ಮಂಗಳವಾರ, ಮೇ 17, 2022
29 °C
ಶರಣ ಸಂಗಮದಲ್ಲಿ ವಿರಕ್ತಮಠದ ಬಸವಪ್ರಭು ಸ್ವಾಮೀಜಿ

ಪ್ರೇರಣೆಯಿಂದ ಒಳಿತು, ಪ್ರಚೋದನೆಯಿಂದ ಕೆಡುಕು

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ದಾವಣಗೆರೆ: ಮನುಷ್ಯನಿಗೆ ಪ್ರೇರಣೆ ತುಂಬಿದಾಗ ಒಳ್ಳೆಯ ಕಾರ್ಯಗಳು ಆಗುತ್ತವೆ. ಪಟ್ಟಭದ್ರ ಹಿತಾಸಕ್ತಿಗಳು ಪ್ರಚೋದನೆ ಮಾಡಿ ಕೆರಳಿಸಿ ಕೆಟ್ಟ ಕೆಲಸಗಳನ್ನು ಮಾಡಿಸುತ್ತವೆ ಎಂದು ವಿರಕ್ತಮಠದ ಬಸವಪ್ರಭು ಸ್ವಾಮೀಜಿ ಹೇಳಿದರು.

ಬಸವಕೇಂದ್ರ ಶಿವಯೋಗಾಶ್ರಮದಲ್ಲಿ ಬುಧವಾರ ನಡೆದ ಶರಣ ಸಂಗಮ ಕಾರ್ಯಕ್ರಮದಲ್ಲಿ ಸಾನ್ನಿಧ್ಯ ವಹಿಸಿ ಅವರು ಮಾತನಾಡಿದರು.

ಬದುಕಲ್ಲಿ ಪ್ರೇರಣೆ ಅರಳಿಸುತ್ತದೆ. ಪ್ರಚೋದನೆ ಕೆರಳಿಸುತ್ತದೆ. ಮುಗ್ಧರು, ಸ್ವಂತ ವಿಚಾರ ಮಾಡುವ ವಿವೇಕ ಇಲ್ಲದವರನ್ನು ಕೆರಳಿಸುವುದು ಸುಲಭ. ಹಾಗಾಗಿ ಯಾರೇ ಕೆರಳಿಸಿದರೂ ಕೆರಳದೇ ವಿವೇಚನೆ ಮಾಡುವ ಶಕ್ತಿಯನ್ನು ಬೆಳೆಸಿಕೊಂಡರೆ ಕೆಟ್ಟ ಕೃತ್ಯಗಳು ಆಗುವುದಿಲ್ಲ ಎದು ತಿಳಿಸಿದರು.

ಜಲಪ್ರಳಯ, ಜ್ವಾಲಾಮುಖಿ, ಮಹಾಪ್ರವಾಹಗಳಿಂದಾಗುವ ಅನಾಹುತಕ್ಕಿಂತ ಬುದ್ಧಿ ಪ್ರಳಯದಿಂದ ಆಗುವ ಅನಾಹುತ ದೊಡ್ಡದು. ಬುದ್ಧಿಯನ್ನು ಸ್ಥಿಮಿತದಲ್ಲಿಟ್ಟುಕೊಂಡು ಸಮತೋಲನದ ನಡೆ ಕಾಪಾಡಿಕೊಂಡಾಗ ಸಾಧನೆ ಸಾಧ್ಯ ಎಂದು ಸಲಹೆ ನೀಡಿದರು.

ಸರ್ವಮಂಗಳಮ್ಮ ಮಾಗನೂರು ಬಸಪ್ಪ ಶಿಕ್ಷಣ ಮಹಾವಿದ್ಯಾಲಯದ ಸಹಾಯಕ ಪ್ರಾಧ್ಯಾಪಕಿ ಡಾ. ಅನಿತಾ ಎಚ್‌. ದೊಡ್ಡಗೌಡರ್‌, ‘ಕೆರಳುವಿಕೆ ಮತ್ತು ಸಮತೋಲನ’ ಬಗ್ಗೆ ಉಪನ್ಯಾಸ ನೀಡಿ, ‘ಮನುಷ್ಯ ದಿನ್ 24 ಗಂಟೆಗಳನ್ನು ಮೂರು ವಿಂಗಡನೆ ಮಾಡಿಕೊಳ್ಳಬೇಕು. 8 ಗಂಟೆ ವಿಶ್ರಾಂತಿ, 8 ಗಂಟೆ ಸರಿಯಾದ ದುಡಿಮೆ, 8 ಗಂಟೆ ತನ್ನವರಿಗಾಗಿ, ತನಗಾಗಿ ಮೀಸಲಿಟ್ಟರೆ ನೆಮ್ಮದಿಯಾಗಿ ಜೀವನ ಮಾಡಲು ಸಾಧ್ಯ. ಸ್ವಯಂ ಕಾಳಜಿ, ಸಮಯ ಪಾಲನೆ, ಬೇರೆಯವರ ಮಾತಿಗೆ ತಲೆಬಿಸಿ ಮಾಡದೇ ಇರುವುದನ್ನು ವ್ಯಕ್ತಿತ್ವದಲ್ಲಿ ರೂಢಿಸಿಕೊಂಡರೆ ನಮ್ಮನ್ನು ಯಾರೂ ಕೆರಳಿಸಲು ಸಾಧ್ಯವಿಲ್ಲ. ಮನಸ್ಸು ಸಮತೋಲನದಲ್ಲಿದ್ದರೆ ಯಾರಿಂದಲೂ ಹಾಳು ಮಾಡಲು ಆಗದು’ ಎಂದು ವಿಶ್ಲೇಷಿಸಿದರು.

ಮನೆಯ ವಾತಾವರಣ, ಕಚೇರಿ ವಾತಾವರಣ, ಸಮುದಾಯದ ವಾತಾವರಣ ಮತ್ತು ಸಮಾಜದ ವಾತಾವರಣ ಕೂಡ ಮನಸ್ಸನ್ನು ಕೆರಳಿಸಲು ಕಾರಣಗಳಾಗುತ್ತವೆ. ಅವೆಲ್ಲವನ್ನು ಸಂಯಮದಿಂದ ಎದುರಿಸಲು ಕಲಿಯಬೇಕು ಎಂದು ತಿಳಿಸಿದರು.

ಲಿಂಗದೇವಿ ಗುಬ್ಬಿ ಅವರು ಚಿತ್ರದುರ್ಗ ಬಸವೇಶ್ವರ ಆಸ್ಪತ್ರೆಗೆ ದೇಹದಾನ ಮಾಡುವುದಾಗಿ ವಾಗ್ದಾನ ಮಾಡಿದರು. ಪಾಲಿಕೆ ಸದಸ್ಯ ಎಸ್‌.ಟಿ. ವೀರೇಶ್‌, ಅಹಿಂದ ಪ್ರಜಾಶಕ್ತಿ ರಾಜ್ಯಾಧ್ಯಕ್ಷ ಗೋವಿಂದರಾಜು ಜೆ.ಎಂ. ಉಪಸ್ಥಿತರಿದ್ದರು.

ರುಕ್ಮಬಾಯಿ ವಚನ ಗಾಯನ, ಶಿವಬಸಯ್ಯ ಅವರಿಂದ ಭಕ್ತಿ ಗಾಯನ, ಬಸವ ಕಲಾಲೋಕದ ಸದಸ್ಯರಿಂದ ವಚನ ಸಂಗೀತ ಕಾರ್ಯಕ್ರಮ ನಡೆಯಿತು. ರೋಷನ್‌ ಸ್ವಾಗತಿಸಿದರು. ಫಾರೂಕ್‌ ಕಾರ್ಯಕ್ರಮ ನಿರೂಪಿಸಿದರು.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು