ಬುಧವಾರ, 24 ಜುಲೈ 2024
×
ADVERTISEMENT
ಈ ಕ್ಷಣ :
ADVERTISEMENT

ಹರಿಹರ | ಗ್ರಾ.ಪಂ. ನಿರ್ಲಕ್ಷ್ಯ: ದನ–ಕರುಗಳಿಗೆ ಕುಡಿಯಲು ನೀರಿಲ್ಲ

Published 27 ಜೂನ್ 2024, 15:48 IST
Last Updated 27 ಜೂನ್ 2024, 15:48 IST
ಅಕ್ಷರ ಗಾತ್ರ

ಹರಿಹರ: ತಾಲ್ಲೂಕಿನ ಕೊಂಡಜ್ಜಿ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಬುಳ್ಳಾಪುರ ಗ್ರಾಮದಲ್ಲಿ ದನಕರುಗಳು ನೀರು ಕುಡಿಯಲೆಂದು ₹ 3 ಲಕ್ಷ ವೆಚ್ಚದಲ್ಲಿ ತೊಟ್ಟಿ ನಿರ್ಮಿಸಿದ್ದರೂ, ನೀರು ಹರಿಸುವ ವ್ಯವಸ್ಥೆ ಇಲ್ಲದೇ ತೊಟ್ಟಿ ನಿರುಪಯುಕ್ತವಾಗಿದೆ.

ಗ್ರಾಮದಲ್ಲಿ ದನಕರು, ಕುರಿಗಳ ಸಂಖ್ಯೆ ಗಣನೀಯವಾಗಿ ಇರುವುದನ್ನು ಗಮನಿಸಿ ತಾಲ್ಲೂಕು ಪಂಚಾಯಿತಿಯ 2023– 24ನೇ ಸಾಲಿನ ರಾಜ್ಯ ಹಣಕಾಸು ಆಯೋಗದ ಅನಿರ್ಬಂಧಿತ ಅನುದಾನದಲ್ಲಿ ಪಂಚಾಯತ್‌ ರಾಜ್ ಎಂಜಿನಿಯರಿಂಗ್ ಉಪ ವಿಭಾಗದಿಂದ 6 ತಿಂಗಳ ಹಿಂದೆ ಈ ತೊಟ್ಟಿ ನಿರ್ಮಿಸಲಾಯಿತು.

ಸಮೀಪದಲ್ಲೇ ಇರುವ ಕೊಳವೆ ಬಾವಿಯಿಂದ ತೊಟ್ಟಿಗೆ ಒಂದು ತಿಂಗಳ ಕಾಲ ನೀರು ಹರಿಸಿದ್ದು, ಗ್ರಾಮದ ದನಕರುಗಳಿಗೆ ಸಾಕಷ್ಟು ಅನುಕೂಲವಾಗಿತ್ತು. ಆದರೆ, ನಂತರ ನೀರು ಹರಿಸುವ ಕಾರ್ಯ ಸ್ಥಗಿತಗೊಂಡಿದೆ.

ಈ ಗ್ರಾಮಕ್ಕೆ ನದಿ ನೀರಿನ ಸರಬರಾಜು ಇಲ್ಲ. ಎರಡು ಕೊಳವೆಬಾವಿಗಳ ನೀರನ್ನು ಓವರ್ ಹೆಡ್ ಟ್ಯಾಂಕ್‌ಗೆ ಹರಿಸಿ ಗ್ರಾಮಸ್ಥರಿಗೆ ಕುಡಿಯುವ ನೀರಿನ ಸರಬರಾಜು ಮಾಡಲಾಗುತ್ತಿದೆ. ಗ್ರಾಮದಲ್ಲಿ ಹೆಚ್ಚಿನ ನೀರಿನ ಲಭ್ಯತೆ ಇಲ್ಲದ್ದರಿಂದ ದನಕರುಗಳಿಗೆ ಅನುಕೂಲವಾಗಲಿ ಎಂದು ಸಮೀಪದಲ್ಲೇ ಇರುವ ಮತ್ತೊಂದು ಕೊಳವೆಬಾವಿಯಿಂದ ನೀರು ಹರಿಸಲು ವ್ಯವಸ್ಥೆ ಮಾಡಲಾಗಿದೆ.

ಆದರೆ, ಆ ಕೊಳವೆಬಾವಿಯಲ್ಲಿ ನೀರಿನ ಕೊರತೆ ಇದೆ ಎಂಬ ಕಾರಣದಿಂದ ತೊಟ್ಟಿಗೆ ನೀರು ಹರಿಸುವುದನ್ನು ಸ್ಥಗಿತಗೊಳಿಸಲಾಗಿದೆ ಎನ್ನಲಾಗಿದೆ. ಈಗಲೂ ತಾಲ್ಲೂಕಿನ ಹಲವು ಗ್ರಾಮಗಳಲ್ಲಿ ಕುಡಿಯುವ ನೀರನ್ನು ಖಾಸಗಿ ಕೊಳವೆಬಾವಿಗಳಿಂದ ಖರೀದಿಸಿ ಸರಬರಾಜು ಮಾಡಲಾಗುತ್ತಿದೆ. ಈ ತೊಟ್ಟಿಗೂ ಖರೀದಿ ಮಾಡಿದ ನೀರನ್ನು ಸರಬರಾಜು ಮಾಡಿದರೆ ಪ್ರಾಣಿಗಳಿಗೆ ಅನುಕೂಲವಾಗುತ್ತದೆ.

ಗ್ರಾಮದಲ್ಲಿ ಅಂದಾಜು 150 ದನ, 130 ಎಮ್ಮೆ, 200 ಕುರಿ, 15 ಆಡುಗಳಿವೆ. ಜೊತೆಗೆ ಈ ಭಾಗದಲ್ಲಿ ಸಂಚಾರಿ ಕುರಿಗಾಹಿಗಳು ಕುರಿ ಹಿಂಡಿನ ಜೊತೆಗೆ ಈ ಭಾಗದಲ್ಲಿ ಸಂಚರಿಸುತ್ತಾರೆ. ಈ ತೊಟ್ಟಿಗೆ ನೀರು ಹರಿಸಿದರೆ ಸಂಚಾರಿ ಕುರಿ ಹಿಂಡಿನ ಜೊತೆಗೆ ಗ್ರಾಮದ ಪ್ರಾಣಿ ಸಂಕುಲಕ್ಕೂ ಅನುಕೂಲವಾಗುತ್ತದೆ.

ಮುಂಗಾರು ಆರಂಭವಾಗಿ ಒಂದು ತಿಂಗಳಾಗುತ್ತಾ ಬಂದರೂ ಬಿರು ಮಳೆಯಾಗದೆ ಕೆರೆ, ಕಟ್ಟೆಗಳಿಗೆ ನೀರು ಬಂದಿಲ್ಲ. ಹೀಗಾಗಿ ಗ್ರಾಮ ಪಂಚಾಯಿತಿಯವರು ಜನರಿಗೆ ನೀರಿನ ಸೌಲಭ್ಯಕ್ಕೆ ಆದ್ಯತೆ ನೀಡಿದಂತೆ ಪ್ರಾಣಿಗಳ ಕುಡಿಯುವ ನೀರಿಗೂ ಆದ್ಯತೆ ನೀಡಬೇಕಿದೆ ಎಂದು ಗ್ರಾಮಸ್ಥರು ಒತ್ತಾಯಿಸುವರು.

ತೊಟ್ಟಿಗೆ ನೀರು ಹರಿಸುವ ಕೊಳವೆಬಾವಿಯಲ್ಲಿ ನೀರಿನ ಕೊರತೆ ಇದೆ. ಮೋಟಾರ್ ಕೂಡ ಸುಡುತ್ತಿದೆ. ಹೀಗಾಗಿ ತೊಟ್ಟಿಗೆ ನೀರು ಹರಿಸುವುದನ್ನು ಸ್ಥಗಿತಗೊಳಿಸಲಾಗಿದೆ. ಪರ್ಯಾಯ ವ್ಯವಸ್ಥೆ ಮಾಡಲಾಗುವುದು.
ನಾಗರಾಜ್ ಪಂಚಾಯಿತಿ ಅಭಿವೃದ್ಧಿ ಅಧಿಕಾರಿ ಕೊಂಡಜ್ಜಿ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT