ಭಾನುವಾರ, ಆಗಸ್ಟ್ 14, 2022
28 °C
ಕೊರೊನಾ ಕಾರಣ: ವಸತಿಗೆ ಆಯ್ಕೆಯಾದರೂ ಬಿಡುಗಡೆಗೊಳ್ಳುತ್ತಿಲ್ಲ ಹಣ

ಮನೆ, ನಿವೇಶನ: ಲಕ್ಷ ದಾಟಿದ ಬೇಡಿಕೆ, ಸಿಗೋದು ಹತ್ತಾರು

ಬಾಲಕೃಷ್ಣ ಪಿ.ಎಚ್‌. Updated:

ಅಕ್ಷರ ಗಾತ್ರ : | |

ದಾವಣಗೆರೆ: ಜಿಲ್ಲೆಯ ನಗರ ಮತ್ತು ಗ್ರಾಮಾಂತರ ಪ್ರದೇಶಗಳಲ್ಲಿ ವಸತಿ ರಹಿತರು, ನಿವೇಶನ ರಹಿತರ ಪ್ರಮಾಣ ಒಂದು ಲಕ್ಷ ಮೀರಿದೆ. ವಿವಿಧ ವಸತಿ ಯೋಜನೆಯಡಿ ಸರ್ಕಾರ ಒದಗಿಸುವ ಮನೆಗಳ ಸಂಖ್ಯೆ ನೋಡಿದರೆ ಆನೆ ಹೊಟ್ಟೆಗೆ ಅರೆಕಾಸಿನ ಮಜ್ಜಿಗೆ ಎಂಬಂತಿದೆ. ಅಲ್ಲದೇ ಮನೆ ಮಂಜೂರಾಗಿ ಕಟ್ಟುತ್ತಿರುವವರಿಗೂ ಹಣ ಬಿಡುಗಡೆ ಆಗದೇ ಅಲೆದಾಡುವುದು ಕೂಡ ತಪ್ಪಿಲ್ಲ.

ದಾವಣಗೆರೆ, ಹರಿಹರ, ಚನ್ನಗಿರಿ, ಮಲೇಬೆನ್ನೂರು, ಹೊನ್ನಾಳಿ, ಜಗಳೂರು ಹೀಗೆ ನಗರ ಸ್ಥಳೀಯಾಡಳಿತ ಇರುವ ಪ್ರದೇಶಗಲ್ಲಿ ಆನ್‌ಲೈನ್‌ನಲ್ಲಿ 5943 ಮಂದಿ ವಸತಿ ರಹಿತರ ಅರ್ಜಿಗಳು, 37,902 ನಿವೇಶನ ಮತ್ತು ವಸತಿ ರಹಿತರ ಅರ್ಜಿ ಸೇರಿ ಒಟ್ಟು 43,845 ಅರ್ಜಿಗಳಿವೆ. ಇವುಗಳನ್ನು ಹೊರತು ಪಡಿಸಿ ಗ್ರಾಮಾಂತರ ಪ್ರದೇಶಗಳಲ್ಲಿ ವಸತಿ ರಹಿತರು 42,833 ಮಂದಿ ಅರ್ಜಿ ಸಲ್ಲಿಸಿದ್ದರೆ, ನಿವೇಶನ, ಮನೆ ಎರಡೂ ಇಲ್ಲದವರು 25,128 ಮಂದಿ ಅರ್ಜಿ ಹಾಕಿದ್ದಾರೆ. ಗ್ರಾಮೀಣ ಪ್ರದೇಶದಲ್ಲಿ ಒಟ್ಟು 67,961 ಅರ್ಜಿಗಳಿವೆ. ಅಂದರೆ ಜಿಲ್ಲೆಯಲ್ಲಿ 1.12 ಲಕ್ಷ ಮಂದಿ ವಸತಿ ಮತ್ತು ನಿವೇಶನ ರಹಿತರು ಅರ್ಜಿ ಸಲ್ಲಿಸಿದ್ದಾರೆ. ಇನ್ನು ಅರ್ಜಿ ಸಲ್ಲಿಸಲು ಗೊತ್ತಾಗದೇ ಹೊರಗುಳಿದವರು ಎಷ್ಟು ಮಂದಿ ಇದ್ದಾರೆ ಎಂಬುದು ಸ್ಪಷ್ಟವಿಲ್ಲ.

‘ನಮ್ಮ ಜಾಗದಲ್ಲಿ ಮನೆ ಕಟ್ಟಲು ವಸತಿ ಯೋಜನೆಗೆ ನಾನು ಅರ್ಜಿ ಸಲ್ಲಿಸಿದ್ದೆ. ಕಳೆದ ವರ್ಷ ಮನೆ ಮಂಜೂರಾಗಿತ್ತು. ಫೌಂಡೇಶನ್‌ ಹಾಕಿ. ಆಮೇಲೆ ದುಡ್ಡು ಬರ್ತದೆ ಎಂದು ಪಾಲಿಕೆಯವರು ಹೇಳಿದರು. ಫೌಂಡೇಶನ್‌ ಹಾಕಿದ ಮೇಲೂ ಬಂದಿಲ್ಲ. ಗೋಡೆ ಕಟ್ಟಿ. ಎರಡೂ ಕಂತುಗಳನ್ನು ಒಟ್ಟಿಗೆ ಬರಲಿದೆ ಎಂದರು. ಅದೂ ಬಂದಿಲ್ಲ. ಬಾಡಿಗೆ ಮನೆಯಲ್ಲಿ ವಾಸವಾಗಿದ್ದುಕೊಂಡು ಬಡ್ಡಿಗೆ ಹಣ ತಗೊಂಡು ಕಟ್ಟಿದೆವು. ಅದೂ ಬರ್ಲಿಲ್ಲ. ಕೊನೆಗೆ ಚಾವಣಿ ಕೆಲಸ ಮುಗಿಸಿದರೂ ದುಡ್ಡು ಬಂದಿಲ್ಲ. ಬಾಡಿಗೆ ಮತ್ತು ಬಡ್ಡಿ ಕಟ್ಟಲು ಆಗದ ಕಾರಣ ಅರ್ಧಂಬರ್ಧ ಆಗಿರುವ ಮನೆಯಲ್ಲಿಯೇ ಈಗ ವಾಸ ಹೂಡಿದ್ದೇವೆ’ ಎಂದು ಎಸ್‌ಎಸ್‌ಎಂ ನಗರದ ಸಂಜಿದಾ ಬಾನು ಸಂಕಷ್ಟ ತೋಡಿಕೊಂಡರು.

‘ಹೊಸಮನೆ ಕಟ್ಟಲು ನಾವು ಮನೆ ಬಿಟ್ಟು ಬಾಡಿಗೆಯಲ್ಲಿ ಒಂದು ವರ್ಷದಿಂದ ಇದ್ದೇವೆ. ಫೌಂಡೇಶನ್‌, ಗೋಡೆ, ಮಾಡು ಆಗಿದೆ. ಆದರೆ ದುಡ್ಡು ಬಂದಿಲ್ಲ. ಹೋಗಿ ಕೇಳಿದರೆ ಇನ್ನು ಒಂದು ವಾರದಲ್ಲಿ ಬರ್ತದೆ, ಎರಡು ವಾರದಲ್ಲಿ ಬರ್ತದೆ ಎಂದು ವಾಪಸ್ ಕಳುಹಿಸುತ್ತಿದ್ದಾರೆ’ ಎನ್ನುವುದು ಮಲ್ಲಿಕಾರರ್ಜುನ ನಗರದ ದಾದಾಪೀರ್‌ ಅವರ ವಿವರಣೆ. ಇದೇ ರೀತಿ ಅರ್ಧಕ್ಕೆ ನಿಂತ ಮನೆಗಳು ನಗರದಾದ್ಯಂತ ಹಲವು ಇವೆ.

ಮನೆ ನಿರ್ಮಿಸಿಕೊಂಡವರಿಗೆ ಕೊರೊನಾ ಕಾರಣದಿಂದಾಗಿ ಸರ್ಕಾರದ ಹಣ ನೀಡಲು ತಡವಾಗಿದೆ. ಹಣ ಪಾಲಿಕೆಗೆ ಬರುವುದಿಲ್ಲ. ನೇರವಾಗಿ ಫಲಾನುಭವಿಗಳ ಖಾತೆಗೆ ಹೋಗುತ್ತದೆ. ಈಗ ಅವರ ಖಾತೆಗೆ ಜಮಾ ಮಾಡಲು ಸರ್ಕಾರ ಆರಂಭಿಸಿದೆ. ಯೋಜನಯಡಿ ಮನೆಕಟ್ಟಿಕೊಂಡ ಎಲ್ಲರಿಗೂ ಬರಲಿದೆ ಎಂದು ಮಹಾನಗರ ಪಾಲಿಕೆ ಆಯುಕ್ತ ವಿಶ್ವನಾಥ ಮುದಜ್ಜಿ ‘ಪ್ರಜಾವಾಣಿ’ಗೆ ತಿಳಿಸಿದ್ದಾರೆ.

ಜನರನ್ನು ಅಲೆದಾಡಿಸಬಾರದು
ಅರ್ಹರು ಯಾರು ಎಂಬುದನ್ನು ಗುರುತಿಸಿದ ಮೇಲೆ ಅವರಿಗೆ ವಸತಿ, ನಿವೇಶನ ನೀಡಲು ಅಲೆದಾಡಿಸಬಾರದು. ಸರ್ಕಾರದ ಯೋಜನೆಗಳನ್ನು ಮನೆ ಬಾಗಿಲಿಗೆ ತಲುಪಿಸಲಾಗುವುದು ಎಂಬುದೆಲ್ಲ ಬರೀ ಬೋಗಸ್‌ ಭಾಷಣಗಳಾಗಿವೆ. ಬಡಜನರು ಅಲೆದಾಡಿ ಅಲೆದಾಡಿ ಸುಸ್ತಾದರೂ ಯೋಜನೆಗಳು ಅವರಿಗೆ ತಲುಪುವುದಿಲ್ಲ. ವಸತಿ ಯೋಜನೆ ಇದಕ್ಕೆ ಹೊರತಲ್ಲ. ಪ್ರತಿ ವಾರ್ಡ್‌ನಲ್ಲಿ ವಸತಿ ರಹಿತರು ಸಾವಿರಾರು ಮಂದಿ ಇದ್ದಾರೆ. ಅದರಲ್ಲಿ ಬೆರಳೆಣಿಕೆಯ ಜನರನ್ನು ಯೋಜನೆಯಡಿ ಆಯ್ಕೆ ಮಾಡುತ್ತಾರೆ. ಅವರನ್ನೂ ವರ್ಷಾನುಗಟ್ಟಳೆ ಅಲೆದಾಡಿಸುತ್ತಾರೆ. ಈಗ ಎರಡು ವರ್ಷದಿಂದ ಈಚೆಗೆ ಮನೆ ಕಟ್ಟಿಸಿಕೊಂಡ ಯಾರಿಗೂ ಸರ್ಕಾರದ ಹಣ ಸಿಕ್ಕಿಲ್ಲ. ಕೂಡಲೇ ಆ ಹಣ ನೀಡಬೇಕು. ಆಶ್ರಯ ಯೋಜನೆಯಡಿ ಹಿಂದೆ ಮನೆ ಸಿಕ್ಕಿದವರಿಗೆ ಇನ್ನೂ ಹಕ್ಕುಪತ್ರ ಸಿಕ್ಕಿಲ್ಲ. ಅವರನ್ನು ಅಲೆದಾಡಿಸುವುದನ್ನು ಪಾಲಿಕೆ ಅಧಿಕಾರಿಗಳು ನಿಲ್ಲಿಸಬೇಕು. ಆದಷ್ಟು ಬೇಗ ಹಕ್ಕುಪತ್ರ ಒದಗಿಸಬೇಕು ಎಂಬುದು ಹೋರಾಟಗಾರ್ತಿ, ನೆರಳು ಬೀಡಿ ಕಾರ್ಮಿಕರ ಯೂನಿಯನ್‌ನ ಜಬೀನಾ ಖಾನಂ ಒತ್ತಾಯ.

ಗೋಮಾಳ ಭೂಮಿ ಬಳಸಿ
ನಗರ ಪ್ರದೇಶದಲ್ಲಿ ಭೂಮಿ ಇಲ್ಲದೇ ಇದ್ದರೆ ನಗರಕ್ಕೆ ಹತ್ತಿರದ ಗ್ರಾಮೀಣ ಪ್ರದೇಶದಲ್ಲಿ ಇರುವ ಗೋಮಾಳ ಭೂಮಿಯನ್ನು ಕಂದಾಯ ಇಲಾಖೆ ಜತೆಗೆ ಮಾತನಾಡಿ ಪರಿವರ್ತನೆ ಮಾಡಿಕೊಂಡು ವಸತಿಗೆ ಬಳಸಬೇಕು. ಎಸ್‌.ಎಂ. ಕೃಷ್ಣ ಮುಖ್ಯಮಂತ್ರಿಯಾಗಿದ್ದ ಸಮಯದಲ್ಲಿ ಜಿಲ್ಲೆಗೆ ಒಮ್ಮೆಲೆ 15 ಸಾವಿರಕ್ಕೂ ಅಧಿಕ ಮನೆಗಳನ್ನು ನೀಡಲಾಗಿತ್ತು. ವರ್ಷಕ್ಕೆ ಹತ್ತೋ, ನೂರೋ ಮನೆಗಳನ್ನು ನೀಡುವ ಬದಲು ಈ ರೀತಿ ವರ್ಷಕ್ಕೆ 15 ಸಾವಿರದಿಂದ 20 ಸಾವಿರ ಮನೆ ನೀಡಿದರೆ ಐದಾರು ವರ್ಷಗಳಲ್ಲಿ ಬಹುತೇಕರಿಗೆ ಮನೆ ಸಿಗಲಿದೆ ಎಂದು ಜಿಲ್ಲಾ ವಸತಿ ರಹಿತರ ಖಾಲಿ ನಿವೇಶನ ರಹಿತರ ನಿರಾಶ್ರಿತರ ಹೋರಾಟ ಸಮಿತಿ (ಎಐಟಿಯುಸಿ) ಪ್ರಧಾನ ಕಾರ್ಯದರ್ಶಿ ಆವರಗೆರೆ ವಾಸು ತಿಳಿಸಿದರು.

ವಸತಿ ರಹಿತರಿಗೆ ವಸತಿ, ನಿವೇಶನ ರಹಿತರಿಗೆ ನಿವೇಶನ ಒದಗಿಸಲು ಒತ್ತಾಯಿಸಿ ‘ಕೋಟಿ ಹೆಜ್ಜೆ’ ಎಂಬ ಕಾಲ್ನಡಿಗೆ ಜಾಥಾವನ್ನು ಮಾಡಲಾಗಿತ್ತು. ನಮ್ಮ ಜಾಥಾ ಬಳ್ಳಾರಿ, ದಾವಣಗೆರೆ, ಚಿತ್ರದುರ್ಗ ಮುಗಿಸಿಕೊಂಡು ತುಮಕೂರಿಗೆ ತಲುಪುವಾಗಿ ಲಾಕ್‌ಡೌನ್‌ ಆಗಿದ್ದರಿಂದ ಮುಂದಕ್ಕೆ ಸಾಗಲಿಲ್ಲ ಎಂದು ನೆನಪಿಸಿಕೊಂಡರು.

ನೀವೇಶನವೇ ನೀಡುವ ನಿರ್ದೇಶನದಿಂದ ತೊಂದರೆ
‘ನಿವೇಶನ ರಹಿತರಿಗೆ ಮನೆ ಕಟ್ಟಿಸಿಕೊಡುವ ಯೋಜನೆ ಹಿಂದೆ ಇತ್ತು. ಅದಕ್ಕಾಗಿ ನಗರ ಪ್ರದೇಶಗಳಲ್ಲಿ ಜಿ ಪ್ಲಸ್‌ ಟು ಅಂದರೆ ನೆಲ ಮಹಡಿ ಮತ್ತು ಎರಡು ಮೇಲ್ಮಹಡಿ, ಕೆಲವೆಡೆ ಜಿ ಪ್ಲಸ್‌ ವನ್‌, ಜಿ ಪ್ಲಸ್‌ ತ್ರಿ ಕಟ್ಟಲು ಯೋಜನೆ ರೂಪಿಸಲಾಗಿತ್ತು. ಕೊರೊನಾ ಬಂದು ಆರ್ಥಿಕ ಸಂಕಷ್ಟ ಉಂಟಾಗಿರುವುದರಿಂದ ಮನೆ ಕಟ್ಟಿಸಿಕೊಡಲು ಅನುದಾನ ಒದಗಿಸಲು ಕಷ್ಟ. ನಿವೇಶನ ಹಂಚಿ ಎಂದು ಸರ್ಕಾರದ ಮುಖ್ಯ ಕಾರ್ಯದರ್ಶಿ ತಿಳಿಸಿದ್ದಾರೆ. ಜಿ ಪ್ಲಸ್‌ ಟುನಲ್ಲಿ ಮೂವರಿಗೆ ಸಿಗುತ್ತಿದ್ದ ಮನೆಗಳು ನಿವೇಶನ ಹಂಚಿಕೆ ಮಾಡಿದರೆ ಒಬ್ಬರಿಗಷ್ಟೇ ಸಿಗ್ತದೆ. ಹಾಗಾಗಿ ತೊಂದರೆಯಾಗಲಿದೆ. ಈ ಬಗ್ಗೆ ಸರ್ಕಾರದ ಸ್ಪಷ್ಟ ನಿರ್ದೇಶನಕ್ಕೆ ಕಾಯುತ್ತಿದ್ದೇವೆ’ ಎಂದು ನಗರಾಭಿವೃದ್ದಿ ಕೋಶದ ಯೋಜನಾ ನಿರ್ದೇಶಕಿ ನಜ್ಮಾ ಜಿ. ಮಾಹಿತಿ ನೀಡಿದರು.

ಜಿ ಪ್ಲಸ್‌ ಲಾಭ, ತೊಂದರೆ
ನಗರ ಪ್ರದೇಶದಲ್ಲಿ ಜಿ ಪ್ಲಸ್‌ ಟು ಕಟ್ಟಲು ಯೋಜನೆ ರೂಪಿಸಲಾಗಿದೆ. ಜಿ ಪ್ಲಸ್‌ನಿಂದ ಲಾಭ ಏನಂದ್ರೆ ಒಂದು ಎಕರೆಯಲ್ಲಿ 100 ಮನೆ ನಿರ್ಮಿಸಿ ಕೊಡಲು ಸಾಧ್ಯವಾಗುತ್ತದೆ. ಅದೇ ನಿವೇಶನ ನೀಡುವುದಾದರೆ ಒಂದು ಎಕರೆಗೆ ಅತ್ಯಧಿಕ ಅಂದರೆ 40 ಮಂದಿಗೆ ನೀಡಲು ಸಾಧ್ಯ. ಹಾಗಾಗಿ ಹೆಚ್ಚು ಮಂದಿ ಮನೆ ಪಡೆಯಲು ಜಿ ಪ್ಲಸ್‌ ಯೋಜನೆ ಬೇಕು. ಆದರೆ, ಒಂದು ಕಟ್ಟಡದಲ್ಲಿ ಇರುವವರು ಹೊಂದಾಣಿಕೆ ಮಾಡಿಕೊಳ್ಳದೇ ಹೋದರೆ ನಿರ್ವಹಣೆ ಮಾಡುವವರು ಯಾರು? ಎಲ್ಲರೂ ನೆಲಮಹಡಿಗೇ ಆದ್ಯತೆ ನೀಡುತ್ತಾರೆ. ಹೆಚ್ಚೆಂದರೆ ಮೊದಲ ಮಹಡಿ ಕೇಳುತ್ತಾರೆ. ಮೇಲಿನ ಮನೆ ನೀಡಲು ಕಷ್ಟ ಪಡಬೇಕಾಗುತ್ತದೆ ಎನ್ನುತ್ತಾರೆ ನಗರಾಭಿವೃದ್ಧಿ ಕೋಶದ ಹೌಸಿಂಗ್‌ ಎಂಜಿನಿಯರ್‌ ಪ್ರಕಾಶ್‌.

ನಗರ ವ್ಯಾಪ್ತಿಯಲ್ಲೇ ಜಾಗ ಖರೀದಿ ಮಾಡಬೇಕಾಗುತ್ತದೆ. ಹೊರಗೆ ಎಲ್ಲೋ ಜಾಗ ತಗೊಂಡು ಮನೆ ಕಟ್ಟಿ ಕೊಟ್ಟರೆ ನೀರು, ಚರಂಡಿ, ಒಳಚರಂಡಿ ಸಹಿತ ಮೂಲ ಸೌಕರ್ಯಗಳನ್ನು ನಗರ ಸ್ಥಳೀಯಾಡಳಿತಗಳು ನೀಡಲು ಕಷ್ಟವಾಗುತ್ತದೆ ಎಂದು ವಿವರಿಸಿದರು.

ಪ್ರತಿ ಗ್ರಾ.ಪಂ.ಗೆ 20 ಮನೆ

ವಸತಿ ಮತ್ತು ನಿವೇಶನ ನೀಡುವ ಎಲ್ಲ ಯೋಜನೆಗಳು ರಾಜೀವ್‌ಗಾಂಧಿ ವಸತಿ ನಿಗಮದ ಮೂಲಕ ಅನುಷ್ಠಾನಗೊಳ್ಳುತ್ತದೆ. ಜಿಲ್ಲೆಯಲ್ಲಿ 166 ಗ್ರಾಮ ಪಂಚಾಯಿತಿಗಳಿವೆ. ವಿವಿಧ ಯೋಜನೆಗಳಡಿ ಪ್ರತಿ ‍ಪಂಚಾಯಿತಿಗೆ 20 ಮನೆಗಳಂತೆ ನೀಡಲು ಈ ಬಾರಿ ಅವಕಾಶ ಇದೆ ಎಂದು ಜಿಲ್ಲಾ ಪಂಚಾಯಿತಿ ಸಿಇಒ ಪದ್ಮ ಬಸವಂತಪ್ಪ ತಿಳಿಸಿದ್ದಾರೆ.

ಪರಿಶಿಷ್ಟ ಜಾತಿ, ಪಂಗಡಗಳಿಗೆ ಡಾ. ಬಿ.ಆರ್‌. ಅಂಬೇಡ್ಕರ್‌ ನಿವಾಸ್‌ ಯೋಜನೆಯಡಿ ಮನೆ ನೀಡಲಾಗುತ್ತದೆ. ಸಾಮಾಜಿಕವಾಗಿ, ಆರ್ಥಿಕವಾಗಿ ವಿಶೇಷ ಅಂಚಿನಲ್ಲಿ ಇರುವ ರಸ್ತೆ, ಅಂಗಡಿ ಬದಿಯಲ್ಲಿ ಮಲಗುವವರು, ಅಂಗವಿಕಲರು, ಕುಷ್ಠರೋಗದಿಂದ ಗುಣಮುಖರಾದವರು, ಎಚ್‌ಐವಿ ಸೋಂಕಿತರು, ಲಿಂಗತ್ವ ಅಲ್ಪ ಸಂಖ್ಯಾತರು, ದೇವದಾಸಿಯರು, ವಿಧವೆಯರು, ಜೀತಮುಕ್ತರು, ಸಫಾಯಿ ಕರ್ಮಚಾರಿಗಳು, ದೌರ್ಜನ್ಯಕ್ಕೊಳಗಾದವರು, ಮತೀಯ ಗಲಭೆ, ಚಳವಳಿಗಳಿಂದ ಹಾನಿಗೀಡಾದವರು, ಪ್ಲಾಸ್ಟಿಕ್‌ ಶೀಟ್‌ ಹಾಕಿಕೊಂಡು ವಾಸಿಸುವವರು, ಬೀಡಿ ಕಾರ್ಮಿಕರು, ಹಮಾಲರು, ನೇಕಾರರು, ಕುಶಲಕರ್ಮಿಗಳು ಹೀಗೆ ನಾನಾ ತರಹದವರಿಗೆ ದೇವರಾಜ ಅರಸು ವಸತಿ ಯೋಜನೆಯಡಿ ವಸತಿ ನೀಡಲಾಗುತ್ತದೆ. ಸ್ವಂತ ನಿವೇಶನ ಇಲ್ಲದವರಿಗೆ ಗುಂಪು ವಸತಿ ನಿರ್ಮಿಸಿಕೊಡಲು ಅವಕಾಶ ಇದೆ. ಇಂದಿರಾ ಗ್ರಾಮೀಣ ವಸತಿ ನಿವೇಶನ ಯೋಜನೆಯಡಿ ಸರ್ಕಾರಿ ನಿವೇಶನ ಇಲ್ಲವೇ ಖಾಸಗಿಯಿಂದ ಖರೀದಿಸಿ ನಿವೇಶನ ಒದಗಿಸುವ ಯೋಜನೆ ಇದೆ. ಪ್ರತಿ ವರ್ಷ ಇವುಗಳಿಗೆ ಗುರಿ ನಿಗದಿ ಮಾಡಲಾಗುತ್ತದೆ. ಆ ಗುರಿ ದಾಟಿ ನೀಡಲು ನಮಗೆ ಅವಕಾಶ ಇರುವುದಿಲ್ಲ ಎಂದು ಮಾಹಿತಿ ನೀಡಿದರು.

ಯೋಜನೆಗಳು ಯಾವ್ಯಾವು?
ನಗರ ಪ್ರದೇಶದಲ್ಲಿ ಡಾ.ಬಿ.ಆರ್‌. ಅಂಬೇಡ್ಕರ್‌ ವಸತಿ ಯೋಜನೆಯಡಿ ಎಸ್‌ಸಿ, ಎಸ್‌ಟಿಗೆ ಮನೆ ಒದಗಿಸಲಾಗುತ್ತದೆ.  ರಾಜ್ಯ ಸರ್ಕಾರವು ₹ 1.8 ಲಕ್ಷ ಹಾಗೂ ಕೇಂದ್ರ ಸರ್ಕಾರವು ₹ 1.5 ಲಕ್ಷ ಅನುದಾನವನ್ನು ಒದಗಿಸುತ್ತದೆ.

ವಾಜಪೇಯಿ ನಗರ ವಸತಿ ಯೋಜನೆಯಡಿ ಎಸ್‌ಸಿ–ಎಸ್‌ಟಿ ಹೊರತುಪಡಿಸಿ ಉಳಿದವರಿಗೆ ಮನೆ ನಿರ್ಮಿಸಿಕೊಳ್ಳಲು ರಾಜ್ಯ ಸರ್ಕಾರ ₹ 1.2 ಲಕ್ಷ, ಕೇಂದ್ರ ಸರ್ಕಾರ ₹ 1.5 ಲಕ್ಷ ನೀಡುತ್ತದೆ. ಆರ್ಥಿಕ ಮತ್ತು ಸಾಮಾಜಿಕವಾಗಿ ಅಂಚಿನಲ್ಲಿರುವ 14 ವರ್ಗಗಳಿಗೆ ದೇವರಾಜ ಅರಸು ಯೋಜನೆಯಡಿ ಮನೆ ನೀಡಲಾಗುತ್ತದೆ.

ಇದಲ್ಲದೇ ಎಪಿಎಲ್‌ ಕಾರ್ಡ್‌ನವರಿಗೆ ಅಂದರೆ ₹ 18 ಲಕ್ಷದ ವರೆಗೆ ಆದಾಯ ಹೊಂದಿರುವವರಿಗೂ ಮನೆ ಕಟ್ಟಲು ಕೆಂದ್ರ ಸರ್ಕಾರ ಸಬ್ಸಿಡಿ ನೀಡುತ್ತದೆ. ಮನೆ ಸಾಲ ಮಾಡಿದವರಿಗೆ ₹ 2.30 ಲಕ್ಷದಿಂದ ₹ 2.65 ಲಕ್ಷ ವರೆಗೆ ಸಬ್ಸಿಡಿಯನ್ನು ಅವರ ಗೃಹಸಾಲ ಖಾತೆಗೆ ನೇರವಾಗಿ ಕೇಂದ್ರ ಸರ್ಕಾರ ಜಮಾ ಮಾಡುತ್ತದೆ.

ಹರಪನಹಳ್ಳಿ: ನಿವೇಶನ, ವಸತಿರಹಿತರು 30 ಸಾವಿರ

ಹರಪನಹಳ್ಳಿ: ತಾಲ್ಲೂಕಿನ 37 ಗ್ರಾಮ ಪಂಚಾಯಿತಿಗಳಲ್ಲಿ ವಸತಿ ರಹಿತರ ಸಂಖ್ಯೆ 21,043, ಹಾಗೂ ನಿವೇಶನವೇ ಇಲ್ಲದ ಕುಟುಂಬಗಳ ಸಂಖ್ಯೆ 2,943. ಪಟ್ಟಣದಲ್ಲಿ ಅಂದಾಜು 3 ಸಾವಿರ ವಸತಿ ರಹಿತರಿದ್ದು, 2,342 ನಿವೇಶನ ರಹಿತರಿದ್ದಾರೆ.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು