ಗುರುವಾರ, 18 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಪದವೀಧರ ಕ್ಷೇತ್ರ ಬಿಜೆಪಿಯ ಕೋಟೆ

ಬಿಜೆಪಿ ಚುನಾವಣಾ ಪ್ರಚಾರ ಸಭೆ ಉದ್ಘಾಟಿಸಿದ ಶಾಸಕ ಎಸ್‌.ಎ. ರವೀಂದ್ರನಾಥ್‌
Last Updated 24 ಅಕ್ಟೋಬರ್ 2020, 14:39 IST
ಅಕ್ಷರ ಗಾತ್ರ

ದಾವಣಗೆರೆ: ಪದವೀಧರ ಕ್ಷೇತ್ರ ಬಿಜೆಪಿಯ ಭದ್ರ ಕೋಟೆಯಾಗಿದೆ. ಇಲ್ಲಿ ಈವರೆಗೆ ನಡೆದ 9 ಚುನಾವಣೆಗಳಲ್ಲಿ 7 ಬಾರಿ ಬಿಜೆಪಿ ಗೆದ್ದಿದೆ. ಈ ಬಾರಿಯೂ ಗೆಲ್ಲಲಿದೆ ಎಂದು ಶಾಸಕ ಎಸ್‌.ಎ. ರವೀಂದ್ರನಾಥ ವಿಶ್ವಾಸ ವ್ಯಕ್ತಪಡಿಸಿದರು.

ಆಗ್ನೇಯ ಪದವೀಧರ ಚುನಾವಣೆ ಪ್ರಯುಕ್ತ ಶಾಮನೂರು ಜಯದೇವಪ್ಪ ಪಾರ್ವತಮ್ಮ ಸಮುದಾಯ ಭವನದಲ್ಲಿ ಶನಿವಾರ ನಡೆದ ಪ್ರಚಾರಸಭೆಯನ್ನು ಉದ್ಘಾಟಿಸಿ ಅವರು ಮಾತನಾಡಿದರು.

‘ಸುಮಾರು ಐದು ದಶಕಗಳ ಹಿಂದೆ ನಾವು ಕೆಲವೇ ಜನ ಕೆಲಸ ಮಾಡುತ್ತಿದ್ದೆವು. ಹಿಂದೆ ಆಯ್ಕೆಯಾದವರು ಮಾಡಿದ ಉತ್ತಮ ಕೆಲಸದಿಂದ ನಾವೆಲ್ಲ ಶಾಸಕರಾಗಲು ಸಾಧ್ಯವಾಯಿತು. ಜನಸಂಘದ ಕಾಲದಿಂದಲೇ ಜನಪರವಾಗಿ ಕೆಲಸ ಮಾಡಿಕೊಂಡು ಬರಲಾಗಿದೆ. ಚಿದಾನಂದ ಗೌಡ ಅವರನ್ನು ಆಗ್ನೇಯ ಕ್ಷೇತ್ರದಿಂದ ಆಯ್ಕೆ ಮಾಡಬೇಕು. ಅವರು ಉತ್ತಮ ಕೆಲಸ ಮುಂದುವರಿಸಬೇಕು’ ಎಂದು ಸಲಹೆ ನೀಡಿದರು.

ಶಿಕ್ಷಕರ ಕ್ಷೇತ್ರದಿಂದ ವಿಧಾನಪರಿಷತ್‌ಗೆ ಆಯ್ಕೆಯಾಗಿರುವ ವೈ.ಎನ್‌. ನಾರಾಯಣ ಸ್ವಾಮಿ ಅವರು ಭಾರಿ ಸ್ಪೀಡ್‌ನಲ್ಲಿ ಹೋಗುತ್ತಿದ್ದಾರೆ. ಅವರನ್ನು ಪಕ್ಷ ಕಂಟ್ರೋಲ್‌ ಮಾಡುವ ಕೆಲಸ ಮಾಡುತ್ತಿದೆ ಎಂದು ಅವರು ತಿಳಿಹಾಸ್ಯದಲ್ಲಿ ಹೇಳಿದರು.

ಸಂಸದ ಜಿ.ಎಂ. ಸಿದ್ದೇಶ್ವರ ಮಾತನಾಡಿ, ‘ಅಭ್ಯರ್ಥಿಯ ಘೋಷಣೆ ಆಗುವ ಮೊದಲು ಚಿದಾನಂದ ಗೌಡರು ನಾಲ್ಕೈದು ಬಾರಿ ಭೇಟಿಯಾಗಿದ್ದರು. ಡಾ. ಮಂಜುನಾಥ ಗೌಡರನ್ನು ಅಭ್ಯರ್ಥಿಯನ್ನಾಗಿ ಮಾಡಲು ಆಗ ನಮ್ಮ ಒಲವು ಇತ್ತು. ಅದನ್ನು ಹೇಳಿದ್ದಲ್ಲದೇ ಪಕ್ಷ ಯಾರಿಗೆ ಟಿಕೆಟ್‌ ನೀಡುತ್ತದೋ ಅವರಿಗೆ ಬೆಂಬಲ ನೀಡುವುದಾಗಿ ತಿಳಿಸಿದ್ದೆ. ದುರದೃಷ್ಟವಶಾತ್‌ ಮಂಜುನಾಥ ಗೌಡರು ನಿಧನರಾದರು. ಆಮೇಲೆ ಅಭ್ಯರ್ಥಿ ಘೋಷಣೆ ಪ್ರಕ್ರಿಯೆ ನಡೆಯಿತು’ ಎಂದು ನೆನಪಿಸಿಕೊಂಡರು.

ಜಾತಿ ಆಧಾರದಲ್ಲಿ ನಡೆಯುವ ಚುನಾವಣೆ ಇದಲ್ಲ. ಮೊದಲ ಸುತ್ತಿನಲ್ಲಿಯೇ ಚಿದಾನಂದ ಗೌಡ ಗೆಲ್ಲುವಂತಾಗಲು ಶೇ 50ಕ್ಕಿಂತ ಒಂದು ಮತ ಹೆಚ್ಚು ಸಿಗುವಂತೆ ಮಾಡಬೇಕು ಎಂದು ಕೋರಿದರು.

ಅಭ್ಯರ್ಥಿ ಚಿದಾನಂದ ಗೌಡ, ‘ನಾನು ಮುಖ್ಯಮಂತ್ರಿ ಯಡಿಯೂರಪ್ಪ ಅವರ ಅಭ್ಯರ್ಥಿ. ಮುಖ್ಯಮಂತ್ರಿ ಸಹಿತ ಎಲ್ಲರೂ ಬೆನ್ನು ತಟ್ಟಿ ಪ್ರೋತ್ಸಾಹಿಸಿದ್ದಾರೆ. ಡಾ. ಮಂಜುನಾಥ ಗೌಡ ಮತ್ತು ನನ್ನ ನಡುವೆ ಒಂದು ಅಲಿಖಿತ ಒಪ್ಪಂದ ಇತ್ತು. ಈ ಭಾಗದಲ್ಲಿ ಅವರು ಮತದಾರರ ನೋಂದಣಿ ಮತ್ತಿತರ ಕೆಲಸಗಳನ್ನು ಮಾಡುವುದು ತುಮಕೂರು ಸುತ್ತಮುತ್ತ ನಾನು ಮಾಡುವುದು. ಪಕ್ಷ ಯಾರಿಗೆ ಟಿಕೆಟ್‌ ನೀಡಿದರೂ ಪರಸ್ಪರ ಬೆಂಬಲಿಸುವುದು ಎಂಬುದು ಆಗಿತ್ತು’ ಎಂದು ತಿಳಿಸಿದರು.

ವಿಧಾನ ಪರಿಷತ್ ಸದಸ್ಯ ವೈ.ಎ. ನಾರಾಯಣ ಸ್ವಾಮಿ, ‘ಕಾಂಗ್ರೆಸ್‌ ಈ ಕ್ಷೇತ್ರದಲ್ಲಿ ಒಮ್ಮೆಯೂ ಗೆದ್ದಿಲ್ಲ. ಜೆಡಿಎಸ್ ಎರಡು ಬಾರಿ ಲಾಟರಿಯಲ್ಲಿ ಗೆದ್ದಂತೆ ಗೆದ್ದಿದೆ. ಬಿಜೆಪಿಗೆ ಶಿಕ್ಷಣ, ಶಿಕ್ಷಕ, ವಿದ್ಯಾರ್ಥಿಗಳು ಮತ್ತು ಶಿಕ್ಷಣ ಸಂಸ್ಥೆಗಳು ಅಂದರೆ ಒಲವು ಜಾಸ್ತಿ’ ಎಂದು ತಿಳಿಸಿದರು.

ಬಿಜೆಪಿ ರಾಜ್ಯ ಘಟಕದ ಕಾರ್ಯದರ್ಶಿ ವಿನಯ ಬಿದರೆ ಮಾತನಾಡಿ, ದೆಹಲಿಯ ಗದ್ದುಗೆಗೆ ಉತ್ತರ ಪ್ರದೇಶ ರಹದಾರಿ ಇದ್ದ ಹಾಗೆ, ಆಗ್ನೇಯ ಕ್ಷೇತ್ರಕ್ಕೆ ದಾವಣಗೆರೆ ರಹದಾರಿ. ಕೇಂದ್ರ ಸರ್ಕಾರ, ರಾಜ್ಯ ಸರ್ಕಾರಗಳು ಹಲವು ಒಳ್ಳೆಯ ಕಾಯ್ದೆಗಳನ್ನು ಜಾರಿಗೆ ತರುತ್ತಿವೆ. ಆದರೆ ವಿಧಾನಪರಿಷತ್‌ನಲ್ಲಿ ವಿರೋಧ ‍ಪಕ್ಷಗಳು ಅದಕ್ಕೆ ಅಡ್ಡಗಾಲು ಹಾಕುತ್ತಿವೆ. ಅದಕ್ಕಾಗಿ ವಿಧಾನ ಪರಿಷತ್‌ನಲ್ಲಿ ಬಿಜೆಪಿಯ ಶಕ್ತಿ ಬಲಗೊಳ್ಳಬೇಕು. ಹಾಗಾಗಿ ಚಿದಾನಂದ ಗೌಡರಿಗೆ ಬೆಂಬಲ ನೀಡುವುದು ಅಗತ್ಯ’ ಎಂದರು.

ಬಿಜೆಪಿ ಜಿಲ್ಲಾ ಘಟಕದ ಅಧ್ಯಕ್ಷ ವೀರೇಶ್‌ ಹನಗವಾಡಿ ಅಧ್ಯಕ್ಷತೆ ವಹಿಸಿದ್ದರು. ಶಾಸಕರಾದ ಎಸ್‌.ವಿ. ರಾಮಚಂದ್ರ, ಪ್ರೊ. ಎನ್‌.ಲಿಂಗಣ್ಣ, ಪಕ್ಷದ ನಾಯಕರಾದ ಬಸವರಾಜ ನಾಯ್ಕ್‌, ಡಾ. ಶಿವಯೋಗಿಸ್ವಾಮಿ, ಯಶವಂತರಾವ್‌ ಜಾಧವ್‌, ಬಿ.ಜಿ. ಅಜಯ್‌ಕುಮಾರ್‌, ಸುಧಾ ಜಯರುದ್ರೇಶ್‌, ಬಿ.ಎನ್‌. ಜಗದೀಶ್‌, ಸೊಕ್ಕೆ ರಾಘವೇಂದ್ರ, ರಾಜನಹಳ್ಳಿ ಶಿವಕುಮಾರ್‌, ದೀಪಾ ಜಗದೀಶ್‌, ಸೌಮ್ಯಾ ನರೇಂದ್ರ, ಮಂಜುಳಾ ಮಹೇಶ್‌ ಉಪಸ್ಥಿತರಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT