ಬುಧವಾರ, 24 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

‘ಹಕ್ಕಿಲೋಕ’ದಲ್ಲಿ ಮಕ್ಕಳ ವಿಹಾರ

ಅರಣ್ಯ ಇಲಾಖೆಯಿಂದ ವಿನೂತನ ಕಾರ್ಯಕ್ರಮ
Last Updated 15 ಫೆಬ್ರುವರಿ 2019, 20:30 IST
ಅಕ್ಷರ ಗಾತ್ರ

ಶಿರಸಿ: ಉತ್ತರ ಕನ್ನಡ ಜಿಲ್ಲೆಯ 300 ಪ್ರೌಢಶಾಲೆಗಳಲ್ಲಿ ಇನ್ನು ತಿಂಗಳಿಗೊಂದು ಹೊಸ ಹಕ್ಕಿ ಹಾರಾಡಲಿದೆ. 15 ಸಾವಿರಕ್ಕೂ ಹೆಚ್ಚು ಮಕ್ಕಳು ಈ ಬಾನಾಡಿಗಳ ಒಡನಾಟ ಬೆಳೆಸಿಕೊಳ್ಳಲು ಸಜ್ಜಾಗಿದ್ದಾರೆ.

ಕರ್ನಾಟಕ ಪರಿಸರ ಪ್ರವಾಸೋದ್ಯಮ ಅಭಿವೃದ್ಧಿ ಮಂಡಳಿ ಮತ್ತು ಅರಣ್ಯ ಇಲಾಖೆ ಸೇರಿ, ಶಿಕ್ಷಣ ಇಲಾಖೆಯ ಸಹಕಾರ ಪಡೆದು, ‘ತಿಂಗಳ ಹಕ್ಕಿಲೋಕ’ ಎಂಬ ವಿನೂತನ ಕಾರ್ಯಕ್ರಮ ಅನುಷ್ಠಾನಗೊಳಿಸಲು ಸಿದ್ಧತೆ ನಡೆಸಿವೆ. ಜಿಲ್ಲೆಯ ‍ಪ್ರತಿ ತಾಲ್ಲೂಕಿನ 25 ಶಾಲೆಗಳನ್ನು ಈ ಕಾರ್ಯಕ್ರಮಕ್ಕೆ ಆಯ್ಕೆ ಮಾಡಿಕೊಳ್ಳಲಾಗಿದೆ.

‘ಮಕ್ಕಳಲ್ಲಿ ಹಕ್ಕಿ– ಪಕ್ಷಿಗಳು, ಪರಿಸರದ ಬಗ್ಗೆ ಅರಿವು ಮೂಡಿಸುವ ಪ್ರಯತ್ನ ಈ ತಿಂಗಳ ಹಕ್ಕಿಲೋಕ. ಆಯ್ಕೆ ಮಾಡಿಕೊಂಡಿರುವ ಪ್ರತಿ ಶಾಲೆಯ ಒಬ್ಬರು ಶಿಕ್ಷಕರಿಗೆ ಪೂರ್ವಭಾವಿಯಾಗಿ ತರಬೇತಿ ನೀಡಿ, ಹಕ್ಕಿಯ ಜೀವನಕ್ರಮ ತಿಳಿಸುವ ಫಲಕಗಳನ್ನು ಕೊಡಲಾಗುತ್ತದೆ. ಆ ಶಿಕ್ಷಕರು ಆಯ್ದ 50 ಮಕ್ಕಳಿಗೆ ಆಯಾ ತಿಂಗಳಿಗೆ ಗುರುತಿಸಿರುವ ಹಕ್ಕಿಗಳ ಪೂರ್ಣ ಚಿತ್ರಣ ನೀಡುತ್ತಾರೆ. ಆ ಇಡೀ ತಿಂಗಳು ಶಾಲೆಯಲ್ಲಿ ಹಕ್ಕಿಯ ಚಿತ್ರ– ಮಾಹಿತಿ ನೋಡುವ ಮಕ್ಕಳು, ಮನೆಗೆ ಹೋಗುವಾಗ ದಾರಿಯಲ್ಲಿ ಈ ಹಕ್ಕಿ ಕಂಡರೆ ಅವುಗಳ ಚಲನವಲನ, ಆಹಾರ ಕ್ರಮ, ನಡವಳಿಕೆಗಳನ್ನು ಗುರುತಿಸುತ್ತಾರೆ. ಶಾಲೆಯಲ್ಲಿ ಹಾಕುವ ‘ಬರ್ಡರ್ಸ್ ವಾಲ್‌’ನಲ್ಲಿ ಅವರು, ಕಣ್ಣಿನಲ್ಲಿ ಸೆರೆ ಹಿಡಿದಿರುವ ಹಕ್ಕಿಯನ್ನು ಚಿತ್ರ, ಅಕ್ಷರ ರೂಪಕ್ಕೆ ಇಳಿಸುತ್ತಾರೆ’ ಎನ್ನುತ್ತಾರೆ ಹೊನ್ನಾವರ ಡಿಸಿಎಫ್ ವಸಂತ ರೆಡ್ಡಿ.

‘ಹಕ್ಕಿಗಳನ್ನು ಗುರುತಿಸುವುದರೊಂದಿಗೆ ಮಕ್ಕಳಲ್ಲಿ ಕ್ರಮೇಣ ಪರಿಸರದ ಮೇಲೆ ಒಲವು ಮೂಡುತ್ತದೆ. ಪ್ರಾಣಿ– ಪಕ್ಷಿಗಳ ಸಾಂಗತ್ಯ ಅವರಿಗೆ ಆಪ್ತವಾಗುತ್ತದೆ. ಈ ಕಾರಣಕ್ಕಾಗಿ ಮಕ್ಕಳಿಗೆ ಹೆಚ್ಚು ಇಷ್ಟವಾಗುವ, ಆಕರ್ಷಕ ಹಕ್ಕಿಗಳಾದ ಹಾರ್ನಬಿಲ್, ಕಾಡುಕೋಳಿ, ಇಂಡಿಯನ್ ಪ್ಯಾರಡೈಸ್ ಫ್ಲೈಕ್ಯಾಚರ್, ಇಂಡಿಯನ್ ರೋಲರ್, ಮಲಬಾರ್ ಟ್ರೋಗನ್, ರಣಹದ್ದು, ಕಾಜಾಣ, ಬಿಳಿ ಕಂಠದ ಮಿಂಚುಳ್ಳಿ, ನೇರಳೆ ಬಣ್ಣ ಸೂರಕ್ಕಿ, ನವಿಲು, ಗುಬ್ಬಿ, ಬುಲ್‌ಬುಲ್ ಹೀಗೆ 12 ತಿಂಗಳುಗಳಿಗೆ 12 ಹಕ್ಕಿಗಳು ಮಕ್ಕಳನ್ನು ಸೆಳೆಯಲಿವೆ’ ಎಂದು ಅವರು ಕಾರ್ಯಕ್ರಮದ ಯೋಜನೆ ಕುರಿತು ‘ಪ್ರಜಾವಾಣಿ’ಗೆ ತಿಳಿಸಿದರು.

‘ಮುಂದಿನ ಹಂತದಲ್ಲಿ ಮಕ್ಕಳಿಗೆ ಹಕ್ಕಿಗಳ ಮೇಲೆ ರಸಪ್ರಶ್ನೆ ಸ್ಪರ್ಧೆ, ಪ್ರಬಂಧ ಸ್ಪರ್ಧೆ ನಡೆಸುವ ಜತೆಗೆ, ಶಾಲೆಗಳಲ್ಲಿ ಸಂಗ್ರಹವಾಗಿರುವ ಮಾಹಿತಿಗಳ ದಾಖಲೀಕರಣ ಮಾಡಲಾಗುತ್ತದೆ’ ಎಂದು ಅವರು ಹೇಳಿದರು.

***

‘ತಿಂಗಳ ಹಕ್ಕಿಲೋಕ’ ಕಾರ್ಯಕ್ರಮವು ಫೆ.16ರಂದು ದಾಂಡೇಲಿಯಲ್ಲಿ ನಡೆಯುವ ಹಾರ್ನ್‌ಬಿಲ್ ಹಬ್ಬದಲ್ಲಿ ಉದ್ಘಾಟನೆಗೊಳ್ಳಲಿದೆ. ಮೊದಲ ತಿಂಗಳಿಗೆ ‘ಗ್ರೇಟ್ ಇಂಡಿಯನ್ ಹಾರ್ನಬಿಲ್’ ಆಯ್ಕೆ ಮಾಡಿಕೊಳ್ಳಲಾಗಿದೆ

-ವಸಂತ ರೆಡ್ಡಿ, ಡಿಸಿಎಫ್, ಹೊನ್ನಾವರ ಅರಣ್ಯ ವಿಭಾಗ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT