹಾಕಲಾಯಿತು. ನಂತರ ಅದೇ ಭಾರತ ವಿಕಾಸ ಪರಿಷದ್ ಆಗಿ ಮುಂದುವರಿಯಿತು’ ಎಂದು ತಿಳಿಸಿದರು.

‘ಇಂದು ದೇಶದಲ್ಲಿ 2000ಕ್ಕೂ ಹೆಚ್ಚು ಭಾರತ ವಿಕಾಸ ಪರಿಷದ್‌ನ ಶಾಖೆಗಳಿವೆ. 1 ಲಕ್ಷಕ್ಕೂ ಅಧಿಕ ಸಂಖ್ಯೆಯಲ್ಲಿ ಸದಸ್ಯರಿದ್ದಾರೆ. ರಾಜ್ಯದಲ್ಲಿ 36 ಶಾಖೆಗಳಿದ್ದು, 3,000 ಸದಸ್ಯರಿದ್ದಾರೆ. ಭಾರತ ವಿಕಾಸ ಪರಿಷದ್ ಸಂಪರ್ಕ, ಸಹಯೋಗ, ಸಂಸ್ಕಾರ, ಸೇವೆ, ಸಮರ್ಪಣೆ ಎಂಬ ಐದು ಉದ್ದೇಶಗಳನ್ನು ಹೊಂದಿದೆ. ಪ್ರತಿ ವರ್ಷ ಪರಿಸರ ದಿನಗಳಂದು ವಿಶೇಷ ಕಾರ್ಯಕ್ರಮಗಳನ್ನು ಆಯೋಜಿಸುತ್ತಿದೆ’ ಎಂದು ಮಾಹಿತಿ ನೀಡಿದರು.

ಭಾರತ್‌ ವಿಕಾಸ ಪರಿಷದ್‌ ಅಧ್ಯಕ್ಷ ಮಹಾಂತೇಶ್‌ ಯು. ಅಗಡಿ ಅಧ್ಯಕ್ಷತೆ ವಹಿಸಿದ್ದರು. ರಾಷ್ಟ್ರೀಯ ಸಂಘಟನಾ ಕಾರ್ಯದರ್ಶಿ ಸುರೇಶ್‌ ಜೈನ, ಕಾರ್ಯದರ್ಶಿ ಟಿ.ಎಸ್‌. ಜಯರುದ್ರೇಶ್‌, ರಾಜ್ಯ ಸಂಘಟನಾ ಕಾರ್ಯದರ್ಶಿ ದೇವತಾ ಶ್ರೀನಿವಾಸ್‌, ಕುಸುಮಾ ಶ್ರೇಷ್ಠಿ ಅವರೂ ಹಾಜರಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT