ಶುಕ್ರವಾರ, 3 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಹರಿಹರ: ಹಳಿ ದಾಟಲು ಬೇಕಿದೆ ಪಾದಚಾರಿ ಮೇಲ್ಸೇತುವೆ

ಹರಿಹರ ಉತ್ತರ- ದಕ್ಷಿಣ ಭಾಗದ ಜನರ ಸಂಕಟಕ್ಕೆ ಮುಕ್ತಿ ಎಂದು?
Last Updated 23 ಫೆಬ್ರುವರಿ 2023, 2:51 IST
ಅಕ್ಷರ ಗಾತ್ರ

ಹರಿಹರ: ‘ಮಕ್ಕಳು ಶಾಲೆ ತಲುಪಿ, ಅಲ್ಲಿಂದ ಮನೆಗೆ ವಾಪಸಾಗುವವರೆಗೆ ನನಗೆ ಸಮಾಧಾನ ಇರಲ್ಲ. ಆ ರೈಲು ಹಳಿಗಳನ್ನು ದಾಟಿ ಸುರಕ್ಷಿತವಾಗಿ ಮನೆಗೆ ಬರಲಿ ಎಂದು ನಿತ್ಯ ದೇವರಲ್ಲಿ ಬೇಡಿಕೊಳ್ಳುತ್ತೇನೆ’

ಹರಿಹರದ ಗಾಂಧಿನಗರ ನಿವಾಸಿ ಮಂಜುಳಮ್ಮ ಅವ ಮಾತುಗಳಿವು. ಇವರ ಇಬ್ಬರು ಮಕ್ಕಳು ರೈಲು ಹಳಿಯ ಆಚೆ ಇರುವ ಖಾಸಗಿ ಶಾಲೆಯೊಂದರಲ್ಲಿ ವಿದ್ಯಾಭ್ಯಾಸ ಮಾಡುತ್ತಿದ್ದು, ನಿತ್ಯಮನೆಯಿಂದ ಹೊರಟು, ರೈಲು ಹಳಿಗಳನ್ನು ದಾಟಿ ಶಾಲೆ ತಲು‍ಪಬೇಕಿರುವುದರಿಂದ ಅವರ ಪಾಲಕರಲ್ಲಿ ಚಿಂತೆ.

ಅಂದಹಾಗೆ, ಇದು ಬರೀ ಮಂಜುಳಮ್ಮ ಅವರೊಬ್ಬರ ಆತಂಕವಲ್ಲ. ನಗರದ ನೂರಾರು ಕುಟುಂಬದವರ, ಪೋಷಕರ ದುಗುಡವಾಗಿದೆ.

ದಶಕಗಳ ಹಿಂದೆ, ಊರಾಚೆ ರೈಲು ನಿಲ್ದಾಣ ಇತ್ತು. ಆಗ ನಗರದ ಬಹುತೇಕ ಜನವಸತಿಯ ಬಡಾವಣೆಗಳು ನಿಲ್ದಾಣದ ದಕ್ಷಿಣ ಭಾಗದಲ್ಲಿದ್ದವು. 1941ರಲ್ಲಿ ಮೈಸೂರು ಕಿರ್ಲೋಸ್ಕರ್ ಕಾರ್ಖಾನೆಯ ಉತ್ತರ ಭಾಗದಲ್ಲಿ ಸ್ಥಾಪನೆಯಾದ ನಂತರ ಉತ್ತರ ಭಾಗದಲ್ಲಿ ಏಳೆಂಟು ಬಡಾವಣೆಗಳು ಅಭಿವೃದ್ಧಿಯಾದವು. ಜೊತೆಗೆ ಎಂಕೆಇಟಿ, ವಿದ್ಯಾದಾಯಿನಿ, ಸೇಂಟ್ ಮೇರಿಸ್ ಮತ್ತಿತರ ಪ್ರಮುಖ ವಿದ್ಯಾಸಂಸ್ಥೆಗಳೂ ಅಲ್ಲೇ ಆರಂಭವಾದವು. ಈ ಶಾಲೆಗಳಲ್ಲಿ ವಿದ್ಯಾರ್ಥಿಗಳ ಸಂಖ್ಯೆ ಅಂದಾಜು ಆರೇಳು ಸಾವಿರ ಇದೆ. ಇದರಲ್ಲಿ ಬಹುತೇಕ ವಿದ್ಯಾರ್ಥಿಗಳು ನಗರದ ದಕ್ಷಿಣ ಭಾಗದಲ್ಲಿ ಮನೆ ಇರುವವರು.
ಆಟೊ, ಸೈಕಲ್‌ಗಳಲ್ಲಿ ಮಾತ್ರವಲ್ಲದೆ, ನಡೆದುಕೊಂಡು ಶಾಲೆಗೆ ಹೋಗಿ ಬರುವ ವಿದ್ಯಾರ್ಥಿಗಳ ಸಂಖ್ಯೆಯೂ ಗಣನೀಯವಾಗಿದೆ. ಜೊತೆಗೆ ನಗರದ ಉತ್ತರ ಭಾಗದಿಂದ ದಕ್ಷಿಣ ಭಾಗದಲ್ಲಿರುವ ಪ್ರಮುಖ ಕಾಲೇಜುಗಳಿಗೆ ಸಂಚರಿಸುವ ವಿದ್ಯಾರ್ಥಿಗಳು, ಬಸ್, ರೈಲ್ವೆ ನಿಲ್ದಾಣ, ಮಾರುಕಟ್ಟೆಗೆ ವಿವಿಧ ಕಾರ್ಯಗಳಿಗೆ ನಡೆದುಕೊಂಡು ಸಂಚರಿಸುವವರೂ ಈ ಅಪಾಯಕಾರಿ ರೈಲು ಹಳಿಗಳನ್ನು ದಾಟುತ್ತಾರೆ.

ಸಮಸ್ಯೆ ಏನು?: ನಗರದ ಉತ್ತರ- ದಕ್ಷಿಣ ಭಾಗದ ಜನರ ಸಂಚಾರಕ್ಕೆ ಹೊಸಪೇಟೆ- ಶಿವಮೊಗ್ಗ ಹೆದ್ದಾರಿಯಲ್ಲಿರುವ ರೈಲ್ವೆ ಕೆಳ ಸೇತುವೆ (ಆರ್‌ಯುಬಿ)ಯೊಂದೇ ಆಧಾರವಾಗಿದೆ. ಸೇತುವೆ 30 ಅಡಿ ಅಗಲವಿದೆ. ಇದರಲ್ಲೇ ಪಾದಚಾರಿಗಳಿಗೆ ಚಿಕ್ಕ ಜಾಗವಿದೆ. ಮಳೆಗಾಲದಲ್ಲಿ ನೀರು ನಿಂತು, ಬೇರೆ ಸಮಯದಲ್ಲಿ ವಿವಿಧ ಕಾರಣಕ್ಕೆ ಸಂಚಾರ ದಟ್ಟಣೆ ಆಗುತ್ತದೆ.

ಬೇಕು ಪಾದಚಾರಿಗಳ ಮೇಲ್ಸೇತುವೆ
(ಫುಟ್‌ ಓವರ್‌ ಬ್ರಿಜ್‌– ಎಫ್‌ಒಬಿ): ನಗರದ ಉತ್ತರ ಭಾಗದ ಬಡಾವಣೆಗಳಾದ ಕೇಶವನಗರ, ಕೆ.ಆರ್. ನಗರ, ಟಿಪ್ಪುನಗರ, ಹರ್ಲಾಪುರ, ಬಿ.ಜಿ. ಮಹಾಲಿಂಗಪ್ಪ ಬಡಾವಣೆ, ವಿಜಯನಗರ ಬಡಾವಣೆ, ಲೇಬರ್ ಕಾಲೊನಿ, ಎ.ಕೆ. ಕಾಲೊನಿ ಸೇರಿ ವಿವಿಧ ಜನವಸತಿ ಪ್ರದೇಶಕ್ಕೆ ನಡೆದು ಹೋಗುವವರಿಗೆ ಹಳಿಗಳ ಜಾಗದಲ್ಲಿ ರೈಲ್ವೆ ಮೇಲ್ಸೇತುವೆ ನಿರ್ಮಿಸಬೇಕಿದೆ. ಈ ಆರ್‌ಒಬಿಯಿಂದ ಸ್ಥಳೀಯರಿಗೆ ಮಾಶತ್ರವಲ್ಲದೆ, ಹೊರಗಡೆ ಯಿಂದ ಬರುವ ರೈಲು ಪ್ರಯಾಣಿಕರಿಗೂ ಉಪಯೋಗ ವಾಗಲಿದೆ.

ಚುನಾವಣೆ ವೇಳೆ ಮತ ಕೇಳಲು ಬರುವ ಸಂಸದರು, ಶಾಸಕರು, ವಿವಿಧ ಪಕ್ಷಗಳ ಮುಖಂಡರಿಗೆ ಈ ಭಾಗದ ಜನ ಎಫ್‌ಒಬಿ ಬಗ್ಗೆ ಬೇಡಿಕೆ ಇಡುತ್ತಾರೆ. ಈ ಬಾರಿ ಖಂಡಿತ ಮಾಡಿಸುವುದಾಗಿ ಭರವಸೆ ನೀಡಿ ಚುನಾವಣೆ ನಂತರ ಮರೆಯುತ್ತಾರೆ ಎಂದು ಈ ಭಾಗದ ನಿವಾಸಿಗಳು ಆರೋಪಿಸುತ್ತಾರೆ.
ಈ ಸೇತುವೆ ಪಾದಚಾರಿಗಳಿಗೆ ಯೋಗ್ಯವಾಗಿಲ್ಲ. ಹೀಗಾಗಿ ಪಾದಚಾರಿಗಳು ಅನಿವಾರ್ಯವಾಗಿ ಅಪಾಯಕಾರಿ ಎನಿಸಿದ ರೈಲು ಹಳಿಗಳ ಮೂಲಕ ಸಂಚರಿಸುತ್ತಾರೆ. ಪಾದಚಾರಿಗಳ ಸುರಕ್ಷತೆಗೆ ಈ ಹಳಿಗಳ ಮೇಲೆ ಮೇಲ್ಸೇತುವೆ ನಿರ್ಮಿಸುವುದು
ಅನಿವಾರ್ಯವಾಗಿದೆ.

...................

ಹಲವು ಅಪಘಾತಗಳು

ಈಗಿನ ರೈಲುಗಳು ಅತಿ ವೇಗವಾಗಿ ಸಂಚರಿಸುತ್ತವೆ. ಕೆಲವು ನಾನ್ ಸ್ಟಾಪ್ ರೈಲುಗಳು ಇನ್ನಷ್ಟು ವೇಗವಾಗಿರುತ್ತವೆ. ಇದರ ನಡುವೆ ನೂರಾರು ಮಕ್ಕಳು ಆರೇಳು ಜೋಡಿ ಹಳಿಗಳನ್ನು ದಾಟುವುದು ನೋಡಿದರೆ ನಮ್ಮ ಜನಪ್ರತಿನಿಧಿಗಳು, ಅಧಿಕಾರಿಗಳ ಜನಪರ ಕಾಳಜಿ ಎಷ್ಟಿದೆ ಎಂದು ತಿಳಿಯುತ್ತದೆ. ಇಲ್ಲಿ ಹಲವು ಅಪಘಾತಗಳು ನಡೆದು ಸಾವು–ನೋವುಗಳಾಗಿವೆ.

ಎಂ. ಅಹ್ಮದ್ ಸಾಬ್,

ಕೇಶವ ನಗರ ನಿವಾಸಿ, ಹರಿಹರ.

...............

ರಾಜ್ಯ ಸರ್ಕಾರದಿಂದ
ಪ್ರಸ್ತಾವ ಬರಲಿ

ರೈಲ್ವೆ ಹಳಿಗಳ ಮೇಲೆ ಸ್ಥಳೀಯ ನಿವಾಸಿಗಳಿಗೆ ಎಫ್‌ಒಬಿ ನಿರ್ಮಿಸಬೇಕೆಂದರೆ ರಾಜ್ಯ ಸರ್ಕಾರ ಶೇ 50 ವೆಚ್ಚ ಭರಿಸಬೇಕಾಗುತ್ತದೆ. ಈ ಕುರಿತು ರಾಜ್ಯ ಸರ್ಕಾರದಿಂದ ಪ್ರಸ್ತಾವ ಬಂದರೆ ರೈಲ್ವೆ ಇಲಾಖೆ ಎಫ್‌ಒಬಿ ನಿರ್ಮಿಸುತ್ತದೆ.

–ಮಂಜುನಾಥ, ಹಿರಿಯ ವಿಭಾಗೀಯ ವಾಣಿಜ್ಯ ವ್ಯವಸ್ಥಾಪಕ, ಮೈಸೂರು ರೈಲ್ವೆ ವಿಭಾಗ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT