ಶನಿವಾರ, 20 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಹಿಂದೆ ತಪ್ಪು ಮಾಡಿದ್ದೇನೆ, ಮತ್ತೆ ಬಂಡಾಯ ಏಳುವುದಿಲ್ಲ:ಶಾಸಕ ಎಂ.ಪಿ.ರೇಣುಕಾಚಾರ್ಯ

ಶಾಸಕ ಎಂ.ಪಿ.ರೇಣುಕಾಚಾರ್ಯ ಹೇಳಿಕೆ
Last Updated 16 ಜನವರಿ 2022, 4:18 IST
ಅಕ್ಷರ ಗಾತ್ರ

ದಾವಣಗೆರೆ: ಹಿಂದೆ ರೆಸಾರ್ಟ್‌ ರಾಜಕೀಯ ಮಾಡಿ ತಪ್ಪು ಮಾಡಿದ್ದೇನೆ. ನನ್ನ ಮೇಲೆ ಕಪ್ಪು ಚುಕ್ಕೆ ಇದ್ದು, ನಾನು ಮತ್ತೆ ತಪ್ಪು ಮಾಡುವುದಿಲ್ಲ. ಬಂಡಾಯ ಏಳುವ ಪ್ರಶ್ನೆಯೇ ಇಲ್ಲ ಎಂದು ಶಾಸಕ ಎಂ.ಪಿ. ರೇಣುಕಾಚಾರ್ಯ ಹೇಳಿದರು.

‘ನಾನು ಸಚಿವಸ್ಥಾನದ ಬಗ್ಗೆ ವೈರಾಗ್ಯದ ಮಾತುಗಳನ್ನಾಡಿಲ್ಲ. ನಾವು ಅಪರೇಷನ್ ಕಮಲವನ್ನು ಬಲವಂತವಾಗಿ ಮಾಡಿಲ್ಲ. ಕಾಂಗ್ರೆಸ್ ಹಾಗೂ ಜೆಡಿಎಸ್‌ನಲ್ಲಿ ಬೆಲೆ ಸಿಗದಿದ್ದಾಗ ಪಕ್ಷ ಬಿಟ್ಟಿದ್ದಾರೆ. ಸರ್ಕಾರದ ರಚನೆಗೆ ನಾವು ಸಾಕಷ್ಟು ಕೆಲಸ ಮಾಡಿದ್ದೇವೆ’ ಎಂದು ಅವರು ಶನಿವಾರ ಮಾಧ್ಯಮದವರ ಪ್ರಶ್ನೆಗೆ ಉತ್ತರಿಸಿದರು.

‘ಕಾಂಗ್ರೆಸ್, ಜೆಡಿಎಸ್‌ನಿಂದ ಬಂದವರಿಂದ ನಾವು ಸರ್ಕಾರ ರಚನೆ ಮಾಡಿದ್ದು, ಪದೇ ಪದೇ ಅವರೇ ಸಚಿವರಾಗುತ್ತಿದ್ದಾರೆ. ಹೊಸಮುಖಗಳಿಗೆ ಅವಕಾಶ ನೀಡಿ ಎಂದು ಕೇಳಿದ್ದೇನೆ. ಮೂರು ಅವಧಿಯಲ್ಲಿ ಸಚಿವರಾಗಿದ್ದವರಿಗೆ ಮತ್ತೆ ಮಣೆಹಾಕಿದ್ದು, ಅವರು ರಾಜಿನಾಮೆ ನೀಡಿ ಪಕ್ಷದ ಸಂಘಟನೆಯಲ್ಲಿ ತೊಡಗಿಕೊಳ್ಳಬೇಕು. ನಾನು ರೆಸಾರ್ಟ್, ನಾಲ್ಕು ಗೋಡೆಗಳ ಮಧ್ಯೆ ಮಾತನಾಡುವುದಿಲ್ಲ. ಪಕ್ಷದ ವರಿಷ್ಠರಿಗೆ ಮನವರಿಕೆ ಮಾಡುವ ಕೆಲಸ ಮಾಡುತ್ತೇವೆ’ ಎಂದು ಹೇಳಿದರು.

‘ಮಕ್ಕಳಿಗೆ ಕಾರು ಕೊಡಿಸುವ ಹಾಗೇ ನನಗೂ ಕಾರು ಕೊಟ್ಟಿದ್ದಾರೆ ಸುತ್ತಾಡುತ್ತಿದ್ದೇನೆ. ಹಣ ಬಿಡುಗಡೆ ಮಾಡಲು ಆಗುತ್ತಿಲ್ಲ. ಅಭಿವೃದ್ಧಿ ಕೆಲಸಗಳನ್ನು ಮಾಡಲು ಸಾಧ್ಯವಾಗುತ್ತಿಲ್ಲ. ರಾಜ್ಯದ ಅಭಿವೃದ್ಧಿಗಾಗಿ ಸಚಿವ ಸ್ಥಾನ ನೀಡುವಂತೆ ಕೇಳಿದ್ದೇನೆ’ ಎಂದು ಸಿಎಂ ರಾಜಕೀಯ ಕಾರ್ಯದರ್ಶಿ ಸ್ಥಾನದ ಬಗ್ಗೆ ಪ್ರತಿಕ್ರಿಯಿಸಿದರು.

‘ನಾನು ಹಾದಿ ಬೀದಿಯಲ್ಲಿ ಮಾತನಾಡುವುದಿಲ್ಲ. ಪಕ್ಷದ ವರಿಷ್ಠರ ಜೊತೆ ಮಾತನಾಡುತ್ತೇನೆ. ಕಾಂಗ್ರೆಸ್ ನವರು ಸ್ವಾರ್ಥಕ್ಕಾಗಿ, ಅಧಿಕಾರಕ್ಕೆ ಬರುವುದಕ್ಕೆ ಪಾದಯಾತ್ರೆ ಮಾಡಿದರೇ ಹೊರತು ಯಾವುದೇ ನೀರಿಗಾಗಿ, ಜನರ ಮೇಲೆ‌ ಕಾಳಜಿ ಮೇಲೆ ಪಾದಯಾತ್ರೆ ಮಾಡಿಲ್ಲ’ ಎಂದು ಹೇಳಿದರು.

‘ನಾನು ಹೋರಿ ಬೆದರಿಸುವ ಕಾರ್ಯಕ್ರಮಕ್ಕೆ ಭಾಗವಹಿಸಿದ್ದಕ್ಕೆ ಕ್ಷಮೆ ಕೇಳಿದ್ದೇನೆ. ಆದರೆ ಕಾಂಗ್ರೆಸ್‌ನವರು ದುರಹಂಕಾರದಿಂದ ಮೆರೆಯುತ್ತಿದ್ದಾರೆ‘ ಎಂದು ಟೀಕಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT