ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ದಾವಣಗೆರೆ ನಗರದೇವತೆ ದುರ್ಗಾಂಬಿಕಾ ದೇವಿ ಜಾತ್ರೆ

ದೇವಿ ದರ್ಶನಕ್ಕೆ ಸರದಿ ಸಾಲಿನ ವ್ಯವಸ್ಥೆ l ನಡೆಯಲಿವೆ ಧಾರ್ಮಿಕ, ಸಾಂಸ್ಕೃತಿಕ, ಕ್ರೀಡಾ ಕಾರ್ಯಕ್ರಮಗಳು
Last Updated 13 ಮಾರ್ಚ್ 2022, 11:40 IST
ಅಕ್ಷರ ಗಾತ್ರ

ದಾವಣಗೆರೆ: ಎರಡು ವರ್ಷಗಳಿಗೊಮ್ಮೆ ನಡೆಯುವ ನಗರದೇವತೆ ದುರ್ಗಾಂಬಿಕಾ ಜಾತ್ರೆ ಮಾರ್ಚ್‌ 13ರಂದು ಆರಂಭಗೊಳ್ಳಲಿದೆ. ಜಾತ್ರೆಗೆ ಸಕಲ ಸಿದ್ಧತೆಗಳನ್ನು ಮಾಡಿಕೊಳ್ಳಲಾಗಿದೆ ಎಂದು ದೇವಸ್ಥಾನ ಟ್ರಸ್ಟ್‌ನ ಧರ್ಮದರ್ಶಿ ಗೌಡ್ರು ಚನ್ನಬಸಪ್ಪ ತಿಳಿಸಿದರು.

ಮಾರ್ಚ್‌ 13ರಂದು ಬೆಳಿಗ್ಗೆ ದೇವಿಗೆ ಪಂಚಾಮೃತ ಅಭಿಷೇಕ, ಕಂಕಣಧಾರಣೆ ನಡೆಯಲಿದೆ. ರಾತ್ರಿ ಸಾರ ಹಾಕುವ ಕಾರ್ಯ ನಡೆಯಲಿದೆ. ಮಾರ್ಚ್‌ 15ರಂದು ಬೆಳಿಗ್ಗೆ ದಾಸೋಹದ ಮಹೋಪಕರಣ ಸಮಾರಂಭೋತ್ಸವ, ರಾತ್ರಿ ಅಮ್ಮನವರಿಗೆ ಭಕ್ತಿ ಸಮರ್ಪಣೆ ನಡೆಯಲಿದೆ. ರಾತ್ರಿ 9ರಿಂದ ಸಾಂಸ್ಕೃತಿಕ ಮೇಳ, ಡೊಳ್ಳು ಕುಣಿತ, ಸಿಡಿಮದ್ದಿನ ಪ್ರದರ್ಶನಗಳೊಂದಿಗೆ ಬೆಳ್ಳಿಯ ರಥದಲ್ಲಿ ಅಮ್ಮನವರ ಮೆರವಣಿಗೆ ನಗರದ ಪ್ರಮುಖ ಬೀದಿಗಳಲ್ಲಿ ನಡೆಯಲಿದೆ ಎಂದು ಅವರು ಶನಿವಾರ ಸುದ್ದಿಗೋಷ್ಠಿಯಲ್ಲಿ ತಿಳಿಸಿದರು.

ಪಟ್ಟದ ಕೋಣವನ್ನು ಮೆರವಣಿಗೆಯಲ್ಲಿ ರಾತ್ರಿ ತರಲಾಗುವುದು. ಮಾರ್ಚ್‌ 16ರಂದು ಬೆಳಿಗ್ಗೆ ಜಿಲ್ಲಾಧಿಕಾರಿ, ಪಾಲಿಕೆಯ ಆಯುಕ್ತ, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ, ಪಶುವೈದ್ಯಾಧಿಕಾರಿಗಳ ಸಮ್ಮುಖದಲ್ಲಿ ಪಟ್ಟದ ಕೋಣದಿಂದ ಸಿರಿಂಜಿನಲ್ಲಿ ರಕ್ತ ತೆಗೆದು ದೇವಿಗೆ ಅರ್ಪಿಸಲಾಗುವುದು. ದುರ್ಗಾಂಬಿಕಾ ದೇವಿ ಮಹಾಪೂಜೆ ನಡೆದ ಬಳಿಕ ನಗರದಾದ್ಯಂತ ಚರಗ ಚೆಲ್ಲಲಾಗುವುದು ಎಂದು ವಿವರಿಸಿದರು.

ಮಾರ್ಚ್‌ 18ರಂದು ದಿವಂಗತ ಶಾಮನೂರು ಪಾರ್ವತಮ್ಮ ಅವರ ಜ್ಞಾಪಕಾರ್ಥ, ಮಾರ್ಚ್‌ 19ರಂದು ಧರ್ಮಪ‍್ರವರ್ತ ರಾಜಹಳ್ಳಿ ಹನುಮಂತಪ್ಪ ಅವರ ನೆನಪಿನಲ್ಲಿ, ಮಾರ್ಚ್‌ 20ರಂದು ಮುದೇಗೌಡ್ರು ಪರಮೇಶ್ವರಪ್ಪ, ಲಲಿತಮ್ಮ ನೆನಪಿನಲ್ಲಿ ಅನ್ನ ಪ್ರಸಾದ ವಿತರಣೆ ನಡೆಯಲಿದೆ. ಮೂರು ದಿನವೂ ಎವಿಕೆ ರಸ್ತೆಯಲ್ಲಿರುವ ಅಕ್ಕಮಹಾದೇವಿ ಕಲ್ಯಾಣ ಮಂಟಪದಲ್ಲಿ ಈ ಪ್ರಸಾದದ ವ್ಯವಸ್ಥೆಯನ್ನು ಆ ಮೂರು ಕುಟುಂಬದವರು ಮಾಡಿದ್ದಾರೆ ಎಂದರು.

ಜಾತ್ರೆ ಪ್ರಯುಕ್ತ ಕುರಿ ಕಾಳಗ ಈಗಾಗಲೇ ಮುಗಿದಿದೆ. ಮಾರ್ಚ್‌ 18ರಿಂದ 27ರ ವರೆಗೆ ದೇವಸ್ಥಾನದ ಮುಂಭಾಗದ ವೇದಿಕೆಯಲ್ಲಿ ಪ್ರಸಿದ್ಧ ಕಲಾವಿದರಿಂದ ನಾಟಕ, ಆರ್ಕೆಸ್ಟ್ರಾ ಸಹಿತ ಸಾಂಸ್ಕೃತಿಕ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಗಿದೆ. ಮಾರ್ಚ್‌ 18ರಿಂದ 20ರವರೆಗೆ ಬೀರಲಿಂಗೇಶ್ವರ ಅಖಾಡದಲ್ಲಿ ಪೈಲ್ವಾನರ ಮಲ್ಲಯುದ್ಧ, ಬಯಲು ಜಂಗಿ ಕುಸ್ತಿಗಳು ನಡೆಯಲಿವೆ ಎಂದು ಹೇಳಿದರು.

ಈ ಜಾತ್ರೆಯಲ್ಲಿ ಲಕ್ಷಾಂತರ ಮಂದಿ ಭಾಗವಹಿಸಲಿದ್ದಾರೆ. ಹರಕೆ ಹೊತ್ತವರು ಹರಕೆ ತೀರಿಸಲಿದ್ದಾರೆ. ಎಲ್ಲ ಭಕ್ತರಿಗೆ ದೇವರ ದರ್ಶನ ಪಡೆಯಲು ವ್ಯವಸ್ಥೆ ಮಾಡಲಾಗಿದೆ. ಸರದಿ ಸಾಲಿನಲ್ಲಿ ನಿಂತವರಿಗೆ ತೊಂದರೆಯಾಗಬಾರದು ಎಂಬ ಕಾರಣಕ್ಕೆ ನೀರು, ಮಜ್ಜಿಗೆ ವಿತರಣೆ ನಡೆಯಲಿದೆ ಎಂದರು.

ಸುದ್ದಿಗೋಷ್ಠಿಯಲ್ಲಿ ಟ್ರಸ್ಟಿಗಳಾದ ಬಿ.ಎಚ್‌. ವೀರಭದ್ರಪ್ಪ, ಜೆ.ಕೆ. ಕೊಟ್ರಬಸಪ್ಪ, ತಿಪ್ಪೇಸ್ವಾಮಿ, ಹನುಮಂತರಾವ್‌ ಸಾವಂತ, ಸೊಪ್ಪಿನ ಗುರುರಾಜ ಎಸ್‌.ಎಂ. ಅವರೂಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT