ಚನ್ನಗಿರಿ: ಪಟ್ಟಣ ಸೇರಿದಂತೆ ತಾಲ್ಲೂಕಿನಾದ್ಯಂತ ಬುಧವಾರ ತಡರಾತ್ರಿ ಬಿರುಸಿನ ಮಳೆಯಾಗಿದೆ. ಮಳೆಗೆ ಹಲವು ಹಳ್ಳಗಳು ತುಂಬಿ ಹರಿದಿವೆ.
ಚನ್ನಗಿರಿ 29 ಮಿ.ಮೀ., ದೇವರಹಳ್ಳಿ 46, ಕತ್ತಲಗೆರೆ 18, ತ್ಯಾವಣಗಿ 9, ಬಸವಾಪಟ್ಟಣ 15, ಜೋಳದಹಾಳ್ 11, ಸಂತೇಬೆನ್ನೂರು 49, ಉಬ್ರಾಣಿ 38 ಹಾಗೂ ಕೆರೆಬಿಳಚಿ ಗ್ರಾಮದಲ್ಲಿ 30 ಮಿ.ಮೀ. ಮಳೆಯಾಗಿದೆ. ಯಾವುದೇ ರೀತಿಯ ಹಾನಿಯಾಗಿರುವುದಿಲ್ಲ ಎಂದು ತಹಶೀಲ್ದಾರ್ ಕೆ.ಆರ್. ರುಕ್ಮಿಣಿಬಾಯಿ ತಿಳಿಸಿದ್ದಾರೆ.
ತಾಲ್ಲೂಕಿನ ಮರಡಿ ಗ್ರಾಮದ ಬಳಿ ಇರುವ ಶ್ಯಾಗಲೆ ಹಳ್ಳ, ಮೆದಿಕೆರೆ-ತೋಪೇನಹಳ್ಳಿ ಹಳ್ಳ, ಉಬ್ರಾಣಿ ಹಳ್ಳಗಳು ತುಂಬಿ ಹರಿಯುತ್ತಿವೆ. ಹಲವಾರು ಚೆಕ್ ಡ್ಯಾಂಗಳು ತುಂಬಿವೆ. ಮುಂಗಾರು ಹಂಗಾಮಿನ ಮಳೆಗಾಲ ಪ್ರಾರಂಭವಾದ ಮೇಲೆ ದೊಡ್ಡ ಪ್ರಮಾಣದಲ್ಲಿ ಮಳೆ ಬುಧವಾರ ರಾತ್ರಿ ಆಗಿದೆ. ಒಂದು ವಾರದಿಂದ ತಾಲ್ಲೂಕಿನಲ್ಲಿ ಮಳೆಯ ಪ್ರಮಾಣ ಕಡಿಮೆಯಾಗಿತ್ತು. ಮಳೆಯಿಂದಾಗಿ ರೈತರ ಮೊಗದಲ್ಲಿ ನೆಮ್ಮದಿಯ ಮಂದಹಾಸ ಮೂಡುವಂತಾಗಿದೆ.