ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಜೂಜು, ಕುಡಿತದ ಅಡ್ಡೆಯಾಗಿರುವ ಸರ್ಕಾರಿ ಶಾಲೆ: ನ್ಯಾಯಾಧೀಶ ಆಕ್ರೋಶ

Last Updated 5 ಸೆಪ್ಟೆಂಬರ್ 2021, 3:39 IST
ಅಕ್ಷರ ಗಾತ್ರ

ಜಗಳೂರು: ‘ಸರ್ಕಾರಿ ಶಾಲೆಯ ಆವರಣದಲ್ಲಿ ಜೂಜಾಟ, ಕುಡಿತ ಮುಂತಾದ ಅಕ್ರಮ ಚಟುವಟಿಕೆಯಲ್ಲಿ ತೊಡಗುವ ಕಿಡಿಗೇಡಿಗಳನ್ನು ಪತ್ತೆಹಚ್ಚಿ ಕ್ರಿಮಿನಲ್ ಮೊಕದ್ದಮೆ ದಾಖಲಿಸಿ’ ಎಂದು ಪಟ್ಟಣದ ಸಿವಿಲ್ ಮತ್ತು ಜೆಎಂಎಫ್‌ಸಿ ನ್ಯಾಯಾಧೀಶ ಜಿ. ತಿಮ್ಮಯ್ಯ ಅಧಿಕಾರಿಗಳಿಗೆ ಸೂಚಿಸಿದರು.

ಪಟ್ಟಣದ ಸಂತೆಪೇಟೆ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಗೆ ಶನಿವಾರ ದಿಢೀರ್ ಭೇಟಿ ನೀಡಿ ಮೂಲಸೌಕರ್ಯ ಪರಿಶೀಲಿಸಿ, ಶಾಲೆಯ ಅವ್ಯವಸ್ಥೆಯನ್ನು ಕಂಡು ಬಿಇಒ ಅವರನ್ನು ತರಾಟೆಗೆ ತೆಗೆದುಕೊಂಡರು.

ಸರ್ಕಾರಿ ಶಾಲೆ ಅಥವಾ ಸಾರ್ವಜನಿಕ ಸ್ವತ್ತು ಅಂದರೆ ಬೇಜವಾಬ್ದಾರಿ ಸಲ್ಲದು. ನೂರಾರು ಮಕ್ಕಳು ಅಕ್ಷರ ಕಲಿಯುವ ಸರ್ಕಾರಿ ಶಾಲೆಯ ಆವರಣದಲ್ಲಿ ಇಸ್ಪೀಟ್ ಎಲೆಗಳ ರಾಶಿ ಬಿದ್ದಿವೆ. ಗೋಡೆ ಹಾಗೂ ಬಾಗಿಲುಗಳ ಮೇಲೆ ಮೂತ್ರವಿಸರ್ಜನೆ ಮಾಡಲಾಗಿದೆ. ರಾತ್ರಿ ಸಮಯದಲ್ಲಿ ಜೂಜು ಮತ್ತು ಕುಡಿತದ ಅಡ್ಡೆಯಾಗಿ ಪರಿಣಮಿಸಿದೆ. ಮುಗ್ಧ ಮಕ್ಕಳ ಭವಿಷ್ಯ ರೂಪಿಸಬೇಕಾದ ಪವಿತ್ರ ಸ್ಥಳ ಅನೈತಿಕ ಚಟುವಟಿಕೆ ತಾಣವಾಗಿ ಮಾರ್ಪಟ್ಟಿರುವುದು ಆಘಾತಕಾರಿ ವಿಷಯ ಎಂದು ಆಕ್ರೋಶ ವ್ಯಕ್ತಪಡಿಸಿದರು.

‘ಸರ್ಕಾರಿ ಕನ್ನಡ ಶಾಲೆಯಲ್ಲಿ ಓದಿಸುವ ಆಸೆಯಿಂದ ನನ್ನ ಮಗನನ್ನು ಈ ಶಾಲೆಗೆ ಸೇರಿಸಿದ್ದೇನೆ. ಈ ಅವ್ಯವಸ್ಥೆಯನ್ನು ನೋಡಿದ ಮೇಲೆ ನನ್ನ ನಿರ್ಧಾರ ಸರಿ ಅನ್ನಿಸುತ್ತಿಲ್ಲ. ಇಲ್ಲಿ ಕಂಪ್ಯೂಟರ್‌ಗಳು ಕೆಟ್ಟು ಮೂಲೆ ಸೇರಿವೆ. ಪಟ್ಟಣ ಪಂಚಾಯಿತಿಯಿಂದ ನೀರು ಪೂರೈಕೆ ಆಗುತ್ತಿಲ್ಲ. ಶೌಚಾಲಯ ಸರಿ ಇಲ್ಲ. ಎರಡೂ ಕಡೆ ಗೇಟ್ ಇಲ್ಲ. ಶಾಲೆ ಪಾಳು ಬಿದ್ದಿದೆ. ಕಲಿಕೆಯ ವಾತಾವರಣ ಮಾಯವಾಗಿದೆ. ಪೊಲೀಸರು ರಾತ್ರಿ ಸಮಯದಲ್ಲಿ ಸರ್ಕಾರಿ ಶಾಲೆಗಳಿಗೆ ಗಸ್ತು ಹಾಕಬೇಕು. ಶಿಕ್ಷಣಾಧಿಕಾರಿ ನಿಯಮಿತವಾಗಿ ಭೇಟಿ ಕೊಟ್ಟು ಪರಿಶೀಲಿಸಬೇಕು. ಇಲ್ಲದಿದ್ದರೆ ಹೈಕೋರ್ಟ್ ಹಾಗೂ ಶಿಕ್ಷಣ ಇಲಾಖೆಗೆ ವರದಿ ಮಾಡಬೇಕಾಗುತ್ತದೆ’ ಎಂದು ನ್ಯಾಯಾಧೀಶರು ಎಚ್ಚರಿಕೆ ನೀಡಿದರು.

ಸ್ಥಳದಲ್ಲಿ ಹಾಜರಿದ್ದ ಬಿಇಒ ದಾರುಕನಾಥ್ ಪ್ರತಿಕ್ರಿಯಿಸಿ, ‘ಎರಡು– ಮೂರು ದಿನಗಳಲ್ಲಿ ಸಮಸ್ಯೆ ಪರಿಹರಿಸಲು ಕ್ರಮ ಕೈಗೊಳ್ಳಲಾಗುವುದು. ಸುತ್ತಲೂ ಸಿಸಿಟಿವಿ ಕ್ಯಾಮೆರಾ ಅಳವಡಿಸಲಾಗುವುದು’ ಎಂದು ತಿಳಿಸಿದರು.

ಸಿಡಿಪಿಒ ಬೀರೇಂದ್ರ ಇದ್ದರು. ಇದಕ್ಕೂ ಮುನ್ನ ಪಟ್ಟಣದ ಎನ್.ಎಂ.ಕೆ ಖಾಸಗಿ ಶಾಲೆಗೆ ನ್ಯಾಯಾಧೀಶ ಜಿ. ತಿಮ್ಮಯ್ಯ ಭೇಟಿ ನೀಡಿ ಕೋವಿಡ್ ಮುನ್ನೆಚ್ಚರಿಕೆ ಕ್ರಮಗಳನ್ನು ಕೈಗೊಳ್ಳುವಂತೆ ಸೂಚಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT