ಶುಕ್ರವಾರ, 10 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಗುಣಮುಖನಾಗಿ ಬಿಡುಗಡೆಗೊಂಡ ಯುವವೈದ್ಯ

ಜಿಲ್ಲೆಯಲ್ಲಿ ಕೋವಿಡ್‌ 19 ಸೋಂಕಿತರಿಲ್ಲ, ಕ್ವಾರಂಟೈನ್‌ನಲ್ಲಿದ್ದಾರೆ * ಮುಂದುವರಿದ ಮುನ್ನೆಚ್ಚರಿಕೆ
Last Updated 10 ಏಪ್ರಿಲ್ 2020, 12:44 IST
ಅಕ್ಷರ ಗಾತ್ರ

ದಾವಣಗೆರೆ: ಕೊರೊನಾ ವೈರಸ್‌ ಸೋಂಕು ಪತ್ತೆಯಾಗಿದ್ದರಿಂದ ಐಸೊಲೇಶನ್‌ ವಾರ್ಡ್‌ನಲ್ಲಿದ್ದ ಫ್ರಾನ್ಸ್‌ನಿಂದ ಬಂದಿದ್ದ ಯುವ ವೈದ್ಯ (ಪಿ.63) ಗುರುವಾರ ಜಿಲ್ಲಾ ಚಿಗಟೇರಿ ಆಸ್ಪತ್ರೆಯಿಂದ ಬಿಡುಗಡೆಗೊಂಡಿದ್ದಾರೆ. ಅಲ್ಲಿಗೆ ಸೋಂಕು ಪತ್ತೆಯಾದ ಜಿಲ್ಲೆಯ ಮೂವರೂ ಗುಣಮುಖರಾದಂತಾಗಿದೆ.

ಅವರ ಗಂಟಲು ದ್ರವವನ್ನು 24 ಗಂಟೆಗಳ ಅಂತರದಲ್ಲಿ 2 ಬಾರಿ ಸಂಗ್ರಹಿಸಿ ಪರೀಕ್ಷೆ ನಡೆಸಲಾಯಿತು. ಎರಡು ಕೂಡ ನೆಗೆಟಿವ್ ಎಂದು ವರದಿ ಬಂದಿದೆ. ಅವರು ಚಿಕಿತ್ಸೆಗೆ ಉತ್ತಮವಾಗಿ ಸ್ಪಂದಿಸಿದ್ದು, ಸಂಪೂರ್ಣ ಗುಣಮುಖರಾಗಿದ್ದಾರೆ ಎಂದು ತಜ್ಞ ವೈದ್ಯರು ದೃಢೀಕರಿಸಿದ್ದಾರೆ. ಆಸ್ಪತ್ರೆಯಿಂದ ಬಿಡುಗಡೆ ಮಾಡಬಹುದು ಎಂದು ಸಲಹೆ ನೀಡಿದ್ದಾರೆ. ಕೇಂದ್ರ ಆರೋಗ್ಯ ಸಚಿವಾಲಯದ ಬಿಡುಗಡೆಯ ಮಾರ್ಗಸೂಚಿಗಳನ್ವಯ ಆಸ್ಪತ್ರೆಯಿಂದ ಬಿಡುಗಡೆಗೊಳಿಸಲಾಗಿದೆ ಎಂದು ಜಿಲ್ಲಾಧಿಕಾರಿ ಮಹಾಂತೇಶ ಬೀಳಗಿ ತಿಳಿಸಿದ್ದಾರೆ.

ಮುಂದಿನ 14 ದಿನಗಳು ಗೃಹ ನಿಗಾವಣೆಯಲ್ಲಿರಲಿದ್ದಾರೆ. ಪ್ರತಿ ದಿನ ತಮ್ಮ ಆರೋಗ್ಯದ ಸ್ವಯಂ ವರದಿ ಮಾಡಲು ಸೂಚಿಸಲಾಗಿದೆ. ಬಿಡುಗಡೆ ನಂತರದ ಚಿಕಿತ್ಸೆಯನ್ನು ಮುಂದುವರಿಸಲು ಸಲಹೆ ನೀಡಲಾಗಿದೆ.

ಖಾಸಗಿ ಆಸ್ಪತ್ರೆಗಳು ತೆರೆಯಲು ಸೂಚನೆ
ಸರ್ಕಾರ ಕೋವಿಡ್-19 ಪ್ರಕರಣಗಳ ಪತ್ತೆಗಾಗಿ ಹೆಚ್ಚಿನ ಪರೀಕ್ಷೆಗಳನ್ನು ಮಾಡಿಸಬೇಕು ಎಂದು ಆದೇಶಿಸಿರುವ ಹಿನ್ನೆಲೆಯಲ್ಲಿ ಎಲ್ಲ ಖಾಸಗಿ ಆಸ್ಪತ್ರೆಗಳು ತೆರೆದು ತಮ್ಮಲ್ಲಿಗೆ ಬರುವ ಶೀತ, ಕೆಮ್ಮು, ಜ್ವರದಂತಹ ಪ್ರಕರಣಗಳನ್ನು ಜಿಲ್ಲಾ ಆಸ್ಪತ್ರೆಗೆ ಉಲ್ಲೇಖಿಸುವ ಮೂಲಕ ಕೋವಿಡ್ ಪರೀಕ್ಷೆ ಹೆಚ್ಚಿಸುವಲ್ಲಿ ಸಹಕರಿಸಬೇಕು ಎಂದು ಜಿಲ್ಲಾಧಿಕಾರಿ ಮಹಾಂತೇಶ ಬೀಳಗಿ ತಿಳಿಸಿದರು.

ಜಿಲ್ಲಾಡಳಿತ ಕಚೇರಿ ಸಭಾಂಗಣದಲ್ಲಿ ಖಾಸಗಿ ಆಸ್ಪತ್ರೆ, ನರ್ಸಿಂಗ್ ಹೋಂ ಮತ್ತು ಐಎಂಎ ಪದಾಧಿಕಾರಿಗಳೊಂದಿಗೆ ನಡೆಸಿದ ಸಭೆಯಲ್ಲಿ ಅವರು ಮಾತನಾಡಿದರು.

ರಾಜ್ಯದಲ್ಲಿ ಕೋವಿಡ್-19 ಪರೀಕ್ಷೆಗಳು ಕಡಿಮೆ ವರದಿಯಾಗುತ್ತಿವೆ. ಕೊರೊನಾ ಸೋಂಕಿತರನ್ನು ಪತ್ತೆ ಹಚ್ಚಲು ಪರೀಕ್ಷೆ ಸಂಖ್ಯೆ ಹೆಚ್ಚಬೇಕು. ಈ ನಿಟ್ಟಿನಲ್ಲಿ ಖಾಸಗಿ ಆಸ್ಪತ್ರೆಗಳು ತೆರೆದು ಸಕ್ರಿಯರಾಗಿ ಕೆಲಸ ಮಾಡಬೇಕು ಎಂದು ಮುಖ್ಯಮಂತ್ರಿ ವಿಡಿಯೊ ಕಾನ್ಫರೆನ್ಸ್‌ನಲ್ಲಿ ಜಿಲ್ಲಾಧಿಕಾರಿಗಳಿಗೆ ಸೂಚಿಸಿದ್ದರು.

ಹೊರರೋಗಿಗಳ ಸಂಖ್ಯೆ, ಇನ್‌ಫ್ಲುಯೆಂಜಾ ಮತ್ತು ಗಂಭೀರ ಉಸಿರಾಟದ ಸಮಸ್ಯೆಗಳ ಪ್ರಕರಣಗಳು ಕಡಿಮೆ ಆಗಿವೆ. ಇದಕ್ಕೆ ಕಾರಣ ಖಾಸಗಿ ಆಸ್ಪತ್ರೆಗಳು ಬಂದ್ ಆಗಿರುವುದಾಗಿದೆ. ಆದ್ದರಿಂದ ಆಸ್ಪತ್ರೆಗಳನ್ನು ತೆರೆದು ಸಕ್ರಿಯವಾಗಿ ಕೆಲಸ ಮಾಡಲು ವೈದ್ಯರು ತೊಂದರೆಗಳು ಏನಾದರೂ ಇದ್ದರೆ ಚರ್ಚಿಸಬೇಕು ಎಂದು ಮನವಿ ಮಾಡಿದರು.

‘ಕಲಬುರ್ಗಿಯಲ್ಲಿ ಖಾಸಗಿ ನರ್ಸಿಂಗ್ ಹೋಂನವರು ನಿರ್ಲಕ್ಷ್ಯ ವಹಿಸಿದ್ದರಿಂದ ಅಥವಾ ಸತ್ಯ ಮುಚ್ಚಿಟ್ಟ ಕಾರಣದಿಂದ ಒಂದು ಸಾವು ಸಂಭವಿಸಿದೆ. ಆದ್ದರಿಂದ ಖಾಸಗಿ ಆಸ್ಪತ್ರೆಗಳು ಈ ಬಗ್ಗೆ ಎಚ್ಚರಿಕೆಯಿಂದ ಇದ್ದು, ಯಾವುದೇ ಜ್ವರ, ಕೆಮ್ಮು ಶೀತ ಪ್ರಕರಣಗಳನ್ನು ಜಿಲ್ಲಾಸ್ಪತ್ರೆಗೆ ಕಳುಹಿಸಿಕೊಡಬೇಕು ಎಂದು ಮುಖ್ಯಮಂತ್ರಿ ತಿಳಿಸಿದ್ದಾರೆ’ ಎಂದು ಜಿಲ್ಲಾ ಪೊಲೀಸ್ ವರಿಷ್ಟಾಧಿಕಾರಿ ಹನುಮಂತರಾಯ ಮಾಹಿತಿ ನೀಡಿದರು.

ಟೆಲಿಮೆಡಿಸಿನ್ ಮೂಲಕ ಚಿಕಿತ್ಸೆ ಚುರುಕುಗೊಳಿಸಬೇಕು. ಚೆಕ್‌ಪೋಸ್ಟ್‌ಗಳಲ್ಲಿ ಅನ್ಯ ತಾಲ್ಲೂಕುಗಳಿಂದ ಬರುವವರನ್ನು ಪರೀಕ್ಷಿಸಲು ಥರ್ಮಲ್ ಸ್ಕ್ಯಾನರ್ ವ್ಯವಸ್ಥೆ ಇಲ್ಲ. ಹಳ್ಳಿಗಳಿಂದ ಮೆಡಿಕಲ್ ಶಾಪ್‌ಗೆಂದು ಹಲವು ಜನರು ಬರುತ್ತಿದ್ದು, ಚೆಕ್‌ಪೋಸ್ಟ್‌ನಲ್ಲಿ ಅವರನ್ನು ನಿರ್ವಹಿಸುವುದು ಕಷ್ಟವಾಗುತ್ತಿರುವ ಹಿನ್ನೆಲೆಯಲ್ಲಿ ವೈದ್ಯರು ಅವರಿಗೆ ಎಸ್‌ಎಂಎಸ್ ಹಾಕುವ ವ್ಯವಸ್ಥೆ ಮಾಡಬೇಕು. ಆ ಎಸ್‌ಎಂಎಸ್ ನೋಡಿ ಬಿಡಲು ಅನುಕೂಲವಾಗುತ್ತದೆ ಎಂದರು.

ಖಾಸಗಿ ಆಸ್ಪತ್ರೆಗಳಲ್ಲೂ ಓಪಿಡಿ ಸಂಖ್ಯೆ ಹೆಚ್ಚಬೇಕು. ಸರ್ಕಾರಿ ಆಸ್ಪತ್ರೆಯಂತೆ, ಖಾಸಗಿ ಆಸ್ಪತ್ರೆಗಳ ಜವಾಬ್ದಾರಿಯೂ ಅಷ್ಟೇ ಮುಖ್ಯವಾಗಿದೆ. ಖಾಸಗಿ ಆಸ್ಪತ್ರೆಗಳು ಸಮರ್ಪಕ ಸೇವೆ ನೀಡದಿದ್ದಲ್ಲಿ ವಿಪತ್ತು ನಿರ್ವಹಣಾ ಕಾಯ್ದೆ ಪ್ರಕಾರ ಕ್ರಮ ಜರುಗಿಸಬಹುದು ಎಂದ ಅವರು ಖಾಸಗಿ ಆಸ್ಪತ್ರೆಗಳು ಸರ್ಕಾರದಿಂದ ಪ್ರತಿದಿನ ಬಿಡುಗಡೆಯಾಗುವ ಮಾರ್ಗಸೂಚಿಗಳನ್ನು ನೋಡಿಕೊಂಡು ಚಿಕಿತ್ಸೆ ನೀಡಬೇಕು. ಡಿಎಚ್‌ಓ ರವರು ಪ್ರತಿದಿನ ನಿಮಗೆ ಅದನ್ನು ಅಪ್‌ಡೇಟ್ ಮಾಡಲಿದ್ದಾರೆ ಎಂದರು.

ಸಾರಿಗೆ ಸಮಸ್ಯೆಯಿಂದ ಹಳ್ಳಿಗಳಿಂದ ಆಸ್ಪತ್ರೆಗಳಿಗೆ ಜನರು ಬರುತ್ತಿಲ್ಲ. ವಾಹನ ವ್ಯವಸ್ಥೆ ಮಾಡಿದರೂ ಕೆಲವು ಸಿಬ್ಬಂದಿ ಕೂಡ ಕರ್ತವ್ಯಕ್ಕೆ ಬರುತ್ತಿಲ್ಲ ಎಂದು ಐಎಂಎ ಕಾರ್ಯದರ್ಶಿ ಪ್ರಸನ್ನ ತಿಳಿಸಿದರು.

ಕೋವಿಡ್ ಐಸಿಯು ರೂಂನಲ್ಲಿ ಕೆಲಸ ಮಾಡುವ ವೈದ್ಯರಿಗೆ ಕ್ವಾರಂಟೈನ್ ವ್ಯವಸ್ಥೆ ಮತ್ತು ವೈದ್ಯರಿಗೆ ಆರ್ಥಿಕ ಸಹಕಾರ ನೀಡಬೇಕು ಎಂದು ಎಸ್‌ಎಸ್ ಆಸ್ಪತ್ರೆಯ ಡಾ.ರವಿ ಕೋರಿದರು.

ನಗರದ ಶಾಮನೂರು ರಸ್ತೆಯಲ್ಲಿರುವ ಎರಡು ಲಾಡ್ಜ್‌ಗಳನ್ನು ವೈದ್ಯರ ಕ್ವಾರಂಟೈನ್‌ಗೆ ಗುರುತಿಸಲಾಗಿದೆ ಎಂದು ಜಿಲ್ಲಾ ಶಸ್ತ್ರಚಿಕಿತ್ಸಕ ಡಾ. ನಾಗರಾಜ್ ತಿಳಿಸಿದರು.

ಆಸ್ಪತ್ರೆ ಸಿಬ್ಬಂದಿಗಳು ಓಡಾಡುವ ವಾಹನಕ್ಕೆ ಪೊಲೀಸರು ತೊಂದರೆ ಕೊಡದಂತೆ ವ್ಯವಸ್ಥೆಯಾಗಬೇಕು ಎಂದು ನರ್ಸಿಂಗ್ ಹೋಂಗಳ ಸಂಘದ ಅಧ್ಯಕ್ಷ ಡಾ.ಮಾವಿನತೋಪು ಮನವಿ ಮಾಡಿದರು.

ಹೆಚ್ಚು ಜನಸಂದಣಿ ಇರುವ ಊರು, ಪ್ರದೇಶಗಳಲ್ಲಿ ಎಲ್ಲರಿಗೂ ಕೋವಿಡ್ 19 ಪರೀಕ್ಷೆ ನಡೆಸಬೇಕು ಎಂದು ಎಸ್‌ಎಸ್‌ಐಎಂಎಸ್ ಪ್ರಾಂಶುಪಾಲ ಡಾ.ಪ್ರಸಾದ್ ಸಲಹೆ ನೀಡಿದರು.

‘ವೈದ್ಯರ ಮೇಲೆ ಹಲ್ಲೆಯಂತಹ ಪ್ರಕರಣಗಳು ಈ ಸಮಯದಲ್ಲಿ ಸಂಭವಿಸಬಹುದು. ಸರ್ಕಾರ ಭದ್ರತೆ ಒದಗಿಸಬೇಕು’ ಎಂದು ಡಾ.ಅರುಣ್‌ಕುಮಾರ್, ‘ಆರ್ಥೋಪೆಡಿಕ್ ಸೇರಿದಂತೆ ಇತರೆ ಸರ್ಜರಿಗೆ ಬರುವ ರೋಗಿಗಳಿಗೆ ಕೋವಿಡ್ ಸ್ಕ್ರೀನಿಂಗ್‌ಗೆ ಅವಕಾಶ ಮಾಡಿಕೊಡಬೇಕು; ಎಂದು ಐಎಂಎ ಅಧ್ಯಕ್ಷ ರುದ್ರಮುನಿ ಮನವಿ ಮಾಡಿದರು.

ಕೋವಿಡ್ -19 ಜಿಲ್ಲಾ ನೋಡಲ್ ಅಧಿಕಾರಿ ಪ್ರಮೋದ ನಾಯಕ, ಡಿಎಚ್‌ಒ ಡಾ.ರಾಘವೇಂದ್ರಸ್ವಾಮಿ, ಜಿಲ್ಲಾ ಸರ್ವೇಕ್ಷಣಾಧಿಕಾರಿ ಡಾ.ರಾಘವನ್, ಎಸ್‌ಎಸ್‌ಐಎಂಎಸ್ ವೈದ್ಯಕೀಯ ಅಧೀಕ್ಷಕ ಡಾ.ಕಾಳಪ್ಪನವರ್, ಬಾಪೂಜಿ ಆಸ್ಪತ್ರೆಯ ಡಿ.ಎಸ್.ಕುಮಾರ್, ಡಾ.ಬಾಲು, ಡಾ.ಗೀತಾಲಕ್ಷ್ಮಿ, ಡಾ.ಉಳ್ಳಾಲ, ಡಾ.ವಿನಯ್ ಕುಮಾರ್, ಡಾ.ಸುಬ್ರಾವ್ ಅವರೂ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT