ಶುಕ್ರವಾರ, 3 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ದಾವಣಗೆರೆ ವಿವಿ: ಅತಿಥಿ ಉಪನ್ಯಾಸಕರು ಅತಂತ್ರ

ಗೌರವ ಧನ, ಸೇವಾ ಅಂಕಗಳು ಕೈತಪ್ಪುವ ಭೀತಿ
Published 14 ಜುಲೈ 2023, 6:52 IST
Last Updated 14 ಜುಲೈ 2023, 6:52 IST
ಅಕ್ಷರ ಗಾತ್ರ

ದಾವಣಗೆರೆ: ದಾವಣಗೆರೆ ವಿಶ್ವವಿದ್ಯಾಲಯ ವ್ಯಾಪ್ತಿಯ ಸರ್ಕಾರಿ ಪ್ರಥಮ ದರ್ಜೆ ಕಾಲೇಜುಗಳಲ್ಲಿ ಕಾರ್ಯನಿರ್ವಹಿಸುತ್ತಿರುವ ಅತಿಥಿ ಉಪನ್ಯಾಸಕರನ್ನು 2 ತಿಂಗಳ ಮೊದಲೇ ಕರ್ತವ್ಯದಿಂದ ಬಿಡುಗಡೆ ಮಾಡಿದ್ದು, ಅತಂತ್ರರಾಗಿದ್ದಾರೆ.

ರಾಜ್ಯದ ಸರ್ಕಾರಿ ಪ್ರಥಮ ದರ್ಜೆ ಕಾಲೇಜುಗಳಿಗೆ ಸರ್ಕಾರ ಕಳೆದ ಫೆಬ್ರುವರಿ ತಿಂಗಳಲ್ಲಿ ಏಕಕಾಲದಲ್ಲಿ ಕೌನ್ಸೆಲಿಂಗ್ ನಡೆಸಿ ಮೆರಿಟ್ ಆಧಾರದ ಮೇಲೆ ಮೇಲೆ 10,000 ಅತಿಥಿ ಉಪನ್ಯಾಸಕರನ್ನು ನೇಮಕ ಮಾಡಿದ್ದು, ಫೆಬ್ರುವರಿ 10ರಿಂದ ಕಾರ್ಯ ನಿರ್ವಹಿಸಲು ಅವಕಾಶ ಕಲ್ಪಿಸಲಾಗಿತ್ತು.

10 ತಿಂಗಳ ಅವಧಿಗೆ ಅಥವಾ ವಿಶ್ವವಿದ್ಯಾಲಯಗಳ ಶೈಕ್ಷಣಿಕ ಅವಧಿ ಮುಗಿಯುವರೆಗೆ ಎಂದು ನೇಮಕಾತಿ ಆದೇಶದಲ್ಲಿ ತಿಳಿಸಲಾಗಿದೆ. ಆದರೆ ದಾವಣಗೆರೆ ವಿಶ್ವವಿದ್ಯಾಲಯದ ಶೈಕ್ಷಣಿಕ ಅವಧಿ ರಾಜ್ಯದ ಉಳಿದ ವಿಶ್ವವಿದ್ಯಾಲಯಗಳ ಶೈಕ್ಷಣಿಕ ಅವಧಿಗೆ ಎರಡು ತಿಂಗಳ ಮೊದಲೇ (ಜುಲೈ 8ಕ್ಕೆ) ಮುಗಿದಿದ್ದು, ದಾವಣಗೆರೆ ವಿ.ವಿ. ವ್ಯಾಪ್ತಿಯಲ್ಲಿ ಕಾರ್ಯನಿರ್ವಹಿಸುತ್ತಿರುವ ಅತಿಥಿ ಉಪನ್ಯಾಸಕರಿಗೆ ಎರಡು ತಿಂಗಳ ಗೌರವಧನ ಹಾಗೂ ಸೇವಾ ಅಂಕಗಳು ಕೈತಪ್ಪುವ ಆತಂಕದಲ್ಲಿದ್ದಾರೆ.

ಇಲಾಖೆ ತಕ್ಷಣ ಮಧ್ಯಪ್ರವೇಶ ಮಾಡಿ ರಾಜ್ಯದ ಇತರೆ ವಿಶ್ವವಿದ್ಯಾಲಯಗಳ ರೀತಿಯಲ್ಲೇ ಶೈಕ್ಷಣಿಕ ಅವಧಿವರೆಗೆ ಅಥವಾ 10 ತಿಂಗಳಿಗೆ ಅಥವಾ 2023– 24ನೇ ಶೈಕ್ಷಣಿಕ ಅವಧಿಗೆ ಅತಿಥಿ ಉಪನ್ಯಾಸಕರನ್ನು ನೇಮಕ ಮಾಡಿಕೊಳ್ಳುವವರೆಗೆ ನಿಮ್ಮನ್ನು ಮುಂದುವರಿಸುತ್ತೇವೆ ಎಂಬ ಭರವಸೆ ನೀಡಬೇಕು. ಇಲ್ಲದಿದ್ದರೆ ಪರೀಕ್ಷೆ ಹಾಗೂ ಮೌಲ್ಯಮಾಪನ ಕಾರ್ಯ ಬಹಿಷ್ಕರಿಸುತ್ತೇವೆ’ ಎಂದು ರಾಜ್ಯ ಅತಿಥಿ ಉಪನ್ಯಾಸಕರ ಸಂಘದ ಅಧ್ಯಕ್ಷ ಹನುಮಂತ ಗೌಡ ಕಲ್ಮನಿ ಎಚ್ಚರಿಸಿದ್ದಾರೆ.

ಅತಿಥಿ ಉಪನ್ಯಾಸಕರ ನೇಮಕವಾಗುವವರೆಗೆ ಮುಂದುವರೆಸುತ್ತೇವೆ ಎಂದು ಲಿಖಿತ ಭರವಸೆ ನೀಡಿದರೆ ಮಾತ್ರ ಪರೀಕ್ಷಾ ಕಾರ್ಯಗಳನ್ನು ನಿರ್ವಹಿಸುತ್ತೇವೆ. ಇಲ್ಲದಿದ್ದರೆ ಆಯಾ ಜಿಲ್ಲೆಯ ಶಾಸಕರ ಮನೆಯ ಮುಂದೆ ಧರಣಿ ನಡೆಸಲಾಗುವುದು’ ಎಂದು ಎಚ್ಚರಿಸಿದ್ದಾರೆ.

‘ದಾವಣಗೆರೆ ಹಾಗೂ ಚಿತ್ರದುರ್ಗ ಜಿಲ್ಲೆಗಳಲ್ಲಿ 1500ಕ್ಕೂ ಹೆಚ್ಚು ಉಪನ್ಯಾಸಕರು ಇದ್ದು, 2022– 23ನೇ ಶೈಕ್ಷಣಿಕ ಅವಧಿಯಲ್ಲಿ ಕೇವಲ ಐದು ತಿಂಗಳು ಮಾತ್ರ ಕಾರ್ಯನಿರ್ವಹಿಸಿದ್ದೇವೆ. ವಿದ್ಯಾರ್ಥಿಗಳ ಹಿತದೃಷ್ಟಿಯಿಂದ ನಮ್ಮ ಪಾಠ ಪ್ರವಚನಗಳನ್ನು ನಿಗದಿತ ಅವಧಿಯಲ್ಲಿ ಪೂರ್ಣಗೊಳಿಸಿದ್ದೇವೆ. ರಾಜ್ಯದ 430 ಕಾಲೇಜುಗಳ ಅತಿಥಿ ಉಪನ್ಯಾಸಕರ ರೀತಿಯಲ್ಲೇ ನಮ್ಮನ್ನು ಏಕಕಾಲದಲ್ಲೇ ಬಿಡುಗಡೆ ಮಾಡಬೇಕು’ ಎಂದು ಉಪನ್ಯಾಸಕ ಶಿವಕುಮಾರ್ ಯರಗಟ್ಟಿಹಳ್ಳಿ ಆಗ್ರಹಿಸಿದ್ದಾರೆ.

‘ಈ ಸಂಬಂಧ ಜಿಲ್ಲಾ ಉಸ್ತುವಾರಿ ಸಚಿವ ಎಸ್.ಎಸ್. ಮಲ್ಲಿಕಾರ್ಜುನ್ ಅವರನ್ನು ಭೇಟಿ ಮಾಡಲಾಗುವುದು’ ಎಂದು ಅವರು ತಿಳಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT