ಭಾನುವಾರ, 14 ಜುಲೈ 2024
×
ADVERTISEMENT
ಈ ಕ್ಷಣ :
ADVERTISEMENT

ಹೊಸ ಗರ್ಭನಿರೋಧಕ | 6 ಜಿಲ್ಲೆಗಳಿಗೆ ವಿಸ್ತರಣೆ: ದಿನೇಶ್‌ ಗುಂಡೂರಾವ್‌

ವಿಶ್ವ ಆರೋಗ್ಯ ಸಂಸ್ಥೆಯ ಸಹಭಾಗಿತ್ವ, ಆರೋಗ್ಯ ಸಚಿವ ದಿನೇಶ್‌ ಗುಂಡೂರಾವ್‌ ಹೇಳಿಕೆ
Published 11 ಜುಲೈ 2024, 13:53 IST
Last Updated 11 ಜುಲೈ 2024, 13:53 IST
ಅಕ್ಷರ ಗಾತ್ರ

ದಾವಣಗೆರೆ: ಕುಟುಂಬ ಕಲ್ಯಾಣ ಕಾರ್ಯಕ್ರಮದಡಿ ಜನಸಂಖ್ಯಾ ನಿಯಂತ್ರಣಕ್ಕೆ ನೂತನ ಗರ್ಭನಿರೋಧಕಗಳ ಲಭ್ಯತೆಯನ್ನು ಆರು ಜಿಲ್ಲೆಗಳಿಗೆ ವಿಸ್ತರಿಸಲು ನಿರ್ಧರಿಸಲಾಗಿದೆ. ವಿಶ್ವ ಆರೋಗ್ಯ ಸಂಸ್ಥೆಯ (ಡಬ್ಲ್ಯುಎಚ್‌ಒ) ನೆರವಿನಿಂದ ಇದನ್ನು ಅನುಷ್ಠಾನಗೊಳಿಸಲಾಗುವುದು ಎಂದು ಆರೋಗ್ಯ ಸಚಿವ ದಿನೇಶ್ ಗುಂಡೂರಾವ್ ತಿಳಿಸಿದರು.

ಇಲ್ಲಿನ ಬಿಐಇಟಿ ಕಾಲೇಜಿನ ಎಸ್.ಎಸ್.ಮಲ್ಲಿಕಾರ್ಜುನ ಸಾಂಸ್ಕೃತಿಕ ಭವನದಲ್ಲಿ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ವತಿಯಿಂದ ಗುರುವಾರ ಏರ್ಪಡಿಸಿದ್ದ ವಿಶ್ವ ಜನಸಂಖ್ಯಾ ದಿನಾಚರಣೆಯಲ್ಲಿ ಅವರು ಮಾತನಾಡಿದರು.

‘ಹೊಸ ಗರ್ಭನಿರೋಧಕಗಳ ಲಭ್ಯತೆಯ ವ್ಯವಸ್ಥೆಯನ್ನು ನಾಲ್ಕು ಜಿಲ್ಲೆಗಳಲ್ಲಿ ಪ್ರಾಯೋಗಿಕವಾಗಿ ಜಾರಿಗೆ ತರಲಾಗಿತ್ತು. ಗರ್ಭನಿರೋಧಕಗಳು ಸಮುದಾಯದಲ್ಲಿ ಸಿಗುವಂತೆ ಮಾಡುವಲ್ಲಿ ಕರ್ನಾಟಕ ಮೊದಲ ಸ್ಥಾನದಲ್ಲಿದೆ. ಸಮುದಾಯದ ಬೇಡಿಕೆಯನ್ನು ಆಧರಿಸಿ ಇನ್ನೂ ಆರು ಜಿಲ್ಲೆಗಳನ್ನು ಆಯ್ಕೆ ಮಾಡಲಾಗಿದೆ. ಮೂರು ವರ್ಷ ಹಾಗೂ ಮೂರು ತಿಂಗಳ ಸುದೀರ್ಘ ಅವಧಿಯ ಗರ್ಭ ನಿರೋಧಕಗಳನ್ನು ಒದಗಿಸಲಾಗುತ್ತಿದೆ’ ಎಂದು ಹೇಳಿದರು.

‘ಸ್ವಾತಂತ್ರ್ಯ ಬಂದಾಗ ದೇಶದ ಜನಸಂಖ್ಯೆ 36 ಕೋಟಿ ಇತ್ತು. ಈಗ ಐದು ಪಟ್ಟು ಹೆಚ್ಚಾಗಿದೆ. ಮೂಢನಂಬಿಕೆ, ಅನಕ್ಷರತೆ ಕಾರಣಕ್ಕೆ ಜನಸಂಖ್ಯೆ ನಿಯಂತ್ರಣ ವಿಳಂಬವಾಗಿದೆ. ಬಾಲ್ಯ ವಿವಾಹ, ಚಿಕ್ಕ ವಯಸ್ಸಿನಲ್ಲಿ ಶಿಶುವಿಗೆ ಜನ್ಮ ನೀಡುವುದರಿಂದ ತೊಂದರೆ ಆಗಿದೆ. ಗರ್ಭ ನಿರೋಧಕ ಬಳಕೆ ಬಗ್ಗೆ ಮೂಢನಂಬಿಕೆ ಇದೆ. ಮಕ್ಕಳ ನಡುವಿನ ಅಂತರದ ಕುರಿತು ಸರಿಯಾದ ತಿಳಿವಳಿಕೆ ಇಲ್ಲ. ಜನಸಂಖ್ಯೆ ಕಡಿಮೆ ಮಾಡುವುದು ಈವರೆಗಿನ ಆದ್ಯತೆ’ ಎಂದರು.

‘ಫಲವಂತಿಕೆ ದರ ಕರ್ನಾಟಕದಲ್ಲಿ ಶೇ 1.6 ರಷ್ಟಿರುವುದು ಉತ್ತಮ ಬೆಳವಣಿಗೆ. 2048ರ ಬಳಿಕ ವಿಶ್ವದ ಜನಸಂಖ್ಯೆ ಇಳಿಮುಖ ಆಗಲಿದೆ ಎಂದು ಅಂದಾಜಿಸಲಾಗಿದೆ. ಜನಸಂಖ್ಯೆ ಹೆಚ್ಚಾದಂತೆ ಸಂಪನ್ಮೂಲಗಳ ಮೇಲೆ ಒತ್ತಡ ಸೃಷ್ಟಿಯಾಗುತ್ತದೆ. ಪ್ರತಿ ವ್ಯಕ್ತಿ ಆಸ್ತಿ ಆಗಬೇಕೇ ಹೊರತು ಹೊರೆ ಆಗಬಾರದು. ಭ್ರೂಣಹತ್ಯೆ ತಡೆ, ಗರ್ಭಪಾತ ನಿಯಂತ್ರಣಕ್ಕೆ ಇನ್ನೂ ಹೆಚ್ಚಿನ ಒತ್ತು ನೀಡಲಾಗುವುದು’ ಎಂದು ಆಶ್ವಾಸನೆ ನೀಡಿದರು.

ಆರ್ಥಿಕ ಚಿಂತಕ ಜಿ.ಎನ್.ಮಲ್ಲಿಕಾರ್ಜುನಪ್ಪ, ‘ಜನಸಂಖ್ಯೆಯನ್ನು ಮಾನವ ಸಂಪನ್ಮೂಲವಾಗಿ ಪರಿವರ್ತನೆ ಮಾಡುವ ಜರೂರು ಎದುರಾಗಿದೆ. ಬಡತನ, ನಿರುದ್ಯೋಗದ ಸಮಸ್ಯೆಗಳಿಗೆ ಪರಿಹಾರ ಕಂಡುಕೊಳ್ಳುವ ಅಗತ್ಯ ಇದೆ. ಆರ್ಥಿಕ ಅಭಿವೃದ್ಧಿಯಲ್ಲಿ ಭಾರತ ವಿಶ್ವದಲ್ಲಿ 5ನೇ ರಾಷ್ಟ್ರ. ಮಾನವ ಅಭಿವೃದ್ಧಿ ಸೂಚ್ಯಂಕದಲ್ಲಿ 139ನೇ ಸ್ಥಾನದಲ್ಲಿದೆ. ಇದಕ್ಕೆ ಜನರ ಆರೋಗ್ಯ ಕೂಡ ಮುಖ್ಯ’ ಎಂದರು.

ಗರ್ಭನಿರೋಧಕ ವ್ಯವಸ್ಥೆಯ ಅನುಷ್ಠಾನಕ್ಕೆ ಸಂಬಂಧಿಸಿದಂತೆ ವಿಶ್ವ ಆರೋಗ್ಯ ಸಂಸ್ಥೆಯ ಪ್ರತಿನಿಧಿಗಳೊಂದಿಗಿನ ಒಡಂಬಡಿಕೆ ಪತ್ರಕ್ಕೆ ಸಚಿವ ದಿನೇಶ್‌ ಗುಂಡೂರಾವ್‌ ಸಹಿ ಹಾಕಿದರು.

ಜಿಲ್ಲಾಧಿಕಾರಿ ಜಿ.ಎಂ. ಗಂಗಾಧರಸ್ವಾಮಿ, ಜಿಲ್ಲಾ ಪಂಚಾಯಿತಿ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಸುರೇಶ್ ಬಿ. ಇಟ್ನಾಳ್, ರಾಷ್ಟ್ರೀಯ ಆರೋಗ್ಯ ಅಭಿಯಾನ ನಿರ್ದೇಶಕ ಡಾ.ನವೀನ್ ಭಟ್, ಮಾಜಿ ಶಾಸಕ ರಾಮಪ್ಪ, ಜಿಲ್ಲಾ ಆರೋಗ್ಯಾಧಿಕಾರಿ ಡಾ.ಎಸ್.ಷಣ್ಮುಖಪ್ಪ, ಆರೋಗ್ಯ ಇಲಾಖೆಯ ನಿರ್ದೇಶಕಿ ಡಾ.ಬಿ.ಆರ್.ಚಂದ್ರಿಕಾ ಇದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT