ಗುರುವಾರ, 18 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಜಿಲ್ಲೆಗೊಂದು ಸಚಿವ ಸ್ಥಾನ ಕೊಡಿಸಲು ನಾನೂ ಪ್ರಯತ್ನಿಸುವೆ: ಜಿ.ಎಂ.ಸಿದ್ದೇಶ್ವರ

Last Updated 9 ಆಗಸ್ಟ್ 2021, 4:01 IST
ಅಕ್ಷರ ಗಾತ್ರ

ದಾವಣಗೆರೆ: ‘ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಸಂಪುಟದಲ್ಲಿ ದಾವಣಗೆರೆ ಜಿಲ್ಲೆಗೊಂದು ಸಚಿವ ಸ್ಥಾನ ನೀಡುವಂತೆ ಪಕ್ಷದ ವರಿಷ್ಠರಿಗೆ ಮನವಿ ಮಾಡಿದ್ದೇನೆ. ಯಾರಿಗಾದರೂ ಒಬ್ಬರಿಗೆ ನೀಡಬೇಕು ಎಂಬುದು ನನ್ನ ಒತ್ತಾಯ. ಇಂಥವರಿಗೇ ನೀಡಿ ಎಂದು ನಾನು ಹೇಳಕ್ಕಾಗಲ್ಲ. ಜಿಲ್ಲೆಯ ಐವರು ‌ಶಾಸಕರು ಒಬ್ಬರ ಹೆಸರನ್ನೇ ಹೇಳಿದರೆ ಇನ್ನೂ ಒಳ್ಳೆಯದು’ ಎಂದು ಜಿ.ಎಂ.ಸಿದ್ದೇಶ್ವರ ತಿಳಿಸಿದರು.

ಸುದ್ದಿಗಾರರ ಜತೆಗೆ ಅವರು ಮಾತನಾಡಿ, ‘ನನ್ನ ಕೈಯಲ್ಲಿ ಜಿಲ್ಲೆಗೊಂದು ಸಚಿವ ಸ್ಥಾನ ಕೊಡಿಸಲಾಗಿಲ್ಲ. ಉಪಯೋಗ ಇಲ್ಲದ ಸಂಸದ ಅಂತಾನೇ ತಿಳಿದುಕೊಳ್ಳಿ’ ಎಂದು ಪ್ರಶ್ನೆಯೊಂದಕ್ಕೆ ಖಾರವಾಗಿ ಉತ್ತರಿಸಿದರು.

‘ಬಿಜೆಪಿ ಅಧಿಕಾರಕ್ಕೆ ಬರಲು ಕಾರಣರಾದ ಶಾಸಕರಿಗೂ ಅವಕಾಶ ನೀಡಬೇಕಿತ್ತು. ಪಕ್ಷದ ವರಿಷ್ಠರು, ಮುಖ್ಯಮಂತ್ರಿ ಬೊಮ್ಮಾಯಿ ಸೇರಿ ಸಚಿವಸ್ಥಾನಗಳನ್ನು ಹಂಚಿಕೆ ಮಾಡಿದ್ದಾರೆ. ಜಿಲ್ಲೆಯಲ್ಲಿ ಯಾರು ಸಚಿವರಾದರೂ ಪರವಾಗಿಲ್ಲ ಎಂದು ಹೇಳುತ್ತಲೇ ಐವರು ಶಾಸಕರಲ್ಲಿ ಪ್ರೊ. ಲಿಂಗಣ್ಣ ಅವರನ್ನು ಬಿಟ್ಟು ಉಳಿದ ನಾಲ್ವರು ಲಾಬಿ ಮಾಡಿದ್ದಾರೆ. ಆದರೆ ಸಿಕ್ಕಿಲ್ಲ. ಇನ್ನೂ ನಾಲ್ಕು ಸ್ಥಾನಗಳನ್ನು ಭರ್ತಿ ಮಾಡಲು ಬಾಕಿ ಇದೆ. ಅದರಲ್ಲಿ ಒಂದನ್ನು ಜಿಲ್ಲೆಗೆ ನೀಡಬೇಕು ಎಂದು ಒತ್ತಾಯಿಸುತ್ತೇನೆ’ ಎಂದು ತಿಳಿಸಿದರು.

‘75 ವರ್ಷ ದಾಟಿದವರಿಗೆ ನಮ್ಮಲ್ಲಿ ಅವಕಾಶ ನೀಡುವುದಿಲ್ಲ. ಅದೊಂದೆ ಕಾರಣದಿಂದ ಬಿ.ಎಸ್‌. ಯಡಿಯೂರಪ್ಪ ರಾಜೀನಾಮೆ ನೀಡಿದ್ದಾರೆ. ಅದು ಬಿಟ್ಟು ಬೇರೆ ಯಾವ ಒತ್ತಡವೂ ಇರಲಿಲ್ಲ' ಎಂದು ಸಮಜಾಯಿಷಿ ನೀಡಿದರು. ಕೇರಳದಲ್ಲಿ 85 ವರ್ಷ ದಾಟಿರುವ ಶ್ರೀಧರನ್‌ ಅವರನ್ನು ಕಣಕ್ಕಿಳಿಸಿದಾಗ ವಯಸ್ಸಿನ ವಿಚಾರ ಬರಲಿಲ್ಲ ಎಂಬ ಪ್ರಶ್ನೆಗೆ, ‘ಶ್ರೀಧರನ್‌ ವಿಚಾರ ನನಗೆ ಗೊತ್ತಿಲ್ಲ’ ಎಂದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT